"ಸೌತ್ ತಿಂಡೀಸ್" ಅಂತಾ ಹೋಟ್ಲು. ಇದು ಇರೋದು ಕನಕಪುರ ರಸ್ತೆಯಲ್ಲಿ, ಕೃಷ್ಣರಾವ್ ಪಾರ್ಕಿನ ಬಳಿ (ಸೌತ್ ಎಂಡ್ ಸರ್ಕಲ್ಲಿನಿಂದ ನಾಗಸಂದ್ರ ಕಡೆ ಬಂದರೆ, ಮಧ್ಯದಲ್ಲಿ ಸಿಗೋ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿದರೆ ಈ ಹೋಟ್ಲು ಕಾಣುತ್ತೆ).
ಈ ಜಾಗದಲ್ಲಿ ಮುಂಚೆ "ವಿಜಯ ದರ್ಶಿನಿ" ಅನ್ನೋ ಒಂದು ದರ್ಶಿನಿ ಇತ್ತು. ತಿಂಡಿ ಅಷ್ಟಕ್ಕಷ್ಟೆ ಇದ್ದದ್ದು, ಆದ್ರೆ ಕಾಫಿ ಚೆನ್ನಾಗಿ ಮಾಡ್ತಾ ಇದ್ರು.
ಸರಿ, ವಿಷಯಕ್ಕೆ ಬರೋಣ. ನಿನ್ನೆ ಎಲ್ರೂ ಸೇರಿದ್ರೆ ಏಳು ಜನ.
ನಾನು, ಹೇಮಂತ, ಶ್ರೇಯು, ಸುಬ್ಬು, ನವೀನ, ಜಗ್ಗ, ಶಶಿ...ಎಲ್ರೂ ಒಳ್ಳೇ ಗ್ರೈಂಡರ್ ನನ್ ಮಕ್ಳು. ಕ್ಯಾಶ್ ಕೌಂಟರಿನಲ್ಲಿ ನಿಂತು ಯಾರಿಗೆ ಏನು ಬೇಕು ಅಂತಾ ಡಿಸೈಡ್ ಮಾಡುವಾಗ ಅಲ್ಲಿ ಇದ್ದ ಮೆನ್ನು ಬೋರ್ಡಿನ ಮೇಲೆ ಕಣ್ಣು ಹೋಯ್ತು. ಮೈ ಎಲ್ಲಾ ಉರೀತು. ಇತ್ತೀಚಿಗೆ ಬೆಂಗಳೂರಿನ ಹೋಟೆಲಿಗರಿಗೆ ಶುರು ಆಗಿರೋ ಮತ್ತೊಂದು ರೋಗ ಅಂತ ಹೇಳ್ತೀನಿ.
"ಮೆದು ವಡಾ" ಅಂತಾ ಹಾಕಿದಾರೆ. ಉದ್ದಿನ ವಡೆಯನ್ನು ತಮಿಳುನಾಡಿನಲ್ಲಿ ಹೀಗೆ ಕರೆಯುತ್ತಾರೆ. ತಕ್ಷಣ ಕೌಂಟರಿನಲ್ಲಿ ಕೇಳಿದೆ,
ನಾನು :"ಯಾಕೆ ಸ್ವಾಮಿ ? ನೀವು ಕರ್ನಾಟಕದಲ್ಲಿ ಇದೀರೋ ಅಥವಾ ತಮಿಳುನಾಡಿನಲ್ಲಿ ಇದೀರೋ.. ಮೆದು ವಡಾ ಅಂತಾ ಯಾಕೆ ಹಾಕಿದೀರ? ಚೇಂಜ್ ಮಾಡ್ರೀ" ಅಂತಾ ದಬಾಯಿಸಿದೆ.
ಅದಕ್ಕೆ ಆತ :"ನಮಗೆ ಗೊತ್ತಿಲ್ಲ ಸಾರ್, ಓನರ್ ನ ಕೇಳಿ"
ಸರಿ, ಓನರ್ ಎಲ್ಲಿ ಅಂತಾ ವಿಚಾರಿಸಿದ್ದಕ್ಕೆ ಅಲ್ಲೇ ದೋಸೆ ಮಾಡೋ ಜಾಗದಲ್ಲಿ ಸಿಕ್ಕಿದ್ರು. ಅಲ್ಲಿ ಈ ನನ್ನ Objection ಹೇಳಿದ್ದಕ್ಕೆ, ಒಳಗೆ ಗಲಾಟೆ ಇದೆ, ಏನೂ ಸರಿಯಾಗಿ ಕೇಳುಸ್ತಾ ಇಲ್ಲಾ ಅಂತ ಹೊರಗೆ ಕರ್ಕೊಂಡು ಬಂದು ಮಾತಾಡೋಕ್ಕೆ ಶುರು ಮಾಡುದ್ರು.
