Thursday, February 11, 2010

ಚಪ್ಲಿ ಬೇಕಾದ್ರೆ ಕೊಳ್ಳಲೇ ಬೇಕಾ?

ಬಹಳ ದಿನವಾದ ಮೇಲೆ ಒಂದು ಅನುಭವ ಬರೆಯುತ್ತಿದ್ದೀನಿ, ಪರಾಂಬರಿಸಿ.

ನನ್ನ ಜೀವನದ ಸೂಪರ್ ಅನುಭವಗಳು ಹೆಚ್ಚಾಗಿ ಆಗಿರೋದು ನಮ್ಮ ಮೈಸೂರಿನ ಕಟ್ಟೆಯಲ್ಲೇ. ಸಿಹಿ, ಕಹಿ, ಹುಳಿ, ಉಪ್ಪು, ಖಾರ, ಸಪ್ಪೆ (ಕಟ್ಟೆಯಲ್ಲಿ ಯಾರೂ ಇಲ್ದೆ, ಒಬ್ನೇ ಕೂತಿರೋದು).... ಎಲ್ಲಾ ರೀತಿ ಅನುಭವಗಳೂ ಸಿಕ್ಕಿವೆ.

ಒಬ್ಬ ಕಟ್ಟೆ ಮಿತ್ರ, ಹೆಸರು.. ಹ್ಮ್, ಹರೀಶ ಅಂದುಕೊಳ್ಳೋಣ (ಗೋಪ್ಯತೆಯನ್ನು ಕಾಯುವುದಕ್ಕೆ ಹೆಸರನ್ನು ಬದಲಾಯಿಸಲಾಗಿದೆ). ಈತನಿಗೆ ಮುಂಚಿಂದಲೂ ಒಂದು ಕಲೆ ಸಿದ್ಧಿಸಿತ್ತು. ಹೇಳ ಹೆಸರಿಲ್ಲದೆ ಅಂಗಡಿಯಿಂದ ಚಪ್ಲಿ ಸಲೀಸಾಗಿ ಎತ್ಕೊಂಡು ಬರೋನು. ಒಮ್ಮೆ ಇವನ ಜೊತೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಇರೋ "ಬಾಟಾ" ಶೋರೂಮಿಗೆ ಹೋಗಿದ್ದೆ. ಕಟ್ಟೆಯಲ್ಲಿ ಕೂತಿದ್ದವನ್ನು "ಬಾರೋ, ಚಪ್ಲಿ ತಗೋಬೇಕು, ನೋಡ್ಕೊಂಡು ಬರೋಣ" ಎಂದು ಕರ್ಕೊಂಡು ಹೋದ. ಅಲ್ಲಿ ಒಳಗೆ ಹೋಗಿ, ಸುಮಾರು ಅರ್ಧ ಘಂಟೆ ಅದೂ ಇದೂ ನೋಡಿದ ಮೇಲೆ "ಯಾವ್ದೂ ಇಷ್ಟ ಆಗ್ಲಿಲ್ಲ ಕಣೋ, ಇನ್ನೊಂದಿನ ಬರೋಣ" ಎಂದವನೇ, ಬಲವಂತ ಮಾಡಿ ವಾಪಸ್ ಎಳ್ಕೊಂಡು ಬಂದ.

ಕಟ್ಟೆಗೆ ಬಂದ ಮೇಲೆ ನಾನು "ನನ್ಮಗ್ನೆ, ಮಾಡಕ್ಕೆ ಕೆಲಸ ಇಲ್ವಾ? ಸುಮ್ನೆ ಆರಾಮಾಗಿ ಇಲ್ಲೇ ಕೂತಿರ್ಬೋದಿತ್ತು, ಸುಮ್ನೆ ಅಲ್ಲಿ ತನಕ ಕರ್ಕೊಂಡು ಹೋದೆ. ಚಪ್ಲಿ ತಗೊಲ್ಲಿಲ್ಲ ಏನಿಲ್ಲ" ಅಂತಾ ಬೈತಾ ಇದ್ದೀನಿ. ಅವ್ನು ಹೋಗಿ "ಸೇಟು, ಬೈಟು ಟೀ" ಅಂತಾ ಆರ್ಡರ್ ಕೊಟ್ಟು, ನನ್ಮುಂದೆ ಕೂತು ತನ್ನ ಎರಡೂ ಕಾಲನ್ನು ಎತ್ತಿ ತೋರಿಸಿದ.. ಹೊಸಾ ಜೊತೆ ಚಪ್ಲಿ.

