"ಸೌತ್ ತಿಂಡೀಸ್" ಅಂತಾ ಹೋಟ್ಲು. ಇದು ಇರೋದು ಕನಕಪುರ ರಸ್ತೆಯಲ್ಲಿ, ಕೃಷ್ಣರಾವ್ ಪಾರ್ಕಿನ ಬಳಿ (ಸೌತ್ ಎಂಡ್ ಸರ್ಕಲ್ಲಿನಿಂದ ನಾಗಸಂದ್ರ ಕಡೆ ಬಂದರೆ, ಮಧ್ಯದಲ್ಲಿ ಸಿಗೋ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿದರೆ ಈ ಹೋಟ್ಲು ಕಾಣುತ್ತೆ).
ಈ ಜಾಗದಲ್ಲಿ ಮುಂಚೆ "ವಿಜಯ ದರ್ಶಿನಿ" ಅನ್ನೋ ಒಂದು ದರ್ಶಿನಿ ಇತ್ತು. ತಿಂಡಿ ಅಷ್ಟಕ್ಕಷ್ಟೆ ಇದ್ದದ್ದು, ಆದ್ರೆ ಕಾಫಿ ಚೆನ್ನಾಗಿ ಮಾಡ್ತಾ ಇದ್ರು.
ಸರಿ, ವಿಷಯಕ್ಕೆ ಬರೋಣ. ನಿನ್ನೆ ಎಲ್ರೂ ಸೇರಿದ್ರೆ ಏಳು ಜನ.
ನಾನು, ಹೇಮಂತ, ಶ್ರೇಯು, ಸುಬ್ಬು, ನವೀನ, ಜಗ್ಗ, ಶಶಿ...ಎಲ್ರೂ ಒಳ್ಳೇ ಗ್ರೈಂಡರ್ ನನ್ ಮಕ್ಳು. ಕ್ಯಾಶ್ ಕೌಂಟರಿನಲ್ಲಿ ನಿಂತು ಯಾರಿಗೆ ಏನು ಬೇಕು ಅಂತಾ ಡಿಸೈಡ್ ಮಾಡುವಾಗ ಅಲ್ಲಿ ಇದ್ದ ಮೆನ್ನು ಬೋರ್ಡಿನ ಮೇಲೆ ಕಣ್ಣು ಹೋಯ್ತು. ಮೈ ಎಲ್ಲಾ ಉರೀತು. ಇತ್ತೀಚಿಗೆ ಬೆಂಗಳೂರಿನ ಹೋಟೆಲಿಗರಿಗೆ ಶುರು ಆಗಿರೋ ಮತ್ತೊಂದು ರೋಗ ಅಂತ ಹೇಳ್ತೀನಿ.
"ಮೆದು ವಡಾ" ಅಂತಾ ಹಾಕಿದಾರೆ. ಉದ್ದಿನ ವಡೆಯನ್ನು ತಮಿಳುನಾಡಿನಲ್ಲಿ ಹೀಗೆ ಕರೆಯುತ್ತಾರೆ. ತಕ್ಷಣ ಕೌಂಟರಿನಲ್ಲಿ ಕೇಳಿದೆ,
ನಾನು :"ಯಾಕೆ ಸ್ವಾಮಿ ? ನೀವು ಕರ್ನಾಟಕದಲ್ಲಿ ಇದೀರೋ ಅಥವಾ ತಮಿಳುನಾಡಿನಲ್ಲಿ ಇದೀರೋ.. ಮೆದು ವಡಾ ಅಂತಾ ಯಾಕೆ ಹಾಕಿದೀರ? ಚೇಂಜ್ ಮಾಡ್ರೀ" ಅಂತಾ ದಬಾಯಿಸಿದೆ.
ಅದಕ್ಕೆ ಆತ :"ನಮಗೆ ಗೊತ್ತಿಲ್ಲ ಸಾರ್, ಓನರ್ ನ ಕೇಳಿ"
ಸರಿ, ಓನರ್ ಎಲ್ಲಿ ಅಂತಾ ವಿಚಾರಿಸಿದ್ದಕ್ಕೆ ಅಲ್ಲೇ ದೋಸೆ ಮಾಡೋ ಜಾಗದಲ್ಲಿ ಸಿಕ್ಕಿದ್ರು. ಅಲ್ಲಿ ಈ ನನ್ನ Objection ಹೇಳಿದ್ದಕ್ಕೆ, ಒಳಗೆ ಗಲಾಟೆ ಇದೆ, ಏನೂ ಸರಿಯಾಗಿ ಕೇಳುಸ್ತಾ ಇಲ್ಲಾ ಅಂತ ಹೊರಗೆ ಕರ್ಕೊಂಡು ಬಂದು ಮಾತಾಡೋಕ್ಕೆ ಶುರು ಮಾಡುದ್ರು.
ನಾನು : "ಅಲ್ಲಾ ಸಾರ್, ನೀವು ಇರೋದು, ನಿಮ್ಮ ಹೋಟ್ಲು ಇರೋದು ಎಲ್ಲಿ?"
