Thursday, February 25, 2010

ಜನರ ಪ್ರಾಣ, ತುರ್ತು ಸೇವೆ - ಒಂದು ಪ್ರಹಸನ

ಮೊನ್ನೆ ನಮ್ಮ ಬೆಂಗಳೂರಿನ ಕಾರ್ಲ್ಟನ್ ಟವರಿನಲ್ಲಿ ನಡೆದ ದೊಡ್ಡ ದುರಂತದ ಬಗ್ಗೆ ಈ ಸಣ್ಣ ಲೇಖನ. ದುರ್ಘಟನೆ ಹೇಗಾಯ್ತು, ಎಷ್ಟು ಜನ ಜೀವ ಕಳೆದುಕೊಂಡರು ಅನ್ನೋದು ಎಲ್ಲರಿಗೂ ಗೊತ್ತು. ನಮ್ಮಲ್ಲಿ ಈಗ ಜನರ ಪ್ರಾಣ, ಹಾಗು ತುರ್ತು ಪರಿಸ್ಥತಿ ಸೇವೆಗಳು ಹಾಗು ಅರಿವು ಎನ್ನುವುದು ಯಾವ ರೀತಿ ನಾಪಾಸಾಗಿದೆ, ಜನರಲ್ಲಿ ಸಾಮಾನ್ಯ ಅರಿವೂ ಇಲ್ಲವಾಗಿದೆ.

ಅಲ್ಲಿ ಆ ಕಟ್ಟಡದಲ್ಲಿ ಬೆಂಕಿ ಬಿದ್ದು ಒಳಗಿನ ಜನ ಕಂಗಾಲಾಗಿದ್ದರು. ಹೊರಗೆ ಅಗ್ನಿಶಾಮಕ ಹಾಗು ತುರ್ತು ಸೇವೆ ವಾಹನಗಳು ಆ ಜಾಗಕ್ಕೆ ಬರಲು ಹರಸಾಹಸ ಪಡುತ್ತಾ ಇದ್ದವು. ಇಲ್ಲಿ ಹೊರಗಡೆ ಜನರು ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು, ಗುಂಪು ಗುಂಪಾಗಿ ಇದರ ಬಗ್ಗೆ ವಿಶ್ಲೇಷಣೆ ಕೊಡ್ತಾ ನಿಂತಿದ್ದರು.


ಜೊತೆಗೆ, ಅಲ್ಲಿ ಸಂಭವಿಸಿದ ವಾಹನ ದಟ್ಟಣೆ, ಜ್ಯಾಮ್ ನಲ್ಲಿದ್ದ ಜನರು ಹೇಗೆ ನಡೆದುಕೊಳ್ತಾ ಇದ್ದರು ಅನ್ನೋದನ್ನ ನಾನು ಕಣ್ಣಾರೆ ಕಂಡಿದೀನಿ. ನನ್ನ ಪಕ್ಕದ ಬೈಕಿನಲ್ಲಿ ಹೋಗುತ್ತಿದ್ದ ಒಬ್ಬಾತ ತನ್ನ ಮನೆಗೆ ಫೋನ್ ಮಾಡಿ "ಇನ್ನೂ ಜ್ಯಾಮ್ ಜಾಸ್ತಿ ಆಗೋ ಥರಾ ಇದೆ, ಹೆಂಗಾದ್ರೂ ಮಾಡಿ ಬೇಗ ಮನೆ ಸೇರ್ಕೋತೀನಿ.." ಅಂತಾ ಹೇಳಿ, ಸಂದಿ ಗೊಂದಿಯಲ್ಲಿ ಗಾಡಿ ನುಗ್ಗಿಸಿ, ಮುಂದೆ ಹೋದ.

ಈ ವಿಚಾರವನ್ನು ಬದಿಗೆ ಹಾಕೋಣ. ಅಲ್ಲಿ ಕಟ್ಟಡದಲ್ಲಿ ಬೆಂಕಿ ಉರಿಯುತ್ತಿದ್ದಾಗ, ಟ್ರಾಫಿಕ್ ದಟ್ಟಣೆಯಿಂದಾಗಿ ತುರ್ತು ಸೇವೆ ವಾಹನಗಳು ಅಲ್ಲಿಗೆ ಸರಿಯಾದ ಸಮಯಕ್ಕೆ ಬರುವುದು ಬಹಳ ತಡವಾಯಿತು. ಈ ಕಾರಣಕ್ಕೆ, ಕೆಲವರು ಗಾಬರಿ ತಡೆಯಲಾರದೆ ಮೇಲಿನಿಂದ ಜಿಗಿದು ಜೀವ ಕಳೆದುಕೊಂಡರು.

ನನ್ನ ಒಂದೇ ಒಂದು ಪ್ರಶ್ನೆ. ಈ ಘಟನೆಯು ನಡೆದ ಕಟ್ಟಡಕ್ಕೆ HAL ಬಹಳ ಹತ್ತಿರವಿದೆ. HAL ನಲ್ಲಿ, ವೈದ್ಯಕೀಯ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ಒಂದು ಹೆಲಿಕಾಪ್ಟರ್ ಸದಾ ಸನ್ನದ್ಧವಾಗಿ ಇಟ್ಟಿರುತ್ತಾರೆ. ಈ ಹೆಲಿಕಾಪ್ಟರಿನ ಸೇವೆಯನ್ನು ಏಕೆ ಉಪಯೋಗಿಸಿಕೊಳ್ಳಲಿಲ್ಲ ? ಈ ಕಾರ್ಲ್ಟನ್ ಕಟ್ಟಡದ ಅತ್ಯಂತ ಸಮೀಪದಲ್ಲಿ "ಲೀಲಾ ಪ್ಯಾಲೆಸ್" ನಲ್ಲಿ ಹೆಲಿಪ್ಯಾಡ್ ಕೂಡಾ ಇದೆ.
ಕಟ್ಟಡದ ಮೇಲಂತಸ್ತಿನಲ್ಲಿ ಸಿಕ್ಕಿದ್ದ ಜನರನ್ನು ತಾರಸಿಗೆ ಕಳುಹಿಸಿ, ಅಲ್ಲಿಂದ ಅವರುಗಳನ್ನು ಈ ಹೆಲಿಕಾಪ್ಟರಿನ ಮೂಲಕ ಕಾಪಾಡಬಹುದಿತ್ತು.

