Friday, October 22, 2010

ಶಾಲೆಯ ಮ್ಯಾಜಿಕ್ ಷೋನಲ್ಲಿ ಆಭಾಸ

ಇದು ನಾನು ಒಂಭತ್ತನೇ ಇಯತ್ತೆಯಲ್ಲಿ ಓದುವಾಗ ನಡೆದ ಘಟನೆ. ಮೈಸೂರಿನ ಕುವೆಂಪುನಗರದ ಕಾವೇರಿ ಶಾಲೆಯಲ್ಲಿ ನಾನು ನನ್ನ ಹೈಸ್ಕೂಲು ಮುಗಿಸಿದ್ದು. ದಿನಾಂಕ, ವಾರ, ತಿಂಗಳು ಏನೂ ಜ್ಞಾಪಕ ಇಲ್ಲ, ಆದರೂ ಈ ಘಟನೆ ನನ್ನ ತಲೆಯಲ್ಲಿ ರಿಜಿಸ್ಟರ್ ಆಗಿಹೋಗಿದೆ. ನಿನ್ನೆ ಯಾವುದೋ ಟೀವಿ ಚಾನೆಲ್ಲಿನಲ್ಲಿ ಒಂದು ಮ್ಯಾಜಿಕ್ ಷೋ ಬರೋವಾಗ ಈ ಘಟನೆ ಜ್ಞಾಪಕಕ್ಕೆ ಬಂತು. ಪಕ್ಕದಲ್ಲೇ ಇದ್ದ ನನ್ನಾಕೆಗೆ ಹೇಳಿದೆ. ಸರಿಯಾಗಿ ನಕ್ಕಿದಳು. ಹಾಗೆಯೇ ನಿಮಗೆ ಇದನ್ನು ಹೇಳೋಣಾ ಎಂದು ಬ್ಲಾಗಿನಲ್ಲಿ ಹಾಕ್ತಾ ಇದ್ದೀನಿ. ಪರಾಂಬರಿಸಿ.

ಒಂದು ದಿನ ಶಾಲೆಯಲ್ಲಿ ಎಲ್ಲಾ ತರಗತಿಗಳಿಗೂ ಸೂಚನೆ ಕಳಿಸಲಾಗಿತ್ತು. "ನಾಳೆ ಮದ್ಯಾಹ್ನ ಶಾಲೆಯಲ್ಲಿ ಒಂದು ಮ್ಯಾಜಿಕ್ ಷೋ ನಡೆಯಲಿದೆ. ಎಲ್ಲರೂ ಇರತಕ್ಕದ್ದು". ಸರಿ, ಮಾರನೆಯ ದಿನ ಕ್ಲಾಸಿನಲ್ಲಿ ಕೂತಿದ್ದೆ. ನನ್ನ ಜಾಗ ಇದ್ದದ್ದು ಕಿಟಕಿಯ ಪಕ್ಕ. ಬೆಳಿಗ್ಗೆ ಸುಮಾರು ಹತ್ತು ಘಂಟೆಗೆ ಒಬ್ಬಾತ ನನ್ನ ಕಿಟಕಿಯ ಪಕ್ಕದಲ್ಲಿ ಹಾದು ಹೋಗಿ, ಶಾಲೆಯ ಆಫೀಸಿನ ಒಳಗೆ ಹೋದ. ನಾವು ಓದುತ್ತಿದಾಗ, ಶಾಲೆಯ ಮೊದಲ ಮಹಡಿಯಲ್ಲಿ ತರಗತಿಗಳನ್ನು ಕಟ್ಟುತ್ತಿದ್ದರು. ಶಾಲೆಯ ಆಫೀಸಿನ ಪಕ್ಕದಲ್ಲಿ ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳಿದ್ದವು. ಬಂದಾತ, ಆಫೀಸಿನಲ್ಲಿ ಕೆಲಸ ಮುಗಿಸಿಕೊಂಡು, ಮೆಟ್ಟಿಲನ್ನು ಹತ್ತಿ ಮೇಲಕ್ಕೆ ಹೋದ. ಮತ್ತೆ ಎರಡು ನಿಮಿಷಗಳಲ್ಲೇ ವಾಪಸ್ಸು ಕೆಳಕ್ಕೆ ಬಂದು ಹಾಗೆ ಹೊರಗೆ ಹೋದ. ಮದ್ಯಾಹ್ನ ಊಟ ಆಯ್ತು, ಎರಡು ಪೀರಿಯಡ್ ಕೂಡಾ ಮುಗಿದವು. ಮೂರೂವರೆಗೆ ಮ್ಯಾಜಿಕ್ ಷೋ ಶುರುವಾಯ್ತು. ಆ ಜಾದೂಗಾರ ಯಾರೆಂದು ನೋಡಿದರೆ, ಬೆಳಿಗ್ಗೆ ಆಫೀಸಿಗೆ ಬಂದವನೇ !!

