Showing posts with label ಮೈಸೂರು. Show all posts
Showing posts with label ಮೈಸೂರು. Show all posts

Thursday, February 11, 2010

ಚಪ್ಲಿ ಬೇಕಾದ್ರೆ ಕೊಳ್ಳಲೇ ಬೇಕಾ?

ಬಹಳ ದಿನವಾದ ಮೇಲೆ ಒಂದು ಅನುಭವ ಬರೆಯುತ್ತಿದ್ದೀನಿ, ಪರಾಂಬರಿಸಿ.

ನನ್ನ ಜೀವನದ ಸೂಪರ್ ಅನುಭವಗಳು ಹೆಚ್ಚಾಗಿ ಆಗಿರೋದು ನಮ್ಮ ಮೈಸೂರಿನ ಕಟ್ಟೆಯಲ್ಲೇ. ಸಿಹಿ, ಕಹಿ, ಹುಳಿ, ಉಪ್ಪು, ಖಾರ, ಸಪ್ಪೆ (ಕಟ್ಟೆಯಲ್ಲಿ ಯಾರೂ ಇಲ್ದೆ, ಒಬ್ನೇ ಕೂತಿರೋದು).... ಎಲ್ಲಾ ರೀತಿ ಅನುಭವಗಳೂ ಸಿಕ್ಕಿವೆ.

ಒಬ್ಬ ಕಟ್ಟೆ ಮಿತ್ರ, ಹೆಸರು.. ಹ್ಮ್, ಹರೀಶ ಅಂದುಕೊಳ್ಳೋಣ (ಗೋಪ್ಯತೆಯನ್ನು ಕಾಯುವುದಕ್ಕೆ ಹೆಸರನ್ನು ಬದಲಾಯಿಸಲಾಗಿದೆ). ಈತನಿಗೆ ಮುಂಚಿಂದಲೂ ಒಂದು ಕಲೆ ಸಿದ್ಧಿಸಿತ್ತು. ಹೇಳ ಹೆಸರಿಲ್ಲದೆ ಅಂಗಡಿಯಿಂದ ಚಪ್ಲಿ ಸಲೀಸಾಗಿ ಎತ್ಕೊಂಡು ಬರೋನು. ಒಮ್ಮೆ ಇವನ ಜೊತೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಇರೋ "ಬಾಟಾ" ಶೋರೂಮಿಗೆ ಹೋಗಿದ್ದೆ. ಕಟ್ಟೆಯಲ್ಲಿ ಕೂತಿದ್ದವನ್ನು "ಬಾರೋ, ಚಪ್ಲಿ ತಗೋಬೇಕು, ನೋಡ್ಕೊಂಡು ಬರೋಣ" ಎಂದು ಕರ್ಕೊಂಡು ಹೋದ. ಅಲ್ಲಿ ಒಳಗೆ ಹೋಗಿ, ಸುಮಾರು ಅರ್ಧ ಘಂಟೆ ಅದೂ ಇದೂ ನೋಡಿದ ಮೇಲೆ "ಯಾವ್ದೂ ಇಷ್ಟ ಆಗ್ಲಿಲ್ಲ ಕಣೋ, ಇನ್ನೊಂದಿನ ಬರೋಣ" ಎಂದವನೇ, ಬಲವಂತ ಮಾಡಿ ವಾಪಸ್ ಎಳ್ಕೊಂಡು ಬಂದ.

ಕಟ್ಟೆಗೆ ಬಂದ ಮೇಲೆ ನಾನು "ನನ್ಮಗ್ನೆ, ಮಾಡಕ್ಕೆ ಕೆಲಸ ಇಲ್ವಾ? ಸುಮ್ನೆ ಆರಾಮಾಗಿ ಇಲ್ಲೇ ಕೂತಿರ್ಬೋದಿತ್ತು, ಸುಮ್ನೆ ಅಲ್ಲಿ ತನಕ ಕರ್ಕೊಂಡು ಹೋದೆ. ಚಪ್ಲಿ ತಗೊಲ್ಲಿಲ್ಲ ಏನಿಲ್ಲ" ಅಂತಾ ಬೈತಾ ಇದ್ದೀನಿ. ಅವ್ನು ಹೋಗಿ "ಸೇಟು, ಬೈಟು ಟೀ" ಅಂತಾ ಆರ್ಡರ್ ಕೊಟ್ಟು, ನನ್ಮುಂದೆ ಕೂತು ತನ್ನ ಎರಡೂ ಕಾಲನ್ನು ಎತ್ತಿ ತೋರಿಸಿದ.. ಹೊಸಾ ಜೊತೆ ಚಪ್ಲಿ.

ಅಂಗಡಿಯ ಒಳಗೆ ಓಡಾಡ್ತಾ, ತನ್ನ ಹಳೆ ಚಪ್ಲಿ ಅಲ್ಲಿಯೇ ಬಿಟ್ಟು, ಹೊಸ ಜೊತೆ, ಅದೂ ತನಗೆ ಇಷ್ಟವಾದ ಡಿಸೈನಿದನ್ನು ಹಾಕ್ಕೊಂಡು ಬಂದಿದಾನೆ. ಜೊತೆಗೆ ಬೈತಾ ಇದ್ದ ನನಗೆ ಉಪದೇಶ ಮಾಡ್ತಾ ಇದಾನೆ "ಹೊಸಾ ಚಪ್ಲಿ ತಗೋಬೇಕು ಅಂತಾ ಹೇಳ್ದೆ, ಹೌದು.. ಆದ್ರೆ ಕಾಸು ಕೊಟ್ಟು ತಗೋತೀನಿ ಅಂತಾ ಏನಾದರೂ ಹೇಳುದ್ನಾ?" ಅಂತ.

ಒಂದು ಟೈಮಿನಲ್ಲಿ ನಮ್ಮ ಕಟ್ಟೆಯಲ್ಲಿ ಯಾರು ಚಪ್ಪಲಿ ಕೊಳ್ಳೋ ಮಾತು ಆಡಿದರೂ ಕೂಡಾ, "ಯಾಕೋ ಸುಮ್ನೆ 400 ರೂ ಖರ್ಚು ಮಾಡ್ತ್ಯಾ? ಹರೀಶನಿಗೆ 200 ರೂ ಕೊಡು, ಹೊಸಾ ಚಪ್ಲಿ ತಂದು ಕೊಡ್ತಾನೆ" ಅಂತಾ ಹೇಳ್ತಾ ಇದ್ವಿ.

