Tuesday, June 28, 2011

ಆಟೋ ಅಣಿಮುತ್ತುಗಳು - ೧೦೫ - ಲೇ ನಿಧಾನ್ಕಲ್ಲಾ

ಇನ್ನೊಂದು ಸಂತೋಷದ ಸುದ್ಧಿ. ಕಳೆದ ವಾರದ ಮಧ್ಯದಲ್ಲಿ ಸೋಮಾರಿ ಕಟ್ಟೆಗೆ ಇವತ್ತಿನ ತನಕ ಭೇಟಿ ಕೊಟ್ಟವರ ಸಂಖ್ಯೆ 70,000 (ಎಪ್ಪತ್ತು ಸಾವಿರ) ದಾಟಿತು. ಕಟ್ಟೆ ಕಟ್ಟಿ, ನೀರೆರೆದು ನೆರವಾದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

ಕೆಲವು ದಿನಗಳ ಹಿಂದೆ ಇಂದಿರಾನಗರದಲ್ಲಿ ಕಂಡ ಆಟೋ ಇದು.
ಮಂಡ್ಯದ ಮಾನವ ಈ ಆಟೋ ಅಣ್ಣ ಅನ್ಸುತ್ತೆ.


ಲೇ.... ನಿಧಾನ್ಕಲ್ಲಾ
-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 20, 2011

ಇನ್ನೊಂದು ರುಪಾಯಿ ಕೊಡಪ್ಪಾ....