ನಾನು : "ಅಲ್ಲಾ ಸಾರ್, ನೀವು ಇರೋದು, ನಿಮ್ಮ ಹೋಟ್ಲು ಇರೋದು ಎಲ್ಲಿ?"
ಓನರ್ : ಅಶ್ಚರ್ಯ ಪಟ್ಕೊಂಡು "ಬೆಂಗಳೂರಲ್ಲಿ... ಯಾಕೆ ಹಾಗೆ ಕೇಳ್ತೀರ?"
ನಾನು : "ಮತ್ತೆ, ಬೆಂಗಳೂರಲ್ಲಿ ಹೋಟ್ಲು ಮಾಡಿ ಮೆನು ನಲ್ಲಿ ತಮಿಳುನಾಡಿನ ಹಾಗೆ ಮೆದು ವಡಾ ಅಂತಾ ಯಾಕೆ ಹಾಕಿದೀರ? ಕನ್ನಡದಲ್ಲಿ ಇಷ್ಟು ವರ್ಷಗಳಿಂದ ಹಾಕೋ ಹಾಗೆ ಉದ್ದಿನ ವಡೆ ಅಂತಾ ಹಾಕೋಕ್ಕೆ ನಿಮಗೆ ಏನು ಪ್ರಾಬ್ಲಮ್ ?"
ಓನರ್ : "ನಮ್ಮ ಹೋಟ್ಲಿನ ಸ್ಪೆಶಾಲಿಟಿ ಅಂದ್ರೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ರಾಜ್ಯಗಳ ತಿಂಡಿಗಳನ್ನೂ ಮಾಡ್ತೀವಿ, ಅದಕ್ಕೆ ಎಲ್ರಿಗೂ ಅರ್ಥ ಆಗ್ಲಿ ಅಂತಾ ಹೀಗೆ ಹೆಸ್ರು ಇಟ್ಟಿದ್ದು"
ನಾನು : "ರೀ ಸ್ವಾಮಿ, ನೀವು ಹೆಸ್ರು ಚೇಂಜ್ ಯಾಕೆ ಮಾಡ್ಬೇಕು ? ದಕ್ಷಿಣ ಭಾರತದ ಯಾವುದೇ ಮಂದಿ ಇಲ್ಲಿ ಬಂದು ತಿಂದ್ರೆ, ಅವ್ರಿಗೆ ಮೆದು ವಡಾ ಅಂದ್ರೆ ಮಾತ್ರ ಅರ್ಥ ಆಗುತ್ತಾ? ಇಲ್ಲಿಗೆ ಬಂದು ತಿನ್ನೋರು ಇಲ್ಲೇ ಬೆಂಗಳೂರಲ್ಲಿ ವಾಸವಾಗಿರೋ ಜನ. ಅವ್ರಿಗೆ ಉದ್ದಿನ ವಡೆ ಅಂದ್ರೆ ಏನ್ ಅರ್ಥ ಆಗ್ದೇ ಇರೋ ಐಟಮ್ಮಾ?"
ಓನರ್ : "ಇಲ್ಲಾ ಸಾರ್.. ನಾನು ಹೇಳಿದ್ದನ್ನ ನೀವು ಅರ್ಥ ಮಾಡ್ಕೊತಾ ಇಲ್ಲ"
ನಾನು : "ಸಾರ್, ಇವೆಲ್ಲಾ ಸುಮ್ನೆ ಬ್ಯಾಡ್ದೇ ಇರೋ ಆಟಗಳು ಇದು. ಕನ್ನಡನಾ, ಕನ್ನಡಿಗರನ್ನ ಕಡೆಗಾಣಿಸಿ ಬೇರೆ ಜನಕ್ಕೆ ಮಣೆ ಹಾಕ್ತೀರಲ್ಲಾ ನೀವು... ಅದ್ ಬಿಟ್ಟಾಕಿ, ನಾಳೆ ಮೀಲ್ಸ್ ಶುರು ಮಾಡಿದಾಗ ಮಜ್ಜಿಗೆ ಹುಳಿ ಮೆನು ನಲ್ಲಿ ಹಾಕ್ತೀರ. ಅವಾಗ ಅದನ್ನು
ತಮಿಳಿನಲ್ಲಿ ಮೋರ್ ಕೊಳಂಬು ಅಂತಾ ಹಾಕ್ತೀರಾ ಅಥ್ವಾ ತೆಲುಗಲ್ಲಿ ಮಜ್ಜಿಗ ಪುಲ್ಸು ಅಂತಾ ಕರೀತೀರಾ?? ಸುಮ್ನೆ ಈ ಥರ ಆಡೋದನ್ನ ಬಿಟ್ಟೂ ನಮ್ಮ ಭಾಷೆಗೆ Prominance ಕೊಡಿ"
ಓನರ್ : "ಹಂಗಲ್ಲಾ ಸಾರ್, ಹೋಟ್ಲು ಅಂದಮೇಲೆ ಎಲ್ಲಾ ರೀತಿ ಜನರನ್ನೂ ಗಮನದಲ್ಲಿ ಇಟ್ಕೋಬೇಕು ಸಾರ್"
ನಾನು : "ರೀ ಸ್ವಾಮಿ, ಇಷ್ಟು ಹೇಳಿದ ಮೇಲೂ ನೀವು ಹೀಗೆ ಮಾತಾಡ್ತೀರಲ್ಲಾ, ನಿಮ್ ಹೋಟ್ಲು ನಿಮ್ಮಿಷ್ಟ.. ಏನಾದ್ರೂ ಮಾಡ್ಕೊಳಿ. ನಾನಂತೂ ಇಲ್ಲಿಗೆ ಬರೊಲ್ಲಾ ಹಾಗು ನನಗೆ ಗೊತ್ತಿರೋ ಜನಕ್ಕೆ ಇಲ್ಲಿಗೆ ಬರಬೇಡಿ ಅಂತಾನೇ ಹೇಳ್ತೀನಿ"
ಓನರ್ : "ಹಂಗೆಲ್ಲಾ ಮಾಡೋಹಾಗಿಲ್ಲಾ ಸಾರ್ ನೀವು"
ಪಕ್ಕದಲ್ಲಿದ್ದ ಜನರು ಸುಮಾರು ಹೊತ್ತಿಂದ ನಮ್ಮ ಮಾತು ಕೇಳುಸ್ಕೋತಾ ಇದ್ರು.. ಓನರ್ ಯಾವಾಗ ಹೀಗೆ ಹೇಳುದ್ರೋ ಅವಾಗ ಸುಮಾರು ಜನ ಒಟ್ಟಿಗೆ "ಅದ್ಯಾಕೆ ಆಗಲ್ಲಾ ?? ಕನ್ನಡದವರಾಗಿ ಹೀಗೆ ಮಾಡಿ ಅಂತ Suggestion ಕೊಟ್ರೆ, ಹೀಗೆ ಆಡ್ತೀರಲ್ಲ ನೀವು.. " ಹಾಗೆ ಹೀಗೆ ಅಂತಾ ತಲೆಗೆ ಒಂದೊಂದು ಆವಾಜ್ ಹಾಕ್ತಾ ಇದಾರೆ.
ಏನಾದ್ರೂ ಮಾಡ್ಕೊಂದು ಹಾಳಾಗಿ ಅಂತ ವಾಪಸ್ ಬಂದೆ.
ನಮ್ಮ ಜನರೇ ಈ ರೀತಿ ಮಾಡುದ್ರೆ, ನಮ್ಮ ಭಾಷೆ ಬಗ್ಗೆ ಯಾರು ಅಭಿಮಾನ ತೋರುಸ್ತಾರೆ ? ನಮ್ಮ ಭಾಷೆ ಬೆಳೆಯೋದು ಹೆಂಗೆ ? ಅನ್ಯಾಭಾಷಿಕರಿಗೆ ಮಣೆ ಹಾಕಿ ಹಾಕಿ ನಮಗೆ ಚಾಪೆ ಕೂಡಾ ಸಿಗದ ಹಾಗೆ ಆಗ್ತಾ ಇದೆ.
