Sunday, April 17, 2011

ಆಟೋ ಅಣಿಮುತ್ತುಗಳು - ೧೦೧ - ದೂರವಿದ್ದರೆ ನೋಡು

ಸೋಮಾರಿ ಕಟ್ಟೆಯ ನೂರೊಂದನೆಯ ಅಣಿಮುತ್ತು. ಇವತ್ತೂ ಕೂಡಾ ಖುಷಿಯಾಗಿದ್ದೀನಿ :)

ಮೊನ್ನೆ ಗುರುವಾರ ಆಫೀಸಿಗೆ ರಜೆ ಇದ್ದ ಕಾರಣ ನಾನು, ನನ್ನಾಕೆ ಹೊರಗೆ ಹೋಗಿದ್ವಿ. ಆರ್.ಟಿ ನಗರದ ಟಿ.ವಿ ಟವರ್ ಬಳಿ ಕಂಡ ಆಟೋ ಇದು. ಜಯಮಹಲ್ ಎಕ್ಸ್ಟೆಂಷನ್ ಪೋಲಿಸ್ ಸ್ಟೇಷನ್ನಿಂದ ಫಾಲೋ ಮಾಡಲು ಶುರು ಮಾಡಿ ಕೊನೆಗೂ ಟಿ.ವಿ ಟವರಿನ ಬಳಿ ಸಿಗ್ನಲ್ಲಲ್ಲಿ ನಿಂತಾಗ ಕ್ಲಿಕ್ಕಿಸಿದ್ದು.


ದೂರವಿದ್ದರೆ ನೋಡು..
ಹತ್ತಿರ ಬಂದರೆ ಮಾತಾನಾಡಿಸು,
ಇಷ್ಟವಿದ್ದರೆ ಪ್ರೀತಿಸು,
ಇಲ್ಲದಿದ್ದರೆ ಕ್ಷಮಿಸು
-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, April 11, 2011

ಆಟೋ ಅಣಿಮುತ್ತುಗಳು - ೧೦೦ - ಕನ್ನಡಾನ ಬೈಬ್ಯಾಡ

ಸೋಮಾರಿ ಕಟ್ಟೆಯ ನೂರನೆಯ ಆಟೋ ಅಣಿಮುತ್ತು ನಿಮ್ಮ ಮುಂದೆ ಇಡ್ತಾ ಇದ್ದೀನಿ. ನೂರನೆಯ ಅಣಿಮುತ್ತು ಬ್ಲಾಗಿನಲ್ಲಿ ಹಾಕಿದ ಮೇಲೆ "ಆಟೋ ಅಣಿಮುತ್ತುಗಳು" ಅನ್ನೋ ಪುಸ್ತಕ ಹೊರತರಬೇಕೆಂಬ ಆಸೆ ಇದೆ. ಇದಕ್ಕೆ ನಿಮ್ಮ ಅನಿಸಿಕೆ ?

ಕಟ್ಟೆ ಬಳಗದ ಸದಸ್ಯರೆ, ನಿಮ್ಮ ಪ್ರೀತಿ ಹಾಗು ಪ್ರೋತ್ಸಾಹ ಹೀಗೆಯೇ ಇರಲಿ.

ಕಳೆದ ಭಾನುವಾರ ಹೊರಗೆ ಹೊರಟಿದ್ದೆ. ಇಂದಿರಾನಗರದ ಬಿ.ಡಿ.ಎ ಕಾಂಪ್ಲೆಕ್ಸ್ ಬಳಿ ಕಂಡ ಆಟೋ ಇದು. 1994 ರಲ್ಲಿ ತೆರೆಕಂಡಿದ್ದ ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್ ಅಭಿನಯದ "ಕರುಳಿನ ಕೂಗು" ಚಿತ್ರದ ಹಾಡು ಇದು. ಕನ್ನಡಾನ ಬೈಬ್ಯಾಡ ಎಂದು ಹೇಳುತ್ತಾ ಈ ಅಣ್ಣ, ಅಣಿಮುತ್ತನ್ನು ಬರೆಸಿರುವ ಈ ಪರಿ ನೋಡಿ, ಕನ್ನಡಾನ ಸಾಯಿಸ ಬ್ಯಾಡ ಎಂದು ಹೇಳೋಕ್ಕೆ ಹೊರಟೆ. ಮಿಷ್ಟೇಕ್ ಆದರೂ ಪರವಾಗಿಲ್ಲ, ಒಳ್ಳೆ ಸಂದೇಶ ಕೊಡ್ತಾ ಇದಾನೆ ಈ ಅಣ್ಣ ಎಂದುಕೊಂಡು ಸುಮ್ಮನಾದೆ.



ನನ್ನಂದ್ರು ಪರವಗಿಲ್ಲ

ನನ್ನ ಕೊಂದ್ರು ಚಿಂತೆಯಿಲ್ಲ

ಕನ್ನಡನ ಬೈಬ್ಯಾಡ ಕಟ್ಕೊಂಡ

ಹೆಂಡತಿನ ಬಿಡಬ್ಯಾಡ
------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, April 5, 2011

ಆಟೋ ಅಣಿಮುತ್ತುಗಳು - ೯೯ - ದುಡ್ಡೇ ದೊಡ್ಡಪ್ಪ ಅಲ್ಲ

ಕಳೆದ ವಾರ ನನ್ನಾಕೆಯ ಜೊತೆ ಎಂ.ಜಿ. ರಸ್ತೆಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ, ಹಲಸೂರಿನ ಲಿಡೋ ಮಾಲ್ ಎದುರು ಕಂದ ಆಟೋ ಇದು. ಕಂಡ ಕೂಡಲೇ ಬೈಕನ್ನು ಸೈಡಿಗೆ ಹಾಕಿದೆ, ತಕ್ಷಣ ನನ್ನಾಕೆ "ಗೊತ್ತಾಯ್ತು, ಅಷ್ಟೊಂದು ಎಕ್ಸೈಟ್ ಆಗೋದು ಬೇಡಾ, ಆ ಆಟೋ ಇಲ್ಲೇ ನಿಲ್ತಾ ಇದೆ, ಆರಾಮಾಗಿ ಫೋಟೋ ತೆಗೀಬೋದು" ಎಂದಳು. ನನ್ನ ಈ ಹುಚ್ಚನ್ನು ಸರಿಯಾಗಿ ಅರ್ಥ ಮಾಡ್ಕೊಂಡು ಒಪ್ಕೊಂಡಿದಾಳೆ ಅಂದ್ಕೊಂಡು ನಗುತ್ತಾ ಫೋಟೋ ತೆಕ್ಕೊಂಡೆ.

ದುಡ್ಡಿನ ಹಿಂದೆ ಹೋಗಿ ಮನುಷ್ಯತ್ವ ಮರೆವ ಜನರಿಗೆ ಈ ಆಟೋ ಅಣ್ಣ ಹೇಳೋ ಪಾಠ ಅರ್ಥ ಆಗಲಿ.

ದುಡ್ಡೇ ದೊಡ್ಡಪ್ಪ ಅಲ್ಲ ಮನುಷ್ಯತ್ವ ಅವರಪ್ಪ
---------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, March 29, 2011

ಆಟೋ ಅಣಿಮುತ್ತುಗಳು - ೯೮ - ನಾನು ಅವನಲ್ಲ

2009ರ ಆಗಸ್ಟ್ ತಿಂಗಳಲ್ಲಿ ಮಿತ್ರ ಗೌತಮ್ ಕಳಿಸಿದ್ದ ಚಿತ್ರ ಇದು. ರಾಮಮೂರ್ತಿನಗರದ ಮೇಲ್ಸೇತುವೆ ಬಳಿ ಕಂಡಿದ್ದಂತೆ.
ಈ ಚಿತ್ರ, ಇಷ್ಟು ದಿನ ನನ್ನ ಈ-ಮೇಲಿನ ಯಾವುದೋ ಮೂಲೆಯಲ್ಲಿ ಕುಳಿತಿತ್ತು. ಇವತ್ತು ನೋಡೋವಾಗ ಕಣ್ಣಿಗೆ ಕಂಡಿದ್ದು, ಹಾಗೆ ಹಾಕ್ತಾ ಇದೀನಿ. ಗೌತಮ್, ಥ್ಯಾಂಕ್ಸ್ ಕಣೋ.

ಈ ಆಟೋ ಅಣ್ಣ ಕೂಡಾ ಉಪೇಂದ್ರಾಭಿಮಾನಿ. ನಾನು ಅವನಲ್ಲ ಎನ್ನುತ್ತಲೇ ಪ್ರೀತಿ ಮಾಡಿದ್ರೆ ಹೆಂಗೆ, ಕೈ ಕೊಟ್ರೆ ಹೆಂಗೆ ಅನ್ನೋದನ್ನ ಹೇಳಿದ್ದಾನೆ. ನೋಡಿ.