ಅವತ್ತಿಂದ ಇವತ್ತಿನವರೆಗೂ ಹಳೆ ಕಟ್ಟೆ ಮಿತ್ರರು ಸಿಕ್ಕಿದ್ರೆ, ಈತನನ್ನ ಚಪ್ಲಿ ಕಳ್ಳ ಅಂತಾನೆ ರೇಗಿಸೋದು, ಜೊತೆಗೆ "ಹರೀಶ, ನಿನ್ನ ಜ್ಞಾಪಕಾರ್ಥವಾಗಿ ಎಲ್ಲಾ ಬಾಟಾ ಅಂಗಡೀಗಳಲ್ಲಿ ನಿನ್ ಫೋಟೋ ನೇತ್ಹಾಕಿದಾರೆ" ಅಂತ ಕಿಚಾಯಿಸೋದು. ಮೊನ್ನೆ ನಮ್ಮ ಮತ್ತೊಬ್ಬ ಮಿತ್ರನ ಮದ್ವೆಯಲ್ಲಿ ಸಿಕ್ಕಿದ ಅವನಿಗೆ ಹಾಗೆಯೇ ಅವನ ಹೆಂಡತಿ ಮುಂದೆ, ನಮ್ಮಿಬರಿಗೆ ಮಾತ್ರ ಅರ್ಥ ಆಗೋ ಥರಾ ರೇಗಿಸಿದೆ.

ನವಿಲನ್ನು ನೋಡಿ ಕೆಂಭೂತ ರೆಕ್ಕೆ ಕೆದರಿತು ಅಂತಾರಲ್ಲ, ಹಾಗೆ ಇನ್ನೊಂದು ಘಟನೆ ನಡೆದಿತ್ತು.

ನಮ್ಮ ಗುಂಪಿನಲ್ಲಿ ಇನ್ನೊಬ್ಬ ಇದ್ದ.. ಅವನ ಹೆಸರನ್ನು ಒಪನ್ನಾಗಿ ಹೇಳ್ತೀನಿ. ರವಿ ಅಂತಾ. ಅವನು ತೀರಾ ತಿಕ್ಕು ತಿಕ್ಕಲಾಗಿ ಆಡ್ತಾ ಇದ್ದ. ಆರಡಿ ಇದ್ದ ಒಳ್ಳೇ ಅಜಾನುಬಾಹು, ಜಗ್ಗೇಶ್ ಹೇಳೋ ಹಾಗೆ "ಒಳ್ಳೇ ಹೈಟು ಒಳ್ಳೇ ವೇಯ್ಟು.. ಬುದ್ಧಿ ಮಾತ್ರಾ ಶಾರ್ಟು" ಅಂತ, ಆ ರೀತಿ. ಆದ್ರೆ ತೀರಾ ವಿಚಿತ್ರವಾಗಿ ಆಡ್ತಾ ಇದ್ದ. ಇದಕ್ಕೆ ಅವನನ್ನ "ಹುಚ್ಚ" ಅಂತಾ ಕರೀತಾ ಇದ್ದದ್ದು. ಇವನು ನಮ್ಮ ಗುಂಪಿನಲ್ಲಿ ಇದ್ದಾಗ ಮೈಸೂರಿನ ಸರಸ್ವತಿಪುರಂನ ಎಂಟನೆ ಮೈನಿನಲ್ಲಿ ಇರೋ ಪಾರ್ಕಿನಲ್ಲಿ ಸಂಜೆ ಹೊತ್ತು ಟೈಂಪಾಸ್ ಮಾಡ್ತಾ ಇದ್ದದ್ದು. ಅದರ ಪಕ್ಕದಲ್ಲಿ ಒಂದು ಬಟ್ಟೆ ಅಂಗಡಿ. ಆ ಅಂಗಡಿ ಒಬ್ಬ ರಾಜಾಸ್ತಾನಿಯದು. ಅಲ್ಲಿ ಅವಾಗವಾಗ ನಾವು ಟೀ-ಶರ್ಟ್, ಕ್ರಿಕೆಟ್ ಆಡೋದಕ್ಕೆ ಟ್ರಾಕ್ ಪ್ಯಾಂಟ್ ತಗೋತಾ ಇದ್ವಿ. ಹಾಗಾಗಿ ಒಳ್ಳೆ ಪರಿಚಯ ಇತ್ತು. ಹುಚ್ಚ ನಮ್ಮ ಜೊತೆ ಕ್ರಿಕೆಟ್ ಆಡ್ತಾ ಇರ್ಲಿಲ್ಲ. ಸಂಜೆ ಹೊತ್ತು ಒಮ್ಮೊಮ್ಮೆ ನಾವು ಆ ಅಂಗಡಿಗೆ ಹೋಗಿ, ಒಂದೈದು ನಿಮಿಷ ಮಾತಾಡ್ಕೊಂಡು ಬರ್ತಾ ಇದ್ವಿ. ಒಂದು ಸಂಜೆ ಹೀಗೆ ಅಲ್ಲಿಗೆ ಹೋದಾಗ, ಹುಚ್ಚ ಕೂಡ ನಮ್ಮ ಜೊತೆ ಇದ್ದ. ಅಂಗಡಿಯಾತ ನಮಗೆ "ಹೊಸಾ ಟೀ ಶರ್ಟ್ ಬಂದಿದೆ, ನೋಡ್ತೀರಾ" ಅಂತ ಕೇಳಿದ.

ನಾವು ಹಾಗೆ ನೋಡ್ತಾ ಇದ್ದಾಗ, ಈ ಹುಚ್ಚ ತನ್ನ ಶರ್ಟನ್ನು ಹಾಗೆ ತೆಗೆದು (ಒಳಗೆ ಬನೀನನ್ನು ಹಾಕಿರ್ಲಿಲ್ಲ ಪುಣ್ಯಾತ್ಮ), ಈ ಟೀ ಶರ್ಟನ್ನು ಹಾಕಿಕೊಂಡ. ಪಕ್ಕದಲ್ಲೇ ಇದ್ದ ಒಬ್ಬಾಕೆ ಹಾಗೆ ಮುಖ ಸಿಂಡರಿಸಿಕೊಂಡು ಹಾಗೆ ಅವನನ್ನು ದುರುಗುಟ್ಟಿಕೊಂಡು ಅಂಗಡಿಯಿಂದಲೇ ಹೋದಳು. ಅದಾದ ಮೇಲೆ ಹಾಗೆಯೇ ಅದನ್ನು ತೆಗೆದು, ತನ್ನ ಶರ್ಟನ್ನು ಹಾಕಿಕೊಂಡು ಹೊರಗೆ ಈತ ಹೋದ. ನಾವು ಅವನನ್ನು ರೆಗಿಸೋದಕ್ಕೆ "ಲೋ ರವಿ, ಹೊಸಾ ಡಿಸೈನ್ ಕಾಚ ಬಂದಿದೆ ನೋಡೋ" ಎಂದು ಕೂಗಿದ್ವಿ.