ಪಕ್ಕದ ರಾಜ್ಯದ ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಾಡಿನ ಕಡೆ ಕಾಣೆಯಾಯಿತು ಎಂದೊಡನೆ, ವಾಯುದಲವನ್ನು ಕಳುಹಿಸಿ ಕಾಡಿನಲ್ಲಿ ಶೋಧನೆ ಆರಂಭಿಸಿದರು.ಆದರೆ ಇಲ್ಲಿ ಕಣ್ಣ ಮುಂದೆ ಹತ್ತಿ ಉರಿಯುತ್ತಿದ್ದ ಕಟ್ಟಡದಿಂದ, ಜನರು ಗಾಬರಿಯಾಗಿ ಮೇಲಿನಿದ ಜಿಗಿದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದರೂ ಕೂಡಾ, ಈ ಹೆಲಿಕಾಪ್ಟರಿನ ಉಪಯೋಗ ಪಡೆಯಲು ನಮ್ಮಲ್ಲಿ ಯಾರೂ ಯೋಚಿಸಲಿಲ್ಲ ಎನ್ನುವುದು ದೊಡ್ಡ ಸೋಜಿಗದ ಸಂಗತಿ. ಯಾರಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು HAL ಅನ್ನು ಸಂಪರ್ಕಿಸಿ, ಹೆಲಿಕಾಪ್ಟರಿನ ಸೇವೆ ಕೊರಿದ್ದಲ್ಲಿ, ತಕ್ಷಣಕ್ಕೆ ಬಂದು, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿತ್ತು, ಅಥವಾ ಯಾವುದೇ ಸಾವು ಸಂಭವಿಸುವುದನ್ನು ತಪ್ಪಿಸಬಹುದಿತ್ತು.

ಹೀಗೇಕೆ ಆಗಲಿಲ್ಲ / ಮಾಡಲಿಲ್ಲ ? ನನ್ನಂಥ ಸಾಮಾನ್ಯ ನಾಗರಿಕನಿಗೆ ಇದು ಹೊಳೆದಿದೆ ಎಂದರೆ, ಸಾರ್ವಜನಿಕ ಇಲಾಖೆಗಳಲ್ಲಿ ಇರುವ ಹಿರಿಯ ಅಧಿಕಾರಿಗಳಿಗೆ ಇದು ಏಕೆ ಹೊಳೆಯಲಿಲ್ಲ ?

We Indians are not Proactive.. we are just Reactive - ಎನ್ನುವ ಮಾತು ಬಹಳ ನಿಜ. ಇದನ್ನು ಬಹಳ ಕಂಡಿದೀವಿ. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾದಾಗ ಕೂಡಾ ಹೀಗೆ ಆಯಿತು. ನಾವು ಆ ದಿನ ಊಟಕ್ಕೆ ಹೊರಗೆ ಹೋಗಿದ್ದೆವು. ನಮ್ಮ ಆಫೀಸು ಇರುವುದು ಡೈರಿ ಸರ್ಕಲ್ (ಕ್ರೈಸ್ಟ್ ಕಾಲೇಜ್) ಬಳಿ. ವಾಪಾಸ್ ಬಂದಾಗ ಇಡೀ ಹೊಸೂರು ರಸ್ತೆಯಲ್ಲಿ ಅಲ್ಲೋಲ ಕಲ್ಲೋಲ. ಐದು ಮಂದಿ ಕಾರಿನಲ್ಲಿ ಊಟ ಮುಗಿಸಿ ಆಫೀಸಿಗೆ ವಾಪಸ್ ಕಾರಿನಲ್ಲಿ ಬಂದೆವು. ಆಗ ಇದ್ದಕ್ಕಿದ್ದಂತೆ, ಇಡೀ ಆಫೀಸಿನ ಸೆಕ್ಯೂರಿಟಿಯವರು ಎಚ್ಚೆತ್ತುಕೊಂಡರು. ಕಂಪೆನಿಯ ಗುರುತಿನ ಚೀಟಿ ಇಲ್ಲದ್ದಕ್ಕೆ ನಾವು ಎಷ್ಟೇ ಹೇಳಿದರೂ ಕೇಳದೆ ನಮ್ಮ ಕಾರಿನಲ್ಲಿದ್ದ ಒಬ್ಬ ಸಹೋದ್ಯೋಗಿಯನ್ನು ಕೆಳಗಿಳಿಸಿ ನಮ್ಮನ್ನು ಒಳಗೆ ಕಳುಹಿಸಿದರು. ಮತ್ತೆ ಮಾರನೆಯ ದಿನದಿಂದ, ಯಥಾ ಪ್ರಕಾರ. ಹೋದಾ ಪುಟ್ಟ, ಬಂದಾ ಪುಟ್ಟ ಅನ್ನೋ ರೀತಿ. ಯಾರೂ ಹೇಳೋರಿಲ್ಲ, ಕೇಳೋರಿಲ್ಲ.

ಇನ್ನು ನಿನ್ನೆ ಕೂಡಾ ನಮ್ಮ ಆಫೀಸಿನ ಕಟ್ಟಡದಲ್ಲಿ ಇದ್ದಕ್ಕಿದ್ದ ಹಾಗೆ ಫೈರ್ ಅಲಾರಂ ಕೂಗಲು ಶುರು ಮಾಡಿತು. ನಮ್ಮ HR ಮ್ಯಾನೇಜರ್ ಬಂದು "come on guys.. what are you waiting for? Can't you hear the alarm? evacuate the building" ಎಂದು, ಎಲ್ಲರನ್ನೂ ತುರ್ತು ದಾರಿಯಿಂದ ಕಟ್ಟಡದ ಹೊರಗೆ ಕಳುಹಿಸಿದರು. ನಮ್ಮ ಕಚೇರಿ ಇರೋದು ನಾಲ್ಕನೆ ಅಂತಸ್ತಿನಲ್ಲಿ. ಕೆಳಗೆ ಎಲ್ಲರೂ ಇಳಿದ ಮೇಲೆ, ಆಫೀಸಿನಲ್ಲಿ, ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಒಂದು PRESENTATION ಕೊಟ್ಟರು. ಮೊನ್ನೆ ಆ ಬೆಂಕಿ ಅಪಘಾತ ನಡೆಯದ ಪಕ್ಷದಲ್ಲಿ, ನಮ್ಮಲ್ಲಿ ಈ "ಅಣಕು ಪ್ರಹಸನ (Mock Drill)" ನಡೆಯುತ್ತಿತ್ತೇ?