ನಾನು ಅವನಲ್ಲ ???

ಲವ್ ಮಾಡಿದರೆ ಲವ್ ಸ್ಟೋರಿ
ಕೈ ಕೊಟ್ಟರೆ ದೇವದಾಸು ಸ್ಟೋರಿ
-----------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, March 9, 2011

ಆಟೋ ಅಣಿಮುತ್ತುಗಳು - ೯೭ - ಮೂರು ಚಕ್ರ ಜೀವನಚಕ್ರ

ಮೊನ್ನೆ ಸೋಮವಾರ ಕಸ್ತೂರಬಾ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಕಂಡ ಆಟೋ ಇದು.

ಆರಾಮಾಗಿ ಗುಡುಗುಡುಗುಡು ಎಂದು ಹೋಗುತ್ತಿದ್ದ ಈ ಆಟೋವನ್ನು ಅದರ ವೇಗದಲ್ಲೇ ಹಿಂಬಾಲಿಸಿ, ಯು.ಬಿ ಸಿಟಿ ಸಿಗ್ನಲ್ಲಿನ್ನಲ್ಲಿ ನಿಂತಾಗ ಲಕ್ಕನೆ ಮೊಬೈಲು ಹೊರತೆಗೆದು ಛಕ್ಕನೆ ಕ್ಲಿಕ್ಕಿಸಿದೆ.

ಬಹಳ ದಿನಗಳಾದ ಮೇಲೆ ಮತ್ತೊಂದು ಆಟೋ ಅಣಿಮುತ್ತನ್ನು ಹಾಕ್ತಾ ಇದೀನಿ, ಪರಾಂಬರಿಸಿ.


ಇದಕ್ಕಿರುವುದು ಮೂರು ಚಕ್ರ
ಇದೇ ನನ್ನ ಜೀವನ ಚಕ್ರ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, March 8, 2011

ಹೇಳಲೇ ಬೇಕು !!

ಆಕೆ : ನನಗೆ ಹೇಳು

ಆತ : ನಾನಾಗ್ಲೇ ಹೇಳಾಯ್ತು

ಆಕೆ : ಇದು ಬೇರೆ

ಆತ : ನಂಗೆ ಇನ್ನೇನು ಗೊತ್ತಿಲ್ಲಾ

ಆಕೆ : ನಿಂಗೆ ಗೊತ್ತಿರಲೇ ಬೇಕು

ಆತ : ಇಲ್ಲ, ನಂಗೆ ಗೊತ್ತಿಲ್ಲ.. ಸುಮ್ನೆ ನನ್ನ ಹೀಗೆ ಕೇಳಬೇಡ

ಆಕೆ : ನಿನಗಲ್ಲದೆ ಇನ್ಯಾರಿಗೆ ಗೊತ್ತು ?

ಆತ : ಪ್ಲೀಸ್.. ನಂಗೆ ಗೊತ್ತಿದ್ದೆಲ್ಲಾ ಹೇಳಾಯ್ತು... ಇನ್ನು ನನ್ನ ಕೈಲಿ ಆಗಲ್ಲ, ನಂಗೆ ಹೋಗೋಕ್ಕೆ ಬಿಡು

ಆಕೆ : ಪ್ಲೀಸ್, ಪ್ಲೀಸ್.. ಇನ್ನೊಂದು ಡ್ರೆಸ್ ಟ್ರೈ ಮಾಡ್ತೀನಿ, ಹೆಂಗಿದೆ ಅಂತ ಹೇಳು !!
(ಬಟ್ಟೆ ಅಂಗಡಿಯ ಟ್ರಯಲ್ ರೂಮಿನ ಬಳಿ ಆಕೆ ಮತ್ತೆ ಆತನ ನಡುವೆ ನಡೆದ ಸಂಭಾಷಣೆ )
-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, January 21, 2011

ಆಟೋ ಅಣಿಮುತ್ತುಗಳು - ೯೬ - ದಿಲ್ದಾರ್ ಸುಧಾಕರ

ಹಳೇ ಏರ್ಪೋರ್ಟ್ ರಸ್ತೆಯಲ್ಲಿ ಇರುವ ಕಮಾಂಡ್ ಆಸ್ಪತ್ರೆ ಬಳಿ ಬರುತ್ತಿದಾಗ ಕಂಡ ಆಟೋ ಇದು.
ದಿಲ್ದಾರ್ ಸುಧಾಕರ ಈ ಅಣ್ಣ. ತ್ರೇತಾಯುಗದ ರಾಮನ ಕೈಲಿ ಬಿಲ್ಲು ಇದ್ರೆ, ಈ ಅಣ್ಣನ ಎದೆಯಲ್ಲಿ ದಿಲ್ಲು ಇದ್ಯಂತೆ.

