Monday, April 30, 2012

ಆಟೋ ಅಣಿಮುತ್ತುಗಳು - ೧೧೦ - I Feel Perfect

ಮೊನ್ನೆ ಮೈಸೂರಿನಲ್ಲಿ ಕಂಡ ಆಟೋ ಇದು. ಈ ಅಣ್ಣನ್ನ ಟ್ರಾಫಿಕ್ ಪೋಲೀಸಿನವ್ರು ರಾತ್ರಿ ಹೊತ್ತು ಸರಿಯಾಗಿ ಕಾಡ್ತಾರೆ ಅನ್ಸುತ್ತೆ. ಅದೆಷ್ಟು ರಾಜಾರೋಷವಾಗಿ ಹಾಕಿದಾನೆ ನೋಡಿ.
Saw this autorickshaw in Mysore last week. This guy would be pestered by the traffic police a lot for D&D.
-------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Saturday, March 17, 2012

ಆಟೋ ಅಣಿಮುತ್ತುಗಳು - ೧೦೯ - ಮದ್ವೆ ಆಯ್ತದೆ

ಹೊರದೇಶಗಳಿಂದ ಕನ್ನಡ ಬರದೆ ಇರುವ ಜನರು ನನ್ನ ಬ್ಲಾಗನ್ನು ನೋಡ್ತಾ ಇದಾರೆ. ಅವರ ಅನುಕೂಲಕ್ಕಾಗಿ ಈ ಬಾರಿಯಿಂದ ಇಂಗ್ಲಿಶ್ ಅವತರಣಿಕೆಯನ್ನು ಹಾಕ್ತಾ ಇದ್ದೀನಿ.
ಎರಡು ವಾರದ ಹಿಂದೆ ಮೈಸೂರಿಗೆ ಹೋಗಿದ್ದಾಗ, ಚಿಕ್ಕ ಮಾರ್ಕೆಟ್ ಸರ್ಕಲ್ಲಿನ ಜಟಕಾ ಸ್ಟಾಂಡ್ ಬಳಿ ರಾತ್ರಿ ಕಂಡ ಆಟೋ ಇದು. ಯಥಾ ಪ್ರಕಾರ, ನನ್ನಾಕೆಗೆ ಕಾರನ್ನು ಅದರ ಕಡೆ ತಿರುಗಿಸಲು ಹೇಳಿ, ಇಳಿದು ಆಟೋ ಅಣ್ಣನ ಅನುಮತಿ ಪಡೆದು ಫೋಟೋ ತೆಗೆದುಕೊಂಡೆ.

ತುಂಬಾ ನೋಡ್ಬೇಡಿ ಲೌ ಆಯ್ತದೆ
ಹೂವ ಕೊಡ್ಬೇಡಿ ಮದ್ವೆ ಆಯ್ತದೆ.

Saw this auto rickshaw in Mysore during my visit two weeks ago. Spotted near the Small Market circle. As usual, I asked my wife to take the car there, stopped, got out and took the photo after getting a nod from the auto driver. Can be better translated as,
Do not look at me so much, there would be love,
Do not give me flower, we might get married.

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ (Shankar)

Friday, January 13, 2012

ಆಟೋ ಅಣಿಮುತ್ತುಗಳು - ೧೦೮ - ಬದುಕುವುದರಲ್ಲಿ ಮಜಾ ಇಲ್ಲದವರು

ಸುಮಾರು ದಿನಗಳ ಹಿಂದೆ, ಸೆಂಟ್ ಜಾನ್ಸ್ ಸಿಗ್ನಲ್ ಬಳಿ ಕಂಡ ಆಟೋ ಇದು.
ಈ ಅಣ್ಣ ಹೀಗೇಕೆ ಹೇಳಿದ ಅಂತಾ ಅರ್ಥ ಅಗ್ತಾ ಇಲ್ಲ. ಜೀವನದ ಮೇಲೆ ಆಸೆ ಇಲ್ಲದಿರುವರನ್ನು ಅಂತಾ ಹೇಳಬಹುದಿತ್ತು.
ಈ ಅಣ್ಣ ಕೂಡಾ ಸಿಕ್ಕಾಪಟ್ಟೆ ವೇಗವಾಗಿ ಗಾಡಿ ಓಡಿಸುವರಲ್ಲಿ ಒಬ್ಬನಿರಬೇಕು. ಅದಕ್ಕೆ ಇಲ್ದೆ ಇರೋ ಬಿಲ್ದಪ್ ಕೊಡ್ತಾ ಇದಾನೆ.


