Sunday, April 6, 2014

ಗಾಜಿನ ಲೋಟದಲ್ಲಿ ರಸ್ನಾ

ಮಾರ್ಚಿ ತಿಂಗಳ ಶಾಲಾ  ಪರೇಕ್ಷೆಗಳು ಮುಗಿದಾಗ ಶುರುವಾಗ್ತಿತ್ತು ನಮ್ಮಗಳ ಅಟ್ಟಹಾಸ. "ನಾಯಿಗೆ ನೆಲೆಯಿಲ್ಲಾ, ನಿಲ್ಲೋಕ್ಕೆ ಹೊತ್ತಿಲ್ಲ" ಅನ್ನೋ ಹಾಗೆ ನಮ್ಮ ಓಡಾಟ. ಪರೀಕ್ಷೆ ಮುಗಿಯುವವರೆಗೆ ಅಪ್ಪ ಅಮ್ಮನ ದಬ್ಬಾಳಿಕೆ ಸಹಿಸಿಕೊಂಡು ಈ ಎರಡು ತಿಂಗಳ ರಜೆಯಲ್ಲಿ ಸಾಕಷ್ಟು ಸೇಡು ತೀರಿಸಿಕೊಳ್ಳುವ ಇರಾದೆ.

ಬೇಸಿಗೆ ರಜೆ ಎಂದರೆ ರಸ್ನಾ ಕಾಲ. ಮನೆಯಲ್ಲಿ ರಸ್ನಾ ತಯಾರು ಮಾಡಿ ಬಾಟಲಲ್ಲಿ ಅದರ Concentrate ತುಂಬಿಡುವುದೆಂದರೆ ಅದೇನೋ ಸಂಭ್ರಮ ನಮಗೆ.

ತಿಂಗಳ ಶುರುವಿನಲ್ಲಿ ಮನೆಯ ದಿನಸಿಯ ಜೊತೆಗೆ ಒಂದು ಪ್ಯಾಕೆಟ್ ರಸ್ನಾ ಇರಲೇ ಬೇಕು. ಅದರಲ್ಲೂ ಈ ಬಾರಿ ಯಾವ ಫ್ಲೇವರ್ ತರುವುದು ಎಂದು ನನ್ನ ಹಾಗು ನನ್ನ ತಮ್ಮನ ಮಧ್ಯೆ ಮಾರಾಮಾರಿ.

ರಸ್ನಾ ಪ್ಯಾಕೆಟ್ ದಿನಸಿ ಜೊತೆ ಬಂದಾಗ, ತಯಾರು ಮಾಡಿ ಬಾಟಲಲ್ಲಿ ತುಂಬಿಡುವ ಕಾರ್ಯ ಅಪ್ಪನದು. ಪ್ರತೀ ಬಾರಿ ಮಾಡುವಾಗಲೂ ಪ್ಯಾಕೆಟ್ ಹಿಂದೆ ಬರೆದಿರುವ "ತಯಾರಿಸುವ ವಿಧಾನ"ವನ್ನು ಅಪ್ಪ ಓದುವುದು, ನಾವುಗಳು ಅದನ್ನು ಗಣಪತಿ ಹಬ್ಬದ "ಶ್ಯಮಂತೋಪಾಖ್ಯಾನ"ಕ್ಕಿಂತಲೂ ಶ್ರದ್ಧೆಯಿಂದ ಕೇಳುವುದು.
ನೀರಿಗೆ ಸಕ್ಕರೆ ಬೆರೆಸಿ, ಅದನ್ನು ಸೋಸಿ, ಅದರಲ್ಲಿ ರಸ್ನಾ ಪ್ಯಾಕೆಟ್ಟಿನಲ್ಲಿ ಕೊಟ್ಟಿರುವ ಪೌಡರ್ ಹಾಗು ಫ್ಲೇವರ್ ರಸವನ್ನು ಬೆರೆಸಿ ಕಲಕುವುದು. ಈ ಕಲಕುವ ಕೆಲಸ ಮಾಡಲು ಮತ್ತೊಮ್ಮೆ ನನ್ನ ಹಾಗು ನನ್ನ ತಮ್ಮನ ನಡುವೆ ಮಾರಾಮಾರಿ.

ಸರಿ, ತಯಾರಾಯ್ತು ರಸ್ನಾ. ಅದನ್ನು ಎರಡು ಬಾಟಲಲ್ಲಿ ತುಂಬಿತ್ತು ದಿನಾಲೂ ರೇಷನ್ ವಿಧಾನದ ಥರ ಕುಡಿಯುವುದು.
ಮಾಮೂಲಾಗಿ ಕುಡಿಯುತ್ತಿದ್ದದ್ದು ಸ್ಟೀಲ್ ಲೋಟದಲ್ಲಿ. ಆದರೆ, ಅದೇನೋ ಧನ್ಯತಾ ಭಾವ ಹಾಗು ಜೀವನದ ಸಾರ್ಥಕತೆ ಸಿಗುತ್ತಿದ್ದದ್ದು ಅಪರೂಪಕ್ಕೆ "ಗಾಜಿನ ಲೋಟದಲ್ಲಿ ರಸ್ನಾ" ಕುಡಿದಾಗಲೇ.

ಈಗ ಬೇಸಿಗೆ ರಜೆ ಇದೆ, ಆದರೆ ಈ ಸಂಭ್ರಮ ಇಲ್ಲಾ ಹಾಗು ಹೀಗೆ ಯಾರೂ ರಸ್ನಾ ಎಂಜಾಯ್ ಮಾಡೋದಿಲ್ಲಾ ಅನ್ಸುತ್ತೆ.

"ಐ ಲವ್ ಯೂ ರಸ್ನಾ"

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

No comments: