ನಾನು : ಅಪ್ಪಾ, ಹೆಂಗೂ ಐದು ರುಪಾಯಿ ಕೊಟ್ಟಿದೀಯ, ಇನ್ನೊಂದು ರುಪಾಯಿ ಕೊಡಪ್ಪಾ..
ಅಪ್ಪ : ನಿಂಗೆ ಐದು ರುಪಾಯಿ ಕೊಟ್ಟಿದ್ದೆ ಜಾಸ್ತಿ, ಇನ್ಯಾಕೆ ಇನ್ನೊಂದು ರುಪಾಯಿ ?
ನಾನು : ನೀನು ಎರಡು ರುಪಾಯಿದು ತಗೋ ಅಂದೆ, ಆದ್ರೆ ಮೂರು ರುಪಾಯಿಗೆ ಇನ್ನೂ ಸ್ವಲ್ಪ ಜಾಸ್ತಿ ದೊಡ್ದು ಸಿಗತ್ತೆ. ಎರಡು ರುಪಾಯಿದು ಚಿಕ್ದು ಅಪ್ಪಾ, ಮೂರು ರುಪಾಯ್ದು ತಗೋತೀನಿ.. ಪ್ಲೀಸಪ್ಪಾ
ಅಪ್ಪ : ಸಾಕು ಕಣೋ, ಒಂದು ವಾರ ಉಪಯೋಗುಸ್ತ್ಯಾ ಆಮೇಲೆ ಹರ್ದೊಗತ್ತೆ. ಅದಕ್ಯಾಕೆ ಸುಮ್ನೆ ಒಂದು ರುಪಾಯ್ ವೇಸ್ಟ್ ಮಾಡ್ತೀಯ? ಸಾಕು ಬಿಡೋ.
ಏನೇ ತಿಪ್ಪರಲಾಗ ಹಾಕುದ್ರೂ ನಮ್ಮಪ್ಪನಿಂದ ಒಂದು ರುಪಾಯಿ ಗಿಟ್ಟಿಸೋದು ಅಸಾಧ್ಯ ಅಂತ ಗೊತ್ತಾಗಿ, ಅಮ್ಮನ ಹತ್ರ ಓಡು.
ನಾನು : ಅಮ್ಮಾ, ಇನ್ನೊಂದು ರುಪಾಯಿ ಕೊಡಮ್ಮಾ....
ಅಮ್ಮ : ಇಲ್ಲಾ ನನ್ಹತ್ರಾ, ಸುಮ್ನೆ ತಲೆ ತಿನ್ಬೇಡಾ. ನಿಮ್ಮಪ್ಪ ಕೊಡಲ್ಲ ಅಂದ ತಕ್ಷಣ ಬಂದು ನಂತಲೆ ತಿನ್ನಬೇಡಾ. ಸಾಕು ಐದು ರುಪಾಯಿ, ಸುಮ್ನೆ ಅದರಲ್ಲೇ ತಗೋ ಹೋಗು.
ನಾನು : ಇಲ್ಲಮ್ಮ, ಸಾಕಾಗಲ್ಲ.. ಎರಡು ರುಪಾಯಿಂದು ತುಂಬಾ ಚಿಕ್ದು, ಕೈಲೆ ಹಿಡಿಯೋಕ್ಕೆ ಆಗಲ್ಲ. ಏನೂ ಮಜಾ ಬರಲ್ಲಾ... ಜಾಸ್ತಿ ಅಲ್ಲಮ್ಮ, ಬರೀ ಒಂದು ರುಪಾಯಿ ಕೇಳ್ತಾ ಇದ್ದೀನಿ. ಕೊಡಮ್ಮಾ ಪ್ಲೀಸ್.
ಅಂತೂ ಇಂತೂ ಅಮ್ಮಂಗೆ ಪೂಸಿ ಹೊಡೆದು, ಬೆಣ್ಣೆ ಹಚ್ಚಿ ಇನ್ನೊಂದು ರುಪಾಯಿ ಇಸ್ಕೊಂಡು ಓಡಿದ್ದು ಅಂಗಡಿಗೆ.