ಅಂಗಡಿಯ ಒಳಗೆ ಓಡಾಡ್ತಾ, ತನ್ನ ಹಳೆ ಚಪ್ಲಿ ಅಲ್ಲಿಯೇ ಬಿಟ್ಟು, ಹೊಸ ಜೊತೆ, ಅದೂ ತನಗೆ ಇಷ್ಟವಾದ ಡಿಸೈನಿದನ್ನು ಹಾಕ್ಕೊಂಡು ಬಂದಿದಾನೆ. ಜೊತೆಗೆ ಬೈತಾ ಇದ್ದ ನನಗೆ ಉಪದೇಶ ಮಾಡ್ತಾ ಇದಾನೆ "ಹೊಸಾ ಚಪ್ಲಿ ತಗೋಬೇಕು ಅಂತಾ ಹೇಳ್ದೆ, ಹೌದು.. ಆದ್ರೆ ಕಾಸು ಕೊಟ್ಟು ತಗೋತೀನಿ ಅಂತಾ ಏನಾದರೂ ಹೇಳುದ್ನಾ?" ಅಂತ.

ಒಂದು ಟೈಮಿನಲ್ಲಿ ನಮ್ಮ ಕಟ್ಟೆಯಲ್ಲಿ ಯಾರು ಚಪ್ಪಲಿ ಕೊಳ್ಳೋ ಮಾತು ಆಡಿದರೂ ಕೂಡಾ, "ಯಾಕೋ ಸುಮ್ನೆ 400 ರೂ ಖರ್ಚು ಮಾಡ್ತ್ಯಾ? ಹರೀಶನಿಗೆ 200 ರೂ ಕೊಡು, ಹೊಸಾ ಚಪ್ಲಿ ತಂದು ಕೊಡ್ತಾನೆ" ಅಂತಾ ಹೇಳ್ತಾ ಇದ್ವಿ.

ಅವತ್ತಿಂದ ಇವತ್ತಿನವರೆಗೂ ಹಳೆ ಕಟ್ಟೆ ಮಿತ್ರರು ಸಿಕ್ಕಿದ್ರೆ, ಈತನನ್ನ ಚಪ್ಲಿ ಕಳ್ಳ ಅಂತಾನೆ ರೇಗಿಸೋದು, ಜೊತೆಗೆ "ಹರೀಶ, ನಿನ್ನ ಜ್ಞಾಪಕಾರ್ಥವಾಗಿ ಎಲ್ಲಾ ಬಾಟಾ ಅಂಗಡೀಗಳಲ್ಲಿ ನಿನ್ ಫೋಟೋ ನೇತ್ಹಾಕಿದಾರೆ" ಅಂತ ಕಿಚಾಯಿಸೋದು. ಮೊನ್ನೆ ನಮ್ಮ ಮತ್ತೊಬ್ಬ ಮಿತ್ರನ ಮದ್ವೆಯಲ್ಲಿ ಸಿಕ್ಕಿದ ಅವನಿಗೆ ಹಾಗೆಯೇ ಅವನ ಹೆಂಡತಿ ಮುಂದೆ, ನಮ್ಮಿಬರಿಗೆ ಮಾತ್ರ ಅರ್ಥ ಆಗೋ ಥರಾ ರೇಗಿಸಿದೆ.

ನವಿಲನ್ನು ನೋಡಿ ಕೆಂಭೂತ ರೆಕ್ಕೆ ಕೆದರಿತು ಅಂತಾರಲ್ಲ, ಹಾಗೆ ಇನ್ನೊಂದು ಘಟನೆ ನಡೆದಿತ್ತು.

ನಮ್ಮ ಗುಂಪಿನಲ್ಲಿ ಇನ್ನೊಬ್ಬ ಇದ್ದ.. ಅವನ ಹೆಸರನ್ನು ಒಪನ್ನಾಗಿ ಹೇಳ್ತೀನಿ. ರವಿ ಅಂತಾ. ಅವನು ತೀರಾ ತಿಕ್ಕು ತಿಕ್ಕಲಾಗಿ ಆಡ್ತಾ ಇದ್ದ. ಆರಡಿ ಇದ್ದ ಒಳ್ಳೇ ಅಜಾನುಬಾಹು, ಜಗ್ಗೇಶ್ ಹೇಳೋ ಹಾಗೆ "ಒಳ್ಳೇ ಹೈಟು ಒಳ್ಳೇ ವೇಯ್ಟು.. ಬುದ್ಧಿ ಮಾತ್ರಾ ಶಾರ್ಟು" ಅಂತ, ಆ ರೀತಿ. ಆದ್ರೆ ತೀರಾ ವಿಚಿತ್ರವಾಗಿ ಆಡ್ತಾ ಇದ್ದ. ಇದಕ್ಕೆ ಅವನನ್ನ "ಹುಚ್ಚ" ಅಂತಾ ಕರೀತಾ ಇದ್ದದ್ದು. ಇವನು ನಮ್ಮ ಗುಂಪಿನಲ್ಲಿ ಇದ್ದಾಗ ಮೈಸೂರಿನ ಸರಸ್ವತಿಪುರಂನ ಎಂಟನೆ ಮೈನಿನಲ್ಲಿ ಇರೋ ಪಾರ್ಕಿನಲ್ಲಿ ಸಂಜೆ ಹೊತ್ತು ಟೈಂಪಾಸ್ ಮಾಡ್ತಾ ಇದ್ದದ್ದು. ಅದರ ಪಕ್ಕದಲ್ಲಿ ಒಂದು ಬಟ್ಟೆ ಅಂಗಡಿ. ಆ ಅಂಗಡಿ ಒಬ್ಬ ರಾಜಾಸ್ತಾನಿಯದು. ಅಲ್ಲಿ ಅವಾಗವಾಗ ನಾವು ಟೀ-ಶರ್ಟ್, ಕ್ರಿಕೆಟ್ ಆಡೋದಕ್ಕೆ ಟ್ರಾಕ್ ಪ್ಯಾಂಟ್ ತಗೋತಾ ಇದ್ವಿ. ಹಾಗಾಗಿ ಒಳ್ಳೆ ಪರಿಚಯ ಇತ್ತು. ಹುಚ್ಚ ನಮ್ಮ ಜೊತೆ ಕ್ರಿಕೆಟ್ ಆಡ್ತಾ ಇರ್ಲಿಲ್ಲ. ಸಂಜೆ ಹೊತ್ತು ಒಮ್ಮೊಮ್ಮೆ ನಾವು ಆ ಅಂಗಡಿಗೆ ಹೋಗಿ, ಒಂದೈದು ನಿಮಿಷ ಮಾತಾಡ್ಕೊಂಡು ಬರ್ತಾ ಇದ್ವಿ. ಒಂದು ಸಂಜೆ ಹೀಗೆ ಅಲ್ಲಿಗೆ ಹೋದಾಗ, ಹುಚ್ಚ ಕೂಡ ನಮ್ಮ ಜೊತೆ ಇದ್ದ. ಅಂಗಡಿಯಾತ ನಮಗೆ "ಹೊಸಾ ಟೀ ಶರ್ಟ್ ಬಂದಿದೆ, ನೋಡ್ತೀರಾ" ಅಂತ ಕೇಳಿದ.

ನಾವು ಹಾಗೆ ನೋಡ್ತಾ ಇದ್ದಾಗ, ಈ ಹುಚ್ಚ ತನ್ನ ಶರ್ಟನ್ನು ಹಾಗೆ ತೆಗೆದು (ಒಳಗೆ ಬನೀನನ್ನು ಹಾಕಿರ್ಲಿಲ್ಲ ಪುಣ್ಯಾತ್ಮ), ಈ ಟೀ ಶರ್ಟನ್ನು ಹಾಕಿಕೊಂಡ. ಪಕ್ಕದಲ್ಲೇ ಇದ್ದ ಒಬ್ಬಾಕೆ ಹಾಗೆ ಮುಖ ಸಿಂಡರಿಸಿಕೊಂಡು ಹಾಗೆ ಅವನನ್ನು ದುರುಗುಟ್ಟಿಕೊಂಡು ಅಂಗಡಿಯಿಂದಲೇ ಹೋದಳು. ಅದಾದ ಮೇಲೆ ಹಾಗೆಯೇ ಅದನ್ನು ತೆಗೆದು, ತನ್ನ ಶರ್ಟನ್ನು ಹಾಕಿಕೊಂಡು ಹೊರಗೆ ಈತ ಹೋದ. ನಾವು ಅವನನ್ನು ರೆಗಿಸೋದಕ್ಕೆ "ಲೋ ರವಿ, ಹೊಸಾ ಡಿಸೈನ್ ಕಾಚ ಬಂದಿದೆ ನೋಡೋ" ಎಂದು ಕೂಗಿದ್ವಿ.