ನಮ್ಮಲ್ಲಿ ಈಗ "ಮಾಲ್"ಗಳು ಹೆಚ್ಚುತ್ತಿವೆ. ಹಾಗೆಯೇ ಮಾಲುಗಳಲ್ಲಿ "ಮಲ್ಟಿಪ್ಲೆಕ್ಸ್" ಸಿನೆಮಾ ಮಂದಿರಗಳು ತುಂಬುತ್ತಿವೆ. ಆದರೆ, ಆ ಸಿನೆಮಾ ಮಂದಿರಗಳು ಎಷ್ಟರ ಮಟ್ಟಿಗೆ ಸುರಕ್ಷಿತ. ಈ ರೀತಿಯಾಗಿ ಏನಾದರೂ ಒಂದು ಬೆಂಕಿ ಅಪಘಾತ ಸಂಭವಿಸಿದ ಪಕ್ಷದಲ್ಲಿ ಏನು ಗತಿ ? ನಾನು ಕಂಡ ಹಾಗೆ, ಕಿಷ್ಕಿಂದೆಯ ರೀತಿ ಇರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳೆಂದರೆ - ಜಯನಗರದ ಸ್ವಾಗತ ಗರುಡಾ ಮಾಲಿನಲ್ಲಿ ಇರುವ "ಐನಾಕ್ಸ್", ಹಲಸೂರಿನಲ್ಲಿ ಇರುವ "ಫೇಮ್ ಲಿಡೋ", ಕನ್ನಿಂಗ್ ಹ್ಯಾಮ್ ರಸ್ತೆಯ ಸಿಗ್ಮಾ ಮಾಲಿನಲ್ಲಿ ಇರೋ "ಫನ್ ಸಿನೆಮಾ". ಇವುಗಳಲ್ಲಿ ಏನಾದರೂ ಅವಗಢ ಸಂಭವಿಸಿದ ಪಕ್ಷದಲ್ಲಿ, ಸಾವು ನೋವು ಅತಿಯಾಗಿ ಇರುವುದು.

ಮೊನ್ನೆ ನಡೆದ ಘಟನೆ ನಮಗೆ ಒಂದು ಎಚ್ಚರಿಕೆಯ ಘಂಟೆಯಾಗಲಿ. ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಬಹುಮಹಡಿ ಕಟ್ಟಡಗಳ ತಪಾಸಣೆ ನಡೆಸಲಿ. ವ್ಯತ್ಯಯ ಕಂಡುಬಂದಲ್ಲಿ, ಕಠಿಣ ಕ್ರಮ ನಡೆಸಲಿ. ಜೊತೆಗೆ, ಅಕಸ್ಮಾತ್ ಈ ರೀತಿಯ ಘಟನೆ ಮುಂದೆ ನಡೆದರೆ, ನಮ್ಮಲ್ಲಿ ಇರುವ ಸೌಲಭ್ಯಗಳನ್ನು ಸರಿಯಾಗಿ ಬಳಸಲಿ. ಸಿಂಪಲ್ಲಾಗಿ ಹೇಳಬೇಕೆಂದರೆ, ಎಲ್ಲರೂ ಅರಿವು ಮೂಡಿಸಿಕೊಳ್ಳಲಿ.
ಅರಿವೇ ಗುರು, Awareness is the key
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, February 21, 2010

ಹುಲಿರಾಯನನ್ನು ಕಾಪಾಡಿ

ಹುಲಿರಾಯ, ಕಾಡಿನ ಅತ್ಯಂತ ಸುಂದರ ಹಾಗು ಗಂಭೀರ ಪ್ರಾಣಿಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾನೆ.
ಈ ಬಾರಿಯ ಹುಲಿ ಗಣತಿಯಲ್ಲಿ ಬಂದ ಅಂದಾಜು ಅಂಕಿಯ ಪ್ರಕಾರ, ಭಾರತದಲ್ಲಿ ಕೇವಲ 1411 ಹುಲಿಗಳು ಉಳಿದಿವೆಯಂತೆ.
ತನ್ನ ಸುಂದರ ಚರ್ಮ, ಉಗುರುಗಳೇ ಹುಲಿರಾಯನಿಗೆ ಮುಳುವಾಗಿದೆ. ದುರಾಸೆಯ ಜನಗಳು ಈತನನ್ನು ಕೊಂದು ಇವುಗಳನ್ನು ದೋಚುತ್ತಾರೆ.


ಇಂದಿನ "ವಿಜಯ ಕರ್ನಾಟಕ"ದ 11ನೇ ಪುಟದಲ್ಲಿ ಸಣ್ಣದೊಂದು ಸುದ್ಧಿ ಪ್ರಕಟವಾಗಿದೆ. ಗುಂಡ್ಲುಪೇಟೆಯ ಬರಗಿ ಗ್ರಾಮದಲ್ಲಿ ಎಂಟು ವರ್ಷದ ಗಂಡು ಹುಲಿಯ ಶವ ಪತ್ತೆಯಾಗಿದೆ. ಈ ಗ್ರಾಮ ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿದೆ.
ಈ ಹುಲಿಯನ್ನು ನಾಲ್ಕು ದಿನಗಳ ಹಿಂದೆ ಕೊಂದು, ಅದರ ಬಲಗಾಲನ್ನು ಕತ್ತರಿಸಲಾಗಿದೆ. ಕಾಲುಗಳಿಂದ 15 ಉಗುರುಗಳನ್ನು ಕಿತ್ತಿದ್ದಾರೆ, 3 ಉಗುರುಗಳು ಉಳಿದುಕೊಂಡಿವೆ. ಗ್ರಾಮಸ್ತರು ಹುಲಿಯ ಕಳೇಬರವನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದಾರೆ.

ನಿಜಕ್ಕೂ ನಮ್ಮಲ್ಲಿ ಸಂರಕ್ಷಣೆ ಅನ್ನುವುದು ಸರಿಯಾಗಿ ನಡೆಯುತ್ತಿದೆಯೇ ? ಹುಲಿರಾಯ.. ನಿನಗೆ ನಿಜಕ್ಕೂ ಉಳಿಗಾಲವಿದೆಯಾ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, February 17, 2010

ಹೀಗೆ ಆದ್ರೆ ಹೇಗೆ ?

ಇವತ್ತು ಬೆಳಿಗ್ಗೆ ಮಿತ್ರ ಅವಿನಾಶ್ ಪದಕಿ ಕಳಿಸಿದ "NewYork Times" ನಲ್ಲಿ ಬಂದಿರುವ ಒಂದು ಸುದ್ಧಿಯ ಕೊಂಡಿಯನ್ನು ಓದುತ್ತಾ ಇದ್ದೆ.
ನೀವೂ ಇದನ್ನು ಇಲ್ಲಿ ಓದಿ.
http://www.nytimes.com/2010/02/16/business/global/16port.html?ref=global-home

ಏನೆಂದರೆ, ಚೈನಾ ದೇಶದವರು ಎಶಿಯಾ ಖಂಡದಲ್ಲಿ ಸುಮಾರು ಕಡೆ ಬಂದರು ಮಾಡುವ ಗುತ್ತಿಗೆ ಪಡೆದಿದ್ದಾರೆ.
ಸಧ್ಯಕ್ಕೆ ಶ್ರೀಲಂಕಾ ದಲ್ಲಿ "ಹಂಬನತೋಟಾ" ಎನ್ನುವ ಕಡೆ ಬಂದರನ್ನು ಕಟ್ಟುತ್ತಿದ್ದಾರೆ. ಈ ಪ್ರಾಜೆಕ್ಟಿನಲ್ಲಿ ಚೀನಿ ಕಂಪೆನಿಯೊಂದು ಮಿಲಿಯಾಂತರ ಡಾಲರುಗಳನ್ನು ಹೂಡಿದೆ.
ಈ ಜಾಗದ ಮೂಲಕ, ಸುಮಾರು ವರ್ಷಗಳಿಂದ ಬೇರೆ ದೇಶದ ವ್ಯಾಪಾರಿ ಹಡಗುಗಳು ಸಾಗುತ್ತಿದ್ದವು. ಪಶ್ಚಿಮದ ಕಡೆಯಿಂದ ಪೂರ್ವಕ್ಕೆ, ಹಾಗು ಪೂರ್ವದಿಂದ ಪಶ್ಚಿಮಕ್ಕೆ ಸಾಗುತ್ತಿದ್ದ ತೈಲ, ಯಂತ್ರಗಳು, ಬಟ್ಟೆ ಬರೆ, ಹಾಗು ಅನ್ಯ ಪದಾರ್ಥಗಳು ಈ ಮೂಲಕವೇ ಹಾಡು ಹೋಗುತ್ತಿತ್ತು.
ಈ ಕಾರಣಕ್ಕೆ ಶ್ರೀಲಂಕಾದ ಸರ್ಕಾರ ಇಲ್ಲಿ ಒಂದು ಬಂದರನ್ನು ಮಾಡಿದರೆ, ರಾಷ್ಟ್ರಕ್ಕೆ ಒಳ್ಳೇ ಆದಾಯ ಬರುವುದು ಎಂಬ ಉದ್ದೇಶದಿಂದ ಬಂದರನ್ನು ನಿರ್ಮಿಸುವ ನಿರ್ಣಯ ತಾಳಿತು.

ಶ್ರೀಲಂಕಾದ ರಾಷ್ಟ್ರಪತಿ ಮಹೇಂದ್ರ ರಾಜಪಕ್ಸೆ, ಈ ಬಂದರಿನ ನಿರ್ಮಾಣದ ಕೆಲಸವನ್ನು ಮೊದಲು ಭಾರತಕ್ಕೆ ಕೊಟ್ಟಿದ್ದರು. ಆದರೆ ನಮ್ಮ ಅಧಿಕಾರಿಗಳು ಇದನ್ನು ತಿರಸ್ಕರಿಸಿದರು.
ಒಂದು ಸಂದರ್ಶನದಲ್ಲಿ, ಅಮೆರಿಕಾಕೆ ಶ್ರೀಲಂಕಾದ ರಾಯಭಾರಿಯಾಗಿರುವ ಜಲಿಯ ವಿಕ್ರಮಸೂರಿಯಾ ಅವರು ಹೇಳಿದ್ದೇನೆಂದರೆ "ನಾವು ಶ್ರೀಲಂಕಾದಲ್ಲಿ ಬಂಡವಾಳ ಹಾಕಲು ಹೂಡಿಕೆದಾರರನ್ನು ಹುಡುಕುತ್ತಾ ಅಮೇರಿಕಾ ಹಾಗು ಇತರೆ ದೇಶಗಳನ್ನು ಸಂಪರ್ಕಿಸಿದೆವು. ಆದರೆ ಚೈನಾ ದೇಶ ನಮ್ಮ ಮುಂದೆ ಇತ್ತ ಪ್ರಸ್ತಾವನೆ ಎಲ್ಲಕ್ಕಿಂತ ಉತ್ತಮ ಹಾಗು ಲಾಭದಾಯಕವಾಗಿತ್ತು. ನಮಗೆ ಇಲ್ಲಿ ಯಾರೂ Favorite ಗಳು ಇಲ್ಲ".

