ಹೊರದೇಶದಲ್ಲಿ ನಮ್ಮ ಹಬ್ಬಗಳ ಆಚರಣೆ ನಡೆಯೋದು ಅನುಕೂಲದ ಮೇಲೆ. ಅಂದ್ರೆ, ವಾರದ ದಿನಗಳಲ್ಲಿ ಸಾಧ್ಯವಿಲ್ಲ. ಸಾಧ್ಯವಿದ್ದರ ಅದು ಬರೀ ಮನೆಯಲ್ಲಿ ದೇವರ ಪೂಜೆ, ಸ್ವಲ್ಪ ಸಿಹಿ ತಿಂಡಿ, ಅಷ್ಟೆ. ರಜೆ ಹಾಕಿ, ಬಂಧು ಮಿತ್ರರ ಮನೆಗೆ ಭೇಟಿ ಬಹಳ ಕಷ್ಟ. ಆದ್ದರಿಂದ ಇಲ್ಲಿ ವೀಕೆಂಡ್ ಹಬ್ಬಗಳದ್ದೇ ಭರಾಟೆ. ಹೀಗಾಗಿಯೇ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬಂದ ದೀಪಾವಳಿಯನ್ನು ಜೆರ್ಮನಿಯ ಹ್ಯಾಂಬರ್ಗ್ ನಗರದ ನಮ್ಮ
"ಅನಿವಾಸಿ ಭಾರತಿ" ಮಿತ್ರರು ನವೆಂಬರ್ ಎಂಟರಂದು ಬಹಳ ಅದ್ಧೂರಿಯಾಗಿ ಆಚರಿಸಿದೆವು.
ದಿನಾಂಕ : ನವೆಂಬರ್ 8, 2008
ಸ್ಥಳ : ಆಫ್ಘಾನ್ ಹಿಂದೂ ಮಂದಿರ, ರೋಥೆನ್ಬರ್ಗ್ ಸಾರ್ಟ್, ಹ್ಯಾಂಬರ್ಗ್ (ಈ ಮಂದಿರವನ್ನು ಆಫ್ಘಾನಿಸ್ತಾನದಿಂದ ಇಲ್ಲಿ ವಲಸೆ ಬಂದ ಹಿಂದೂಗಳು 1998 ರಲ್ಲಿ ಕಟ್ಟಿಸಿದರು)
ಅನಿವಾಸಿ ಭಾರತಿ ಎಂಬುದು ಭಾರತೀಯ ಸಂಘವಾದರೂ, ಬಹಳ ಖುಷಿ ಕೊಟ್ಟ ಸಂಗತಿಎಂದರೆ, ಈ ಸಂಘದಲ್ಲಿ 70% ನಮ್ಮ ಕನ್ನಡಿಗರೇ ಇರೋದು, ಹಾಗು ಇದನ್ನು ಶುರು ಮಾಡಿದವರೂ ನಮ್ಮವರೇ.
ಇಲ್ಲಿ ಸೇರಿದ್ದ ಕನ್ನಡಿಗರನ್ನು ಕಂಡಾಗ ನನ್ನ ಫ್ರೆಂಡ್ ಗೆ ಹೇಳಿದೆ: "ಗುರೂ, ಬೆಂಗಳೂರಲ್ಲೂ ಇಷ್ಟೊಂದ್ ಕನ್ನಡದವರು ಕಾಣಲ್ವಲ್ಲಮ್ಮ" ಅಂತಾ. ಅದಕ್ಕೆ ಆ ಭೂಪ: "ಅದ್ಹೆಂಗೆ ಕಾಣ್ತಾರೆ ಮಗಾ ? ಎಲ್ಲಾ ಇಲ್ಲೀ ಬಂದು ಸೇರ್ಕೊಂಡಿಲ್ವಾ" ಅನ್ನೋದಾ?
ಈ ಬಾರಿಯ ವಿಶೇಷವೆಂದರೆ, ಎಲ್ಲ ಕೆಲಸಗಳನ್ನೂ
"ಅನಿವಾಸಿ ಭಾರತಿ" ಮಿತ್ರರೇ ಮಾಡಿದ್ದು.
ಸರಿ ಸುಮಾರು 300 ಜನಕ್ಕೆ ಅಡುಗೆ ಮಾಡಿ ಉಣಿಬಡಿಸಿದ್ದು ನಮ್ಮವರೇ. ನಾನು ಕೂಡ ಅಡುಗೆ ಕಮಿಟಿಯಲ್ಲಿ ಇದ್ದೆ.
ಅಡುಗೆ ಮೆನು ಹಿಂಗಿತ್ತು. ವೆಜ್ ಪಲಾವ್, ಆಲೂಗೆಡ್ಡೆ ಮೊಸರುಬಜ್ಜಿ, ಆಲೂಗೆಡ್ಡೆ ಬಜ್ಜಿ, ಕೇಸರಿ ಭಾತ್, ಮೊಸರನ್ನ, ಬರ್ಫಿ. ಪಲಾವ್ ಹಾಗು ಕೇಸರಿ ಭಾತ್ ಗೆ ಒಂದು ತೊಟ್ಟು ಕೂಡಾ ಎಣ್ಣೆ ಹಾಕಿಲ್ಲ, ಬರೀ ತುಪ್ಪದಲ್ಲೇ ಮಾಡಿದ್ದು. ಅಡುಗೆ ಮಾತ್ರ ಸೂಪರ್ ಆಗಿತ್ತು ಕಣ್ರೀ. ಎಲ್ರೂ ಚಪ್ಪರಿಸಿ ಚಪ್ಪರಿಸಿ ಹೊಡೆದ್ರು.