ಅದಕ್ಕೆ ಅಂಗಡಿಯವನು "ಅಯ್ಯೋ ಬೇಡಾ ಸಾರ್, ಕಾಚನಾ ಕೂಡಾ ಹೊರಗಡೆ ನಿಂತ್ಕೊಂಡು ಟ್ರೈ ಮಾಡ್ತಾರೆ ಅವ್ರು, ಸುಮ್ನಿರಿ" ಅನ್ನೋದಾ? ಹೆಂಗೆ ನಕ್ಕಿದೀವಿ ಅವತ್ತು ಅಂದ್ರೆ.. ಯಪ್ಪಾ.

ಈ ರವಿ ಎಂಥಾ ಹುಚ್ಚ ಅನ್ನೋದಕ್ಕೆ ಈ ಘಟನೆ ಹೇಳಿದ್ದು.

ನಮ್ಮ ಹರೀಶನ ಕೈಚಳಕ ಈ ರವಿ ಕೂಡಾ ನೋಡಿದ್ದ. ನಾನು ಹೀಗೆ ಒಮ್ಮೆ ಮಾಡಬೇಕು ಅಂತಾ ಬಹಳ ದಿನದಿಂದ ಸ್ಕೆಚ್ ಹಾಕ್ತಾ ಇದ್ದ. ಹಾಗೆ ಟ್ರೈ ಮಾಡಲು ಹೋಗಿ, ಒಂದು ಬಾಟಾ ಅಂಗಡಿಯಲ್ಲಿ ಸಿಕ್ಕಿಹಾಕಿಕೊಂಡು, ಧರ್ಮದೇಟು ತಿನ್ನೋದ್ರಿಂದ ಸ್ವಲ್ಪದರಲ್ಲಿ ಪಾರಾಗಿ ಬಂದಿದ್ದ. ಯಪ್ಪಾ, ನೆನೆಸಿಕೊಂಡರೆ, ಈಗ್ಲೂ ಹೊಟ್ಟೆ ಹುಣ್ಣಾಗುತ್ತೆ.

ಇನ್ನೊಮ್ಮೆ ಯಾವಾಗ್ಲಾದ್ರೂ, ನಮ್ಮ ಕಟ್ಟೆಯ ಬೇರೆ ಪ್ರಹಸನಗಳನ್ನು ಹಾಕ್ತೀನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

9 comments:

ಗೌತಮ್ ಹೆಗಡೆ said...

haha majavaagide :)

Nisha said...

:-) :-), enu talent nimma friend du.

ಸಾಗರದಾಚೆಯ ಇಂಚರ said...

ಶಂಕ್ರಣ್ಣ

ತುಂಬಾ ಹಾಸ್ಯಭರಿತ ಲೇಖನ
ಚೆನ್ನಾಗಿದೆ

sunaath said...

ಶಂಕ್ರಣ್ಣ,
ನಿಮ್ಮ ಘಟನೆ ಓದಿ, ನನಗೂ ಉಮೇದಿ ಬರ್ತಾ ಇದೆ. ಪೆಟ್ಟು ತಿಂದರೂ ಪರವಾ ಇಲ್ಲ, ಮೆಟ್ಟು ಸಿಗುತ್ತಾ ನೋಡ್ತೀನಿ!

V.R.BHAT said...

ಸೋಮಾರಿ ಕತ್ತೆ active ಕಟ್ಟೆಯಾಗಿಬಿಟ್ಟಿದೆ, ಇದೇ ಹೆಸರೇ ಸೂಕ್ತವಿತ್ತೇನೋ !

ಸವಿಗನಸು said...

hahaha...
chennagidhe....

ವಿ.ರಾ.ಹೆ. said...

:-) :-)

ದಿನಕರ ಮೊಗೇರ said...

hhaa hhaa...... sakattaagide....

SATISH N GOWDA said...

ರೀ ನಿಮ್ಮ ಸೋಮಾರಿ ಕತ್ತೆ ತುಂಬಾ ಚನ್ನಾಗಿದೆ . ನಕ್ಕು - ನಕ್ಕು ಹೊಟ್ಟೆ ಉನ್ನಾಯಿತು ....
SATISH N GOWDA
ಬಿಡುವು ಮಾಡಿ ಕೊಂಡು ಒಮ್ಮೆ ಬನ್ನಿ ನನ್ನವಳಲೋಕಕ್ಕೆ ....
www.nannavalaloka.blogspot