ಅದಕ್ಕೆ ಅಂಗಡಿಯವನು "ಅಯ್ಯೋ ಬೇಡಾ ಸಾರ್, ಕಾಚನಾ ಕೂಡಾ ಹೊರಗಡೆ ನಿಂತ್ಕೊಂಡು ಟ್ರೈ ಮಾಡ್ತಾರೆ ಅವ್ರು, ಸುಮ್ನಿರಿ" ಅನ್ನೋದಾ? ಹೆಂಗೆ ನಕ್ಕಿದೀವಿ ಅವತ್ತು ಅಂದ್ರೆ.. ಯಪ್ಪಾ.

ಈ ರವಿ ಎಂಥಾ ಹುಚ್ಚ ಅನ್ನೋದಕ್ಕೆ ಈ ಘಟನೆ ಹೇಳಿದ್ದು.

ನಮ್ಮ ಹರೀಶನ ಕೈಚಳಕ ಈ ರವಿ ಕೂಡಾ ನೋಡಿದ್ದ. ನಾನು ಹೀಗೆ ಒಮ್ಮೆ ಮಾಡಬೇಕು ಅಂತಾ ಬಹಳ ದಿನದಿಂದ ಸ್ಕೆಚ್ ಹಾಕ್ತಾ ಇದ್ದ. ಹಾಗೆ ಟ್ರೈ ಮಾಡಲು ಹೋಗಿ, ಒಂದು ಬಾಟಾ ಅಂಗಡಿಯಲ್ಲಿ ಸಿಕ್ಕಿಹಾಕಿಕೊಂಡು, ಧರ್ಮದೇಟು ತಿನ್ನೋದ್ರಿಂದ ಸ್ವಲ್ಪದರಲ್ಲಿ ಪಾರಾಗಿ ಬಂದಿದ್ದ. ಯಪ್ಪಾ, ನೆನೆಸಿಕೊಂಡರೆ, ಈಗ್ಲೂ ಹೊಟ್ಟೆ ಹುಣ್ಣಾಗುತ್ತೆ.

ಇನ್ನೊಮ್ಮೆ ಯಾವಾಗ್ಲಾದ್ರೂ, ನಮ್ಮ ಕಟ್ಟೆಯ ಬೇರೆ ಪ್ರಹಸನಗಳನ್ನು ಹಾಕ್ತೀನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 3, 2009

ಮರಳಿ ತಾಯ್ನಾಡಿಗೆ

ನಮಸ್ಕಾರ ಮಿತ್ರರೆ,

ಮೇ 30 ರಂದು ಹ್ಯಾಂಬರ್ಗ್ ನಿಂದ ಹೊರಟು ಮಾರನೆಯ ದಿನ ಬೆಂಗಳೂರು ತಲುಪಿದೆ.
ಏರ್ಪೋರ್ಟಿಗೆ ನನ್ನಾಕೆ ಬಂದಿದ್ದಳು. ಏಳೂವರೆ ತಿಂಗಳು ಕುಟುಂಬದ ಎಲ್ಲರಿಂದ ದೂರವಿದ್ದೆ. ಇಷ್ಟು ದಿನ ಯೂರೋಪಿನಲ್ಲಿ ಇದ್ದು, ಅಲ್ಲಿನ ಜನರ ಅಭ್ಯಾಸಗಳು, ರೀತಿಯನ್ನು ನೋಡಿ ಅಡ್ಜಸ್ಟ್ ಆಗಿದೆ ನನಗೆ, ಇಲ್ಲಿ ಏರ್ಪೋರ್ಟಿನಿಂದ ಹೊರಗೆ ಬಂದ ನನ್ನನ್ನು ಕರೆದೊಯ್ಯಲು ನನ್ನಾಕೆ ಬಂದಿದ್ದಳು. ಕಂಡ ಕೂಡಲೇ ಬಂದು, ಯೂರೋಪಿನಲ್ಲಿ ಎಲ್ಲರೂ ಮಾಡೋ ಹಾಗಿ ತಬ್ಬಿ ಹಾಗೆ ಮುತ್ತಿಡಲು ಹೋಗಿದ್ದೆ. ಸಡನ್ನಾಗಿ ನಾನು ಎಲ್ಲಿದೀನಿ ಅಂತ ಜ್ಞಾನೋದಯ ಆಯ್ತು. ಆದ್ರೆ ನಾನು ಈಗ ಬಂದಿರೋದು ಭಾರತಕ್ಕೆ, ಇಲ್ಲಿ ಅದೆಲ್ಲ ಸರಿ ಇಲ್ಲ ಅಂದುಕೊಂಡು ಬರೀ ಒಮ್ಮೆ ಅಪ್ಪಿಕೊಂಡೆ ಅಷ್ಟೇ.

ಸಧ್ಯಕ್ಕೆ ಒಂದು ವಾರ ಆಫೀಸಿಗೆ ರಜೆ ಹಾಕಿರುವೆ. ಮೈಸೂರಲ್ಲಿ ಕಾಲ ಕಳೀತಾ ಇದ್ದೀನಿ. ಹಾಗಾಗಿ ಬ್ಲಾಗು ಅಪ್ಡೇಟ್ ಆಗಿಲ್ಲ..ಇನ್ನು ಕೆಲವು ದಿನಗಳಲ್ಲಿ ಮತ್ತೆ ಶುರು ಮಾಡ್ತೀನಿ. ಪುನಃ ಆಟೋ ಫೋಟೋಗಳು ಬರಲು ಶುರು ಆಗುತ್ತವೆ.
ಅಲ್ಲಿ ತನಕ...

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, March 6, 2009

ನನ್ನ ಪುನರ್ಜನ್ಮ ಹಾಗು ಪೂರ್ವಜನ್ಮ ಸ್ಮರಣೆ

ಶಂಕ್ರಂಗೆ ಇದೇನಾಯ್ತಪ್ಪಾ ? ಸುಮ್ನೆ ಆಟೋ, ಟಾಯ್ಲೆಟ್ಟು ಫೋಟೋ ತೆಕ್ಕೊಂಡು ಇದ್ದೋನು ಸಡನ್ನಾಗಿ ಮರುಜನ್ಮ, ಪೂರ್ವಜನ್ಮ ಸ್ಮರಣೆ ಅಂತಾ ಏನೇನೋ ಮಾತಾಡ್ತಾ ಇದಾನಲ್ಲ ಅನ್ಕೊತಾ ಇದ್ದೀರಾ?