ಬೆಳಗ್ಗಿಂದ ಸುಮಾರು ೪೦ ಜನ
"ಅನಿವಾಸಿ ಭಾರತಿ" ಮಿತ್ರರು ಸೇರಿ, ಸಭಾಂಗಣ, ಸ್ಟೇಜ್, ಧ್ವನಿವರ್ಧಕಗಳು, ಲೈಟಿಂಗ್, ಆಸನಗಳು, ಅಲಂಕಾರಗಳು, ರಂಗೋಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು.ಬಂದ ಸುಮಾರು 300 ಜನರಲ್ಲಿ 56-60 ಮಂದಿ ಇಲ್ಲಿಯ ನಮ್ಮ ಜೆರ್ಮನ್ ಸಹೋದ್ಯೋಗಿಗಳು, ಅವರ ಪರಿವಾರದವರು ಇದ್ದರು. ಅವರೂ ಕೂಡ ಪಲಾವನ್ನು ಎರಡೆರಡು ಬಾರಿ ಹಾಕಿಸಿಕೊಂಡು ಚಪ್ಪರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಇದ್ದವು. ಭರತನಾಟ್ಯ, ಹಚ್ಚೇವು ಕನ್ನಡದ ದೀಪ ಹಾಡು, ಬಂಡಲ್ ಬಾಯ್ಸ್ ಇಂದ MAD ADS, ಸೋಲೋ ಹಾಡುಗಳು, ಹಾಗು ಎಲ್ಲದಕ್ಕಿಂತ ಸೂಪರ್ ಆಗಿ ಇದ್ದದ್ದು ಅಂದ್ರೆ, ಮಕ್ಕಳ ಪ್ರದರ್ಶನ. ಫ್ಯಾನ್ಸಿ ಡ್ರೆಸ್, ನೃತ್ಯ, ಕೊನೆಯದಾಗಿ ಎಲ್ಲಾ ಭಾರತೀಯ ಮಿತ್ರರಿಂದ "ಮಿಲೇ ಸುರ್ ಮೇರಾ ತುಮ್ಹಾರ" ಹಾಡು. ಸೂಪರ್ ಆಗಿತ್ತು ಕಣ್ರೀ.
ಹೊರಗೆ ಸಹಸ್ರ ದೀಪೋತ್ಸವ, ಹಾಗು, ಊಟ ಮುಗಿದ ಮೇಲೆ ಪಟಾಕಿ ಹಚ್ಚುವ ಕಾರ್ಯಕ್ರಮ.
ಮಾತು ಜಾಸ್ತಿ ಆಯ್ತು, ಈ ಕಾರ್ಯಕ್ರಮದ ಕೆಲವು ಫೋಟೋಗಳನ್ನು ನೋಡಿ. ಇನ್ನೂ ಹಲವಾರು ಫೋಟೋಗಳಿಗೆ :
http://picasaweb.google.com/mandagere.shankar/DeepawaliInHamburgಹಾಗು
http://picasaweb.google.com/kinagi71/DEEPAVALIHamburgGirishKN ಇಲ್ಲಿ ನೋಡಿ.
ಜೈ ಚಾಮುಂಡಿ
ಜೈ ಹನುಮಂತ
ದುರ್ಗಿಯ ಮುಂದೆ ದೀಪ
ಆಫ್ಘಾನ್ ಹಿಂದೂ ಮಂದಿರದ ಬಗ್ಗೆ ಸ್ವಲ್ಪ ಮಾಹಿತಿ
ಅನಿವಾಸಿ ಭಾರತಿ
ಪಲಾವ್ ತಯಾರಿ
ಮೊಸರುಬಜ್ಜಿಗೆ ತಯಾರಿ
ಆಲೂಗೆಡ್ಡೆ ಬಜ್ಜಿ ಮಾಡುತ್ತಾ ಇರೋದು
ಮಸ್ತ್ ಮಕ್ಕಳು - ಫ್ಯಾನ್ಸಿ ಡ್ರೆಸ್
ಕೃಷ್ಣನ ಬಾಲ ಲೀಲೆಗಳನ್ನು ಬಿಂಬಿಸೋ ನೃತ್ಯರೂಪಕ - ಸಿಂಪ್ಲಿ ಸೂಪರ್ಬ್
ಭಾರತೀಯ ಉಡುಗೆಯನ್ನು ತೊಟ್ಟಿರೋ ಜರ್ಮನ್ ಮಕ್ಕಳು. ಇವರನ್ನ ನೋಡಾದ್ರೂ ನಮ್ಮ ಜನರು ಸ್ವಲ್ಪ ತಿಳ್ಕೊಬೋದು ಆಲ್ವಾ ?
ಬಂಡಲ್ ಬಾಯ್ಸ್ ಇಂದ ಮ್ಯಾಡ್ ಆಡ್ಸ್
ಕಾರ್ಯಕ್ರಮದ ಕೊನೆಯಲ್ಲಿ ಲೋಕಾಭಿರಾಮವಾಗಿ ಮಾತಾಡ್ತಾ ಊಟ ಮಾಡ್ತಾ ಇದಾರೆ ಮಿತ್ರರು

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