Thursday, February 25, 2010

ಜನರ ಪ್ರಾಣ, ತುರ್ತು ಸೇವೆ - ಒಂದು ಪ್ರಹಸನ

ಮೊನ್ನೆ ನಮ್ಮ ಬೆಂಗಳೂರಿನ ಕಾರ್ಲ್ಟನ್ ಟವರಿನಲ್ಲಿ ನಡೆದ ದೊಡ್ಡ ದುರಂತದ ಬಗ್ಗೆ ಈ ಸಣ್ಣ ಲೇಖನ. ದುರ್ಘಟನೆ ಹೇಗಾಯ್ತು, ಎಷ್ಟು ಜನ ಜೀವ ಕಳೆದುಕೊಂಡರು ಅನ್ನೋದು ಎಲ್ಲರಿಗೂ ಗೊತ್ತು. ನಮ್ಮಲ್ಲಿ ಈಗ ಜನರ ಪ್ರಾಣ, ಹಾಗು ತುರ್ತು ಪರಿಸ್ಥತಿ ಸೇವೆಗಳು ಹಾಗು ಅರಿವು ಎನ್ನುವುದು ಯಾವ ರೀತಿ ನಾಪಾಸಾಗಿದೆ, ಜನರಲ್ಲಿ ಸಾಮಾನ್ಯ ಅರಿವೂ ಇಲ್ಲವಾಗಿದೆ.

ಅಲ್ಲಿ ಆ ಕಟ್ಟಡದಲ್ಲಿ ಬೆಂಕಿ ಬಿದ್ದು ಒಳಗಿನ ಜನ ಕಂಗಾಲಾಗಿದ್ದರು. ಹೊರಗೆ ಅಗ್ನಿಶಾಮಕ ಹಾಗು ತುರ್ತು ಸೇವೆ ವಾಹನಗಳು ಆ ಜಾಗಕ್ಕೆ ಬರಲು ಹರಸಾಹಸ ಪಡುತ್ತಾ ಇದ್ದವು. ಇಲ್ಲಿ ಹೊರಗಡೆ ಜನರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು, ಗುಂಪು ಗುಂಪಾಗಿ ಇದರ ಬಗ್ಗೆ ವಿಶ್ಲೇಷಣೆ ಕೊಡ್ತಾ ನಿಂತಿದ್ದರು.


ಜೊತೆಗೆ, ಅಲ್ಲಿ ಸಂಭವಿಸಿದ ವಾಹನ ದಟ್ಟಣೆ, ಜ್ಯಾಮ್ ನಲ್ಲಿದ್ದ ಜನರು ಹೇಗೆ ನಡೆದುಕೊಳ್ತಾ ಇದ್ದರು ಅನ್ನೋದನ್ನ ನಾನು ಕಣ್ಣಾರೆ ಕಂಡಿದೀನಿ. ನನ್ನ ಪಕ್ಕದ ಬೈಕಿನಲ್ಲಿ ಹೋಗುತ್ತಿದ್ದ ಒಬ್ಬಾತ ತನ್ನ ಮನೆಗೆ ಫೋನ್ ಮಾಡಿ "ಇನ್ನೂ ಜ್ಯಾಮ್ ಜಾಸ್ತಿ ಆಗೋ ಥರಾ ಇದೆ, ಹೆಂಗಾದ್ರೂ ಮಾಡಿ ಬೇಗ ಮನೆ ಸೇರ್ಕೋತೀನಿ.." ಅಂತಾ ಹೇಳಿ, ಸಂದಿ ಗೊಂದಿಯಲ್ಲಿ ಗಾಡಿ ನುಗ್ಗಿಸಿ, ಮುಂದೆ ಹೋದ.

ಈ ವಿಚಾರವನ್ನು ಬದಿಗೆ ಹಾಕೋಣ. ಅಲ್ಲಿ ಕಟ್ಟಡದಲ್ಲಿ ಬೆಂಕಿ ಉರಿಯುತ್ತಿದ್ದಾಗ, ಟ್ರಾಫಿಕ್ ದಟ್ಟಣೆಯಿಂದಾಗಿ ತುರ್ತು ಸೇವೆ ವಾಹನಗಳು ಅಲ್ಲಿಗೆ ಸರಿಯಾದ ಸಮಯಕ್ಕೆ ಬರುವುದು ಬಹಳ ತಡವಾಯಿತು. ಈ ಕಾರಣಕ್ಕೆ, ಕೆಲವರು ಗಾಬರಿ ತಡೆಯಲಾರದೆ ಮೇಲಿನಿಂದ ಜಿಗಿದು ಜೀವ ಕಳೆದುಕೊಂಡರು.