ನಾನು : ಅಪ್ಪಾ, ಹೆಂಗೂ ಐದು ರುಪಾಯಿ ಕೊಟ್ಟಿದೀಯ, ಇನ್ನೊಂದು ರುಪಾಯಿ ಕೊಡಪ್ಪಾ..
ಅಪ್ಪ : ನಿಂಗೆ ಐದು ರುಪಾಯಿ ಕೊಟ್ಟಿದ್ದೆ ಜಾಸ್ತಿ, ಇನ್ಯಾಕೆ ಇನ್ನೊಂದು ರುಪಾಯಿ ?
ನಾನು : ನೀನು ಎರಡು ರುಪಾಯಿದು ತಗೋ ಅಂದೆ, ಆದ್ರೆ ಮೂರು ರುಪಾಯಿಗೆ ಇನ್ನೂ ಸ್ವಲ್ಪ ಜಾಸ್ತಿ ದೊಡ್ದು ಸಿಗತ್ತೆ. ಎರಡು ರುಪಾಯಿದು ಚಿಕ್ದು ಅಪ್ಪಾ, ಮೂರು ರುಪಾಯ್ದು ತಗೋತೀನಿ.. ಪ್ಲೀಸಪ್ಪಾ
ಅಪ್ಪ : ಸಾಕು ಕಣೋ, ಒಂದು ವಾರ ಉಪಯೋಗುಸ್ತ್ಯಾ ಆಮೇಲೆ ಹರ್ದೊಗತ್ತೆ. ಅದಕ್ಯಾಕೆ ಸುಮ್ನೆ ಒಂದು ರುಪಾಯ್ ವೇಸ್ಟ್ ಮಾಡ್ತೀಯ? ಸಾಕು ಬಿಡೋ.
ಏನೇ ತಿಪ್ಪರಲಾಗ ಹಾಕುದ್ರೂ ನಮ್ಮಪ್ಪನಿಂದ ಒಂದು ರುಪಾಯಿ ಗಿಟ್ಟಿಸೋದು ಅಸಾಧ್ಯ ಅಂತ ಗೊತ್ತಾಗಿ, ಅಮ್ಮನ ಹತ್ರ ಓಡು.
ನಾನು : ಅಮ್ಮಾ, ಇನ್ನೊಂದು ರುಪಾಯಿ ಕೊಡಮ್ಮಾ....
ಅಮ್ಮ : ಇಲ್ಲಾ ನನ್ಹತ್ರಾ, ಸುಮ್ನೆ ತಲೆ ತಿನ್ಬೇಡಾ. ನಿಮ್ಮಪ್ಪ ಕೊಡಲ್ಲ ಅಂದ ತಕ್ಷಣ ಬಂದು ನಂತಲೆ ತಿನ್ನಬೇಡಾ. ಸಾಕು ಐದು ರುಪಾಯಿ, ಸುಮ್ನೆ ಅದರಲ್ಲೇ ತಗೋ ಹೋಗು.
ನಾನು : ಇಲ್ಲಮ್ಮ, ಸಾಕಾಗಲ್ಲ.. ಎರಡು ರುಪಾಯಿಂದು ತುಂಬಾ ಚಿಕ್ದು, ಕೈಲೆ ಹಿಡಿಯೋಕ್ಕೆ ಆಗಲ್ಲ. ಏನೂ ಮಜಾ ಬರಲ್ಲಾ... ಜಾಸ್ತಿ ಅಲ್ಲಮ್ಮ, ಬರೀ ಒಂದು ರುಪಾಯಿ ಕೇಳ್ತಾ ಇದ್ದೀನಿ. ಕೊಡಮ್ಮಾ ಪ್ಲೀಸ್.
ಅಂತೂ ಇಂತೂ ಅಮ್ಮಂಗೆ ಪೂಸಿ ಹೊಡೆದು, ಬೆಣ್ಣೆ ಹಚ್ಚಿ ಇನ್ನೊಂದು ರುಪಾಯಿ ಇಸ್ಕೊಂಡು ಓಡಿದ್ದು ಅಂಗಡಿಗೆ.
ದರಪಟ್ಟಿ :
ಚಿಕ್ಕದು - ಎರಡು ರುಪಾಯಿ
ಮೀಡಿಯಂ - ಮೂರು ರುಪಾಯಿ
ದೊಡ್ಡದು - ನಾಲ್ಕು ರುಪಾಯಿ
ಹೆಂಗೂ ಸೆಟ್ ಮಾಡೋದನ್ನ ಕಳೆದ ವರ್ಷ ಕಲ್ತಿದ್ದೆ, ಅದಕ್ಯಾಕೆ ಅಂಗಡಿಯವನಿಗೆ ಐವತ್ತು ಪೈಸೆ ಕೊಡಬೇಕು ? ನಾಲ್ಕು ರುಪಾಯಿಂದನ್ನ ಮೂರುವರೆಗೆ ಚೌಕಾಸಿ ಮಾಡಿ ಮಿಕ್ಕಿದ್ದಕ್ಕೆ ದೊಡ್ಡ ಕಟ್ಟನ್ನ ತಗೊಂಡು ಮನೆಗೆ ಬಂದು ಅಮ್ಮನ ಮುಂದೆ ನನ್ನ ಪಾಂಡಿತ್ಯ ಪ್ರದರ್ಶನ ಮಾಡಿ ಸೆಟ್ ಮಾಡಿದ್ದೆ. ಅಪ್ಪನ ಹಳೆ ಪಂಚೆಯ ಅಂಚಿಗೆ ಮುಕ್ತಿ ತೋರಿಸಿದ್ದಾಯ್ತು. ಹೀಗೆ ಹಾಗೆ ಕೇವಲ ನಾಲ್ಕೈದು ದಿನ ತಗೊಂಡಿದ್ದರ ಆಯಸ್ಸು. ಪುನಃ ಅಪ್ಪನ ಕೈಕಾಲು ಹಿಡಿದು ಮತ್ತೆ ಐದು ರುಪಾಯಿ ವಸೂಲಿ ಮಾಡಿ ಮೊತ್ತೊಂದನ್ನು ಅಂಗಡಿಯಲ್ಲಿ ಕೊಂಡಿದ್ದು.
ಪ್ರತೀಬಾರಿ ಆಷಾಢ ಬಂದಾಗಲೆಲ್ಲಾ ನನ್ನ ಈ ಹಳೆಯ ಪ್ರಸಂಗ ನೆನಪಾಗುತ್ತೆ. ಈ ವರ್ಷ ಸೇರಿಸಿದರೆ, ಗಾಳಿಪಟ ಹಾರಿಸಿದ್ದು ಹದಿನಾರು ವರ್ಷಗಳ ಹಿಂದೆ. ಒಂದಲ್ಲ, ಐದಲ್ಲ... ನೂರು ರುಪಾಯಿ ಕೊಟ್ಟು ಗಾಳಿಪಟ ಕೊಂಡು ಹಾರಿಸೋ ತಾಕತ್ತು ಇದೆ, ಆದ್ರೆ ನಿಜವಾಗಲೂ ಅದನ್ನ ಹಾರಿಸೋ ಯೋಗ್ಯತೆ ಇಲ್ಲಾ.
ಥೂ... ಇದೂ ಒಂದು ಜನ್ಮಾ ನಾ..
ಮತ್ತೆ ಮತ್ತೆ ಕಾಡುತಾವಾ ನೆನಪು.
---------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, June 19, 2011