ಓನರ್ : ಅಶ್ಚರ್ಯ ಪಟ್ಕೊಂಡು "ಬೆಂಗಳೂರಲ್ಲಿ... ಯಾಕೆ ಹಾಗೆ ಕೇಳ್ತೀರ?"
ನಾನು : "ಮತ್ತೆ, ಬೆಂಗಳೂರಲ್ಲಿ ಹೋಟ್ಲು ಮಾಡಿ ಮೆನು ನಲ್ಲಿ ತಮಿಳುನಾಡಿನ ಹಾಗೆ ಮೆದು ವಡಾ ಅಂತಾ ಯಾಕೆ ಹಾಕಿದೀರ? ಕನ್ನಡದಲ್ಲಿ ಇಷ್ಟು ವರ್ಷಗಳಿಂದ ಹಾಕೋ ಹಾಗೆ ಉದ್ದಿನ ವಡೆ ಅಂತಾ ಹಾಕೋಕ್ಕೆ ನಿಮಗೆ ಏನು ಪ್ರಾಬ್ಲಮ್ ?"
ಓನರ್ : "ನಮ್ಮ ಹೋಟ್ಲಿನ ಸ್ಪೆಶಾಲಿಟಿ ಅಂದ್ರೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ರಾಜ್ಯಗಳ ತಿಂಡಿಗಳನ್ನೂ ಮಾಡ್ತೀವಿ, ಅದಕ್ಕೆ ಎಲ್ರಿಗೂ ಅರ್ಥ ಆಗ್ಲಿ ಅಂತಾ ಹೀಗೆ ಹೆಸ್ರು ಇಟ್ಟಿದ್ದು"
ನಾನು : "ರೀ ಸ್ವಾಮಿ, ನೀವು ಹೆಸ್ರು ಚೇಂಜ್ ಯಾಕೆ ಮಾಡ್ಬೇಕು ? ದಕ್ಷಿಣ ಭಾರತದ ಯಾವುದೇ ಮಂದಿ ಇಲ್ಲಿ ಬಂದು ತಿಂದ್ರೆ, ಅವ್ರಿಗೆ ಮೆದು ವಡಾ ಅಂದ್ರೆ ಮಾತ್ರ ಅರ್ಥ ಆಗುತ್ತಾ? ಇಲ್ಲಿಗೆ ಬಂದು ತಿನ್ನೋರು ಇಲ್ಲೇ ಬೆಂಗಳೂರಲ್ಲಿ ವಾಸವಾಗಿರೋ ಜನ. ಅವ್ರಿಗೆ ಉದ್ದಿನ ವಡೆ ಅಂದ್ರೆ ಏನ್ ಅರ್ಥ ಆಗ್ದೇ ಇರೋ ಐಟಮ್ಮಾ?"
ಓನರ್ : "ಇಲ್ಲಾ ಸಾರ್.. ನಾನು ಹೇಳಿದ್ದನ್ನ ನೀವು ಅರ್ಥ ಮಾಡ್ಕೊತಾ ಇಲ್ಲ"
ನಾನು : "ಸಾರ್, ಇವೆಲ್ಲಾ ಸುಮ್ನೆ ಬ್ಯಾಡ್ದೇ ಇರೋ ಆಟಗಳು ಇದು. ಕನ್ನಡನಾ, ಕನ್ನಡಿಗರನ್ನ ಕಡೆಗಾಣಿಸಿ ಬೇರೆ ಜನಕ್ಕೆ ಮಣೆ ಹಾಕ್ತೀರಲ್ಲಾ ನೀವು... ಅದ್ ಬಿಟ್ಟಾಕಿ, ನಾಳೆ ಮೀಲ್ಸ್ ಶುರು ಮಾಡಿದಾಗ ಮಜ್ಜಿಗೆ ಹುಳಿ ಮೆನು ನಲ್ಲಿ ಹಾಕ್ತೀರ. ಅವಾಗ ಅದನ್ನು
ತಮಿಳಿನಲ್ಲಿ ಮೋರ್ ಕೊಳಂಬು ಅಂತಾ ಹಾಕ್ತೀರಾ ಅಥ್ವಾ ತೆಲುಗಲ್ಲಿ ಮಜ್ಜಿಗ ಪುಲ್ಸು ಅಂತಾ ಕರೀತೀರಾ?? ಸುಮ್ನೆ ಈ ಥರ ಆಡೋದನ್ನ ಬಿಟ್ಟೂ ನಮ್ಮ ಭಾಷೆಗೆ Prominance ಕೊಡಿ"
ಓನರ್ : "ಹಂಗಲ್ಲಾ ಸಾರ್, ಹೋಟ್ಲು ಅಂದಮೇಲೆ ಎಲ್ಲಾ ರೀತಿ ಜನರನ್ನೂ ಗಮನದಲ್ಲಿ ಇಟ್ಕೋಬೇಕು ಸಾರ್"