ನನ್ನ ಒಂದೇ ಒಂದು ಪ್ರಶ್ನೆ. ಈ ಘಟನೆಯು ನಡೆದ ಕಟ್ಟಡಕ್ಕೆ HAL ಬಹಳ ಹತ್ತಿರವಿದೆ. HAL ನಲ್ಲಿ, ವೈದ್ಯಕೀಯ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಒಂದು ಹೆಲಿಕಾಪ್ಟರ್ ಸದಾ ಸನ್ನದ್ಧವಾಗಿ ಇಟ್ಟಿರುತ್ತಾರೆ. ಈ ಹೆಲಿಕಾಪ್ಟರಿನ ಸೇವೆಯನ್ನು ಏಕೆ ಉಪಯೋಗಿಸಿಕೊಳ್ಳಲಿಲ್ಲ ? ಈ ಕಾರ್ಲ್ಟನ್ ಕಟ್ಟಡದ ಅತ್ಯಂತ ಸಮೀಪದಲ್ಲಿ "ಲೀಲಾ ಪ್ಯಾಲೆಸ್" ನಲ್ಲಿ ಹೆಲಿಪ್ಯಾಡ್ ಕೂಡಾ ಇದೆ.
ಕಟ್ಟಡದ ಮೇಲಂತಸ್ತಿನಲ್ಲಿ ಸಿಕ್ಕಿದ್ದ ಜನರನ್ನು ತಾರಸಿಗೆ ಕಳುಹಿಸಿ, ಅಲ್ಲಿಂದ ಅವರುಗಳನ್ನು ಈ ಹೆಲಿಕಾಪ್ಟರಿನ ಮೂಲಕ ಕಾಪಾಡಬಹುದಿತ್ತು.

ಪಕ್ಕದ ರಾಜ್ಯದ ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಾಡಿನ ಕಡೆ ಕಾಣೆಯಾಯಿತು ಎಂದೊಡನೆ, ವಾಯುದಲವನ್ನು ಕಳುಹಿಸಿ ಕಾಡಿನಲ್ಲಿ ಶೋಧನೆ ಆರಂಭಿಸಿದರು.ಆದರೆ ಇಲ್ಲಿ ಕಣ್ಣ ಮುಂದೆ ಹತ್ತಿ ಉರಿಯುತ್ತಿದ್ದ ಕಟ್ಟಡದಿಂದ, ಜನರು ಗಾಬರಿಯಾಗಿ ಮೇಲಿನಿದ ಜಿಗಿದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದರೂ ಕೂಡಾ, ಈ ಹೆಲಿಕಾಪ್ಟರಿನ ಉಪಯೋಗ ಪಡೆಯಲು ನಮ್ಮಲ್ಲಿ ಯಾರೂ ಯೋಚಿಸಲಿಲ್ಲ ಎನ್ನುವುದು ದೊಡ್ಡ ಸೋಜಿಗದ ಸಂಗತಿ. ಯಾರಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು HAL ಅನ್ನು ಸಂಪರ್ಕಿಸಿ, ಹೆಲಿಕಾಪ್ಟರಿನ ಸೇವೆ ಕೊರಿದ್ದಲ್ಲಿ, ತಕ್ಷಣಕ್ಕೆ ಬಂದು, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿತ್ತು, ಅಥವಾ ಯಾವುದೇ ಸಾವು ಸಂಭವಿಸುವುದನ್ನು ತಪ್ಪಿಸಬಹುದಿತ್ತು.

ಹೀಗೇಕೆ ಆಗಲಿಲ್ಲ / ಮಾಡಲಿಲ್ಲ ? ನನ್ನಂಥ ಸಾಮಾನ್ಯ ನಾಗರಿಕನಿಗೆ ಇದು ಹೊಳೆದಿದೆ ಎಂದರೆ, ಸಾರ್ವಜನಿಕ ಇಲಾಖೆಗಳಲ್ಲಿ ಇರುವ ಹಿರಿಯ ಅಧಿಕಾರಿಗಳಿಗೆ ಇದು ಏಕೆ ಹೊಳೆಯಲಿಲ್ಲ ?