ಹಂಗಲ್ಲಾ ಕಣ್ರೀ ಕಟ್ಟೆ ಮಿತ್ರರೇ, ಅವತ್ತೊಂದು ಭಾನುವಾರ, (ಸುಮಾರು ಮೂರು ವಾರಗಳ ಹಿಂದೆ) ಹೊರಗೆ ಸಖತ್ ಸ್ನೋಫಾಲ್ ಜೊತೆಗೆ ಮಳೆ. ಹಾಗಾಗಿ ಎಲ್ಲೂ ಹೋಗದೆ ಮನೇಲಿ ಕೂತಿದ್ದೆ. ಅವಾಗ ಬಂದ ಯೋಚನೆ ಇದು.
ಸ್ವಲ್ಪ ದೊಡ್ಡದಿದೆ ಈ ಬರಹ, ದಯವಿಟ್ಟು ಹೊಟ್ಟೆಗಾಕ್ಕೊಬೇಕು ಬಾಂಧವರು

ಇಲ್ಲಿ ಜರ್ಮನಿಯಲ್ಲಿ ಇರುವ ಸವಲತ್ತುಗಳು, ಒಂದು ಜೀವಕ್ಕಿರುವ ಮರ್ಯಾದೆ / ಬೆಲೆ ಕಂಡು, ಮುಂದಿನ ಜನ್ಮ ಅಂತ ಏನಾದರೂ ಇದ್ದಲ್ಲಿ, ಈ ದೇಶದಲ್ಲೇ ಹುಟ್ಟಬಯಸ್ತೀನಿ, ಅಂತ ಹೇಳಿದ್ದು.
ಯಪ್ಪೋ.. ತಡೀರಿ ಸ್ವಲ್ಪ..ಏನು ಈ ನನ್ ಮಗಾ ಈ ಥರ ಹೇಳ್ತಾನಲ್ಲ ಅಂತಾ ಉಗ್ಯೋಕ್ಕೆ ಮುಂಚೆ ಸ್ವಲ್ಪ ಓದಿ.
ನಾನು ಈ ದೇಶದಲ್ಲಿ ಮುಂದಿನ ಜನ್ಮದಲ್ಲಿ ಹುಟ್ಟಬಯಸ್ತೀನಿ ಅಂತ ಹೇಳಿದ್ನಲ್ಲ, ಆ ಫ್ಯಾಂಟಸಿಯನ್ನು ಯಾವ ರೀತಿಯಲ್ಲಿ ಮುಂದಕ್ಕೆ ತಗೊಂಡು ಹೋದೆ ಅನ್ನೋದನ್ನ ಕೇಳಿ. ನನ್ನ ಮುಂದಿನ ಜನ್ಮ ಹೇಗಿರಬೇಕು ಅನ್ನೋದನ್ನ ನಾವೇ ಸೆಲೆಕ್ಟ್ ಮಾಡೋ ಹಾಗಿದ್ರೆ, ಯಾವ ರೀತಿ ಮಾಡ್ತಾ ಇದ್ದೆ ಅಂತ.

ಮೊದಲನೆಯದಾಗಿ ಇಲ್ಲಿ (ಜರ್ಮನಿಯಲ್ಲಿ) ಒಂದು ಒಳ್ಳೆ ವಿದ್ಯಾವಂತ ಫ್ಯಾಮಿಲಿಯಲ್ಲಿ ಹುಟ್ಟಬಯಸ್ತೀನಿ. ತಕ್ಕ ಮಟ್ಟಿಗೆ ಬುದ್ಧಿ ಬಂದ ಮೇಲೆ, ನನಗೆ ಪೂರ್ವಜನ್ಮದ ಸ್ಮರಣೆ ಬರಬೇಕು. ಫಿಲಂ ನಲ್ಲಿ ತೋರಿಸೋ ಹಾಗೆ ನೆಗೆಟಿವ್ ಇಮೇಜ್ ಅಲ್ಲಾ, ಫ್ರೇಂ ಟು ಫ್ರೇಂ ಜ್ಞಾಪಕ ಬರಬೇಕು. ನಾನು ಹಿಂದಿನ ಜನ್ಮದಲ್ಲಿ "ಮಂದಗೆರೆ ಶಂಕರ ಪ್ರಸಾದ" ಆಗಿದ್ದೆ. ಹುಟ್ಟಿದ್ದು ಮೈಸೂರು, ಮಾತೃಭಾಷೆ ಕನ್ನಡ.

ಶಂಕರನ ಬದುಕು ಜ್ಞಾಪಕ ಬರ್ತಾ ಇದ್ದ ಹಾಗೆ ನ್ಯಾಚುರಲಿ ಅವನ ಹಾಗೆ ಕನ್ನಡದ ಬಗ್ಗೆ ಒಲವು ಬಂದೆ ಬರುತ್ತೆ. ಹಾಗಾಗಿ ಎಲ್ಲೂ ಕನ್ನಡ ಕಲಿಯುವುದು ಬೇಕಿಲ್ಲ. ಆಟೋಮ್ಯಾಟಿಕ್ ಆಗಿ ಅದೂ ಕೂಡ ಬಂದಿರುತ್ತೆ. To The Core ಅಂತಾರಲ್ಲ ಹಾಗೆ. ಅದೇ, ಓದಲು, ಬರೆಯಲು ಚೆನ್ನಾಗಿ ಬರುತ್ತೆ. ಹಾಗೆಯೇ ನಮ್ಮ ಮೈಸೂರಿನ ಭಾಷೆ ನಿರರ್ಗಳವಾಗಿ ಬಂದಿರುತ್ತೆ. ಇಷ್ಟೆಲ್ಲಾ ಜ್ಞಾಪಕ ಬಂದ ಮೇಲೆ ನ್ಯಾಚುರಲಿ, ಸೋಮಾರಿ ಕಟ್ಟೆ ಬ್ಲಾಗಿನ Username ಮತ್ತು Password (Last saved) ಕೂಡ ಜ್ಞಾಪಕ ಬಂದೆ ಬರುತ್ತೆ ಅಲ್ವ?

ಹೀಗಾದ ಮೇಲೆ "ಶಂಕರ ಸತ್ತ ನಂತರ ನಿಂತಿದ್ದ ಸೋಮಾರಿ ಕಟ್ಟೆಯನ್ನ ಮತ್ತೆ ಮುಂದುವರಿಸ್ತೀನಿ" ಇಷ್ಟೆಲ್ಲಾ ಹೇಳಿದ ಮೇಲೆ, ವಯಸ್ಸಿನ ಬಗ್ಗೆ ಕೂಡಾ ಸ್ವಲ್ಪ ಹೇಳೋಣಾ. ಈಗಿರುವ ಶಂಕರ ಸುಮಾರು 70 ವರ್ಷ ಬದ್ಕಿರ್ತಾನೆ ಅನ್ಕೊಳೋಣ. ನನಗೀಗ 29 ವರ್ಷ. ಸೊ, 70ನೇ ವಯಸ್ಸಿಗೆ ಗೊಟಕ್ ಅಂದು, ಮತ್ತೆ ಜನ್ಮ ತಾಳಿ, ಆತ 24 ವರ್ಷದವನಗಿದ್ದಾನೆ ಅಂದುಕೊಂಡು ನಾನು ಯೋಚನೆ ಮಾಡಿದ ಕಥೆ / ಫ್ಯಾಂಟಸಿ ಇದು. ಅವಾಗ ಸರಿ ಸುಮಾರು 2083ನೆ ಇಸವಿ. ಜರ್ಮನಿಯಲ್ಲಿ ಹುಟ್ಟಿದ್ದರಿಂದ ನ್ಯಾಚುರಲಿ, ಬಿಳಿಯನಾಗಿ ಇರ್ತೀನಿ, ಜರ್ಮನ್ ಕೂಡ ಬರುತ್ತೆ. ಜೊತೆಗೆ ಪೂರ್ವಜನ್ಮದ ಸ್ಮರಣೆಯಿಂದ ಕನ್ನಡ ಕೂಡ ಸಖತ್ತಾಗಿ ಬರುತ್ತೆ. ಶಂಕರ ಮಾತಾಡ್ತಿದ್ದ ಹಾಗೆ ಅಪ್ಪಟ ಮೈಸೂರಿನ ಕನ್ನಡ (ಬಡ್ಡೆತ್ತದ್ದೆ, ಮುಂಡೇವಾ, ಐಕ್ಳು, ನಿನ್ನಜ್ಜಿ, ಸಿಸ್ಯಾ ಇತ್ಯಾದಿ). ಇಷ್ಟೆಲ್ಲಾ ಇದ್ದ ಮೇಲೆ, ನನ್ನ 24 ನೆ ವಯಸ್ಸಿಗೆ (ಮರುಜನ್ಮದ ಹೊಸ ಶಂಕರ) ಮೈಸೂರಿಗೆ ಒಮ್ಮೆ ಹೋಗುವ ಬಯಕೆ ಹುಟ್ಟುತ್ತೆ. ಹಾಗಾಗಿ, ಜರ್ಮನಿಯಿಂದ ಹೊರಟು ಮೊದಲು ಬೆಂಗಳೂರಿಗೆ ಬಂದಿಳಿಯುತ್ತಾನೆ, ಬಿಳಿ ಶಂಕ್ರ.

ಅಪ್ಪಟ ಬಿಳಿಯ, ಬೆಂಗಳೂರಿಗೆ ಮೊದಲು ಬಂದಿಳಿದು, ಏರ್ಪೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ, ಒಬ್ಬನೇ ಬರ್ತಾ ಇದ್ದವನ್ನು ಕಂಡು ಟ್ಯಾಕ್ಸಿಯವರು ಮುತ್ತಿಕೊಳ್ತಾರೆ (ಜ್ಞಾಪಕ ಇರ್ಲಿ, ಬಂದಿಳಿದ ಬಿಳಿಯ ನೋಡಲು ಮಾತ್ರ ಫಾರಿನರ್ ಅಷ್ಟೆ...ಮಾತಡೋದು ಅಪ್ಪಟ ಕನ್ನಡ, ಯಾಕೆಂದ್ರೆ ಅವ್ನು ಶಂಕ್ರನ ಮರುಜನ್ಮ).

ನಾನು ಸ್ವಲ್ಪ ಮಜಾ ತಗೊಳಕ್ಕೆ "I want to go to Mysore..how much will it cost?" ಅಂತಾ ಕೇಳ್ತೀನಿ. ಈಗ ಅಂದ್ರೆ 2009ರಲ್ಲಿ, ದೇವನಹಳ್ಳಿಯಿಂದ ಟ್ಯಾಕ್ಸಿ ಮಾಡಿಕೊಂಡು ಮೈಸೂರಿಗೆ ಹೋದ್ರೆ, ಸುಮಾರು ರೂ 2000 ಆಗುತ್ತೆ. 2083ರಲ್ಲಿ ಸುಮಾರು 20,000ರೂ ಆಗಬಹುದು. 20,000 ಅನ್ಕೊಂಡಿರೋದು ಒಂದು Imaginary amount ಅಷ್ಟೇ. ಯಾರಿಗ್ಗೊತ್ತು, ಆ ಟೈಮಿಗೆ ನಮ್ಮ ರುಪಾಯಿಯ ಬೆಲೆ ಪೌಂಡ್, ಯೂರೋ, ಡಾಲರುಗಳಿಗಿಂತಾ ಜಾಸ್ತಿ ಆಗಿರಬಹುದಲ್ವಾ?

ಅವಾಗ ಒಬ್ಬ ಟ್ಯಾಕ್ಸಿಯವನು "Hello... you come from America? Mysore taxi is 40,000 Rs" ಅಂತಾನೆ. ಸಡನ್ನಾಗಿ ನಾನು ಮೈಸೂರು ಕನ್ನಡದಲ್ಲಿ "40,000 ನಾ? ಯಾಕೆ...ಜೊತೆಗೆ ನಾನ್ ಕೂಡಾ ಬಂದ್ಬಿಡ್ತೀನಿ" ಅಂದಾಗ, ಇದನ್ನ ಕೇಳಿದ ಟ್ಯಾಕ್ಸಿಯವನ ಮುಖ ಹೆಂಗಾಗಿರತ್ತೆ !!!??? ಆ ಸೀನನ್ನು ಎಂಜಾಯ್ ಮಾಡ್ಕೊಂಡು, ಅವರ ಹ್ಯಾಪ್ ಮೊರೆಯನ್ನು ನೆನೆಸಿಕೊಳ್ಳುತ್ತಾ, ಹೆಂಗೋ ಒಂದು ಟ್ಯಾಕ್ಸಿ ಬುಕ್ ಮಾಡಿಕೊಂಡು ಮೈಸೂರಿಗೆ ಬರ್ತೀನಿ. ಯಾರ ಮನೆಗೆ ಹೋಗೋದು?
2083 ಅಂದ್ರೆ, ಶಂಕರ ಟಿಕೆಟ್ ತಗೊಂಡೇ 24 ವರ್ಷ ಆಗಿದೆ. ಅದಕ್ಕೆ ಅಲ್ಲೇ ಸದರ್ನ್ ಸ್ಟಾರ್ ಹೋಟೆಲಲ್ಲಿ ರೂಮು ಬುಕ್ ಮಾಡಿಕೊಂಡೆ. ಅಲ್ಲಿ ಕೂಡ ರಿಸೆಪ್ಶನ್ ನಲ್ಲಿ "ಏನ್ ಸಾರ್? ಆರಾಮಾಗಿದೀರಾ" ಅಂತ ಕೇಳಿ ತಬ್ಬಿಬ್ಬು ಮಾಡಿದೆ.