ನಾನು : "ರೀ ಸ್ವಾಮಿ, ಇಷ್ಟು ಹೇಳಿದ ಮೇಲೂ ನೀವು ಹೀಗೆ ಮಾತಾಡ್ತೀರಲ್ಲಾ, ನಿಮ್ ಹೋಟ್ಲು ನಿಮ್ಮಿಷ್ಟ.. ಏನಾದ್ರೂ ಮಾಡ್ಕೊಳಿ. ನಾನಂತೂ ಇಲ್ಲಿಗೆ ಬರೊಲ್ಲಾ ಹಾಗು ನನಗೆ ಗೊತ್ತಿರೋ ಜನಕ್ಕೆ ಇಲ್ಲಿಗೆ ಬರಬೇಡಿ ಅಂತಾನೇ ಹೇಳ್ತೀನಿ"
ಓನರ್ : "ಹಂಗೆಲ್ಲಾ ಮಾಡೋಹಾಗಿಲ್ಲಾ ಸಾರ್ ನೀವು"
ಪಕ್ಕದಲ್ಲಿದ್ದ ಜನರು ಸುಮಾರು ಹೊತ್ತಿಂದ ನಮ್ಮ ಮಾತು ಕೇಳುಸ್ಕೋತಾ ಇದ್ರು.. ಓನರ್ ಯಾವಾಗ ಹೀಗೆ ಹೇಳುದ್ರೋ ಅವಾಗ ಸುಮಾರು ಜನ ಒಟ್ಟಿಗೆ "ಅದ್ಯಾಕೆ ಆಗಲ್ಲಾ ?? ಕನ್ನಡದವರಾಗಿ ಹೀಗೆ ಮಾಡಿ ಅಂತ Suggestion ಕೊಟ್ರೆ, ಹೀಗೆ ಆಡ್ತೀರಲ್ಲ ನೀವು.. " ಹಾಗೆ ಹೀಗೆ ಅಂತಾ ತಲೆಗೆ ಒಂದೊಂದು ಆವಾಜ್ ಹಾಕ್ತಾ ಇದಾರೆ.
ಏನಾದ್ರೂ ಮಾಡ್ಕೊಂದು ಹಾಳಾಗಿ ಅಂತ ವಾಪಸ್ ಬಂದೆ.
ನಮ್ಮ ಜನರೇ ಈ ರೀತಿ ಮಾಡುದ್ರೆ, ನಮ್ಮ ಭಾಷೆ ಬಗ್ಗೆ ಯಾರು ಅಭಿಮಾನ ತೋರುಸ್ತಾರೆ ? ನಮ್ಮ ಭಾಷೆ ಬೆಳೆಯೋದು ಹೆಂಗೆ ? ಅನ್ಯಾಭಾಷಿಕರಿಗೆ ಮಣೆ ಹಾಕಿ ಹಾಕಿ ನಮಗೆ ಚಾಪೆ ಕೂಡಾ ಸಿಗದ ಹಾಗೆ ಆಗ್ತಾ ಇದೆ.
ಮಾಸ್ಟರ್ ಹಿರಣ್ಣಯ್ಯ ಭಾಷಾಭಿಮಾನದ ಬಗ್ಗೆ ಹೇಳೋ ಹಾಗೆ "ತಮಿಳರು ಅಭಿಮಾನಿಗಳು, ತೆಲುಗರು ದುರಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು" ಅನ್ನೋ ಮಾತು ಎಷ್ಟು ಸತ್ಯ ಅನ್ಸುತ್ತೆ ಅಲ್ವಾ?
ಈ ಮೆದು ವಡಾ ಹೆಸ್ರು ಬರೀ ಇಲ್ಲಲ್ಲಾ, ಡಿವಿಜಿ ರಸ್ತೆಯಲ್ಲಿ ಇರೋ "ಉಪಹಾರ ದರ್ಶಿನಿ"ಯಲ್ಲೂ ಕೂಡಾ ಹಾಕಿದಾರೆ.
ನಿಮ್ಮೆಲ್ಲರಲ್ಲಿ ಒಂದು ವಿನಂತಿ, ಮುಂದಿನ ಬಾರಿ ನೀವು "ಸೌತ್ ತಿಂಡೀಸ್" ಅಥವಾ "ಉಪಹಾರ ದರ್ಶಿನಿ" ಗೆ ಭೇಟಿ ಕೊಟ್ರೆ, ಈ ವಿಚಾರವಾಗಿ ನಿಮ್ಮ Objection ತಿಳಿಸಿ. Atleast ತುಂಬಾ ಜನ ವಿರೋಧ ವ್ಯಕ್ತಪಡಿಸ್ತಾ ಇದಾರೆ ಅನ್ನೋ ಕಾರಣಕ್ಕಾದ್ರೂ ಬದಲಾಯಿಸಲಿ.
ಕನ್ನಡ ಬಳಸಿ, ಕನ್ನಡ ಉಳಿಸಿ
--------------------------------------------------------------------ನಿಮ್ಮವನು,
ಕಟ್ಟೆ ಶಂಕ್ರ