We Indians are not Proactive.. we are just Reactive - ಎನ್ನುವ ಮಾತು ಬಹಳ ನಿಜ. ಇದನ್ನು ಬಹಳ ಕಂಡಿದೀವಿ. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾದಾಗ ಕೂಡಾ ಹೀಗೆ ಆಯಿತು. ನಾವು ಆ ದಿನ ಊಟಕ್ಕೆ ಹೊರಗೆ ಹೋಗಿದ್ದೆವು. ನಮ್ಮ ಆಫೀಸು ಇರುವುದು ಡೈರಿ ಸರ್ಕಲ್ (ಕ್ರೈಸ್ಟ್ ಕಾಲೇಜ್) ಬಳಿ. ವಾಪಾಸ್ ಬಂದಾಗ ಇಡೀ ಹೊಸೂರು ರಸ್ತೆಯಲ್ಲಿ ಅಲ್ಲೋಲ ಕಲ್ಲೋಲ. ಐದು ಮಂದಿ ಕಾರಿನಲ್ಲಿ ಊಟ ಮುಗಿಸಿ ಆಫೀಸಿಗೆ ವಾಪಸ್ ಕಾರಿನಲ್ಲಿ ಬಂದೆವು. ಆಗ ಇದ್ದಕ್ಕಿದ್ದಂತೆ, ಇಡೀ ಆಫೀಸಿನ ಸೆಕ್ಯೂರಿಟಿಯವರು ಎಚ್ಚೆತ್ತುಕೊಂಡರು. ಕಂಪೆನಿಯ ಗುರುತಿನ ಚೀಟಿ ಇಲ್ಲದ್ದಕ್ಕೆ ನಾವು ಎಷ್ಟೇ ಹೇಳಿದರೂ ಕೇಳದೆ ನಮ್ಮ ಕಾರಿನಲ್ಲಿದ್ದ ಒಬ್ಬ ಸಹೋದ್ಯೋಗಿಯನ್ನು ಕೆಳಗಿಳಿಸಿ ನಮ್ಮನ್ನು ಒಳಗೆ ಕಳುಹಿಸಿದರು. ಮತ್ತೆ ಮಾರನೆಯ ದಿನದಿಂದ, ಯಥಾ ಪ್ರಕಾರ. ಹೋದಾ ಪುಟ್ಟ, ಬಂದಾ ಪುಟ್ಟ ಅನ್ನೋ ರೀತಿ. ಯಾರೂ ಹೇಳೋರಿಲ್ಲ, ಕೇಳೋರಿಲ್ಲ.

ಇನ್ನು ನಿನ್ನೆ ಕೂಡಾ ನಮ್ಮ ಆಫೀಸಿನ ಕಟ್ಟಡದಲ್ಲಿ ಇದ್ದಕ್ಕಿದ್ದ ಹಾಗೆ ಫೈರ್ ಅಲಾರಂ ಕೂಗಲು ಶುರು ಮಾಡಿತು. ನಮ್ಮ HR ಮ್ಯಾನೇಜರ್ ಬಂದು "come on guys.. what are you waiting for? Can't you hear the alarm? evacuate the building" ಎಂದು, ಎಲ್ಲರನ್ನೂ ತುರ್ತು ದಾರಿಯಿಂದ ಕಟ್ಟಡದ ಹೊರಗೆ ಕಳುಹಿಸಿದರು. ನಮ್ಮ ಕಚೇರಿ ಇರೋದು ನಾಲ್ಕನೆ ಅಂತಸ್ತಿನಲ್ಲಿ. ಕೆಳಗೆ ಎಲ್ಲರೂ ಇಳಿದ ಮೇಲೆ, ಆಫೀಸಿನಲ್ಲಿ, ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಒಂದು PRESENTATION ಕೊಟ್ಟರು. ಮೊನ್ನೆ ಆ ಬೆಂಕಿ ಅಪಘಾತ ನಡೆಯದ ಪಕ್ಷದಲ್ಲಿ, ನಮ್ಮಲ್ಲಿ ಈ "ಅಣಕು ಪ್ರಹಸನ (Mock Drill)" ನಡೆಯುತ್ತಿತ್ತೇ?