ಬದುಕುವುದರಲ್ಲಿ ಯಾವುದೇ ಮಜಾ ಇಲ್ಲಾ ಎಂದು
ಭಾವಿಸುವವರಿಗೆ ವೇಗವಾಗಿ ವಾಹನ ಓಡಿಸುವ ಚಾಲಕರು ಎನ್ನಬಹುದು

---------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, December 27, 2011

ಆಟೋ ಅಣಿಮುತ್ತುಗಳು - ೧೦೭ - ಅಮ್ಮಾ ಎನ್ನಲು ಕೋಟಿ ಪುಣ್ಯವೋ

ತಂದೆ ತಾಯಿ ಆಶೀರ್ವಾದ, ಅಣ್ಣನ ಕಾಣಿಕೆ, ಸ್ನೇಹಿತನ ಪ್ರೋತ್ಸಾಹ... ಇತ್ಯಾದಿ ಅಣಿಮುತ್ತುಗಳನ್ನ ಬಹಳಷ್ಟು ನೋಡಿದೀವಿ.
ಕೆಲವು ದಿನಗಳ ಹಿಂದೆ ನನ್ನ ಕಣ್ಣಿಗೆ ಬಿದ್ದ ಅಣಿಮುತ್ತು ಇದು.
ಪ್ರಾಯಶಃ ತಾಯಿ ಮೇಲೆ ಅಪಾರ ಗೌರವ ಇರುವ ಹಾಗು ಅಣ್ಣಾವ್ರು ಹಾಗು ಶಂಕ್ರಣ್ಣ ನಟಿಸಿರುವ ಅಪೂರ್ವ ಸಂಗಮ ಚಿತ್ರದ
ಹಾಡಿನಿಂದ ಸ್ಫೂರ್ತಿಗೊಂಡಿರುವ ಆಟೋ ಅಣ್ಣ ಅನ್ಸುತ್ತೆ.


ಅಮ್ಮ ಎನ್ನಲು, ಕೋಟಿ ಪುಣ್ಯವೋ
ಅವಳ ತ್ಯಾಗಕೆ, ಸಾಟಿ ಇಲ್ಲವೋ

ಪಕ್ಕದಲ್ಲಿ ಪಾಗಲ್ ಅನ್ನುವ ಸ್ಟಿಕ್ಕರ್ ತೆಗೆದು ಹಾಕಿರುವ ಕುರುಹು ಕಾಣ್ತಾ ಇದೆ, ಪರವಾಗಿಲ್ಲಾ. ಎಲ್ರೂ ಒಂದಲ್ಲಾ ಒಂದು ರೀತಿಯ ಪಾಗಲ್ ಗಳು, ಅಲ್ವೇ?
---------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, December 4, 2011

ಆಟೋ ಅಣಿಮುತ್ತುಗಳು - ೧೦೬ - ಹೀಗೂ ಉಂಟೇ ?

ಬಹಳ ದಿನಗಳಾದ ಮೇಲೆ ಬ್ಲಾಗಿನಲ್ಲಿ ಮತ್ತೊಂದು ಅಣಿಮುತ್ತನ್ನು ಹಾಕ್ತಾ ಇದೀನಿ.

ಇವತ್ತು ನನ್ನ ಆತ್ಮೀಯ ಮಿತ್ರನ ನಿಶ್ಚಿತಾರ್ಥ ಇತ್ತು. ಕಾರನ್ನು ನಿಲ್ಸಿ ಇಳೀತಿದ್ದ ಹಾಗೆ ಎದುರು ನಿಂತ ಆಟೋ ಹಿಂದೆ ಈ ಅಣಿಮುತ್ತು ಕಂಡಿತು. ಇವತ್ತಿನ ವರೆಗೆ ನಾನು ಕಂಡ ಅತ್ಯಂತ ವಿಚಿತ್ರವಾದ ಬೆರಳೇಣಿಕೆಯ ಅಣಿಮುತ್ತುಗಳಲ್ಲಿ ಇದೂ ಒಂದು. ನೀವೇ ನೋಡಿ.



ನನ್ನ ಗಂಡ ಓಡುಸ್ತಾನೆ ಬಸ್ ನಾ..
ನಾನ್ ಓಡುಸ್ತೀನಿ ಆಕ್ಟೀವ್ ಹೋಂಡಾನಾ..
ನನ್ ಮಗಳು ಓಡುಸ್ಕೊಂಡು ಓದ್ಲು ಆಟೋ ಡ್ರೈವರ್ ನಾ..
ಹೀಗೂ ಉಂಟೇ ?
---------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, September 11, 2011

ಮರಿತಿಮ್ಮ !!

