Monday, May 25, 2009

ಟಾಯ್ಲೆಟ್ಟಲ್ಲಿ ಲೇಡಿ ಬಗ್ !

ಶುಕ್ರವಾರ ಇಲ್ಲೇ, ಹ್ಯಾಂಬರ್ಗಿನಲ್ಲಿ ಸುತ್ತಾಡುತ್ತಾ ಇದ್ದೆ. ಸೆಂಟ್ರಲ್ ಟ್ರೈನ್ ಸ್ಟೇಶನ್ ಇಂದ ಹೊರ ಬಂದು,
ಸಾಟರ್ನ್ (SATURN - Electronics Store Chain in Germany) ಗೆ ಹೋಗುವ ಹಾದಿಯಲ್ಲೇ ಬಾಧೆ ಶುರು ಆಯ್ತು. ಅದೃಷ್ಟವಶಾತ್ ಅಲ್ಲೇ ಒಂದು ಶುಚಾಲಯ ಕಂಡಿತು (ಸಿನಿಮಾದಲ್ಲಿ ನಮ್ಮ ಹೀರೋಗಳಿಗೆ ಬೇಕಾದ್ದ ವಸ್ತು ಅದ್ಹೇಗೋ ಸಿಗುತ್ತಲ್ಲ, ಹಾಗೆ). ಅಲ್ಲಿ ಒಳಗೆ ಹೋದಾಗ ಟಾಯ್ಲೆಟ್ಟಿನ ಕಮೋಡಿನಲ್ಲಿ ಲೇಡಿ ಬಗ್ ನ ಚಿತ್ರ ಪ್ರಿಂಟ್ ಮಾಡಿದ್ದಾರೆ.
ಇದನ್ನು ನೋಡಿದ ನನಗೆ ಕನ್ಫ್ಯೂಶನ್ ಶುರು ಆಯ್ತು.. ಏನಪ್ಪಾ ಅಂದ್ರೆ, ಮೊದಲು ಬಾಧೆ ತೀರಿಸ್ಲಾ ಅಥವ ಫೋಟೋ ತೆಗೀಲಾ ಅಂತಾ..

ಪ್ರಕೃತಿನೇ ಯಾವಾಗ್ಲೂ ಗೆಲ್ಲೋದು ಕಣ್ರೀ.. ಮೊದಲು ಬಾಧೆ ತೀರಿಸಿ ಆಮೇಲೆ ಫೋಟೋ ತೆಗೆದೆ.

ಜೊತೆಗೆ ಇನ್ನೊಂದು ವಿಚಾರ.. ಇವತ್ತಿನ ಯಾವುದೋ ಒಂದು ಹೊತ್ತಿನಲ್ಲಿ ನನ್ನ ಬ್ಲಾಗಿಗೆ ಇವತ್ತಿನವರೆಗೂ ಭೇಟಿ ಕೊಟ್ಟವರ ಸಂಖ್ಯೆ 30,000 ಮುಟ್ಟಿತು. ಏನೂ ದೊಡ್ಡ ವಿಚಾರ ಅಲ್ಲ.. ಆದರೂ ಸುಮ್ನೆ ಹೇಳಿಕೊಳ್ಳಬೇಕು ಅನ್ನುಸ್ತು.. ಅಷ್ಟೇ !
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, May 22, 2009

ಮಾವಂದಿರ ಆಶೀರ್ವಾದ

ಇದಕ್ಕೆ ಮುನ್ನ ತಂದೆ ತಾಯಿಯ ಆಶೀರ್ವಾದ, ಅತ್ತೆ ಮಾವನ ಆಶೀರ್ವಾದ ಗಳನ್ನು ಆಟೋ ಅಣಿಮುತ್ತುಗಳಲ್ಲಿ ನೋಡಿದ್ದಿರಿ.
ಈ ಭೂಪನನ್ನು ನೋಡಿ.. ಮೋಸ್ಟ್ಲಿ ಈ ಗಾಡಿ ಕೊಳ್ಳೋಕ್ಕೆ ಈತನ ಮಾವಂದಿರು ಸಹಾಯ ಮಾಡಿದ್ದಾರೆ ಅಂತಾ ಕಾಣುತ್ತೆ. ಆದರಿಂದಲೇ ಈ ರೀತ್ಯಾಗಿ ಬರೆಸಿಕೊಂಡಿದ್ದಾನೆ ಈತ. ಮಿತ್ರ ಅರುಣ ಕಳಿಸಿದ ಫೋಟೋ.

ನೋಡಿ, ಮಾವಂದಿರ ಆಶೀರ್ವಾದ :

ಇನ್ನೊಂದು ಅಭಾಸವನ್ನೂ ಹಾಕಿದ್ದೆ ನಾನು ಸೋಮಾರಿ ಕಟ್ಟೆಯಲ್ಲಿ - "ಅಮ್ಮನ ಮಾತು, ತಮ್ಮನ ದುಡ್ಡು" ಎಂದು ಬರೆಸಿಕೊಂಡಿದ್ದ ಒಬ್ಬಾತ ಆಟೋರಾಜ.
ಆದ್ರೂ ಇತ್ತೀಚಿಗೆ ಈ ರೀತಿಯ ಅಭಾಸಗಳು ಜಾಸ್ತಿ ಆಗ್ತಾ ಇದೆ ಅಲ್ವಾ??
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, May 19, 2009

ಆಟೋ ಅಣಿಮುತ್ತುಗಳು - ೬೨ - ಎಲ್ಲರಿಗಾಗಿ, ಒಬ್ಬರಿಗಾಗಿ, ನಿನಗಾಗಿ

ಫಲಕೊತ್ಸವದ ಲಕ್ಷ್ಮಕ್ಕ ಕಳಿಸಿದ ಫೋಟೋ ಇದು.
ರೋಮ್ಯಾಂಟಿಕ್ ಸ್ಟಾರ್ ಈ ಅಣ್ಣ.

ನಗು ಎಲ್ಲರಿಗಾಗಿ,
ಹೃದಯ ಒಬ್ಬರಿಗಾಗಿ
ನಿನಗಾಗಿ

ಇದೆ ಈ ಅಣ್ಣನ "ದಿಲ್ ಚಾಹತಾ ಹೈ"


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, May 14, 2009

ಮ್ಯಾಗಿ ನೂಡಲ್ಸ್ ಹಾಗು ರಾಜಕಾರಣ

ನನ್ನ ಲೇಖನಗಳನ್ನು ಓದುವ ಎಲ್ಲರಿಗೂ ನಾನು ಪ್ರಸ್ತುತ ಜರ್ಮನಿಯಲ್ಲಿ ಇದೀನಿ ಅನ್ನೋದು ಗೊತ್ತು.
ಇವತ್ತು ರಾತ್ರಿ ಅಂದ್ರೆ ಮೇ 13, ಸಂಜೆ ಹ್ಯಾಂಬರ್ಗಿನ ಇಂಡಿಯನ್ ಅಂಗಡಿಯಲ್ಲಿ ಮ್ಯಾಗಿ ನೂಡಲ್ಸ್ ಕಂಡಿತು.
ತಡೆಯಲಾಗಲಿಲ್ಲ. ೫ ಪ್ಯಾಕೆಟ್ ತಗೊಂಡು ಬಂದೆ (ಈ ಲೇಖನವನ್ನು ನನ್ನ ಹೆಂಡ್ತಿ ಓದಿದ್ದಾದಲ್ಲಿ, ಜರ್ಮನಿಗೆ ಬಂದು ಮ್ಯಾಗಿ ಅಪರೂಪಕ್ಕೆ ತಿಂತೀನಿ...ಅನ್ನೋದನ್ನ ಹೇಳ್ತೀನಿ...ಇದಕ್ಕೆ ಮುಂಚೆ ಬೆಂಗಳೂರಲ್ಲಿ ಇದ್ದಾಗ ಮ್ಯಾಗಿಯ ಕಡು ವಿರೋಧಿ ನಾನು!!)