ನಮ್ಮಲ್ಲಿ ಈಗ "ಮಾಲ್"ಗಳು ಹೆಚ್ಚುತ್ತಿವೆ. ಹಾಗೆಯೇ ಮಾಲುಗಳಲ್ಲಿ "ಮಲ್ಟಿಪ್ಲೆಕ್ಸ್" ಸಿನೆಮಾ ಮಂದಿರಗಳು ತುಂಬುತ್ತಿವೆ. ಆದರೆ, ಆ ಸಿನೆಮಾ ಮಂದಿರಗಳು ಎಷ್ಟರ ಮಟ್ಟಿಗೆ ಸುರಕ್ಷಿತ. ಈ ರೀತಿಯಾಗಿ ಏನಾದರೂ ಒಂದು ಬೆಂಕಿ ಅಪಘಾತ ಸಂಭವಿಸಿದ ಪಕ್ಷದಲ್ಲಿ ಏನು ಗತಿ ? ನಾನು ಕಂಡ ಹಾಗೆ, ಕಿಷ್ಕಿಂದೆಯ ರೀತಿ ಇರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳೆಂದರೆ - ಜಯನಗರದ ಸ್ವಾಗತ ಗರುಡಾ ಮಾಲಿನಲ್ಲಿ ಇರುವ "ಐನಾಕ್ಸ್", ಹಲಸೂರಿನಲ್ಲಿ ಇರುವ "ಫೇಮ್ ಲಿಡೋ", ಕನ್ನಿಂಗ್ ಹ್ಯಾಮ್ ರಸ್ತೆಯ ಸಿಗ್ಮಾ ಮಾಲಿನಲ್ಲಿ ಇರೋ "ಫನ್ ಸಿನೆಮಾ". ಇವುಗಳಲ್ಲಿ ಏನಾದರೂ ಅವಗಢ ಸಂಭವಿಸಿದ ಪಕ್ಷದಲ್ಲಿ, ಸಾವು ನೋವು ಅತಿಯಾಗಿ ಇರುವುದು.

ಮೊನ್ನೆ ನಡೆದ ಘಟನೆ ನಮಗೆ ಒಂದು ಎಚ್ಚರಿಕೆಯ ಘಂಟೆಯಾಗಲಿ. ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಬಹುಮಹಡಿ ಕಟ್ಟಡಗಳ ತಪಾಸಣೆ ನಡೆಸಲಿ. ವ್ಯತ್ಯಯ ಕಂಡುಬಂದಲ್ಲಿ, ಕಠಿಣ ಕ್ರಮ ನಡೆಸಲಿ. ಜೊತೆಗೆ, ಅಕಸ್ಮಾತ್ ಈ ರೀತಿಯ ಘಟನೆ ಮುಂದೆ ನಡೆದರೆ, ನಮ್ಮಲ್ಲಿ ಇರುವ ಸೌಲಭ್ಯಗಳನ್ನು ಸರಿಯಾಗಿ ಬಳಸಲಿ. ಸಿಂಪಲ್ಲಾಗಿ ಹೇಳಬೇಕೆಂದರೆ, ಎಲ್ಲರೂ ಅರಿವು ಮೂಡಿಸಿಕೊಳ್ಳಲಿ.
ಅರಿವೇ ಗುರು, Awareness is the key
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

11 comments:

ಅರೇಹಳ್ಳಿ ರವಿ said...