ಮಾಸ್ಟರ್ ಹಿರಣ್ಣಯ್ಯ ಭಾಷಾಭಿಮಾನದ ಬಗ್ಗೆ ಹೇಳೋ ಹಾಗೆ "ತಮಿಳರು ಅಭಿಮಾನಿಗಳು, ತೆಲುಗರು ದುರಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು" ಅನ್ನೋ ಮಾತು ಎಷ್ಟು ಸತ್ಯ ಅನ್ಸುತ್ತೆ ಅಲ್ವಾ?
ಈ ಮೆದು ವಡಾ ಹೆಸ್ರು ಬರೀ ಇಲ್ಲಲ್ಲಾ, ಡಿವಿಜಿ ರಸ್ತೆಯಲ್ಲಿ ಇರೋ "ಉಪಹಾರ ದರ್ಶಿನಿ"ಯಲ್ಲೂ ಕೂಡಾ ಹಾಕಿದಾರೆ.
ನಿಮ್ಮೆಲ್ಲರಲ್ಲಿ ಒಂದು ವಿನಂತಿ, ಮುಂದಿನ ಬಾರಿ ನೀವು "ಸೌತ್ ತಿಂಡೀಸ್" ಅಥವಾ "ಉಪಹಾರ ದರ್ಶಿನಿ" ಗೆ ಭೇಟಿ ಕೊಟ್ರೆ, ಈ ವಿಚಾರವಾಗಿ ನಿಮ್ಮ Objection ತಿಳಿಸಿ. Atleast ತುಂಬಾ ಜನ ವಿರೋಧ ವ್ಯಕ್ತಪಡಿಸ್ತಾ ಇದಾರೆ ಅನ್ನೋ ಕಾರಣಕ್ಕಾದ್ರೂ ಬದಲಾಯಿಸಲಿ.
ಕನ್ನಡ ಬಳಸಿ, ಕನ್ನಡ ಉಳಿಸಿ
--------------------------------------------------------------------ನಿಮ್ಮವನು,
ಕಟ್ಟೆ ಶಂಕ್ರ
13 comments:
ಕನ್ನಡಿಗರಿಗೆ ಇದೊಂದು ದೊಡ್ಡ ರೋಗ. ಈ ಪಟ್ಟಿ ತುಂಬ ದೊಡ್ಡದಿದೆ -
ಸಾರು - ರಸಂ
ಹುಳಿ - ಸಾಂಬಾರ‍್
ಅನ್ನ ಸಾರು - ರಸಂ ರೈಸ್
ಹುಳಿ ಅನ್ನ - ಸಾಂಬಾರ‍್ ರೈಸ್
ಮೊಸರನ್ನ - ಕರ್ಡ್ ರೈಸ್
ಮೊಸರೊಡೆ - ಕರ್ಡ್ ವಡಾ, ದಹಿ ವಡಾ
ಸೀರೆ ಅಂಗಡಿ - ಸ್ಯಾರಿ ಶಾಪ್
ಹೌದು. ಎಲ್ಲರೂ ಪ್ರತಿಭಟಿಸಿದಾಗ ಅವರು ದಾರಿಗೆ ಬರುತ್ತಾರೆ.
ಒಮ್ಮೆ ಬಸವನಗುಡಿಯ ದರ್ಶಿನಿಯೊಂದರಲ್ಲಿ ಊಟಕ್ಕೆ ಏನೇನಿವೆ ಎಂದು ಕೇಳಿದಾಗ ಆತ ಹೇಳಿದ ಪಟ್ಟಿಯಲ್ಲಿ ಇದೂ ಸೇರಿತ್ತು -"ಅನ್ನ ರಸ". ನಾನು ಕೇಳಿದೆ "ಅದೇನದು ಅನ್ನ ರಸ ಎಂದರೆ, ಅನ್ನ ಸಾರು ಎನ್ನಬಾರದೇ" ಎಂದು. ಅದಕ್ಕೆ ಆತ ಹೇಳಿದ್ದು "ಅನ್ನ ರಸಂ ಎಂದರೆ ತಮಿಳು, ಅನ್ನ ರಸ ಎಂದರೆ ಕನ್ನಡ". ಹೇಗಿದೆ. ನಮ್ಮ ಸಾರು ತಮಿಳುನಾಡಿಗೆ ಹೋಗಿ ರಸಂ ಆಗಿ ಇಲ್ಲಿಗೆ ವಾಪಾಸು ಬಂದಾಗ (ಅದೇನೂ ಇಲ್ಲಿಂದ ಹೋಗಿರಲಿಲ್ಲ, ಇಲ್ಲೇ ಇತ್ತು) ಅದು ರಸ ಆಯಿತು -ಆತನ ಪ್ರಕಾರ :). ಹಾಗಾದರೆ ಹಣ್ಣಿನ ರಸ ತಮಿಳಿನಲ್ಲಿ ಹಣ್ಣಿನ ರಸಂ ಆಗುತ್ತದೆಯೇ?