ದೇಶದ ಪ್ರಗತಿಗಾಗಿ, ಆಂತರಿಕ ಯುದ್ಧ ಮುಗಿದ ಕೂಡಲೇ, 2009 ರಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಶ್ರೀಲಂಕಾ ಸುಮಾರು 2.6 ಬಿಲಿಯನ್ ಡಾಲರುಗಳ ಸಾಲ ಪಡೆದಿದೆ. ಈ ಹಂಬನತೋಟಾ ಬಂದರಿನ ನಿರ್ಮಾಣ ಕೂಡಾ ಇದರ ಒಂದು ಹಂತ.
ಹೀಗೆ, ಟೆಂಡರ್ ಕರೆಯುವ ಮುನ್ನ ಶ್ರೀಳನ್ಕಾದವರು ನಮ್ಮ ದೇಶಕ್ಕೆ ಕೊಟ್ಟ ಪ್ರಸ್ತಾವನೆಯನ್ನು ತಿರಸ್ಕರಿಸಿ, ಈಗ ಚೈನಾ ಹಂಬನತೋಟಾ ದಲ್ಲಿ ಮಾಡುತ್ತಿರುವ ಕೆಲಸ ನೋಡಿ ಭಾರತ ಚಿಂತೆಗೀಡಾಗಿದೆ.
ಈ ಕೆಲಸದ ಹಿನ್ನಲೆಯಲ್ಲೇ, ಪಾಕಿಸ್ತಾನ, ಬರ್ಮಾ ದೇಶಕ್ಕೆ ಹೊಂದಿರುವ ಸಮುದ್ರ ತೀರದ ನಗರಗಳಲ್ಲಿ, ಚೈನಾ ದೇಶವು ಬಂದರಿನ ನಿರ್ಮಾಣದ ಕೆಲಸವನ್ನು ಪಡೆದಿರುವ ಸುದ್ಧಿ, ನಮ್ಮ ದೇಶವನ್ನು ಇನ್ನೂ ಚಿಂತೆಗೆ ತಳ್ಳಿದೆ.
ಭಾರತ ಹಾಗು ಚೈನಾದ ನಡುವೆ ಈಗ ಇರುವ ಗಡಿ ಸಮಸ್ಯೆಯ ಹಿನ್ನಲೆಯಲ್ಲಿ, ಹೀಗೆ ಅಕ್ಕ ಪಕ್ಕ ಇರುವ ದೇಶಗಳ ನಗರಗಳಲ್ಲಿ ಬಂದರಿನ ನಿರ್ಮಾಣ ಮಾಡೋ ಗುತ್ತಿಗೆ ಚೈನಾಗೆ ಸಿಕ್ಕಿದರೆ, ಅದರ ಆರ್ಥಿಕ ಸ್ಥಿತಿ, ವ್ಯಾವಹಾರಿಕ ಉನ್ನತಿಯಂತೂ ಕಟ್ಟಿಟ್ಟ ಬುತ್ತಿ.

ಇನ್ನು, ಪ್ರಪಂಚದಾದ್ಯಂತ ಚೈನಾದಲ್ಲಿ ತಯಾರಾದ ಪದಾರ್ಥಗಳ (ಕು)ಖ್ಯಾತಿ ಎಲ್ಲರಿಗೂ ತಿಳಿದಿದೆ.ಅಮೇರಿಕಾ ಹಾಗು ಐರೋಪ್ಯ ದೇಶಗಳಲ್ಲಿ, ಚೈನಾದಿಂದ ಬರುವ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಆದರೂ ನಮ್ಮಲ್ಲಿ ಇವುಗಳಿಗೆ ಮಣೆ ಹಾಕುತ್ತಾ ಇದ್ದಾರೆ.
ಚೈನಾದಲ್ಲಿ ತಯಾರಾದ ಮೊಬೈಲ್ ಫೋನುಗಳು ಯಾವುದೇ ರೀತಿಯ Traceability ಹೊಂದಿರುವುದಿಲ್ಲ. ಇವುಗಳು ದೇಶದ ಭದ್ರತೆಗೆ ಬಹಳ ಅಪಾಯಕಾರಿ. ಇವುಗಳು ಮಾರುಕಟ್ಟೆಗೆ ಬಂದ ಸುಮಾರು ೨ ವರ್ಷಗಳ ಬಳಿಕ ಇವುಗಳಿಗೆ IMEI ನಂಬರುಗಳನ್ನು ಕೊಡುವ ಪ್ರಕ್ರಿಯೆ ಶುರುವಾಯಿತು.

ಜೊತೆಗೆ ನಮ್ಮಲ್ಲಿ ಬಹುತೇಕ ವ್ಯಾಪಾರಿಗಳಲ್ಲಿ ಆಗಿರುವ ನೈತಿಕ ಅದಃಪತನ. ಗ್ರಾಹಕನಿಗೆ ಹೇಗಾದರೂ ಮಾಡಿ ಮಾರಬೇಕು ಇನ್ನುವ ಮನೋಭಾವ. ಆ ಪದಾರ್ಥದ ದುಷ್ಪರಿಣಾಮ, ದೇಶದ ಆರ್ಥಿಕತೆಗೆ ಕೊಡುತ್ತಿರುವ ಹೊಡೆತ...ಇವೆಲ್ಲ ನಗಣ್ಯ. ಹೇಗಾದರೂ ಸರಿ, ಮಾರಬೇಕು, ಕಾಸು ಮಾಡಬೇಕು.