ಬರಹದ ಕಾಳಜಿ ಅರ್ಥವಾಯಿತು. ಆದರೆ ನಮ್ಮ ಸರ್ಕಾರಿ ವ್ಯವಸ್ಥೆಯಲ್ಲಿ ಏನಾಗುತ್ತಿದೆಯೆಂದರೆ ಅಲ್ಲಿ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆ ಅಥವ ಸರ್ಕಾರಿ ಅಂಗಕ್ಕೆ ಪರಸ್ಪರ ಸೌಹಾರ್ದ ಏರ್ಪಡಬಹುದಾದ ಅವಕಾಶಗಳೇ ಇರೋದಿಲ್ಲ.
ಒಂದು ಸಂಸ್ಥೆಯಿಂದ ಕೊಡಲಾದ ನಿರಾಪೇಕ್ಷಣಾ ಪತ್ರದ ವಿವರ ಇನ್ನೊಂದು ಇಲಾಖೆಗೆ ಸಿಗುವುದಿಲ್ಲ. ಯಾವನೋ ಒಬ್ಬ ಭ್ರಷ್ಟ ದುಡ್ಡಿಗಾಗಿ ಪರವಾನಗಿ ಕೊಡ್ತಾನೆ, ಇನ್ನೊಬ್ಬ ಅಸಡ್ಡೆಯಿಂದ ಕೊಡ್ತಾನೆ ಮತ್ತೊಬ್ಬ ಕರ್ತವ್ಯ ಲೋಪ ಮಾಡಿರುತ್ತಾನೆ. ಹೀಗಿರುವಾಗ ದುರಂತದ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನು ನಿಭಾಯಿಸಬಹುದಾದ ಸಂವಹನ, ಸೂಕ್ಷ್ಮತೆ, ಸೌಹಾರ್ದತೆ ಸರ್ಕಾರಿ ಅಂಗಗಳಲ್ಲಿ ಹೇಗೆ ಬರಲು ಸಾಧ್ಯ. ಪ್ರತಿ ಕಟ್ಟದವನ್ನು ಅಗ್ನಿ ಶಾಮಕ ನಿಯಮಗಳಿಗನುಗುಣವಾಗ ಕಟ್ಟಿದ್ದಾರೆಯೆ, ಇಲ್ಲವೆ ಎಂಬುದನ್ನು ಪರಿಶೀಲಿಸಲು ಸಂಬಂಧಿಸಿದ ಇಲಾಖೆಯಲ್ಲಿ ಸಿಬ್ಬಂದಿಗಳೇ ಇರೋದಿಲ್ಲ. ಇಂಥ ಪರಿಸ್ಥಿತಿ ವಾಸ್ತವವೆಂದು ನಾವು ಒಪ್ಪಿಕೊಂಡರೆ, ನಾವು/ನಾನು ಮಾಡಬಹುದಾದ್ದೇನೆಂದರೆ....
ನಮ್ಮ ಜಾಗಗಳಲ್ಲಿ ಇಂಥಹ ಸುರಕ್ಷತೆಯ ನಿಯಮಗಳು ಪಾಲನೆಯಾಗುತ್ತಿವೆಯಾ ಎಂದು ಕಂಡುಕೊಳ್ಳುವುದು.
ಸುರಕ್ಷತೆಗಳು ಇಲ್ಲವೆಂದ ಪಕ್ಷದಲ್ಲಿ ಆಕ್ಷೇಪಣೆಯನ್ನು ಸಲ್ಲಿಸುವುದು.
ಹಾಗೂ ಸರಿಹೋಗದಿದ್ದಲ್ಲಿ ಹೊರನಡೆದು ಸುರಕ್ಷತೆಯೆಡೆಗೆ ಸಾಗುವುದು.

ಜೀವ ಮುಖ್ಯ...ಕಂಪನಿ ಕೊಡೋ ಸಂಬಳವಲ್ಲ...!

ಸುಮ said...

ನೀವು ಹೇಳುತ್ತಿರುವುದು ಸತ್ಯ. ನಮ್ಮ ಮನಸ್ಥಿತಿ ಹೇಗೆಂದರೆ ಪಕ್ಕದ ಮನೆಗೆ ಬೆಂಕಿ ಬಿದ್ದರೂ ... ಓ ನಮ್ಮ ಮನೆಗೇನೂ ಆಗಲಿಲ್ಲವಲ್ಲ ಎಂದು ನೆಮ್ಮದಿಯಿಂದಿರುವುದು. ಇಂದು ಅವರಿಗಾದದ್ದು ನಾಳೆ ನಮಗಾಗಬಹುದು ಎಂಬ ಯೋಚನೆಯೇ ನಮಗಿಲ್ಲ. ಇದು ಸುಧಾರಣೆಕಾಣುವುದು ಕಷ್ಟ.

ವಿ.ಆರ್.ಭಟ್ said...

ಲೇಖನ ಬಹಳ ಪ್ರಸ್ತುತ, ಧನ್ಯವಾದ

ಮೌನಗೀತೆ said...