ಬಹಳ ದಿನಗಳಾದ ಮೇಲೆ ಬ್ಲಾಗಿನ ಒಳಗೆ ಕಾಲು ಇಡ್ತಾ ಇದೀನಿ.
ಇತ್ತೀಚಿಗೆ ಬ್ಲಾಗಿಗೆ ಬಂದು ಬರೆದು ಪ್ರಕಟ ಮಾಡೋದಕ್ಕೆ ಸಮಯ ಸಾಕಾಗುತ್ತಿಲ್ಲಾ.
ಅದು ಬಿಡಿ, ನನ್ನ ಮಿತ್ರ ಸಚಿನ್ ಇಟಲಿಯ ವೆನಿಸ್ ನಗರಕ್ಕೆ ಹೋದಾಗ ಆತನ ಕಣ್ಣಿಗೆ "ಮರಿತಿಮ್ಮ" ಕಂಡ. ಕೂಡಲೆ ಕ್ಲಿಕ್ಕಿಸಿದ, ನನಗೆ ಕಳಿಸಿದ. ಡಿವಿಜಿ ಅಥವಾ ಬೀಚಿ ಇದ್ದಿದ್ದರೆ ಖುಷಿ ಪಡ್ತಿದ್ದರೇನೋ ಏನೋ.. ನೀವೂ ನೋಡಿ ಖುಷಿ ಪಡಿ.

ಹೆಂಗೆ ??
-------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, June 28, 2011

ಆಟೋ ಅಣಿಮುತ್ತುಗಳು - ೧೦೫ - ಲೇ ನಿಧಾನ್ಕಲ್ಲಾ

ಇನ್ನೊಂದು ಸಂತೋಷದ ಸುದ್ಧಿ. ಕಳೆದ ವಾರದ ಮಧ್ಯದಲ್ಲಿ ಸೋಮಾರಿ ಕಟ್ಟೆಗೆ ಇವತ್ತಿನ ತನಕ ಭೇಟಿ ಕೊಟ್ಟವರ ಸಂಖ್ಯೆ 70,000 (ಎಪ್ಪತ್ತು ಸಾವಿರ) ದಾಟಿತು. ಕಟ್ಟೆ ಕಟ್ಟಿ, ನೀರೆರೆದು ನೆರವಾದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

ಕೆಲವು ದಿನಗಳ ಹಿಂದೆ ಇಂದಿರಾನಗರದಲ್ಲಿ ಕಂಡ ಆಟೋ ಇದು.
ಮಂಡ್ಯದ ಮಾನವ ಈ ಆಟೋ ಅಣ್ಣ ಅನ್ಸುತ್ತೆ.


ಲೇ.... ನಿಧಾನ್ಕಲ್ಲಾ
-----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 20, 2011

ಇನ್ನೊಂದು ರುಪಾಯಿ ಕೊಡಪ್ಪಾ....