ಇವತ್ತು ಒಳ್ಳೇ ವಾಕಿಗೆ ಹೋಗಿ ಬಂದ ಮೇಲೆ ಫುಲ್ಲ್ ಸುಸ್ತಾಗಿತ್ತು, ಊಟಕ್ಕೆ ಏನೂ ಮಾಡೋ ಮೂಡು ಇರ್ಲಿಲ್ಲ. ಹಾಗಾಗಿ ರಾತ್ರಿ ಊಟಕ್ಕೆ ಮ್ಯಾಗಿ ಮಾಡೋಣ ಅಂತಾ ತೀರ್ಮಾನ ಮಾಡಿದೆ (ಹೆಂಡತಿ ಕ್ಷಮಿಸಿದ್ದಲ್ಲಿ) !!.
ನಾನು ಇಲ್ಲಿ ಮಾಡೋ ನೂಡಲ್ಸ್ ಬಹಳಾ ಸಿಂಪಲ್.. ನೀರನ್ನು ಕುದಿಸಿ, ಅದಕ್ಕೆ ಮ್ಯಾಗಿ ಟೇಸ್ಟ್ ಮೇಕರ್ ಹಾಕಿ, ನಂತರ ನೂಡಲ್ಸ್ ಹಾಕಿ...ಬೇಯಿಸಿ ತಿನ್ನೋದು..ಸುಸ್ತಾಗಿದ್ದಾಗ ಈರುಳ್ಳಿ, ಟ್ಯೊಮಾಟೋ ಹೆಚ್ಚಿ ನೂಡಲ್ಸ್ ಮಾಡೋ ವ್ಯವಧಾನ ಇರಲ್ಲ.

ಸರಿ, ಟಾಪಿಕ್ಕಿಗೆ ಬರ್ತೀನಿ (ಸುಮ್ನೆ ಕುಯ್ತಾ ಸಾಯಿಸ್ತಾ ಇದಾನೆ ಬಡ್ಡಿಮಗ ಅಂತಾ ಬಯ್ಕೋತಾ ಇದೀರಾ ?)
ನೀರು ಕುದಿಯೋಕ್ಕೆ ಇಟ್ಟು, ಅದಕ್ಕೆ ಮ್ಯಾಗಿ ಟೇಸ್ಟ್ ಮೇಕರ್ ಹಾಕಿ, 2 ನಿಮಿಷದ ನಂತರ ನೂಡಲ್ಸ್ ಹಾಕಿ ಮಿಕ್ಸ್ ಮಾಡಲು ಶುರು ಮಾಡಿದೆ (ಇಲ್ಲಿ ಇರೋದು ಎಲೆಕ್ಟ್ರಿಕ್ ಒಲೆ..ಹಾಗಾಗಿ ಸರಿಯಾದ ಬಿಸಿ ಎಂಥದ್ದು ಅಂತ ಗೊತ್ತಾಗಲ್ಲ). ತಳ ಹಿಡಿಯೋಕ್ಕೆ ಶುರು ಆಯ್ತು. ಹಾಗಾಗಿ, ಇನ್ನೂ ದೊಡ್ಡದಾದ ಪಾತ್ರೆಯಲ್ಲಿ ಕಾಲುಭಾಗ ನೀರು ಇಟ್ಟು ಆದರ ಮೇಲೆ ನೂಡಲ್ಸ್ ಬೇಯಿಸೋ ಪಾತ್ರೆ ಇಟ್ಟೆ.. ಹೀಗೆ ತಳ ಸೀದುತ್ತಾ ಇರೋ ಪಾತ್ರೆಯನ್ನು, ಸೀಯದೇ ಇರೋ ಹಾಗೆ ಮಾಡಲು, ನೀರನ್ನು ತುಂಬಿರೋ ಪಾತ್ರೆ ಮೇಲೆ ಇಟ್ಟೆನಲ್ಲಾ, ಅವಾಗ............

ಸಂದರ್ಭಕ್ಕೆ ತಕ್ಕುನಾಗಿ ತಮ್ಮ ನಿಷ್ಠೆ, ನೀಯತ್ತು, ನಿಯಮ ಬದಲಾಯಿಸೋ ರಾಜಕಾರಣಿಗಳು ಜ್ನಾಪಕಕ್ಕೆ ಬಂದರು.
ಇಷ್ಟನ್ನು ಹೇಳೋಕ್ಕೆ ಇಷ್ಟು ಉದ್ದದ ಲೇಖನ.