ಶಂಕರ್ ಅವರೇ, ನಿಮ್ಮ ಅಭಿಪ್ರಾಯ ಖಂಡಿತ ನಿಜವಾದುದು. ಆ ಕಟ್ಟಡದ ಪಕ್ಕದ ರಸ್ತೆಯಲ್ಲೇ ನಮ್ಮ ಕಚೇರಿ. ನಾನು ಆ ದುರಂತವನ್ನ ಕಣ್ಣಾರೆ ಕಂಡಿದ್ದೇನೆ. ಬಹುಶಃ ನೀವು ಹೇಳಿದ ಹಾಗೆ ಹೆಲಿಕ್ಯಾಪ್ಟರ್ ಬಳಸಿ ಜನರ ಪ್ರಾಣ ಉಳಿಸಬಹುದಿತ್ತೇನೋ ಅನ್ನೋ ಅಭಿಪ್ರಾಯ ನನ್ನಲ್ಲೂ ಬಂತು ಆದ್ರೆ ಅದು ಹಾಗೆ ಆಗ್ಲಿಲ್ಲ. ಇದರಲ್ಲಿ ಇನ್ನೊಂದು ವಿಚಾರ ಏನಂದ್ರೆ, ಎಲ್ಲೋ ಒಂದು ಕಡೆ ಜನ ಆತುರಕ್ಕೆ ಬುದ್ದಿ ಕೊಟ್ರು ಅನ್ನಿಸುತ್ತೆ. ಸ್ವಲ್ಪ ಧೈರ್ಯ, ವಿವೇಕದಿಂದ ಯೋಚನೆ ಮಾಡಿದ್ರೆ? ಬದುಕಬಹುದಿತ್ತು ಅನ್ನಿಸುತ್ತೆ ನೀವೇನಂತೀರಿ?

ಆದ್ರೆ ಇದು ನಮ್ಮ ಐಟಿ- ಬಿಟಿ ನಗರದ ಜನರಿಗೆ ಇದೊಂದು ಪಾಠ ಆಗಬೇಕು. ತುರ್ತು ಪರಿಸ್ಥಿತಿನ ಸಮರ್ಥವಾಗಿ ನಿಭಾಯಿಸೋದನ್ನ ಕಲಿತುಕೊಳ್ಳಬೇಕು. ಎಂತಹ ಸಮಯದಲ್ಲೂ ಕೂಡ ವಿವೇಕ ಕಳೆದುಕೊಳ್ಳಬಾರದು. ಧೈರ್ಯದಿಂದ ಪರಿಸ್ಥಿತಿನ ನಿಭಾಯಿಸಬೇಕು, ಹಾಗಂತ ಮೊಂಡು ಧೈರ್ಯ ಮಾಡಿ ಪ್ರಾಣಕ್ಕೆ ಕುತ್ತು ತಂದ್ಕೊಬಾರ್ದು. ಏನಂತೀರಿ?

Subrahmanya Bhat said...

ನಿಜ ನಿಮ್ಮ ಅಭಿಪ್ರಾಯ. Fire alarm rise ಆದರೂ ಅಲ್ಲಿನವರು ಅದನ್ನು neglect ಮಾಡಿದರಂತೆ. ವಾರಕ್ಕೊಮ್ಮೆ ಅದನ್ನು check ಮಾಡುವಾಗ ಹೀಗೆ ಅಲಾರಂ ಆಗುತ್ತಿತ್ತಂತೆ. ಇದು ತೋಳ ಬಂತು ತೋಳ ಕಥೆಯಾಗಿದೆ. ಏನೇ ಆದರೂ ಅನುಕಂಪ ಸೂಚಿಸುವಷ್ಟು ಬೇಗ ನಮ್ಮ ಸರ್ಕಾರವಾಗಲೀ , ಜನರಾಗಲೀ ಜಾಗೃತರಾಗುವುದಿಲ್ಲ. ವ್ಯವಸ್ಥೆಯಲ್ಲಿ ಸಾಕಷ್ಟು ತೂತುಗಳಿವೆ. ಸರಿಯಾದ ಭದ್ರತಾ ಕ್ರಮಗಳನ್ನು ಪರಿಶೀಲಿಸಿಕೊಂಡು, ಕಂಪನಿಗಳಲ್ಲಿ ಕೆಲಸ ಮಾಡುವುದು ಲೇಸು. ಸರ್ಕಾರವನ್ನು ನಂಬಿ ಕುಳಿತರೆ ಕೆಲಸ ಕೆಟ್ಟಂತಯೇ ಸರಿ..
ನಿಮ್ಮ ಕಾಳಜಿಗೆ ಅಭಿನಮ್ದನೆಗಳು ಮತ್ತು ಧನ್ಯವಾದ

sunaath said...

ಉತ್ತಮ ವಿಶ್ಲೇಷಣೆ. ನಮ್ಮವರು ಬುದ್ಧಿವಂತರಾದಾರೆ?

