Showing posts with label ಕೇಪು. Show all posts
Showing posts with label ಕೇಪು. Show all posts

Tuesday, September 2, 2008

ಗಣಪತಿ ಕೂರ್ಸಿದೀರಾ ??

ಕೈಲಿ ಅಕ್ಷತೆ ಬಟ್ಟಲು, ಜೇಬಲ್ಲಿ ಪೆನ್ಸಿಲ್ ಹಾಗು ನೋಟ್ ಬುಕ್ಕಿನಿಂದ ಹರಿದ ಖಾಲಿ ಹಾಳೆ, ಮೈಮೇಲೆ ಹೊಸಾ ಶರ್ಟು ಚಡ್ಡಿ, ಕಾಲಲ್ಲಿ ಹವಾಯ್ ಚಪ್ಲಿ...

ಪ್ರತಿ ಮನೆ ಬಾಗಿಲಿಗೆ ಐದಾರು ಐಕಳ ಗುಂಪು ಹೋಗಿ "ಗಣ್ಪತಿ ಕೂರ್ಸಿದೀರಾ ?" ಅಂತಾ ಕೂಗು ಹಾಕೋದು.
ಬನ್ರೋ ಅಂತಾ ಮನೆಯ ತಾಯಿ ಕರೆದಾಗ ಒಳಾಗೆ ಹೋಗಿ, ಮನೆಯ ಹಾಲಿನಲ್ಲಿ ಕೂರಿಸಿರುವ ಗಣಪನಿಗೆ ಅಕ್ಷತೆ ಹಾಕಿ,

"ಬೆನಕ ಬೆನಕ ಏಕದಂತ, ಪಚ್ಚೆಕಲ್ಲು ಪಾಣಿಪೀಠ, ಮುತ್ತಿನುಂಡೆ ಹೊನ್ನಗಂಟೆ, ಒಪ್ಪುವಂಥ ವಿಘ್ನೇಶ್ವರ, ನಿನಗೆ ೨೧ ನಮಸ್ಕಾರಗಳು" ಅನ್ನೋ ಶ್ಲೋಕ ಹಾಡಿ,

ಗಣಪನ ಮುಂದಿಟ್ಟಿರುವ ಪಂಚಪಾತ್ರೆಯಲ್ಲಿರುವ ಕುಂಕುಮ ಹಣೆಗೆ ಇಟ್ಟಿಕೊಂಡು, ಮನೆಯವರು ಬರುವ ಮಕ್ಕಳಿಗೋಸ್ಕರ ಮಾಡಿರುವ ಕಡ್ಲೇಕಾಳು ಗುಗ್ಗರಿ, ಕಡ್ಲೇಹಿಟ್ಟು ತಿಂದು ಬಾಯಿ ಒರೆಸಿ ಹೊರಗೆ ಬಂದು ದೀಪಾವಳಿಯಲ್ಲಿ ಹೊಡೆಯುವ ಕೇಪನ್ನು ನಟ್ಟೂ ಬೋಳ್ಟಿನ ಒಳಗೆ ಹಾಕಿ, ಟೈಟ್ ಮಾಡಿ, ಗಣಪತಿಯನ್ನು ವಿಸಿಟ್ ಮಾಡಿದ ಮನೆಯ ಮುಂದೆ ಠಪಾರ್ ಎಂದು ಸಿಡಿಸಿ, ಪೆನ್ಸಿಲ್ಲನ್ನು ಜೇಬಿಂದ ತೆಗೆದು ಪೇಪರ್ರಲ್ಲಿ ಒಂದು ಮನೆ ಅಂತಾ ಬರೆದು ಮುಂದಿನ ಮನೆಯ ಮುಂದೆ ಹೋಗಿ ಪುನಃ..

ಗಣ್ಪತಿ ಕೂರ್ಸಿದೀರಾ ????

ಆ ದಿನಗಳು. ಸುಮಾರು ವರ್ಷಗಳು 101 ಮನೆ ವಿಸಿಟ್ ಮಾಡದೆ ಇದ್ರೆ ಆ ಗಣಪನೇ ಬಂದು ಶಾಪ ಕೊಡ್ತಾನೆ ಅನ್ನೋ ಥರಾ ಬೀದಿ ಬೀದಿ ಸುತ್ತುತ್ತಾ ಇದ್ವಿ. ಯಾವ್ದೋ UNKNOWN ಕಾರಣದಿಂದ 101 ಆಗ್ಲಿಲ್ಲಾ ಅಂದ್ರೆ ಮಿನಿಮಮ್ 21 ಮನೆ ಮಾತ್ರ ಯಾವ್ದೇ ಕಾರಣಕ್ಕೂ ಗ್ಯಾರಂಟಿ. ಗಣಪತಿ ವಿಸಿಟ್ ಆದಮೇಲೆ, ಮನೆಗೆ ಬಂದು ಶ್ಯಮಂತೊಪಾಖ್ಯಾನ ಕಥೆ ಕೇಳೋ ತನಕ ಅಪ್ಪಿ ತಪ್ಪಿ ಕೂಡಾ ತಲೆ ಎತ್ತಿ ಆಕಾಶ ನೋಡ್ತಾ ಇರ್ಲಿಲ್ಲಾ. ವಿಸಿಟ್ ಮಾಡಿದ ಪ್ರತಿ ಮನೆ ಮುಂದೆ ನಟ್ಟು ಬೋಳ್ಟಿನಲ್ಲಿ ಹಾಕಿ ಹೊಡೆಯುವ ಕೇಪನ್ನು ಕೂಡಾ ಕಳೆದ ದೀಪಾವಳಿಯಿಂದ ಉಳಿಸಿ ಇಟ್ಟಿದ್ದು.... ಆದ್ರೆ ಇವತ್ತಿನ ದಿನಗಳಲ್ಲಿ.. ಬಿಡ್ರಿ, ಸುಮ್ನೆ ಹಳೇದನ್ನ ನೆನೆಸಿಕೊಂಡು ಖುಷಿ ಪಡ್ರಿ ಸಾಕು.

ನಾಳೆ ಕೂತು ಗಣಾಧೀಶನಿಗೆ ಪೂಜೆ ಮಾಡಬೇಕು. ಸಡನ್ನಾಗಿ ಇವಾಗ ರಾತ್ರಿ ಆ ಹಳೆಯ ವಿಚಾರ ಜ್ನಾಪಕಕ್ಕೆ ಬಂತು.
ಬಿಟ್ರೆ ಕೆಟ್ಟೆ ಅನ್ಕೊಂಡು ಥಟ್ ಅಂತಾ ಇದನ್ನ ಬರೆದೆ.

ನೀವೊ ಕೂಡಾ ಹೀಗೆ ಅಂದಿರ್ತೀರಾ ಅಲ್ವಾ??

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