ದರಪಟ್ಟಿ :
ಚಿಕ್ಕದು - ಎರಡು ರುಪಾಯಿ
ಮೀಡಿಯಂ - ಮೂರು ರುಪಾಯಿ
ದೊಡ್ಡದು - ನಾಲ್ಕು ರುಪಾಯಿ
ಹೆಂಗೂ ಸೆಟ್ ಮಾಡೋದನ್ನ ಕಳೆದ ವರ್ಷ ಕಲ್ತಿದ್ದೆ, ಅದಕ್ಯಾಕೆ ಅಂಗಡಿಯವನಿಗೆ ಐವತ್ತು ಪೈಸೆ ಕೊಡಬೇಕು ? ನಾಲ್ಕು ರುಪಾಯಿಂದನ್ನ ಮೂರುವರೆಗೆ ಚೌಕಾಸಿ ಮಾಡಿ ಮಿಕ್ಕಿದ್ದಕ್ಕೆ ದೊಡ್ಡ ಕಟ್ಟನ್ನ ತಗೊಂಡು ಮನೆಗೆ ಬಂದು ಅಮ್ಮನ ಮುಂದೆ ನನ್ನ ಪಾಂಡಿತ್ಯ ಪ್ರದರ್ಶನ ಮಾಡಿ ಸೆಟ್ ಮಾಡಿದ್ದೆ. ಅಪ್ಪನ ಹಳೆ ಪಂಚೆಯ ಅಂಚಿಗೆ ಮುಕ್ತಿ ತೋರಿಸಿದ್ದಾಯ್ತು. ಹೀಗೆ ಹಾಗೆ ಕೇವಲ ನಾಲ್ಕೈದು ದಿನ ತಗೊಂಡಿದ್ದರ ಆಯಸ್ಸು. ಪುನಃ ಅಪ್ಪನ ಕೈಕಾಲು ಹಿಡಿದು ಮತ್ತೆ ಐದು ರುಪಾಯಿ ವಸೂಲಿ ಮಾಡಿ ಮೊತ್ತೊಂದನ್ನು ಅಂಗಡಿಯಲ್ಲಿ ಕೊಂಡಿದ್ದು.ಪ್ರತೀಬಾರಿ ಆಷಾಢ ಬಂದಾಗಲೆಲ್ಲಾ ನನ್ನ ಈ ಹಳೆಯ ಪ್ರಸಂಗ ನೆನಪಾಗುತ್ತೆ. ಈ ವರ್ಷ ಸೇರಿಸಿದರೆ, ಗಾಳಿಪಟ ಹಾರಿಸಿದ್ದು ಹದಿನಾರು ವರ್ಷಗಳ ಹಿಂದೆ. ಒಂದಲ್ಲ, ಐದಲ್ಲ... ನೂರು ರುಪಾಯಿ ಕೊಟ್ಟು ಗಾಳಿಪಟ ಕೊಂಡು ಹಾರಿಸೋ ತಾಕತ್ತು ಇದೆ, ಆದ್ರೆ ನಿಜವಾಗಲೂ ಅದನ್ನ ಹಾರಿಸೋ ಯೋಗ್ಯತೆ ಇಲ್ಲಾ.
ಥೂ... ಇದೂ ಒಂದು ಜನ್ಮಾ ನಾ..
ಮತ್ತೆ ಮತ್ತೆ ಕಾಡುತಾವಾ ನೆನಪು.---------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
5 comments:
ಆ ವಯಸ್ಸಿನಲ್ಲಿ ಗಾಳಿಪಟವೇ ಸರ್ವಸ್ವವಾಗಿತ್ತು!.ಕುಂತರೂ ಅದೇ ,ನಿಂತರೂ ಅದೇ!ಸದಾ ಅದೇ ಧ್ಯಾಸ!ಗಾಳಿಪಟ ಹಾರಿಸುವ ಆ ಖುಷಿ ,ಆ ಹುಮ್ಮಸ್ಸು ಗಾಳಿಯಲ್ಲೇ ಹಾರಿಹೋಗಿದೆ ಅಲ್ವಾ?
ನಿಜ. ಈಗ ದುಡ್ಡು ಇದೆ ಆದ್ರೆ ಗಾಳಿಪಟ ಹಾರಿಸೋಕೆ ಸಮಯ ಇಲ್ಲ. ಸಮಯ ಇದ್ದಾಗ ಆ ಗೆಳೆಯರು ಸಿಗೋಲ್ಲ. ಎಲ್ಲ ಗೆಳೆಯರು ಸೇರಿ ಹಾರಿಸುವಾಗ ಎತ್ತರದಲ್ಲಿ ಇರೋದು ನನ್ನ ಗಾಳಿಪಟ ಅಂತ ಆಡುತ್ತಿದ್ದ ಆ ಜಗಳ ಎಲ್ಲ ಈಗ ಬರಿ ನೆನಪು ಅಷ್ಟೇ.. :) ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಈಗ ನೆನಪಿನ ಗಾಳಿಪಟ ಹಾರಿಸಬೇಕಷ್ಟೇ!
saar , dont worry.. ಮತ್ತೆ ಹಾರಿಸೋಣ.. ಆಗಲ್ಲ ಅಂತ ಯಾಕ್ ಅನ್ಕೋಬೇಕು.. ಹಾರ್ಸೋಣ..
ನಾನು ಪೂರ್ತಿ ಗಾಳಿಪಟ ನಾನೇ ಮಾಡ್ತಿದ್ದೆ. ಏನೂ ಅಂಗಡಿಯಿಂದ ತರ್ತಿರಲಿಲ್ಲ :P
boss super boss naanu galipata madtha idde
Post a Comment