ಲೇಖನದ ಹೆಡಿಂಗು ನೋಡಿ, ತರುವಾಯ ಲೇಖನವನ್ನು ಓದಿ ನಿರಾಸೆಯಾಗಿದ್ದಲ್ಲಿ ನನಗೆ ಬಯ್ಯಲು ನಿಮಗೆ ಎಲ್ಲಾ ಅಧಿಕಾರ ಇದೆ. ಏಕೆಂದ್ರೆ, ನಿಮ್ಮ ಅಭಿಮಾನದಿಂದಲೇ ಇಂದಿನ ತನಕ ನನ್ನ ಬ್ಲಾಗು ಉಸಿರಾಡುತ್ತಾ ಇದೆ :-).

ಜಾಸ್ತಿ ಹೇಳಲ್ಲಾ...ನಿಮ್ಮ ಅಭಿಮಾನವೇ ನನ್ನ ಬ್ಲಾಗಿಗೆ ಅಕ್ಕಿ ಬೇಳೆ....ಜೊತೆಗೆ ಮ್ಯಾಗಿ ನೂಡಲ್ಸ್ :)
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, May 13, 2009

ಸಂಜೆವಾಣಿ ಸಮಯ - ಇಂದಿನ ದಿನಾಂಕ ಹಿಂದಿನ ಸುದ್ದಿ

ಇಂದಿನ ಸಂಜೆವಾಣಿಯ ಆನ್ಲೈನ್ ಆವೃತ್ತಿಯಲ್ಲಿ ಕಂಡಿದ್ದು.
ವೆಬ್ ಪೇಜಿನಲ್ಲಿ ತೋರಿಸುತ್ತಾ ಇರೋದು May 13, 2009 ಅಂತಾ,
ಆದ್ರೆ ಒಳಗಿರೋ ಪೇಪರ್ ಇರೋದು ಮಂಗಳವಾರ 14-4-2009.ಏನಿದು ಮಾಯೆ ???
ನನ್ನ ಬ್ಲಾಗಿಗೊಸ್ಕರ ಈ ಥರ ಮಾಡ್ತಾರಾ ಇವ್ರು ?


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, May 12, 2009

ಆಟೋ ಅಣಿಮುತ್ತುಗಳು - ೬೧ - ಉಲೂಚಿ

ಈ ಫೋಟೋವನ್ನು ಮಿತ್ರ ಶ್ರೀಚರಣ ಕಳ್ಸಿದ್ದು.
ನೋಡಿದ ಕೂಡಲೇ "ಬಬ್ರುವಾಹನ" ಚಿತ್ರ ಜ್ಞಾಪಕಕ್ಕೆ ಬಂತು.
ಅರ್ಜುನ (ಅಣ್ಣಾವ್ರು), ಹಾಗು ಉಲೂಚಿ (ಕಾಂಚನ) ಇಬ್ರೂಹಾಡೋ ಹಾಡು " ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಹಾಡೋಕ್ಕೆ ಶುರು ಮಾಡಿದೆ.
ಆದರೂ, ಉಲೂಚಿ ಅನ್ನೋ ಹೆಸರು ಇಡ್ತಾರಾ ? ಯಾರಿಗಾದ್ರೂ ಇಟ್ಟಿರೋದನ್ನ ಕೇಳಿದೀರಾ ಅಥವಾ ನೋಡಿದೀರಾ?

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, May 5, 2009

ಪ್ರವಾಸಕಥನ - WERFEN ಹಿಮ ಗುಹೆಗಳು

ಮೊದಲ ಸಲ ಪ್ರವಾಸಕಥನ ಬರೀತಾ ಇದೀನಿ. ಅಡ್ಜಸ್ಟ್ ಮಾಡ್ಕಳಿ.