ವಿ.ರಾ.ಹೆ. said...

ಶಂಕರ್, ಈ ಹೆಲಿಕಾಪ್ಟರ್ ಬಳಕೆಯ practicality ಬಗ್ಗೆ ನನಗೆ ಪೂರ್ಣ ಒಪ್ಪಿಗೆ ಇಲ್ಲದಿದ್ದರೂ ಸಹ ಬರಹದ ಹಿಂದಿನ ಆಶಯವನ್ನು ಬೆಂಬಲಿಸುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಪರಿಸ್ಥಿತಿಗಳನ್ನು handle ಮಾಡುವುದರ ಬಗ್ಗೆ ಎಲ್ಲರಲ್ಲೂ (ವೈಯಕ್ತಿಕವಾಗಿ ಮತ್ತು ಸಂಬಂಧಿಸಿದವರಲ್ಲಿ) ಸರಿಯಾದ ತರಬೇತಿ, ಜಾಗೃತಿ ಅಗತ್ಯವಿದೆ.

ಶಂಕರ ಪ್ರಸಾದ said...

@ ರವಿ - ನಿಮ್ಮ ವಾದ ನೂರಕ್ಕೆ ನೂರು ನಿಜ. ನಮ್ಮಲ್ಲಿ ಕೇಂದ್ರೀಕೃತ ವ್ಯವಸ್ಥೆ ಇಲ್ಲದೆ ಇರುವುದೇ ಇದಕ್ಕೆ ಕಾರಣ. ಬೆಂಕಿ ಬಿದ್ದಾಗ ಬಾವಿ ತೋಡುವುದೇ ಆಗಿದೆ.
@ ಸುಮಕ್ಕ - ನಿಜ.. ಜನರಲ್ಲಿ ಸ್ವಾರ್ಥ ಮನೋಭಾವ, ಅಸಂತೃಪ್ತಿ, ಅಸಾಮಾಧಾನ ದಿನೇ ದಿನೇ ಹೆಚ್ಚುತ್ತಿದೆ. ಮುಂಚೆ ಒಂದು ಮನೆಯಲ್ಲಿ ಯಾವುದಾದರೂ ಸಾವು ಆದಲ್ಲಿ, ಅಕ್ಕ ಪಕ್ಕದ ಮನೆಯವರೆಲ್ಲಾ ಬಂದು ಸಾಂತ್ವಾನ ಹೇಳಿ, ಸೂತಕ ಕಳೆಯುವ ತನಕ ಸಹಾಯ ಮಾಡುತ್ತಿದ್ದರು. ಈಗ ಬರೀ ಮನೆ ಮುಂದೆ ಬಂದು, ಸ್ವಲ್ಪ ಲೊಚಗುಟ್ಟಿ ಹೋಗುತ್ತಾರೆ ಅಷ್ಟೇ.
@ ಭಟ್ರೇ - ಧನ್ಯವಾದಗಳು
@ ಮೌನಗೀತೆ - ಬರೀ ಹೆಲಿಕಾಪ್ಟರ್ ಅಲ್ಲ, ಜನರನ್ನು ಮಹಡಿ ಮೇಲೆ ಕಳುಹಿಸಿ, ರೋಪ್ ವೇ ಥರ ಮಾಡಿ, ಜನರನ್ನು ಕಾಪಾಡಬಹುದಿತ್ತು. ಆದರೆ ಅಲ್ಲಿ ಅಗ್ನಿಶಾಮಕ ಪರಿಕರಗಳೇ ಸರಿಯಾಗಿ ಇಲ್ಲವಾಗಿತ್ತು. ಇನ್ನು ಹಗ್ಗ ಹಾಗು ಇತರ ಪರಿಕರಗಳನ್ನು ನಿರೀಕ್ಷಿಸುವುದಕ್ಕೆ ಆಗೋದಿಲ್ಲ. ಜೊತೆಗೆ ಒಳಗೆ ಸಿಕ್ಕಿಬಿದ್ದಿದ್ದ ಜನರ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಸರಿಯಾದ ಸಮಯಕ್ಕೆ ಅವರುಗಳನ್ನು ಕಾಪಾದಿದ್ದಲ್ಲಿ, ಅವರು ಈ ರೀತಿ ತಾಳ್ಮೆ ಕಳೆದುಕೊಳ್ತಾ ಇರ್ಲಿಲ್ಲ ಎಂದು ನನ್ನ ಅಂಬೋಣ.
@ ಸುಬ್ರಹ್ಮಣ್ಯ ಭಟ್ರೇ - ನೀವು ಹೇಳೋದು ನಿಜ.. ಅಪಘಾತವಾದಾಗ ಅನುಕಂಪ ಸೂಚಿಸಿದರೆ ಸರ್ಕಾರದ ಕೆಲಸ ಮುಗಿಯುವುದಿಲ್ಲ. ಆದ್ರೆ ಇದು ನಮ್ಮ ಸರ್ಕಾರಕ್ಕೆ ಅರ್ಥವಾಗೋದಿಲ್ಲ
@ ಸುನಾಥ್ - ಧನ್ಯವಾದಗಳು
@ ವಿಕಾಸ್ (ವಿ.ರಾ.ಹೆ) - ಹೆಲಿಕಾಪ್ಟರಿನ ಬಳಕೆ Practical ಆಗಿತ್ತು ಅಂತಾ ಭಾವಿಸುತ್ತೇನೆ. ನನ್ನ ಬರಹದ ಹಿಂದಿನ ಆಶಯ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಿರುವೆಯಲ್ಲಾ, ಧನ್ಯವಾದಗಳು. ಮುಂಚೆ ಹೇಳಿದಂತೆ, ಸರಿಯಾದ ಪರಿಕರಗಳು ಇದ್ದಲ್ಲಿ, ರೋಪ್ ವೇ ಮಾಡಿಕೊಂಡು ಕೆಳಗೆ ಜಾರಿ ಬರಬಹುದಿತ್ತು. ಜೊತೆಗೆ ಕಟ್ಟಡದ ಒಳಗೆ ಒಂದು ಕೊಡಲಿ (Pick Axe) ಹಾಗು ಸುತ್ತಿಗೆ ಇಟ್ಟಿರಬೇಕು. ಟೀವಿಯಲ್ಲಿ ಕಂಡಂತೆ, ಗಾಜನ್ನು ಬರಿಗೈಯಲ್ಲಿ ಒಡೆಯಲು ಪ್ರಯತ್ನಿಸುತ್ತಿದ್ದರು. ತರಬೇತಿ ಅಗತ್ಯ.. ಆದರೆ ಅದಕ್ಕಿಂತ ಮುಖ್ಯವಾಗಿ ಬೇಕಾಗಿದ್ದದ್ದು "ಅರಿವು"
----
ನಿಮ್ಮವನು,
ಕಟ್ಟೆ ಶಂಕ್ರ