ಆಟೋ ಅಣಿಮುತ್ತುಗಳು - ೧೦೪ - ಮುಟ್ಟಿದ್ರೆ ಬಲಿ

ಕಳೆದ ವಾರ ನನ್ನಾಕೆಯ ಜೊತೆ ಜಯನಗರಕ್ಕೆ ಹೋಗುವಾಗ ಬನ್ನೇರುಘಟ್ಟ ರಸ್ತೆಯಲ್ಲಿ ಕಂಡ ಆಟೋ ಇದು.
ಗಾಡಿ ಓಡಿಸುತ್ತಿದ್ದದ್ದು ನಾನು, ಹಾಗಾಗಿ ನನ್ನಾಕೆಯ ಕೈಗೆ ಮೊಬೈಲನ್ನು ಕೊಟ್ಟು ಫೋಟೋ ತೆಗೆಯಲು ಹೇಳಿದೆ. ಹಾಗಾಗಿ ಈ ಫೋಟೋ ತೆಗೆದ ಕೀರ್ತಿ ನನ್ನಾಕೆಗೆ ಸಲ್ಲಬೇಕು, ಆದರೂ ಯಥಾಪ್ರಕಾರ ಇದನ್ನು ಕಂಡದ್ದು ಮೊದಲು ನಾನು.


ದುರ್ಗದ ಹುಲಿ
ಮುಟ್ಟಿದರೆ ಬಲಿ
----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, June 10, 2011

ಆಟೋ ಅಣಿಮುತ್ತುಗಳು - ೧೦೩ - ಬಿಸಿರಕ್ತ ಇರುವತನಕ

ನಿನ್ನೆ ರಾತ್ರಿ ಆಫೀಸಿಂದ ಮೆನೆಗೆ ಹೋಗುವಾಗ ಸೆಂಟ್ ಜಾನ್ಸ್ ಆಸ್ಪತ್ರೆಯ ಸಿಗ್ನಲ್ಲಿನಲ್ಲಿ ಕಾಯುವಾಗ ನಮ್ಮ ಗಾಡಿಯ ಮುಂದೆ ಈ ಆಟೋ ನಿಲ್ತು.ಇದೇನೋ ಪುನಃ "ಹೊಗೆರಹಿತ ವಾಹನ.." ಅನ್ನೋ ಮಾಮೂಲು ಬರಹ ಅನ್ಕೊಂಡು ಸುಮ್ನಾದೆ. ಆದ್ರೂ ಅದೇನೋಪ್ಪಾ, ಆಟೋ ಹಿಂದೆ ಸುಮ್ನೆ ಯಾವ್ದೋ ಅಡ್ವರ್ಟೈಸ್ಮೆಂಟ್ ಇದ್ರೂ ಕೂಡ ಓದೋ ಚಟ. ಸಕಾಲಕ್ಕೆ ನೋಡಿ ತಕ್ಷಣ ಫೋಟೋ ತೆಕ್ಕೊಂಡೆ. ಒಳ್ಳೆ ಅಣಿಮುತ್ತು ಕೊಟ್ಟಿದಾನೆ ಈ ಆಟೋ ಅಣ್ಣ. ಬಹಳ ದಿನಗಳ ಮೇಲೆ ಒಂದು ಒಳ್ಳೆ ಅಣಿಮುತ್ತು ಸಿಕ್ತು.



ಬಿಸಿರಕ್ತ ಇರುವತನಕ ಆಟ
ಆಮೇಲೆ ತಡಕಾಟ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