ಕಳೆದ ಶುಕ್ರವಾರ ಆಫೀಸಿಗೆ ರಜೆ ಇತ್ತು. ಹಾಗಾಗಿ ನಾನು ಮತ್ತು ನಮ್ಮ ಸಹೋದ್ಯೋಗಿಗಳು ದಕ್ಷಿಣ ಜರ್ಮನಿ (Bavaria) ಕಡೆ ಒಂದು ಟೂರ್ ಹಾಕಿದ್ವಿ. ಮೊದಲು ಮ್ಯೂನಿಕ್, ಅಲ್ಲಿಂದ ಸಾಲ್ಸ್ ಬರ್ಗ್ (ಆಸ್ಟ್ರಿಯ), ಹಾಗು Neuschwanstein Castle ಗೆ ಹೋಗಿದ್ವಿ. ಮ್ಯೂನಿಕ್ಕಿನಲ್ಲಿ ನಗರ ಪ್ರದಕ್ಷಿಣೆ, ಒಲಂಪಿಕ್ ಪಾರ್ಕ್, ಟವರ್, BMW ಮ್ಯೂಸಿಯಂ ನೋಡಿ ಬಂದ್ವಿ.ಮಾರನೆಯ ದಿನ (ಮೇ 2), ಮ್ಯೂನಿಕ್ಕಿಂದ ಬೆಳಿಗ್ಗೆ ಬೇಗನೆ ಹೊರಟು ಸಾಲ್ಸ್ ಬರ್ಗ್ (Salzburg, Austria) ನಗರಕ್ಕೆ ಬೆಳಿಗ್ಗೆ 10 ಕ್ಕೆ ಬಂದ್ವಿ.ಅಲ್ಲಿಂದ ಮತ್ತೊಂದು ಟ್ರೈನ್ ಹಿಡಿದು ಸುಮಾರು 11:30 ಅಷ್ಟೊತ್ತಿಗೆ WERFEN ಅನ್ನೋ ಹಳ್ಳಿಗೆ ಬಂದ್ವಿ.

ಇಲ್ಲಿ ಇರೋದು ಪ್ರಪಂಚದ ಅತ್ಯಂತ ಹಳೆಯ ಹಾಗು ದೊಡ್ಡ ಹಿಮ ಗುಹೆಗಳು. ಈ ಗುಹೆಗಳು ಸರಿ ಸುಮಾರು 50 ರಿಂದ 60 ದಶಲಕ್ಷ ವರ್ಷ ಹಳೆಯದು.

WERFEN ಟ್ರೈನ್ ಸ್ಟೇಶನ್ ಇಂದ ಬಸ್ ಹಿಡಿದು EISRIESENWELT (Giant ICE World) ನ Entrance ಗೆ ಹೋದ್ವಿ. ಹೋಗೋ ದಾರಿ ಕೂಡ ಬೆಟ್ಟದಲ್ಲೇ, ಸುಮಾರು ೧೫ ನಿಮಿಷದ ಹಾದಿ. ಪ್ರವೇಶದಲ್ಲಿ ನಮ್ಮ ಎಕ್ಸಟ್ರಾ ಲಗೇಜನ್ನು ಕ್ಲಾಕ್ ರೂಮಿನಲ್ಲಿ ಭದ್ರ ಪಡಿಸಿ, ಗುಹೆಯ ಟೂರಿಗೆ ಟಿಕೇಟನ್ನು ಕೊಂಡು ಮೇಲೆ ಹತ್ತಲು ಶುರು ಮಾಡಿದೆವು.

ಗುಹೆ ಇರೋದು ಪರ್ವತದ ಆಲ್ಮೋಸ್ಟ್ ತುದಿಯಲ್ಲಿ. ಸಮುದ್ರ ಮಟ್ಟಕ್ಕಿಂತ ಸುಮಾರು 1775 ಮೀ ಮೇಲಿದೆ. ಮೊದಲು ೨ ಕಿಮೀ ನಡುಗೆ, ನಂತರ ೪ ನಿಮಿಷದಷ್ಟು ಕೇಬಲ್ ಕಾರಿನಲ್ಲಿ, ಮತ್ತೆ ಪುನಃ ಸುಮಾರ್ ೧.೫ ಕಿಮೀ ನಡೆದರೆ ಗುಹೆಯ ಪ್ರವೇಶ ಸಿಗುತ್ತದೆ. ಈ ಗುಹೆಯನ್ನು ಮೇ ೧ ರಿಂದ ಅಕ್ಟೋಬರ್ ತಿಂಗಳ ತನಕ ತೆರೆದಿರುತ್ತಾರೆ. ಅದಾದ ಮೇಲೆ ಪ್ರವಾಸಿಗರಿಗೆ ಬಂದ್ ಆಗಿರುತ್ತದೆ. ನಮ್ಮ ಟೈಮಿಂಗ್ ಸರಿ ಇತ್ತು, ಅಲ್ಲಿಗೆ ನಾವು ಹೋಗಿದ್ದು ಮೇ ೨ ರಂದು.