ಕಳೆದ ವಾರ ನಾನು ನೋಡಿದ ಈ ರೀತಿಯ ಒಂದು ಘಟನೆ.. ಚೈನಾ ವಸ್ತುವಲ್ಲ ಏನಲ್ಲ. ಜಯನಗರದ ಅಶೋಕ ಪಿಲ್ಲರ್ ಕಡೆಯಿಂದ ಟೀಚರ್ಸ್ ಕಾಲೆಗಿಗೆ ಹೋಗುವ ದಾರಿಯಲ್ಲಿ, ಒಂದು ತಿಂಡಿ ಗಾಡಿ ಇದೆ.
ಸುಮಾರು ಜನ ಅಲ್ಲಿ ಒಳ್ಳೇ "ಕೋಡುಬಳೆ" ಸಿಗುತ್ತದೆ ಎಂದು. ಅವತ್ತು ಅಲ್ಲಿಗೆ ಹೋಗಿ, ಎರಡು ಕೋಡುಬಳೆ ಕೊಡಿ ಎಂದು ಕೇಳಿದೆ. ಒಂದು ಪ್ಲೇಟ್ ತಗೋಳಿ, ನಾಲ್ಕು ಬರುತ್ತೆ, ಹತ್ತು ರುಪಾಯಿ ಎಂದರು.
ಅದನ್ನು ಕೊಂಡು ತಿನ್ನಲು ಶುರು ಮಾಡಿದೆ. ಮೈದಾಹಿಟ್ಟಿಗೆ ಮೊಸರು ಹಾಕಿ ಗಟ್ಟಿಯಾಗಿ ಕಲಸಿ, ಕೋಡುಬಳೆ ಮಾಡಿ ಮಾರುತ್ತಾ ಇದಾರೆ. ರುಚಿಯಂತೂ ಥೇಟ್ ನಮ್ಮ "ಮಂಗಳೂರು ಬಜ್ಜಿ / ಗೋಲಿ ಬಜೆ".
"ಇದೇನ್ರೀ, ಮೈದಾ ಹಿಟ್ಟಿನ ಕೋಡುಬಳೆ ಮಾಡ್ತಾ ಇದ್ದೀರಾ.. ಅದೇನ್ ರುಚಿ ಇದೆ ಅಂತ ಹತ್ತು ರುಪಾಯಿ ಇಸ್ಕೊತೀರ ನೀವು. ಒಳ್ಳೇ ಮಂಗಳೂರು ಬಜ್ಜಿ ತಿಂದ ಹಾಗೆ ಇದೆ" ಎಂದು ರೇಗಿದೆ. ಅದಕ್ಕೆ ಆ ಭೂಪ,
ಒಂದೈದು ಕ್ಷಣ ನನ್ನ ಮುಖ ನೋಡಿ, ತಡವರಿಸಿಕೊಂಡು "ಇಲ್ಲಾ ಸಾರ್.. ಇದು ಪೆಸಲ್, ಮೊಸರು ಕೋಡುಬಳೆ" annOdaa ?
ಒಂದೂವರೆ ಇಂಚು ವ್ಯಾಸದ (Diameter) ನಾಲ್ಕು ಮೈದಾಹಿಟ್ಟಿನ ಕೋಡುಬಳೆಗೆ ಹತ್ತು ರುಪಾಯಿ ಪೀಕಿಸುತ್ತಾರಲ್ಲಾ, ನಿಜಕ್ಕೂ ಇವರಿಗೆ ಏನೆನ್ನಬೇಕು ?
"ವ್ಯಾಪಾರಂ ದ್ರವ್ಯ ಚಿಂತನಂ" ಎನ್ನುವುದು ಇವಾಗ "ವ್ಯಾಪಾರಂ ದ್ರೋಹ ಚಿಂತನಂ" ಎಂದಾಗಿದೆ.

ನೀವೇ ಯೋಚಿಸಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, February 11, 2010

ಚಪ್ಲಿ ಬೇಕಾದ್ರೆ ಕೊಳ್ಳಲೇ ಬೇಕಾ?

ಬಹಳ ದಿನವಾದ ಮೇಲೆ ಒಂದು ಅನುಭವ ಬರೆಯುತ್ತಿದ್ದೀನಿ, ಪರಾಂಬರಿಸಿ.

ನನ್ನ ಜೀವನದ ಸೂಪರ್ ಅನುಭವಗಳು ಹೆಚ್ಚಾಗಿ ಆಗಿರೋದು ನಮ್ಮ ಮೈಸೂರಿನ ಕಟ್ಟೆಯಲ್ಲೇ. ಸಿಹಿ, ಕಹಿ, ಹುಳಿ, ಉಪ್ಪು, ಖಾರ, ಸಪ್ಪೆ (ಕಟ್ಟೆಯಲ್ಲಿ ಯಾರೂ ಇಲ್ದೆ, ಒಬ್ನೇ ಕೂತಿರೋದು).... ಎಲ್ಲಾ ರೀತಿ ಅನುಭವಗಳೂ ಸಿಕ್ಕಿವೆ.

ಒಬ್ಬ ಕಟ್ಟೆ ಮಿತ್ರ, ಹೆಸರು.. ಹ್ಮ್, ಹರೀಶ ಅಂದುಕೊಳ್ಳೋಣ (ಗೋಪ್ಯತೆಯನ್ನು ಕಾಯುವುದಕ್ಕೆ ಹೆಸರನ್ನು ಬದಲಾಯಿಸಲಾಗಿದೆ). ಈತನಿಗೆ ಮುಂಚಿಂದಲೂ ಒಂದು ಕಲೆ ಸಿದ್ಧಿಸಿತ್ತು. ಹೇಳ ಹೆಸರಿಲ್ಲದೆ ಅಂಗಡಿಯಿಂದ ಚಪ್ಲಿ ಸಲೀಸಾಗಿ ಎತ್ಕೊಂಡು ಬರೋನು. ಒಮ್ಮೆ ಇವನ ಜೊತೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯಲ್ಲಿ ಇರೋ "ಬಾಟಾ" ಶೋರೂಮಿಗೆ ಹೋಗಿದ್ದೆ. ಕಟ್ಟೆಯಲ್ಲಿ ಕೂತಿದ್ದವನ್ನು "ಬಾರೋ, ಚಪ್ಲಿ ತಗೋಬೇಕು, ನೋಡ್ಕೊಂಡು ಬರೋಣ" ಎಂದು ಕರ್ಕೊಂಡು ಹೋದ. ಅಲ್ಲಿ ಒಳಗೆ ಹೋಗಿ, ಸುಮಾರು ಅರ್ಧ ಘಂಟೆ ಅದೂ ಇದೂ ನೋಡಿದ ಮೇಲೆ "ಯಾವ್ದೂ ಇಷ್ಟ ಆಗ್ಲಿಲ್ಲ ಕಣೋ, ಇನ್ನೊಂದಿನ ಬರೋಣ" ಎಂದವನೇ, ಬಲವಂತ ಮಾಡಿ ವಾಪಸ್ ಎಳ್ಕೊಂಡು ಬಂದ.

ಕಟ್ಟೆಗೆ ಬಂದ ಮೇಲೆ ನಾನು "ನನ್ಮಗ್ನೆ, ಮಾಡಕ್ಕೆ ಕೆಲಸ ಇಲ್ವಾ? ಸುಮ್ನೆ ಆರಾಮಾಗಿ ಇಲ್ಲೇ ಕೂತಿರ್ಬೋದಿತ್ತು, ಸುಮ್ನೆ ಅಲ್ಲಿ ತನಕ ಕರ್ಕೊಂಡು ಹೋದೆ. ಚಪ್ಲಿ ತಗೊಲ್ಲಿಲ್ಲ ಏನಿಲ್ಲ" ಅಂತಾ ಬೈತಾ ಇದ್ದೀನಿ. ಅವ್ನು ಹೋಗಿ "ಸೇಟು, ಬೈಟು ಟೀ" ಅಂತಾ ಆರ್ಡರ್ ಕೊಟ್ಟು, ನನ್ಮುಂದೆ ಕೂತು ತನ್ನ ಎರಡೂ ಕಾಲನ್ನು ಎತ್ತಿ ತೋರಿಸಿದ.. ಹೊಸಾ ಜೊತೆ ಚಪ್ಲಿ.