-ಪವನಜ
ಶಂಕರ,
ಮೊದಲು ನಿಮಗೆ ಅಭಿನಂದನೆಗಳು. ಕರ್ನಾಟಕದ ರಾಜಧಾನಿಯಲ್ಲಿಯೇ ಕನ್ನಡಕ್ಕಾಗಿ ಹೋರಾಡಬೇಕಾಗುತ್ತಿದೆಯಲ್ಲ
ಅಂದರೆ, ಎಂಥಾ ವಿಚಿತ್ರ ಅಲ್ಲವೆ?
ಬೆಳಗಾವಿಯಲ್ಲಿಯ ’ಮಿಲನ್’ ಎನ್ನುವ ಒಂದು ದೊಡ್ಡ ಹೋಟಲಿನಲ್ಲಿ, ಅಲ್ಲಿಯ ಸರ್ವರ್ ನಾನು ಕನ್ನಡದಲ್ಲಿ ಕೇಳಿದ
ಪ್ರಶ್ನೆಗೆ ಹಿಂದಿಯಲ್ಲಿ ಮಾತನಾಡಿದ್ದ. ನಾನು ಕನ್ನಡ ಬಲ್ಲ ಸರ್ವರ್ ಬಂದು ಕೇಳುವವರೆಗೂ ಬಿಡಲಿಲ್ಲ.
ಅಲ್ಲಿಯ ಮೆನೇಜರ್ ಅವರ ಸಮಜಾಯಿಷಿ ಎಂದರೆ ಈ ಹುಡುಗ ಮುಂಯಿಯಿಂದ ಇಲ್ಲಿಗೆ ಈಗ ತನೇ ಬಂದಿದ್ದಾನೆ!
ಶಂಕರ್ ಸರ್,
ನಿಜ, ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಕನ್ನಡ ಉಳಿಸಲೆಬೇಕಾದ ಅನಿವಾರ್ಯತೆ ಎಲ್ಲೆಡೆ ಇದೆ
ಇದು ಕನ್ನಡಿಗರಲ್ಲಿರುವ ಕೊರತೆ....
ಆ ಹೋಟೆಲ್ ಮಾಲೀಕನಿಗೆ ಹೇಳಬೇಕಿತ್ತು , "ನನಗೆ ಕರ್ನಾಟಕ ರಕ್ಷಣ ವೇದಿಕೆಯವರು ಗೊತ್ತು ಅಂತ"...
ಶಂಕರ್....
ನಿಮಗೆ ನನ್ನ ಅಭಿನಂದನೆಗಳು....
ನಾನೂ ಕೂಡ ಈ ಥರಹ ಹೊಟೆಲ್ಲುಗಳಲ್ಲಿ ಗಮನಿಸಿದ್ದೇನೆ...
ಅವರ ಗಮನಕ್ಕೆ ಕೂಡ ತಂದಿದ್ದೇನೆ...
ಅದರಿಂದ ಏನೂ ಲಾಭ ಇಲ್ಲ...
ನಾನು ಧ್ವನಿ ಏರಿಸಿ ಮಾತಾಡುವಾಗ...
ನಾಲ್ಕು ಜನ ನೋಡಿದರು... ಏನೋ ತಮಾಷೆ ಥರಹ...
ಬೆಂಬಲಕ್ಕೆ ಒಬ್ಬರೂ ಬರಲಿಲ್ಲ....
ನಾನು ಪಿವಿಆರ್ ಥರಹ ಇತರೆ ಮಾಲ್ಗಳಿಗೆ ಹೋದಾಗ ಅಲ್ಲಿ ಕನ್ನಡವನ್ನೇ ಬಳಸುತ್ತೇನೆ...
ಅಲ್ಲಿ ಇನ್ನೊಂದು ಥರಹದ ರೋಗ...!!