ಸರಿ, ಇನ್ನು ಈ ಗುಹೆಗಳ ಬಗ್ಗೆ ಸ್ವಲ್ಪ ಇನ್ಫೊ ಕೊಡ್ತೀನಿ.

ಈ ಗುಹೆಗಳು ಸುಮಾರು ೫೦ ರಿಂದ ೬೦ ಮಿಲಿಯನ್ ವರ್ಷ ಹಳೆಯವು. ಜೊತೆಗೆ ಈ ಗುಹೆಗಳು ಸುಮಾರು 42 ಕಿಮೀ ಉದ್ದ ಇದೆ. ಗುಹೆ ಇರುವ ಪರ್ವತವು ಸುಣ್ಣದಕಲ್ಲಿನದು (Limestone). ಹಾಗಾಗಿ ಈ ಕಲ್ಲುಗಳು ಸೂಕ್ಷ್ಮಾತಿಸೂಕ್ಷ್ಮ ರಂಧ್ರಗಳನ್ನು ಹೊಂದಿರುತ್ತದೆ ಹಾಗು ಇದರ ಮೂಲಕ ನೀರು ತೊಟ್ಟಿಕ್ಕುತ್ತದೆ. ಪರ್ವತದ ಮೇಲಿನ ನೀರು, ಹಾಗೆಯೇ ಈ ಬಂಡೆಗಳ ಮೂಲಕ ಇಳಿದು ಈ ಗುಹೆಯಲ್ಲಿ ಶೇಖರವಾಗುತ್ತದೆ. ಈ ಜಾಗ ಇರೋದು ಆಲ್ಪ್ಸ್ (ALPS) ಪರ್ವತ ಶ್ರೇಣಿಯಲ್ಲಿ, ಹಾಗಾಗಿ ಛಳಿಗೆ ಏನೂ ಕೊರತೆಯಿಲ್ಲ. ಛಳಿಗಾಲದಲ್ಲಿ ತಾಪಮಾನ ಸುಮಾರು -೧೦ ರಿಂದ -೨೦ ರ ತನಕ ಬೀಳುತ್ತದೆ. .

ಈ ಗುಹೆಯು ೪೨ ಕಿಮೀ ಅಷ್ಟು ಉದ್ದ ಇದ್ದರೂ ಕೂಡ, ಗಾಳಿಯ ಓಡಾಟ ಎಲ್ಲಾ ಕಡೆ ಚೆನ್ನಾಗಿದೆ. ನೈಸರ್ಗಿಕ ವಾತಾಯನ ಬಹಳ ಚೆನ್ನಾಗಿದೆ. ಚಳಿಗಾಲದಲ್ಲಿ ಇದೆ ವಾತಾಯನದಿಂದ, ಕಟು ಚಳಿಗಾಳಿಯು ಇಡೀ ಗುಹೆಯಲ್ಲಿ ಸಂಚರಿಸುತ್ತದೆ, ಹಾಗೆಯೇ ಶೇಖರಗೊಂಡ ನೀರು ಗಟ್ಟಿಯಾಗಿ ಐಸ್ ಆಗುತ್ತೆ. ಹಾಗು ಬೇಸಿಗೆಯಲ್ಲಿ ಸ್ವಲ್ಪ ಐಸ್ ಕರಗಿ ನೀರಾಗಿ ಕೆಳಗೆ ಹರಿಯುತ್ತದೆ. ಇದೆ ಪ್ರಕ್ರಿಯೆ ಲಕ್ಷಾಂತರ ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೆಲವೊಂದು ಕಡೆ ಸುಮಾರು ೪೦ ರಿಂದ ೫೦ ಮೀಟರ್ ನಷ್ಟು ದಪ್ಪವಾಗಿ ಐಸ್ ಕಟ್ಟಿದೆ.