ಜೊತೆಗೆ ಈ ದಿಲ್ದಾರ್ ಸುಧಾಕರ, ಮಂಡ್ಯದ ಗಂಡು "ಅಂಬರೀಷಣ್ಣ"ನ ಉತ್ಕಟಾಭಿಮಾನಿ.



ರಾಮನ ಕೈಯಲ್ಲಿ ಬಿಲ್ಲು
ಸುಧಾಕರನ ಎದೆಯಲ್ಲಿ ದಿಲ್ಲು

ಮಂಡ್ಯದ ಮುತ್ತು
ಇಂಡಿಯಾಕ್ಕೆ ಗೊತ್ತು
ಅಂಬರೀಷಣ್ಣನ ನಿಯತ್ತು
----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, January 9, 2011

ಆಟೋ ಅಣಿಮುತ್ತುಗಳು - ೯೫ - ದುಡಿಯುವವನ ಕಂಡರೆ

ಬಹಳ ದಿನಗಳ ಹಿಂದೆ ತೆಗೆದ ಚಿತ್ರ ಇದು.
ಎಂಥಾ ಚಿನ್ನದಂಥಾ ಮಾತು ಹೇಳಿದಾನೆ ಈ ಆಟೋ ಅಣ್ಣ, ಅಲ್ವೇ ?

------------------------------------------------------
ನಿಮ್ಮವನು,

ಕಟ್ಟೆ ಶಂಕ್ರ

Friday, October 22, 2010

ಶಾಲೆಯ ಮ್ಯಾಜಿಕ್ ಷೋನಲ್ಲಿ ಆಭಾಸ

ಇದು ನಾನು ಒಂಭತ್ತನೇ ಇಯತ್ತೆಯಲ್ಲಿ ಓದುವಾಗ ನಡೆದ ಘಟನೆ. ಮೈಸೂರಿನ ಕುವೆಂಪುನಗರದ ಕಾವೇರಿ ಶಾಲೆಯಲ್ಲಿ ನಾನು ನನ್ನ ಹೈಸ್ಕೂಲು ಮುಗಿಸಿದ್ದು. ದಿನಾಂಕ, ವಾರ, ತಿಂಗಳು ಏನೂ ಜ್ಞಾಪಕ ಇಲ್ಲ, ಆದರೂ ಈ ಘಟನೆ ನನ್ನ ತಲೆಯಲ್ಲಿ ರಿಜಿಸ್ಟರ್ ಆಗಿಹೋಗಿದೆ. ನಿನ್ನೆ ಯಾವುದೋ ಟೀವಿ ಚಾನೆಲ್ಲಿನಲ್ಲಿ ಒಂದು ಮ್ಯಾಜಿಕ್ ಷೋ ಬರೋವಾಗ ಈ ಘಟನೆ ಜ್ಞಾಪಕಕ್ಕೆ ಬಂತು. ಪಕ್ಕದಲ್ಲೇ ಇದ್ದ ನನ್ನಾಕೆಗೆ ಹೇಳಿದೆ. ಸರಿಯಾಗಿ ನಕ್ಕಿದಳು. ಹಾಗೆಯೇ ನಿಮಗೆ ಇದನ್ನು ಹೇಳೋಣಾ ಎಂದು ಬ್ಲಾಗಿನಲ್ಲಿ ಹಾಕ್ತಾ ಇದ್ದೀನಿ. ಪರಾಂಬರಿಸಿ.