ಮಾರನೆಯ ದಿನ ಹೋಟೆಲ್ಲಿನ ಹೊರಗೆ ಒಂದು ಆಟೋ ಹಿಡಿದು "ಕುವೆಂಪುನಗರ" ಅಂತ ಇಂಗ್ಲಿಶ್ ನಲ್ಲಿ ಹೇಳಿದೆ. ಹೊರಟ ಆಟೋ ರಾಜ. ಹಾಗೆ, ಸದರ್ನ್ ಸ್ಟಾರಿನಿಂದ ಮೆಟ್ರೋಪೋಲ್ ಸರ್ಕಲ್ ಕಡೆ ಬಂದು, ಬಲಕ್ಕೆ ತಿರುಗಿ, ಮಹಾರಾಣಿ ಕಾಲೇಜಿನ ಮುಂದೆ ಬಂದಾಗ, ಆಟೋ ರಾಜ "First time in Mysore?" ಅಂತಾ ಕೇಳಿದ.
ಅದಕ್ಕೆ ನಾನು "yes" ಅಂತಾ ಹೇಳಿದ್ದನ್ನು ಕೇಳಿ ಮನಸ್ಸಲ್ಲೇ ಸ್ಕೆಚ್ ಹಾಕ್ಕೊಂಡ ಅನ್ಸುತ್ತೆ.ಸರಿ, ಮಹಾರಾಣಿ ಕಾಲೇಜಿನ ಮುಂದೆ ಪಾಸ್ ಆಗಿ, ಹಾಗೆ ಮುಂದಕ್ಕೆ JLB ರಸ್ತೆಯಲ್ಲಿ ಸಾಗುತ್ತಾ, ರೋಟರಿ ಶಾಲೆಯ ಮುಂದೆ ಎಡಕ್ಕೆ ತಿರುಗಿಸಿ, ನಾರಾಯಣಶಾಸ್ತ್ರಿ ರಸ್ತೆಗೆ ಸೇರಿದ. ಕುವೆಂಪುನಗರಕ್ಕೆ ಹೋಗು ಅಂದ್ರೆ ಈ ರಾಜ ಸುಮ್ನೆ ಸಖತ್ತಾಗಿ ಸುತ್ತಾಡುಸ್ತಾ ಇದಾನೆ ಅಂತಾ ಗೊತ್ತಾದ್ರೂ ಕೂಡ ಸುಮ್ನೆ ಕೂತಿದ್ದೆ. ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸದ್ವಿದ್ಯಾ ಸ್ಕೂಲಿನ ಮುಂದೆ ಬಂದು, ಹಾಗೆ ಸೀದಾ ಹೊರಟು, ಶಾಂತಲಾ ಟಾಕೀಸಿನ ಮುಂದೆ ಸಿಗ್ನಲ್ ಕ್ಲಿಯರ್ ಮಾಡಿ ಸಿದ್ದಪ್ಪ ಸ್ಕ್ವೇರ್ ಕಡೆ ನಡೆದ.

ಮಜಾ ತಗೊಳಕ್ಕೆ ಇದೆ ಸಕಾಲ ಅಂತಾ ಯೋಚನೆ ಮಾಡಿ "Hey.. hey..you want to take more money from me? Hotel people told, Kuvempunagar is not far" ಅಂತಾ ವರಾತ ತೆಗ್ದೆ.ಅದಕ್ಕೆ ಆತ "No sir, this is correct. kuvempunagar just 5 minutes". ನಾನು "Stop, i will tell to police" ಅದಕ್ಕೆ ಅವನು ಸಿಟ್ಟಾಗಿ, ರಸ್ತೆಯ ಬದಿ ಆಟೋ ನಿಲ್ಸಿ "No Police.. you give money..Ok?" ಅಂದ.

ಸಡನ್ನಾಗಿ ನಾನು "ಆಯ್ತು ಕಂಡಿದೀನಿ ಮುಚ್ಚಲೇ ಮಗನೆ... ಅವಗ್ಲಿಂದಾ ನೋಡ್ತಾ ಇದ್ದೀನಿ, ಇಡೀ ಮೈಸೂರ್ ತೋರುಸ್ತಾ ಇದ್ದೀಯ ನಿನ್ನಜ್ಜಿನಾ ಬಡಿಯ. ಏನು ಯಾಂದಳ್ಳಿ ಥರ ಕಾಣ್ತೀನಾ ನಾನು? ಮುಚ್ಕಂಡ್ ಬಲ್ಲಾಳ್ ಸರ್ಕಲ್ ಗೆ ನಡಿ ಮಗನೆ. ಕಂಪ್ಲೇಂಟ್ ಕೊಡ್ತೀನಿ ಹುಷಾರು"ಅಂತಾ ಬೈದಾಗ ಅವನಿಗೆ ಹಾರ್ಟ್ ಅಟ್ಯಾಕ್ ಆಗೋದೊಂದು ಬಾಕಿ.

ಬಲ್ಲಾಳ್ ಸರ್ಕಲ್ಲಿಗೆ ಬಂದು ಹಂಗೆ ಕಣ್ಣಾಡಿಸಿದೆ. ಈಗ ಇರೋ ಹಾಗೆಯೇ ಪಾರ್ಕಿನ ಮುಂದೆ ಹಾಗು ಲಕ್ಷ್ಮಿಪುರಂ ಸ್ಕೂಲಿನ ಕಾಂಪೋಂಡ್ ಮುಂದೆ ೨ ಚುರುಮುರಿ ಗಾಡಿ. ಹಾಗೆ ಅಲ್ಲಿಗೆ ನಡ್ಕೊಂಡು ಹೋಗಿ, ಚುರುಮುರಿ ಗಾಡಿ ಪಕ್ಕ ನಿಂತೆ. ಗಾಡಿಯವನು ಹಾಗು ಅಲ್ಲಿ ತಿನ್ನುತ್ತಾ ನಿಂತಿದ್ದ ಶಾರದಾ ವಿಲಾಸ್ ಕಾಲೇಜಿನ ಹುಡುಗರಿಗೂ, SDM ಹುಡುಗಿಯರಿಗೂ ಒಬ್ಬ ಬಿಳಿಯ ಫಾರಿನರ್ ಚುರುಮುರಿ ಗಾಡಿಗೆ ಬಂದಿದಾನೆ ಅಂತಾ ಆಶ್ಚರ್ಯ. ಈ ಬಿಳೀ ಜನ ಖಾರ ತಿನ್ನೋಲ್ಲ, ಅಂತದ್ರಲ್ಲಿ ಚುರುಮುರಿ ಹ್ಯಾಗೆ ತಿಂತಾನೆ ಇವನು ಅಂತ ಕುತೂಹಲದಿಂದ ನೋಡ್ತಾ ಇದಾರೆ.