ಈ ಗುಹೆಗಳನ್ನು 1879 ನೆ ಇಸವಿಯಲ್ಲಿ Salzburg ಗಿನ ಓರ್ವ ನೈಸರ್ಗಿಕ ವಿಜ್ಞಾನಿ ಆಂಟನ್ ಪೊಸ್ಸೆಲ್ಟ (Anton Posselt) ಪತ್ತೆ ಹಚ್ಚಿದ್ದು. ಕಣ್ಣು ಕುಕ್ಕುವ ಕತ್ತಲೆಯಲ್ಲಿ ಸುಮಾರು ೨೦೦ ಮೀ ಒಳಗೆ ಹೋಗಿ ಅಫಿಶಿಯಲ್ ಆಗಿ ಪತ್ತೆ ಹಚ್ಚಿದ್ದು. ಇದರ ಬಗ್ಗೆ ಆಸ್ಟ್ರಿಯ ದಲ್ಲಿ ರಿಪೋರ್ಟನ್ನು ತಯಾರಿಸಿದ. ಇದಾದ ನಂತರ ಈ ರಿಪೋರ್ಟ್ ಅಷ್ಟೊಂದು ನೋಡಲ್ಪಡಲಿಲ್ಲ.

ನಂತರ 1920 ಆಸುಪಾಸಿನಲ್ಲಿ, ಮತ್ತೋರ್ವ Salzburg ಗಿನ ಅತ್ಯಂತ ಸಾಹಸಿ ಹಾಗು ನಿಸ್ಸೀಮ ಗುಹಾನ್ವೇಷಕ ನಾದ ಅಲೆಕ್ಸಾಂಡರ್ ಫೊನ್ ಮ್ಯೋರ್ಕ್ (Alexander von Mörk) ಆಂಟನ್ ಬರೆದ ರಿಪೋರ್ಟಿನ ಮಹತ್ವ ತಿಳಿದು, ಈ ಗುಹೆಗೆ ಭೇಟಿ ಕೊಟ್ಟ, ಹಾಗು ಇದರ ಬಗ್ಗೆ ಅಧ್ಯಯನ ನಡೆಸಿ, ಇದರ ಬಗ್ಗೆ ವ್ಯಾಪಕವಾದ ರಿಪೋರ್ಟನ್ನು ಬರೆದು ಜನರಿಗೆ ತಿಳಿಸಿದ.
ಈತನ ಭೇಟಿಯ ನಂತರ, ಸುಮಾರು ಮಂದಿ ಇಲ್ಲಿಗೆ ಅವನ ಜೊತೆ ಹಾಗು ನಂತರ ಬಂದು ಅನ್ವೇಷಿಸಿ ಹೋದರು. ಇವರುಗಳು ಈ ಗುಹೆಯ ಒಳಗೆ ಓಡಾಡಲು, ಹತ್ತಲು ಅನುಕೂಲವಾಗುವ ರೀತಿ Route ಗಳನ್ನು ಕಟ್ಟಿದರು.

ಮೊದಲನೆ ಜಾಗತಿಕ ಮಹಾಯುಧ್ಧದಲ್ಲಿ ಅಲೆಕ್ಸಾಂಡರ್ ಫೊನ್ ಮ್ಯೋರ್ಕ್ (Alexander von Mörk) ನಿಧನನಾದ. ಸತ್ತಾಗ ಈತನಿಗೆ ಕೇವಲ 27 ವರ್ಷ. ಈತನ ಆಸೆ ಏನಾಗಿತ್ತೆಂದರೆ, ಈ ಗುಹೆಯಲ್ಲೇ ತನ್ನ ಸಂಸ್ಕಾರ ನೆರವೆರಬೇಕೆಂದು. ಆಸೆಯ ಪ್ರಕಾರವಾಗಿ ಈತನ ಚಿತಾಭಸ್ಮವನ್ನು ಅಲ್ಲೇ ಒಂದು ದೊಡ್ಡ ಕುಂಡದಲ್ಲಿ ಇಡಲಾಗಿದೆ.