ಅದೂ ಇದೂ ಅಂತಾ ಜಾದೂ ಆಟ ಶುರು ಮಾಡಿದ. ಸುಮಾರು ಮುಕ್ಕಾಲು ಘಂಟೆ ಹೀಗೆ ಕಳೆಯಿತು. ಇನ್ನೊಂದು ಆಟ ಶುರು ಮಾಡ್ತೀನಿ ಎಂದು ಆಟ ಒಂದು ಕಡ್ಡಿಯನ್ನು (ಒಂದಡಿ ಉದ್ದದ ಕಪ್ಪು ಕಡ್ಡಿ, ಎರಡೂ ಕೊನೆಯಲಿ ಬಿಳಿ ಬಣ್ಣ) ಒಂದು ಡಬ್ಬಿಯಲ್ಲಿ ಹಾಕಿ ಗಿಲಿಗಿಲಿ ಮಂತ್ರ ಹೇಳಿ, ಅದರ ಮೇಲೆ ಕೈಯಾಡಿಸಿ, ಡಬ್ಬಿ ಮೇಲೆ ಮುಷ್ಠಿ ಕಟ್ಟಿ ಅದನ್ನು ಮೇಲೆ ಎಸೆಯೋ ಹಾಗೆ ಮಾಡಿ, ಛೂ ಎಂದು ಹೇಳಿ ಡಬ್ಬಿ ತೆಗೆದ, ಕಡ್ಡಿ ಮಾಯ !! ನಂತರ ಆಟ "ಈ ಕಡ್ಡಿ ಡಬ್ಬಿಯಿಂದ ಮಾಯವಾಗಿ ಮಹಡಿ ಮೇಲೆ ಹೋಗಿದೆ, ಯಾರು ಇದನ್ನು ಅಲ್ಲಿಂದ ತರುತ್ತೀರ?" ಎಂದು ಕೇಳಿದ. ನಾನು ತಕ್ಷಣ ಮೇಲಕ್ಕೆದ್ದು "ನಾನು ತರ್ತೀನಿ" ಎಂದೆ. ಆತ "ಸರಿ, ಹಾಗೆ ಮೇಲಕ್ಕೆ ಹೋಗಿ ನನ್ನ ನೇರದಲ್ಲಿ ಬಿದ್ದಿರುತ್ತೆ, ತೆಗೆದುಕೊಂಡು ಬಾ" ಎಂದ.

ತಕ್ಷಣ ನಾನು "ಬಿಡಿ ಸಾರ್, ನಂಗೆ ಗೊತ್ತು ಎಲ್ಲಿ ಅಂತಾ.. ಬೆಳಿಗ್ಗೆ ಬಂದಾಗ ನೀವು ಮೆಟ್ಟಿಲು ಹತ್ತ್ಕೊಂಡು ಹೋಗಿ ಇಟ್ಟು ಬಂದ್ರಲ್ಲ, ಅದೇ ತಾನೇ" ಎಂದು ಜೋರಾಗಿ ಕೇಳಿದೆ.

ತಕ್ಷಣ ಎಲ್ಲಾ ಹುಡುಗ ಹುಡುಗೀರು, ಶಾಲೆಯ ಟೀಚರುಗಳು ಜೋರಾಗಿ ನಗೊಕ್ಕೆ ಶುರು ಮಾಡಿರು. ಆ ಜಾದೂಗಾರ ಒಂದ್ನಿಮಿಷ ತಬ್ಬಿಬ್ಬು. ನಾನು "ಸರಿ ಸಾರ್, ಬಿಡಿ ತರ್ತೀನಿ" ಎಂದವನೇ, ಹೋಗಿ ಅದನ್ನು ತಂದು ಆತನ ಕೈಗೆ ಕೊಟ್ಟೆ. ಅವತ್ತು ಅವನ ಮುಖದಲ್ಲಿ ಯಾವ ಲೆವೆಲ್ಲಿಗೆ ಕೋಪ ಇತ್ತು ಅಂದ್ರೆ, ಆತನ ಕಣ್ಣುಗಳಲ್ಲಿ ಏನಾದರೂ ಶಕ್ತಿ ಇದ್ದಿದ್ರೆ, ನಾನು ಗ್ಯಾರಂಟಿಯಾಗಿ ಸುಟ್ಟು ಬೂದಿ ಆಗ್ತಾ ಇದ್ದೆ ಅನ್ಸುತ್ತೆ.