ನಾನು : ಅಪ್ಪಾ, ಹೆಂಗೂ ಐದು ರುಪಾಯಿ ಕೊಟ್ಟಿದೀಯ, ಇನ್ನೊಂದು ರುಪಾಯಿ ಕೊಡಪ್ಪಾ..
ಅಪ್ಪ : ನಿಂಗೆ ಐದು ರುಪಾಯಿ ಕೊಟ್ಟಿದ್ದೆ ಜಾಸ್ತಿ, ಇನ್ಯಾಕೆ ಇನ್ನೊಂದು ರುಪಾಯಿ ?
ನಾನು : ನೀನು ಎರಡು ರುಪಾಯಿದು ತಗೋ ಅಂದೆ, ಆದ್ರೆ ಮೂರು ರುಪಾಯಿಗೆ ಇನ್ನೂ ಸ್ವಲ್ಪ ಜಾಸ್ತಿ ದೊಡ್ದು ಸಿಗತ್ತೆ. ಎರಡು ರುಪಾಯಿದು ಚಿಕ್ದು ಅಪ್ಪಾ, ಮೂರು ರುಪಾಯ್ದು ತಗೋತೀನಿ.. ಪ್ಲೀಸಪ್ಪಾ
ಅಪ್ಪ : ಸಾಕು ಕಣೋ, ಒಂದು ವಾರ ಉಪಯೋಗುಸ್ತ್ಯಾ ಆಮೇಲೆ ಹರ್ದೊಗತ್ತೆ. ಅದಕ್ಯಾಕೆ ಸುಮ್ನೆ ಒಂದು ರುಪಾಯ್ ವೇಸ್ಟ್ ಮಾಡ್ತೀಯ? ಸಾಕು ಬಿಡೋ.
ಏನೇ ತಿಪ್ಪರಲಾಗ ಹಾಕುದ್ರೂ ನಮ್ಮಪ್ಪನಿಂದ ಒಂದು ರುಪಾಯಿ ಗಿಟ್ಟಿಸೋದು ಅಸಾಧ್ಯ ಅಂತ ಗೊತ್ತಾಗಿ, ಅಮ್ಮನ ಹತ್ರ ಓಡು.
ನಾನು : ಅಮ್ಮಾ, ಇನ್ನೊಂದು ರುಪಾಯಿ ಕೊಡಮ್ಮಾ....
ಅಮ್ಮ : ಇಲ್ಲಾ ನನ್ಹತ್ರಾ, ಸುಮ್ನೆ ತಲೆ ತಿನ್ಬೇಡಾ. ನಿಮ್ಮಪ್ಪ ಕೊಡಲ್ಲ ಅಂದ ತಕ್ಷಣ ಬಂದು ನಂತಲೆ ತಿನ್ನಬೇಡಾ. ಸಾಕು ಐದು ರುಪಾಯಿ, ಸುಮ್ನೆ ಅದರಲ್ಲೇ ತಗೋ ಹೋಗು.
ನಾನು : ಇಲ್ಲಮ್ಮ, ಸಾಕಾಗಲ್ಲ.. ಎರಡು ರುಪಾಯಿಂದು ತುಂಬಾ ಚಿಕ್ದು, ಕೈಲೆ ಹಿಡಿಯೋಕ್ಕೆ ಆಗಲ್ಲ. ಏನೂ ಮಜಾ ಬರಲ್ಲಾ... ಜಾಸ್ತಿ ಅಲ್ಲಮ್ಮ, ಬರೀ ಒಂದು ರುಪಾಯಿ ಕೇಳ್ತಾ ಇದ್ದೀನಿ. ಕೊಡಮ್ಮಾ ಪ್ಲೀಸ್.
ಅಂತೂ ಇಂತೂ ಅಮ್ಮಂಗೆ ಪೂಸಿ ಹೊಡೆದು, ಬೆಣ್ಣೆ ಹಚ್ಚಿ ಇನ್ನೊಂದು ರುಪಾಯಿ ಇಸ್ಕೊಂಡು ಓಡಿದ್ದು ಅಂಗಡಿಗೆ.
ದರಪಟ್ಟಿ :
ಚಿಕ್ಕದು - ಎರಡು ರುಪಾಯಿ
ಮೀಡಿಯಂ - ಮೂರು ರುಪಾಯಿ
ದೊಡ್ಡದು - ನಾಲ್ಕು ರುಪಾಯಿ
ಹೆಂಗೂ ಸೆಟ್ ಮಾಡೋದನ್ನ ಕಳೆದ ವರ್ಷ ಕಲ್ತಿದ್ದೆ, ಅದಕ್ಯಾಕೆ ಅಂಗಡಿಯವನಿಗೆ ಐವತ್ತು ಪೈಸೆ ಕೊಡಬೇಕು ? ನಾಲ್ಕು ರುಪಾಯಿಂದನ್ನ ಮೂರುವರೆಗೆ ಚೌಕಾಸಿ ಮಾಡಿ ಮಿಕ್ಕಿದ್ದಕ್ಕೆ ದೊಡ್ಡ ಕಟ್ಟನ್ನ ತಗೊಂಡು ಮನೆಗೆ ಬಂದು ಅಮ್ಮನ ಮುಂದೆ ನನ್ನ ಪಾಂಡಿತ್ಯ ಪ್ರದರ್ಶನ ಮಾಡಿ ಸೆಟ್ ಮಾಡಿದ್ದೆ. ಅಪ್ಪನ ಹಳೆ ಪಂಚೆಯ ಅಂಚಿಗೆ ಮುಕ್ತಿ ತೋರಿಸಿದ್ದಾಯ್ತು. ಹೀಗೆ ಹಾಗೆ ಕೇವಲ ನಾಲ್ಕೈದು ದಿನ ತಗೊಂಡಿದ್ದರ ಆಯಸ್ಸು. ಪುನಃ ಅಪ್ಪನ ಕೈಕಾಲು ಹಿಡಿದು ಮತ್ತೆ ಐದು ರುಪಾಯಿ ವಸೂಲಿ ಮಾಡಿ ಮೊತ್ತೊಂದನ್ನು ಅಂಗಡಿಯಲ್ಲಿ ಕೊಂಡಿದ್ದು.
ಪ್ರತೀಬಾರಿ ಆಷಾಢ ಬಂದಾಗಲೆಲ್ಲಾ ನನ್ನ ಈ ಹಳೆಯ ಪ್ರಸಂಗ ನೆನಪಾಗುತ್ತೆ. ಈ ವರ್ಷ ಸೇರಿಸಿದರೆ, ಗಾಳಿಪಟ ಹಾರಿಸಿದ್ದು ಹದಿನಾರು ವರ್ಷಗಳ ಹಿಂದೆ. ಒಂದಲ್ಲ, ಐದಲ್ಲ... ನೂರು ರುಪಾಯಿ ಕೊಟ್ಟು ಗಾಳಿಪಟ ಕೊಂಡು ಹಾರಿಸೋ ತಾಕತ್ತು ಇದೆ, ಆದ್ರೆ ನಿಜವಾಗಲೂ ಅದನ್ನ ಹಾರಿಸೋ ಯೋಗ್ಯತೆ ಇಲ್ಲಾ.
ಥೂ... ಇದೂ ಒಂದು ಜನ್ಮಾ ನಾ..
ಮತ್ತೆ ಮತ್ತೆ ಕಾಡುತಾವಾ ನೆನಪು.
---------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, June 19, 2011