ಒಂದೇ ಒಂದು ಬೇಜಾರಿನ ವಿಷಯವೆಂದರೆ ಈ ಗುಹೆಯ ಒಳಗೆ ಫೋಟೋ ಹಾಗು ವಿಡಿಯೋ ತೆಗೆಯಲು ಅನುಮತಿ ಇಲ್ಲ. ಇಲ್ಲಿ ಗುಹೆಯ ಒಳಗೆ ಹೋಗುವುದು ಒಂದು ಸಣ್ಣ ಲೈನಿನಲ್ಲಿ. ಹಾಗಾಗಿ ಕ್ಯಾಮೆರಾ ಹಿಡಿದು ಅಡ್ಜಸ್ಟ್ ಮಾಡಿ, ಫ್ಲಾಶ್ ಹೊಡೆದು, ಬೇಕಾದವರನ್ನು ನಿಲ್ಲಿಸಿ ಫೋಟೋ ತೆಗೆದರೆ ಮಿಕ್ಕಿದ ಗುಂಪಿಗೆ ಕಷ್ಟ ಅನ್ನೋ ಕಾರಣಕ್ಕೆ, ಹಾಗು ಈ ಜಾಗ ಬಹಳ ಇಳಿಜಾರಿನಿಂದ ಕೂಡಿದೆ. ಮೆಟ್ಟಿಲಿನ ಅಕ್ಕ ಪಕ್ಕದಲ್ಲಿ ಹಿಮ ಕಟ್ಟಿರುತ್ತದೆ ಹಾಗು ತುಂಬಾ ಜಾರುತ್ತದೆ. ಫೋಟೋ ತೆಗೆಯುವ ಉತ್ಸಾಹದಲ್ಲಿ ಅದರ ಮೇಲೆ ಕಾಲಿಟ್ಟು, ಜಾರಿ ಬಿದ್ದು ಪ್ರಾಣ ಹೋಗುವ ಸಂಭವ ಕೂಡ ಇದೆ. ಹಾಗಾಗಿ ಫೋಟೋ ಹಾಗು ವಿಡಿಯೋ ತೆಗೆಯೋದು ನಿರ್ಬಂಧಿಸಲಾಗಿದೆ.

ಸಧ್ಯಕ್ಕೆ ಇಷ್ಟು ಸಾಕು ಅನ್ಕೋತೀನಿ. ಕೆಲವು ಫೋಟೋಗಳನ್ನು ಹಾಕ್ತ ಇದೀನಿ. ಮಿಕ್ಕಿದ ಫೋಟೋಗಳಿಗೆ PICASA ಆಲ್ಬಮ್ಮಿನ ಲಿಂಕ್ ಕೊಡ್ತೀನಿ. ಜೊತೆಗೆ ಗುಹೆಯ ಒಳಗೆ ಹೇಗಿದೆ ಅಂತ ನೋಡೋದಕ್ಕೆ ಈ ಜಗದ ಅಫಿಶಿಯಲ್ Website ಲಿಂಕನ್ನು ಕೊಡ್ತೀನಿ.

ಚಾರಣದ ಕೆಲವು ಫೋಟೋಗಳು ನೋಡಿ :

ಪ್ರವೇಶ -


ALPS ಪರ್ವತಶ್ರೇಣಿ -


ಪ್ರಪಾತ -


Cable Car -


ಹೆಂಗಿದಾನೆ ಕಟ್ಟೆ ಶಂಕ್ರ -


ಗುಹೆಯ ಪ್ರವೇಶದ್ವಾರ -


WERFEN ಇಂದ ಹೊರಟು ಗುಹೆಯ ಒಳಗೆ ಹೋಗುವ ತನಕದ ಚಿತ್ರಗಳಿಗೆ ನನ್ನ PICASA ಅಲ್ಬಂ ಲಿಂಕ್ :
http://picasaweb.google.com/mandagere.shankar/SalzburgIceCaves2009?authkey=Gv1sRgCJbUlc6O_bXhKw&feat=directlink

ಗುಹೆಯ ಒಳಗಿರುವ ರಮಣೀಯ ದೃಶ್ಯಕ್ಕಾಗಿ EISRIESEN WELT ನ ಅಧಿಕೃತ Website ನ ಚಿತ್ರಗಳಿರುವ ಲಿಂಕ್ :
http://www.eisriesenwelt.at/site/content/CB_ContentShow.php?coType=photos

ಹಿಮ ಗುಹೆಗಳ ಬಗ್ಗೆ ಇನ್ನೂ ಮಾಹಿತಿ ಬೇಕಾದ್ದಲ್ಲಿ, ಈ ತಾಣಕ್ಕೆ ಭೇಟಿ ನೀಡಬಹುದು :
http://www.eisriesenwelt.at/site/content/CB_ContentShow.php?coType=home&lang=EN

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