ಇದ್ದುದರಲ್ಲಿ ಮೆಜೆಸ್ಟಿಕ್ ಉತ್ತಮ...
ಕನ್ನಡ ಮಾತನಾಡುತ್ತಾರೆ...
How do I write Kannada but use English:
Nanu nima blog nodi tumba santosha wytu.
http://engineeringtextilesforindia.blogspot.com
daya madi nana blog nodi mathu nima abiprays guest book nali bariri.
ತಿಳಿಯದೆ ತಪ್ಪು ಮಾಡಿದ್ರೆ ಸಹಿಸಬಹುದು.
ಆದ್ರೆ, ತಿಳಿದು ತಿಳಿದು ತಪ್ಪು ಮಾಡೋರಿಗೆ ಏನ್ ಹೇಳೋದು ?
ಶಂಕ್ರು ಅವರೇ,
ಅಂತಹವರನ್ನು ಬೇರೆ ರಾಜ್ಯಕ್ಕೆ ಕಳುಹಿಸಬೇಕು, ಅಲ್ಲಿನ ರೀತಿ ನೀತಿ ನೋಡಿ ಬನ್ನಿ ಎಂದು. ಅಲ್ಲಿನ ಜನರು ತಮ್ಮ ಭಾಷೆ
ಬಿಟ್ಟು, ಎಲ್ಲರಿಗೂ ಅರ್ಥವಾಗುವ ಆಂಗ್ಲ ಭಾಷೆಯನ್ನು ಉಪಯೋಗಿಸುವುದಕ್ಕೂ ಸಾಯುತ್ತಾರೆ! ಆಗಲಾದರೂ ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ ಆಶ್ರಯ ಪಡೆದಿರುವ ಇಂತಹ ಕಮಂಗಿ ಜನಗಳಿಗೆ ಬುದ್ಧಿ ಬರುತ್ತೋ ಎಂದು ನೋಡಬೇಕು!?
ಕನ್ನಡಕ್ಕೆ ಮೊದಲ ಆದ್ಯತೆ, ಮಿಕ್ಕಿದ್ದು ಆಮೇಲೆ. ಕನ್ನಡ ಭಾಷೆಯನ್ನು ಬೆಂಬಲಿಸಿ, ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದಕ್ಕೆ ನಮ್ಮೆಲ್ಲರ ಬೆಂಬಲ ಮತ್ತು ಸಹಕಾರ ಯಾವತ್ತು ಇದ್ದೆ ಇರುತ್ತೆ ಆದರೆ ಇದಕ್ಕೆ ಜೊತೆಯಾಗುವ ಕೈಗಳೇ ಕಾಣೆಯಾಗುತ್ತಿವೆ. ಅದಕ್ಕೆ ನಮ್ಮ ಜನ್ಮ ಭೂಮಿಯ, ಕನ್ನಡಾಂಬೆಯ ಗತಿ ಹೀಗಾಗಿದೆ! ಆದರೂ ಇಂತಹವರನ್ನು ಸಹಿಸಿಕೊಂಡು, ಇವೆಲ್ಲದಕ್ಕೂ ಸಾಕ್ಷಿಯಾಗಿ ನಾವು ಮೂಕ ಪ್ರೇಕ್ಷಕರಾಗಿ ಇದ್ದು ಬಿಟ್ಟಿದ್ದೇವೆ ಎಂದರೆ ತಪ್ಪಾಗಲಾರದು!!!
ನಂಗೂ ಹೀಗೆ ಒಂದು ಅನುಭವ ಆಗಿತ್ತು.
ಅಡಿಯಾರ್ ಆನಂದ್ ಭವನ್ ಸ್ವೀಟ್ಸ್ ಇದ್ಯಲ್ಲ ಅಲ್ಲಿ.
ಅವರ ಬೇರೆ ಬೇರೆ ಅಂಗಡಿ ಅಡ್ರೆಸ್ ಹಾಕಿರ್ತಾರಲ್ಲ ಅದ್ರಲ್ಲಿ "ಸಂಪಿಗೆ ರೋಡ್" ಅನ್ನೋದನ್ನ "ಸಂಬಿಗೆ ರೋಡ್" ಅಂತ ಹಾಕಿದರೆ.
ತಮಿಳಿನಲ್ಲಿ "ಪ" ಮತ್ತೆ "ಬ" ಒಂದೇ ಅಕ್ಷರ ಅದಿಕ್ಕೆ.