ಒಂದು ದಿನ ಶಾಲೆಯಲ್ಲಿ ಎಲ್ಲಾ ತರಗತಿಗಳಿಗೂ ಸೂಚನೆ ಕಳಿಸಲಾಗಿತ್ತು. "ನಾಳೆ ಮದ್ಯಾಹ್ನ ಶಾಲೆಯಲ್ಲಿ ಒಂದು ಮ್ಯಾಜಿಕ್ ಷೋ ನಡೆಯಲಿದೆ. ಎಲ್ಲರೂ ಇರತಕ್ಕದ್ದು". ಸರಿ, ಮಾರನೆಯ ದಿನ ಕ್ಲಾಸಿನಲ್ಲಿ ಕೂತಿದ್ದೆ. ನನ್ನ ಜಾಗ ಇದ್ದದ್ದು ಕಿಟಕಿಯ ಪಕ್ಕ. ಬೆಳಿಗ್ಗೆ ಸುಮಾರು ಹತ್ತು ಘಂಟೆಗೆ ಒಬ್ಬಾತ ನನ್ನ ಕಿಟಕಿಯ ಪಕ್ಕದಲ್ಲಿ ಹಾದು ಹೋಗಿ, ಶಾಲೆಯ ಆಫೀಸಿನ ಒಳಗೆ ಹೋದ. ನಾವು ಓದುತ್ತಿದಾಗ, ಶಾಲೆಯ ಮೊದಲ ಮಹಡಿಯಲ್ಲಿ ತರಗತಿಗಳನ್ನು ಕಟ್ಟುತ್ತಿದ್ದರು. ಶಾಲೆಯ ಆಫೀಸಿನ ಪಕ್ಕದಲ್ಲಿ ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳಿದ್ದವು. ಬಂದಾತ, ಆಫೀಸಿನಲ್ಲಿ ಕೆಲಸ ಮುಗಿಸಿಕೊಂಡು, ಮೆಟ್ಟಿಲನ್ನು ಹತ್ತಿ ಮೇಲಕ್ಕೆ ಹೋದ. ಮತ್ತೆ ಎರಡು ನಿಮಿಷಗಳಲ್ಲೇ ವಾಪಸ್ಸು ಕೆಳಕ್ಕೆ ಬಂದು ಹಾಗೆ ಹೊರಗೆ ಹೋದ. ಮದ್ಯಾಹ್ನ ಊಟ ಆಯ್ತು, ಎರಡು ಪೀರಿಯಡ್ ಕೂಡಾ ಮುಗಿದವು. ಮೂರೂವರೆಗೆ ಮ್ಯಾಜಿಕ್ ಷೋ ಶುರುವಾಯ್ತು. ಆ ಜಾದೂಗಾರ ಯಾರೆಂದು ನೋಡಿದರೆ, ಬೆಳಿಗ್ಗೆ ಆಫೀಸಿಗೆ ಬಂದವನೇ !!

ಅದೂ ಇದೂ ಅಂತಾ ಜಾದೂ ಆಟ ಶುರು ಮಾಡಿದ. ಸುಮಾರು ಮುಕ್ಕಾಲು ಘಂಟೆ ಹೀಗೆ ಕಳೆಯಿತು. ಇನ್ನೊಂದು ಆಟ ಶುರು ಮಾಡ್ತೀನಿ ಎಂದು ಆಟ ಒಂದು ಕಡ್ಡಿಯನ್ನು (ಒಂದಡಿ ಉದ್ದದ ಕಪ್ಪು ಕಡ್ಡಿ, ಎರಡೂ ಕೊನೆಯಲಿ ಬಿಳಿ ಬಣ್ಣ) ಒಂದು ಡಬ್ಬಿಯಲ್ಲಿ ಹಾಕಿ ಗಿಲಿಗಿಲಿ ಮಂತ್ರ ಹೇಳಿ, ಅದರ ಮೇಲೆ ಕೈಯಾಡಿಸಿ, ಡಬ್ಬಿ ಮೇಲೆ ಮುಷ್ಠಿ ಕಟ್ಟಿ ಅದನ್ನು ಮೇಲೆ ಎಸೆಯೋ ಹಾಗೆ ಮಾಡಿ, ಛೂ ಎಂದು ಹೇಳಿ ಡಬ್ಬಿ ತೆಗೆದ, ಕಡ್ಡಿ ಮಾಯ !! ನಂತರ ಆಟ "ಈ ಕಡ್ಡಿ ಡಬ್ಬಿಯಿಂದ ಮಾಯವಾಗಿ ಮಹಡಿ ಮೇಲೆ ಹೋಗಿದೆ, ಯಾರು ಇದನ್ನು ಅಲ್ಲಿಂದ ತರುತ್ತೀರ?" ಎಂದು ಕೇಳಿದ. ನಾನು ತಕ್ಷಣ ಮೇಲಕ್ಕೆದ್ದು "ನಾನು ತರ್ತೀನಿ" ಎಂದೆ. ಆತ "ಸರಿ, ಹಾಗೆ ಮೇಲಕ್ಕೆ ಹೋಗಿ ನನ್ನ ನೇರದಲ್ಲಿ ಬಿದ್ದಿರುತ್ತೆ, ತೆಗೆದುಕೊಂಡು ಬಾ" ಎಂದ.