ಅಷ್ಟರಲ್ಲಿ ಗಾಡಿಯವನು ಕೈನಲ್ಲಿ "What?" ಅಂತಾ ಕೇಳಿದ. ನಾನು ಸುಮ್ನೆ ಗಾಡಿಯಲ್ಲಿ ಏನಿದೆ ಅಂತಾ ನೋಡ್ತಾ ಇದ್ದಾಗ, ಪಕ್ಕದಲ್ಲಿ ನಿಂತಿದ್ದ ಶಾರದಾ ವಿಲಾಸಿನ ಪೋರನೊಬ್ಬ
"Hello, excuse me...This is called Churumuri. Very spicy. Do you want to eat this?" ಅಂತಾ ಕೇಳಿದ.

ಅದಕ್ಕೆ ನಾನು ಕನ್ನಡದಲ್ಲಿ "ಹೂ ಕಣ್ರೀ ತಿಂತೀನಿ..ಆದ್ರೆ ಯಾವ್ದು ಮೊದ್ಲು ತಿನ್ನೋದು ಅಂತಾ ಯೋಚನೆ ಮಾಡ್ತಾ ಇದ್ದೀನಿ. ಚುರುಮುರೀನೋ, ಸೌತೆಕಾಯೋ, ಟೊಮ್ಯಾಟೋ ಮಸಾಲೇನೋ, ನಿಪ್ಪಿಟ್ಟು ಮಸಾಲೇನೋ ಏನೂಂತಾ..."
ಈ ಥರ ಅಂದಾಗ ಇದನ್ನು ಕೇಳಿದವನು ತಾನು ಬಾಯಿಗೆ ಹಾಕ್ಕೊಂಡಿದ್ದ ಚುರುಮುರಿನಾ ಪ್ಹುರ್ರ್ರ್ ಅಂತಾ ಹೊರಗೆ ಗಾಬರಿಯಿಂದ ಉಗಿದು, ಅದು ಸ್ವಲ್ಪ ಜಾಸ್ತಿಯಾಗಿ ಮೂಗಿನಿಂದೆಲ್ಲಾ ಹೊರಗೆ ಬಂದು ಸುಮಾರು ಹೊತ್ತು ಖಾರಬ್ ಸ್ಥಿತಿಯಲ್ಲಿ ಇದ್ದ.

ಇದೆ ರೀತಿ ಸುಮಾರು 15-20 ಘಟನೆಗಳನ್ನು ಹೆಣೆದಿದ್ದೀನಿ. ಅದೂ ಬೇರೆ ಬೇರೆ ಊರಲ್ಲಿ.
ಹೋಟ್ಲಿಗೆ ಹೋಗಿ ಊಟ ಮಾಡುವಾಗ, ಬಿಟಿಎಸ್ ಬಸ್ಸಿನಲ್ಲಿ, ಮೆಜೆಸ್ಟಿಕ್ಕಲ್ಲಿ, ತರಕಾರಿ ಮಾರ್ಕೆಟ್ಟಲ್ಲಿ ಇತ್ಯಾದಿ ಇತ್ಯಾದಿ.
ಅದೆಲ್ಲಾ ಬಿಡಿ, ಜರ್ಮನಿಯಲ್ಲಿ ಇರುವ ಕನ್ನಡದವರ ಹತ್ರ ಹೋಗಿ "ಏನ್ ಮಗಾ.. ಹೆಂಗಿದೀಯ?" ಅಂತಾ ಕೇಳುದ್ರೆ ಹೆಂಗೆ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, October 6, 2008

ಮೈಸೂರಿನ ಕೆಲವು ಫೋಟೋಗಳು

ಕಳೆದ ವಾರ ೪ ದಿನ ಮೈಸೂರಲ್ಲಿ ಇದ್ದೆ. ದಸರಾ ಹಬ್ಬ ಬಂತು ಅಂದ್ರೆ ಸಾಕು, ಇಡೀ ಮೈಸೂರೆ ಸಿಂಗರಿಸಿಕೊಂಡು ಬಿಡುತ್ತೆ. ಮುಂಚಿನ ಥರ ಇಲ್ಲ, ಆದರೂ ಕೂಡ ಇಡೀ ಊರಿನಲ್ಲಿ ಹಬ್ಬದ ವಾತಾವರಣ ಕಾಣಬಹುದು. ಹಾಗೆ ಮೈಸೂರಿನಲ್ಲಿ ಬೀಟ್ ಹಾಕಬೇಕಾದರೆ ತೆಗೆದ ಕೆಲವು ಫೋಟೋಗಳು.
ಪ್ರತೀ ಫೋಟೋ ಮೇಲೂ ಎಲ್ಲಿ ತೆಗೆದದ್ದು ಅಂತಾ ಹಾಕಿದೀನಿ, ನಿಮ್ಮ ಅನುಕೂಲಕ್ಕೆ.
ದಸರಾ ಹಬ್ಬದ ಶುಭಾಶಯಗಳು ಎಲ್ಲರಿಗೂ. ತಾಯಿ ಚಾಮುಂಡಿಯ ಆಶೀರ್ವಾದ ನಿಮ್ಮೆಲ್ಲರ ಮೇಲೆ ಸದಾಕಾಲವಿರಲಿ.

ಗನ್ ಹೌಸ್ ಪಕ್ಕದಲ್ಲಿ ಹಾಕಿರುವ ಜಯಚಾಮರಾಜೇಂದ್ರ ಒಡೆಯರ್ ಅವರ ವಿದ್ಯುತ್ ಅಲಂಕೃತ ಚಿತ್ರ. ಇದರ ಮುಂಭಾಗದಿಂದ ಹೋದರೆ ಮೈಸೂರು ಅರಮನೆಯ ದಕ್ಷಿಣ ದ್ವಾರ ಸಿಗುತ್ತದೆ.



ಮೈಸೂರು ಅರಮನೆಯ ಪೂರ್ವ ದ್ವಾರ. ದಸರಾ ವಸ್ತು ಪ್ರದರ್ಶನ ನಡೆಯುವ ಮೈದಾನ ಇದರ ಮುಂದೆಯೇ ಇರೋದು. ಈ ದ್ವಾರದ ಮುಂದೆ ನೆಟ್ಟಗೆ ಹೋದ್ರೆ, ಹಾರ್ಡಿಂಗ್ ಸರ್ಕಲ್ಲು, ಇನ್ನೂ ಮುಂದಕ್ಕೆ ಹೋದ್ರೆ ಸಬರ್ಬನ್ ಬಸ್ ಸ್ಟಾಂಡ್ ಸಿಗುತ್ತೆ.