ಮ್ಯಾಜಿಕ್ ಷೋ ಮುಗಿದ ಮೇಲೆ ನಮ್ಮ PT ಮೇಷ್ಟ್ರು "ಲೋ ಶಂಕರ, ಯಾಕೋ ??? ಸುಮ್ನಿರೋಕ್ಕೆ ಆಗಲ್ವ ನಿಂಗೆ " ಅಂತಾ ಕೆಳುದ್ರು. ಈ ವಿಚಾರ ಇವತ್ತಿಗೂ ಕೂಡ ನಾನು ನಮ್ಮ ಶಾಲೆಗೆ ಹೋದಾಗ ಜ್ಞಾಪಕ ಮಾಡ್ಕೊತಾರೆ ಮೇಡಮ್ಮುಗಳು.

ಹೆಂಗೆ ?
--------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

10 comments:

Sushrutha Dodderi said...

ಹೆಹೆ.. ನನ್ ಫ್ರೆಂಡ್ ಒಬ್ಬ ಮೆಜಿಶಿಯನ್ ಇದಾನೆ.. ಅವ್ನು ಮಕ್ಳಿಗೆ ಮಾತ್ರ ತೋರ್ಸೋದು ಮ್ಯಾಜಿಕ್ಸು.. ದೊಡ್ಡೋರು ಅಲ್ಲೇನಾದ್ರೂ ಇದ್ರೆ 'ನಿಮ್ಗೆ ಗೊತ್ತಾದ್ರೆ ಹೇಳ್ಬೇಡಿ' ಅಂತ ಮುಂಚೇನೇ ಹೇಳ್ಕೊಂಡಿರ್ತಾನೆ.. :D

ವಿ.ರಾ.ಹೆ. said...

:) :) ಆವಾಗ್ಲಿಂದನೂ ಹಿಂಗೇನಾ ನೀವು!

Dr.D.T.Krishna Murthy. said...

ಮ್ಯಾಜಿಕ್ ಶೋನಲ್ಲಿ ನಿಮ್ಮ ಮ್ಯಾಜಿಕ್ ಚೆನ್ನಾಗಿತ್ತು.ಪಾಪ ಆ ಮ್ಯಾಜಿಶಿಯನ್ ಅವಸ್ಥೆ ನೆನಸಿಕೊಂಡರೆ ನಗು ಬರುತ್ತೆ.ಎಂಥಾ ಆಭಾಸ!ಅವನೂ ಇದನ್ನು ಮರೆತಿರುವುದಿಲ್ಲ ಬಿಡಿ.

sunaath said...

Magic by the magic-buster! ನೀವು ಸತ್ಯ ಸಂಶೋಧನ ಸಮಿತಿಯಲ್ಲಿ ಇರಬೇಕಾಗಿತ್ತು!

ಸವಿಗನಸು said...

hahahaha.....bhale shankra....

Unknown said...

If I were the magician... I would have gifted you with a chocolate for your smartness... surely :P

SATISH N GOWDA said...

ಅಲ್ಲ್ಲಾ ರೀ ಶಂಕರ್ ರವರೆ ನಿಮಗೆ ಅವಾಗ ಅವನ ಬಗ್ಗೆ ಪಾಪ ಅನ್ನಿಸಲಿಲ್ಲವೇ ......

Kiran Kumar said...

oLLe maja! magician na annakke kallu hakidri ansuthe neevu :)

ಧರಿತ್ರಿ said...

ಹೆಹೆಹೆ...
ಶಂಕ್ರಣ್ಣಾಆಆಆಆಆಆ

-ಚಿತ್ರಾ

ವಿದ್ಯಾ ರಮೇಶ್ said...

ಸೂಪರ್ ಕಾಮಿಡಿ!! ಪಾಪ ಆ ಮಾಜಿಸಿಯನ್ :)