ತಕ್ಷಣ ನಾನು "ಬಿಡಿ ಸಾರ್, ನಂಗೆ ಗೊತ್ತು ಎಲ್ಲಿ ಅಂತಾ.. ಬೆಳಿಗ್ಗೆ ಬಂದಾಗ ನೀವು ಮೆಟ್ಟಿಲು ಹತ್ತ್ಕೊಂಡು ಹೋಗಿ ಇಟ್ಟು ಬಂದ್ರಲ್ಲ, ಅದೇ ತಾನೇ" ಎಂದು ಜೋರಾಗಿ ಕೇಳಿದೆ.

ತಕ್ಷಣ ಎಲ್ಲಾ ಹುಡುಗ ಹುಡುಗೀರು, ಶಾಲೆಯ ಟೀಚರುಗಳು ಜೋರಾಗಿ ನಗೊಕ್ಕೆ ಶುರು ಮಾಡಿರು. ಆ ಜಾದೂಗಾರ ಒಂದ್ನಿಮಿಷ ತಬ್ಬಿಬ್ಬು. ನಾನು "ಸರಿ ಸಾರ್, ಬಿಡಿ ತರ್ತೀನಿ" ಎಂದವನೇ, ಹೋಗಿ ಅದನ್ನು ತಂದು ಆತನ ಕೈಗೆ ಕೊಟ್ಟೆ. ಅವತ್ತು ಅವನ ಮುಖದಲ್ಲಿ ಯಾವ ಲೆವೆಲ್ಲಿಗೆ ಕೋಪ ಇತ್ತು ಅಂದ್ರೆ, ಆತನ ಕಣ್ಣುಗಳಲ್ಲಿ ಏನಾದರೂ ಶಕ್ತಿ ಇದ್ದಿದ್ರೆ, ನಾನು ಗ್ಯಾರಂಟಿಯಾಗಿ ಸುಟ್ಟು ಬೂದಿ ಆಗ್ತಾ ಇದ್ದೆ ಅನ್ಸುತ್ತೆ.

ಮ್ಯಾಜಿಕ್ ಷೋ ಮುಗಿದ ಮೇಲೆ ನಮ್ಮ PT ಮೇಷ್ಟ್ರು "ಲೋ ಶಂಕರ, ಯಾಕೋ ??? ಸುಮ್ನಿರೋಕ್ಕೆ ಆಗಲ್ವ ನಿಂಗೆ " ಅಂತಾ ಕೆಳುದ್ರು. ಈ ವಿಚಾರ ಇವತ್ತಿಗೂ ಕೂಡ ನಾನು ನಮ್ಮ ಶಾಲೆಗೆ ಹೋದಾಗ ಜ್ಞಾಪಕ ಮಾಡ್ಕೊತಾರೆ ಮೇಡಮ್ಮುಗಳು.

ಹೆಂಗೆ ?
--------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, October 14, 2010

ಆಟೋ ಅಣಿಮುತ್ತುಗಳು - ೯೪ - Kiss is the Key

ಕೆಲವು ದಿನಗಳ ಹಿಂದೆ, ಆಫೀಸಿಂದ ಮನೆಗೆ ಹೋಗುವಾಗ ಕೇಂಬ್ರಿಡ್ಜ್ ಲೇಔಟಿನಲ್ಲಿ ಕಂಡ ಆಟೋ ಇದು.
ಪ್ರೀತಿಯನ್ನು ಬೀಗ ಹಾಗು ಚುಂಬನವನ್ನು ಅದರ ಕೈಯೆಂದು ಹೋಲಿಸಿದ್ದಾನೆ ಈ ಅಣ್ಣ.
ಎಂಥಾ ಸೃಜನಶೀಲತೆ !!!



KISS IS THE KEY
LOVE IS THE LOCK

ದಂತಭಗ್ನವಾಗದಿದ್ದರೆ ಸಾಕು
--------------------------------------------------------
ನಿಮ್ಮವನು,.
ಕಟ್ಟೆ ಶಂಕ್ರ