ಅಂಗಡಿಯ ಒಳಗೆ ಓಡಾಡ್ತಾ, ತನ್ನ ಹಳೆ ಚಪ್ಲಿ ಅಲ್ಲಿಯೇ ಬಿಟ್ಟು, ಹೊಸ ಜೊತೆ, ಅದೂ ತನಗೆ ಇಷ್ಟವಾದ ಡಿಸೈನಿದನ್ನು ಹಾಕ್ಕೊಂಡು ಬಂದಿದಾನೆ. ಜೊತೆಗೆ ಬೈತಾ ಇದ್ದ ನನಗೆ ಉಪದೇಶ ಮಾಡ್ತಾ ಇದಾನೆ "ಹೊಸಾ ಚಪ್ಲಿ ತಗೋಬೇಕು ಅಂತಾ ಹೇಳ್ದೆ, ಹೌದು.. ಆದ್ರೆ ಕಾಸು ಕೊಟ್ಟು ತಗೋತೀನಿ ಅಂತಾ ಏನಾದರೂ ಹೇಳುದ್ನಾ?" ಅಂತ.

ಒಂದು ಟೈಮಿನಲ್ಲಿ ನಮ್ಮ ಕಟ್ಟೆಯಲ್ಲಿ ಯಾರು ಚಪ್ಪಲಿ ಕೊಳ್ಳೋ ಮಾತು ಆಡಿದರೂ ಕೂಡಾ, "ಯಾಕೋ ಸುಮ್ನೆ 400 ರೂ ಖರ್ಚು ಮಾಡ್ತ್ಯಾ? ಹರೀಶನಿಗೆ 200 ರೂ ಕೊಡು, ಹೊಸಾ ಚಪ್ಲಿ ತಂದು ಕೊಡ್ತಾನೆ" ಅಂತಾ ಹೇಳ್ತಾ ಇದ್ವಿ.

ಅವತ್ತಿಂದ ಇವತ್ತಿನವರೆಗೂ ಹಳೆ ಕಟ್ಟೆ ಮಿತ್ರರು ಸಿಕ್ಕಿದ್ರೆ, ಈತನನ್ನ ಚಪ್ಲಿ ಕಳ್ಳ ಅಂತಾನೆ ರೇಗಿಸೋದು, ಜೊತೆಗೆ "ಹರೀಶ, ನಿನ್ನ ಜ್ಞಾಪಕಾರ್ಥವಾಗಿ ಎಲ್ಲಾ ಬಾಟಾ ಅಂಗಡೀಗಳಲ್ಲಿ ನಿನ್ ಫೋಟೋ ನೇತ್ಹಾಕಿದಾರೆ" ಅಂತ ಕಿಚಾಯಿಸೋದು. ಮೊನ್ನೆ ನಮ್ಮ ಮತ್ತೊಬ್ಬ ಮಿತ್ರನ ಮದ್ವೆಯಲ್ಲಿ ಸಿಕ್ಕಿದ ಅವನಿಗೆ ಹಾಗೆಯೇ ಅವನ ಹೆಂಡತಿ ಮುಂದೆ, ನಮ್ಮಿಬರಿಗೆ ಮಾತ್ರ ಅರ್ಥ ಆಗೋ ಥರಾ ರೇಗಿಸಿದೆ.

ನವಿಲನ್ನು ನೋಡಿ ಕೆಂಭೂತ ರೆಕ್ಕೆ ಕೆದರಿತು ಅಂತಾರಲ್ಲ, ಹಾಗೆ ಇನ್ನೊಂದು ಘಟನೆ ನಡೆದಿತ್ತು.

ನಮ್ಮ ಗುಂಪಿನಲ್ಲಿ ಇನ್ನೊಬ್ಬ ಇದ್ದ.. ಅವನ ಹೆಸರನ್ನು ಒಪನ್ನಾಗಿ ಹೇಳ್ತೀನಿ. ರವಿ ಅಂತಾ. ಅವನು ತೀರಾ ತಿಕ್ಕು ತಿಕ್ಕಲಾಗಿ ಆಡ್ತಾ ಇದ್ದ. ಆರಡಿ ಇದ್ದ ಒಳ್ಳೇ ಅಜಾನುಬಾಹು, ಜಗ್ಗೇಶ್ ಹೇಳೋ ಹಾಗೆ "ಒಳ್ಳೇ ಹೈಟು ಒಳ್ಳೇ ವೇಯ್ಟು.. ಬುದ್ಧಿ ಮಾತ್ರಾ ಶಾರ್ಟು" ಅಂತ, ಆ ರೀತಿ. ಆದ್ರೆ ತೀರಾ ವಿಚಿತ್ರವಾಗಿ ಆಡ್ತಾ ಇದ್ದ. ಇದಕ್ಕೆ ಅವನನ್ನ "ಹುಚ್ಚ" ಅಂತಾ ಕರೀತಾ ಇದ್ದದ್ದು. ಇವನು ನಮ್ಮ ಗುಂಪಿನಲ್ಲಿ ಇದ್ದಾಗ ಮೈಸೂರಿನ ಸರಸ್ವತಿಪುರಂನ ಎಂಟನೆ ಮೈನಿನಲ್ಲಿ ಇರೋ ಪಾರ್ಕಿನಲ್ಲಿ ಸಂಜೆ ಹೊತ್ತು ಟೈಂಪಾಸ್ ಮಾಡ್ತಾ ಇದ್ದದ್ದು. ಅದರ ಪಕ್ಕದಲ್ಲಿ ಒಂದು ಬಟ್ಟೆ ಅಂಗಡಿ. ಆ ಅಂಗಡಿ ಒಬ್ಬ ರಾಜಾಸ್ತಾನಿಯದು. ಅಲ್ಲಿ ಅವಾಗವಾಗ ನಾವು ಟೀ-ಶರ್ಟ್, ಕ್ರಿಕೆಟ್ ಆಡೋದಕ್ಕೆ ಟ್ರಾಕ್ ಪ್ಯಾಂಟ್ ತಗೋತಾ ಇದ್ವಿ. ಹಾಗಾಗಿ ಒಳ್ಳೆ ಪರಿಚಯ ಇತ್ತು. ಹುಚ್ಚ ನಮ್ಮ ಜೊತೆ ಕ್ರಿಕೆಟ್ ಆಡ್ತಾ ಇರ್ಲಿಲ್ಲ. ಸಂಜೆ ಹೊತ್ತು ಒಮ್ಮೊಮ್ಮೆ ನಾವು ಆ ಅಂಗಡಿಗೆ ಹೋಗಿ, ಒಂದೈದು ನಿಮಿಷ ಮಾತಾಡ್ಕೊಂಡು ಬರ್ತಾ ಇದ್ವಿ. ಒಂದು ಸಂಜೆ ಹೀಗೆ ಅಲ್ಲಿಗೆ ಹೋದಾಗ, ಹುಚ್ಚ ಕೂಡ ನಮ್ಮ ಜೊತೆ ಇದ್ದ. ಅಂಗಡಿಯಾತ ನಮಗೆ "ಹೊಸಾ ಟೀ ಶರ್ಟ್ ಬಂದಿದೆ, ನೋಡ್ತೀರಾ" ಅಂತ ಕೇಳಿದ.