ಆಟೋ ಅಣಿಮುತ್ತುಗಳು - ೧೦೪ - ಮುಟ್ಟಿದ್ರೆ ಬಲಿ

ಕಳೆದ ವಾರ ನನ್ನಾಕೆಯ ಜೊತೆ ಜಯನಗರಕ್ಕೆ ಹೋಗುವಾಗ ಬನ್ನೇರುಘಟ್ಟ ರಸ್ತೆಯಲ್ಲಿ ಕಂಡ ಆಟೋ ಇದು.
ಗಾಡಿ ಓಡಿಸುತ್ತಿದ್ದದ್ದು ನಾನು, ಹಾಗಾಗಿ ನನ್ನಾಕೆಯ ಕೈಗೆ ಮೊಬೈಲನ್ನು ಕೊಟ್ಟು ಫೋಟೋ ತೆಗೆಯಲು ಹೇಳಿದೆ. ಹಾಗಾಗಿ ಈ ಫೋಟೋ ತೆಗೆದ ಕೀರ್ತಿ ನನ್ನಾಕೆಗೆ ಸಲ್ಲಬೇಕು, ಆದರೂ ಯಥಾಪ್ರಕಾರ ಇದನ್ನು ಕಂಡದ್ದು ಮೊದಲು ನಾನು.


ದುರ್ಗದ ಹುಲಿ
ಮುಟ್ಟಿದರೆ ಬಲಿ
----------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, June 10, 2011

ಆಟೋ ಅಣಿಮುತ್ತುಗಳು - ೧೦೩ - ಬಿಸಿರಕ್ತ ಇರುವತನಕ

ನಿನ್ನೆ ರಾತ್ರಿ ಆಫೀಸಿಂದ ಮೆನೆಗೆ ಹೋಗುವಾಗ ಸೆಂಟ್ ಜಾನ್ಸ್ ಆಸ್ಪತ್ರೆಯ ಸಿಗ್ನಲ್ಲಿನಲ್ಲಿ ಕಾಯುವಾಗ ನಮ್ಮ ಗಾಡಿಯ ಮುಂದೆ ಈ ಆಟೋ ನಿಲ್ತು.ಇದೇನೋ ಪುನಃ "ಹೊಗೆರಹಿತ ವಾಹನ.." ಅನ್ನೋ ಮಾಮೂಲು ಬರಹ ಅನ್ಕೊಂಡು ಸುಮ್ನಾದೆ. ಆದ್ರೂ ಅದೇನೋಪ್ಪಾ, ಆಟೋ ಹಿಂದೆ ಸುಮ್ನೆ ಯಾವ್ದೋ ಅಡ್ವರ್ಟೈಸ್ಮೆಂಟ್ ಇದ್ರೂ ಕೂಡ ಓದೋ ಚಟ. ಸಕಾಲಕ್ಕೆ ನೋಡಿ ತಕ್ಷಣ ಫೋಟೋ ತೆಕ್ಕೊಂಡೆ. ಒಳ್ಳೆ ಅಣಿಮುತ್ತು ಕೊಟ್ಟಿದಾನೆ ಈ ಆಟೋ ಅಣ್ಣ. ಬಹಳ ದಿನಗಳ ಮೇಲೆ ಒಂದು ಒಳ್ಳೆ ಅಣಿಮುತ್ತು ಸಿಕ್ತು.



ಬಿಸಿರಕ್ತ ಇರುವತನಕ ಆಟ
ಆಮೇಲೆ ತಡಕಾಟ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