ನಾನು ಹೋಗಿ ಹೇಳಿದಕ್ಕೆ "ಇಲ್ಲ ಸಾರ್ ಅದೇ ಸರಿ" ಅನ್ನೋ ಹಾಗೆ ಮಾತಾಡಿದ್ದ ಅವನು.
ಅದಿಕ್ಕೆ ಅದಾದ ಮೇಲೆ ನಾನು ಅಲ್ಲಿಗೆ ಸ್ವೀಟ್ಸ್ ತಿನ್ನಕ್ಕೆ ಹೋಗೆ ಇಲ್ಲ. ನೀನು ಹೋದಾಗ ಇನ್ನು ಏನಾದ್ರು ಹಾಗೆ ಇದ್ರೆ ಹೇಳಿ ಬಾ.
ಬೆಂಗಳೂರಿನ ಹೊಟೇಲುಗಳಲ್ಲಿ ಸಾಯಂಕಾಲ ಆದ್ರೆ ಸಿಗೋದು ಬರೀ ಚೈನೀಸ್, ನಾರ್ತ್ ಇಂಡಿಯನ್ ಐಟಮ್ ಗಳು. ದಕ್ಷಿಣ ಭಾರತದ ಊಟ ಎಷ್ಟು ಹೊಟೇಲುಗಳಲ್ಲಿ ಸಿಗುತ್ತೆ ಹೇಳಿ ನೋಡೋಣ. ಈ ಹೊಟೇಲಿಗರಿಗೆ ವ್ಯವಹಾರ ಮಾತ್ರ ಮುಖ್ಯವೇ ಹೊರಟು ನಮ್ಮ ನೆಲ, ಜಲ, ಭಾಷೆ ಅಲ್ಲ. ನಮ್ಮ ರಾಜಧಾನಿ ಬೆಂಗಳೂರು ತಮಿಳುನಾಡು, ಆಂಧ್ರದ ಗಡಿಗಳಿಗೆ ಹತ್ತಿರದಲ್ಲಿರೋದೇ ಮೂಲ ಸಮಸ್ಯೆ ಅನ್ಸುತ್ತೆ. ಅದೇ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ ಥರ ಕರ್ನಾಟಕದ ಗಡಿಯಿಂದ ಸ್ವಲ್ಪ ದೂರ, ಸ್ವಲ್ಪ ಮಧ್ಯಭಾಗದಲ್ಲಿದ್ದಿದ್ದರೆ ಕನಿಷ್ಟ ಪಕ್ಷ ಅನ್ಯಭಾಷಿಕರ, ಮತ್ತವರ ಬಾಲ ನೆಕ್ಕುವವರ ತೊಂದರೆ ಈ ಮಟ್ಟಿಗಂತೂ ಇರ್‍ತಿರ್ಲಿಲ್ಲ ಅನ್ಸುತ್ತೆ.
ಕಟ್ಟೆ ಅವರೆ,
ನೀವು ಬರೆದಿರುವ ಈ ಅನುಭವ ನನ್ನ ಪ್ರಕಾರ ಈಗಿನ ಬೆಂಗಳೂರಿನಲ್ಲಿ ಸಕ್ಕತ್ ಜನರಿಗೆ ಆಗಿರುವುದು ಖಂಡಿತ. ಆದರೆ ಇದರ ಬಗ್ಗೆ ಬರೆಯುವರು, ಇದಕ್ಕಾಗಿ ದನಿ ಎತ್ತುವರು ಎಲ್ಲರೂ ಇರಬೇಕಿಲ್ಲ. ನಿಮ್ಮ, ನಮ್ಮ (http://groups.google.com/group/jaagruta_graahakaru/) ಹಾಗೆ ಒಂದಿಷ್ಟು ಜನ ಇದ್ದರೆ ಸಾಕು. ಸುತ್ತಲಿನ ಜನರಲ್ಲಿ ಜಾಗೃತಿ ಮುಟ್ಟಿಸಿ, ಸುತ್ತಲಿನ ವ್ಯಾಪಾರಿಗಳಿಗೆ ಒಂಚೂರು ಜಾಗೃತಿಯ "ಬಿಸಿ" ಮುಟ್ಟಿಸುತಾ ಬಂದರೆ ಎಲ್ಲಾ ಸರಿ ಹೋಗುತ್ತದೆ.