ನಾವು ಹಾಗೆ ನೋಡ್ತಾ ಇದ್ದಾಗ, ಈ ಹುಚ್ಚ ತನ್ನ ಶರ್ಟನ್ನು ಹಾಗೆ ತೆಗೆದು (ಒಳಗೆ ಬನೀನನ್ನು ಹಾಕಿರ್ಲಿಲ್ಲ ಪುಣ್ಯಾತ್ಮ), ಈ ಟೀ ಶರ್ಟನ್ನು ಹಾಕಿಕೊಂಡ. ಪಕ್ಕದಲ್ಲೇ ಇದ್ದ ಒಬ್ಬಾಕೆ ಹಾಗೆ ಮುಖ ಸಿಂಡರಿಸಿಕೊಂಡು ಹಾಗೆ ಅವನನ್ನು ದುರುಗುಟ್ಟಿಕೊಂಡು ಅಂಗಡಿಯಿಂದಲೇ ಹೋದಳು. ಅದಾದ ಮೇಲೆ ಹಾಗೆಯೇ ಅದನ್ನು ತೆಗೆದು, ತನ್ನ ಶರ್ಟನ್ನು ಹಾಕಿಕೊಂಡು ಹೊರಗೆ ಈತ ಹೋದ. ನಾವು ಅವನನ್ನು ರೆಗಿಸೋದಕ್ಕೆ "ಲೋ ರವಿ, ಹೊಸಾ ಡಿಸೈನ್ ಕಾಚ ಬಂದಿದೆ ನೋಡೋ" ಎಂದು ಕೂಗಿದ್ವಿ.

ಅದಕ್ಕೆ ಅಂಗಡಿಯವನು "ಅಯ್ಯೋ ಬೇಡಾ ಸಾರ್, ಕಾಚನಾ ಕೂಡಾ ಹೊರಗಡೆ ನಿಂತ್ಕೊಂಡು ಟ್ರೈ ಮಾಡ್ತಾರೆ ಅವ್ರು, ಸುಮ್ನಿರಿ" ಅನ್ನೋದಾ? ಹೆಂಗೆ ನಕ್ಕಿದೀವಿ ಅವತ್ತು ಅಂದ್ರೆ.. ಯಪ್ಪಾ.

ಈ ರವಿ ಎಂಥಾ ಹುಚ್ಚ ಅನ್ನೋದಕ್ಕೆ ಈ ಘಟನೆ ಹೇಳಿದ್ದು.

ನಮ್ಮ ಹರೀಶನ ಕೈಚಳಕ ಈ ರವಿ ಕೂಡಾ ನೋಡಿದ್ದ. ನಾನು ಹೀಗೆ ಒಮ್ಮೆ ಮಾಡಬೇಕು ಅಂತಾ ಬಹಳ ದಿನದಿಂದ ಸ್ಕೆಚ್ ಹಾಕ್ತಾ ಇದ್ದ. ಹಾಗೆ ಟ್ರೈ ಮಾಡಲು ಹೋಗಿ, ಒಂದು ಬಾಟಾ ಅಂಗಡಿಯಲ್ಲಿ ಸಿಕ್ಕಿಹಾಕಿಕೊಂಡು, ಧರ್ಮದೇಟು ತಿನ್ನೋದ್ರಿಂದ ಸ್ವಲ್ಪದರಲ್ಲಿ ಪಾರಾಗಿ ಬಂದಿದ್ದ. ಯಪ್ಪಾ, ನೆನೆಸಿಕೊಂಡರೆ, ಈಗ್ಲೂ ಹೊಟ್ಟೆ ಹುಣ್ಣಾಗುತ್ತೆ.

ಇನ್ನೊಮ್ಮೆ ಯಾವಾಗ್ಲಾದ್ರೂ, ನಮ್ಮ ಕಟ್ಟೆಯ ಬೇರೆ ಪ್ರಹಸನಗಳನ್ನು ಹಾಕ್ತೀನಿ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, February 5, 2010

ಆಟೋ ಅಣಿಮುತ್ತುಗಳು - ೮೪ - ನಾ ಮಂಡ್ಯ ಕಣೇ

ನಮ್ಮ ಆಫೀಸಿನ ಮುಂದೆ ಇರೋ ಕ್ರೈಸ್ಟ್ ಕಾಲೇಜಿನ ಬಳಿ ಒಂದು ದಿನ ಕಂಡ ಆಟೋ ಇದು.
ಮಂಡ್ಯದ ಗಂಡು ಈ ಅಣ್ಣ. ತನ್ನ ಪ್ರಿಯತಮೆಗೆ ಹೀಗಂತಾ ಸಾರುತ್ತಾ ಇದಾನೆ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