Hukunda said...

Shankra - You have given a good perspective. Definitely agree that we are losing the sensitivity to people around us and to the value of human life in general :-(

neenu heelida haage, ariveee guru!!

PRAVEEN ಮನದಾಳದಿಂದ said...

ಶಂಕ್ರಣ್ಣ, ನಿಮ್ಮ ಅನಿಸಿಕೆ ನಿಜ, ಆದರೆ ನಮ್ಮ ವ್ಯವಸ್ಥೆ ಹೇಳಲು ಸಾಧ್ಯವಿಲ್ಲದಷ್ಟು ಹದಗೆಟ್ಟಿದೆ. ಯಾರಿಗೆ ಏನಾದರೂ ನಮಗೇನು ಎಂಬ ತಾತ್ಸಾರ ಭಾವ ಇಂದಿನ ಎಲ್ಲರಲ್ಲೂ ತುಂಬಿದೆ. ಕೆಲಸದ ಸಮಯ ಮುಗಿದಿದೆ ಎಂದೋ, ಆ ವ್ಯಕ್ತಿ ರಜೆಯಲ್ಲಿರುವನೆಂಬ ಸಬೂಬುಗಳು ಎಲ್ಲಾ ಸರ್ಕಾರಿ ಕಛೇರಿಗಳಲ್ಲೂ ಕೇಳಿಬರುತ್ತವೆ.

La..Na.. said...

Bengalurinataha nagaradalli raste moolaka turtu sevegalu bekada sthalakke talupuvudu khandita sadhya illadantaha paristhiti srishti aagide so... there should be some alternate .... or else we cannot stop such accidents...

navu kelasa madi bere deshagalannu uddhara madta iddeve namma deshakke navu enu koduge kodta iddeve annodanna swalpa yochane madbeku....

We need to implement the technology and take necessary actions to prevent such mishaps