ಇದು ಕಣಪ್ಪ ನಮ್ಮ ಫೇವರಿಟ್ ಜಾಗ. ರಾತ್ರಿ ಹೊತ್ತು ನಾಯಿ ಥರ ಬೀದಿ ಬೀದಿ ಸುತ್ತಾಡಿ, ಮನೆಗೆ ಹೋಗಿ ಅಮ್ಮಾ, ಊಟ ಹಾಕು ಅಂತಾ ಕೇಳುದ್ರೆ ಎಕ್ಕಡದೇಟು ಗ್ಯಾರಂಟಿ. ನಮ್ಮಂಥ ತಿರುಕರಿಗೆ ಇರೋದೇ ಈ ಅಗ್ರಹಾರದ ನೈಟ್ ಹೋಟಲ್ಲು. ಸಂಜೆ 7 ರಿಂದ ಶುರುವಾಗಿ ರಾತ್ರಿ ಸುಮಾರು 12 ರ ವರೆಗೂ ತೆಗೆದಿರುತ್ತೆ.ಇವತ್ತಿನದಲ್ಲ, ನಮ್ಮಪ್ಪ ಮೈಸೂರಿಗೆ ಬಂದಾಗಿನಿಂದಾ ಇದೆಯಂತೆ. ಈ ಹೋಟ್ಲು, ಚಿಕ್ ಮಾರ್ಕೆಟ್ ಸರ್ಕಲ್ ಉರುಫ್ ಅಗ್ರಹಾರ ಸರ್ಕಲ್ಲಲ್ಲಿ ಇರೋ ಜಟಕಾ ಸ್ಟಾಂಡಿನ ಹಿಂದೆ ಇದೆ. ಇಲ್ಲಿ ಸಿಗೋ ಎಲ್ಲಾ ಐಟಂ ಮಸ್ತಾಗಿ ಇರತ್ತೆ. ಪೂರಿ ಸಾಗು, ಇಡ್ಲಿ ವಡೆ, ರೈಸ್ ಬಾತ್, ಚಿತ್ರಾನ್ನ. ಸಖತ್ ಕಣ್ರೀ.






------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

ಗೊಂಬೆ ಹಬ್ಬ

ನಾವು ಚಿಕ್ಕವ್ರಿದಾಗ ದಸರಾ ಹಬ್ಬ ಅಂದ್ರೆ ಸ್ಕೂಲ್ಗೆ ಒಂದು ತಿಂಗಳು ರಾಜ ಕೊಡವರು. ಫುಲ್ಲು ಮಜಾ ಮಾಡ್ತಿದ್ವಿ. ಆದ್ರೆ mid-term examದು question papers answer ಮಾಡ್ಕೊಂಡು ವಾಪಸ್ ಸ್ಕೂಲ್ಗೆ ಹೋಗ್ಬೇಕಿತು... ಅದು ಒಂದು ತಲೆ ನೋವ ಬಿಟ್ಟರೆ.. ಮೈಸೂರ್ ಅರಮನೆ, ಎಕ್ಷ್ಹಿಬಿಶನ, ಬೆಟ್ಟ... ಮತ್ತೆ zoo.. ಇವೆಲ್ಲ ನಮ್ಮ itineraryಲಿ ಇದ್ಧೆ ಇರೋದು.

ಏಳದಿಕಿಂಥ ಸಕ್ಕತ್ ಮಜಾ ಅಂದ್ರೆ ಗೊಂಬೆ ಕೂದ್ಸೋದು! ಗೊಂಬೆಗಳ್ನ ಇಡಧೆ ಇದ್ರೆ.. ದಸರಾ complete ಅಗೋ chance ಇರ್ಲಿಲ್ಲ ಆವಾಗ... ಹಬ್ಬದ ಒಂದು ವಾರದ ಮುಂಚೆ ನೆ ಸ್ವಲ್ಪ ರಾಗಿ ಮೊಣ್ನಲ್ಲಿ ಹಾಕಿ ದಿನ ನೀರ್ ಚುಮ್ಕ್ಸಿ ಚುಮ್ಕ್ಸಿ ಗಿಡಗಳು ಹೇಗೆ ಬೆಳಿತಿಧೆ ಅಂಥ ದಿನ ಬೆಳಿಗೆ ಎಧ ಹಾಸಿಗೆ ಗೆ ಹೋಗಿ check ಮಾಡ್ತಿದ್ವಿ. ಗಿಡಗಳು ಒಂದು ಮಟ್ಟಕ್ಕೆ ಬಂಧ್ಮೇಲೆ ಅದರ ಮದ್ಯ ಕಾಡು ಪ್ರಾಣಿಗಳು, ಒಂದು ಚಿಕ್ಕ ಹಾಗು ಚೊಕ್ಕ ಮನೆ ಮತ್ತೆ ಕಾರ್ಗಳು ಬಸ್ಸು ಮುಂಥದವುನ್ನ ಇಟ್ಟು decorate ಮಡ್ತಿದ್ವೀ.

ಸುಮಾರು 15 ವರ್ಷ ಆದ್ಮೇಲೆ ದಸರಾ ಹಬ್ಬಕ್ಕೆ ಮತ್ತೆ ನಾವು ಮನೇಲಿ ಗೊಂಬೆ ಕೋಡ್ಸಿದಿವಿ. ಬೆಂಗಳೂರಲಿ... ಇಲ್ಲಿ ಇರೋ 80% ಗೊಂಬೆ ಗಲ್ಲು ನನ್ನ ಅರ್ಧಾಂಗಿ ಶ್ರುತಿ ಕುಡ್ಸಿರೋದು. 'ದಸರಾ' ರೈಲು ನಿಲ್ಧಾಣ ನನ್ನ ಕೈ ಕುಸುರಿ. ಹ್ಯಾಂಡ್ made by me.



Tuesday, June 10, 2008

ಕರೀನಾ ಶಾಹಿದ್ ಬ್ರೇಕ್ ಅಪ್ ಆದಾಗ, ಅವಳನ್ನು ಸರಿ ಮಾಡಿದ್ದು ಇವರೇ !!!

ಗೂಗಲ್ ನಲ್ಲಿ ಹುಡುಕಾಡಬೇಕಾದ್ರೆ ನನ್ನ ಫ್ರೆಂಡಿನ ಫ್ರೆಂಡಿಗೆ ಸಿಕ್ಕಿದ ಫೋಟೋ. ಆಸಕ್ತಿ ಇದ್ದವರು ಒಮ್ಮೆ ಭೇಟಿ ಕೊಡಿ. ಈ ಫೋಟೋವನ್ನು ಯಾರು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದಾರೋ ಗೊತ್ತಿಲ್ಲ. ಸಖತ್ತಾಗಿ ಕಣ್ಣು ಓಡಿಸಿ ಕ್ಲಿಕ್ಕಿಸಿದ್ದಾರೆ. ಅವರಿಗೆ ಧನ್ಯವಾದಗಳು.


-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