ನಾನೂ ಮೈಸೂರಿನವನೇ. ಈ ಮೇಲೆ ಸೂಚಿಸಿರುವ ಗುಂಪಿನಲ್ಲಿ ಸದಸ್ಯನಾಗಿದ್ದೇನೆ. ಈಗಾಗಲೇ ಈ ಗುಂಪಿನ ಕೆಲಸಗಳಲ್ಲಿ ತೊಡಗಿಸಿಕೊಂಡು ಹಲವಾರು ಇಂತಹ ಪ್ರಕರಣಗಳನ್ನು ಸರಿ ಮಾಡಿರುವ ತೃಪ್ತಿ ಹೊಂದಿದ್ದೇನೆ. ಇಷ್ಟೇ ಅಲ್ಲದೆ, ಇದೆಲ್ಲರ ಮೂಲಕ ಸುತ್ತಲಿನ ಜನರಲ್ಲಿ ನಿಮ್ಮಂತಹ ಜಾಗೃತಿ, ಅರಿವುಗಳನ್ನು ಮೂಡೀಸುವಲ್ಲಿ ಗೆಲುವು ಕಂಡಿದ್ದೇವೆ. ನೀವೂ ಕೂಡ ಈ ಗುಂಪಿನ ಸದಸ್ಯರಾಗಲು ಸೂಚಿಸಿ.. ಸದಸ್ಯರಾಗಿ. ನಿಮ್ಮೊಳಗೆ ಈಗಿರುವ ಆ ಶಕ್ತಿಯನ್ನು ಇನ್ನೂ ಹೆಚ್ಚಾಗಿಸಿಕೊಳ್ಳಿ, ಹಾಗೆಯೇ ಅದಕ್ಕೆ ಒಂದು ಉದ್ದೇಶ ಮತ್ತು ದಿಕ್ಕು ಕೊಡಿ.ಹಾಗೆಯೇ ಇಲ್ಲಿ ಬಂದಿರುವ ಎಲ್ಲಾ ಓದುಗ ಬಳಗದವರೂ ಈ ಗುಂಪಿಗೆ ಸೇರುವ ಸಲಹೆ ನೀಡುವೆ..
ಹೌದು,
ನೀವು ಹೇಳಿರೋದು ನೂರಕ್ಕೆ ನೂರು ಸತ್ಯ. ಕನ್ನಡದವರು ಕನ್ನಡಾನ ಪ್ರೀತಿಸಲಿಲ್ಲ ಅಂದ್ರೆ ಬೇರೆ ಯಾರು ತಾನೇ ನಮ್ಮ ಭಾಷೆನ ಕಲಿತು ಮಾತಾಡ್ತಾರೆ ? ನನ್ನ ಜೊತೆಗೆ ಒಬ್ಬ ತಮಿಳಿಗ ಕೆಲ್ಸ ಮಾಡ್ತಾನೆ. ದಿನಾನೂ ಅವನಿಗೆ ಒಂದೊಂದು ಹೊಸಾ ಕನ್ನಡ ಪದವನ್ನ ಹೇಳಿಕೊಡ್ತಾ ಇದೀನಿ ನಾನು. ಕನ್ನಡ ಭಾಷೆಯಂತಹಾ ಸವಿಯಾದ ಭಾಷೆ ಮತ್ತೊಂದಿಲ್ಲ...
ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ
೧.ದಿನಬಳಕೆಯಲ್ಲಿ ಬಹಳಷ್ಟು ಜನ ಈ ತರಹ ಪದಗಳನ್ನು (ರಸಂ, ಸಾಂಬಾರ್, ಕರ್ಡ್ ರೈಸ್,) ಉಪಯೋಗಿಸುತ್ತಾರೆ ಅಥವ ಆಂಗ್ಲ ಪದಗಳನ್ನು ಉಪಯೋಗಿಸುತ್ತಾರೆ. ಉದಾ: ಲೈಟ್ ಆಫ್ ಮಾಡು (ಬದಲಾಗಿ ದೀಪವನ್ನು ಆರಿಸು, ಒಂದು ಮದುವೆ ಅಟೆಂಡ್ ಮಾಡೋದಿದೆ (ಅಟೆಂಡ್ ಅನ್ನೋ ಶಬ್ದ). ಮೊದಲು ನಾವು ಇದನ್ನು ನಮ್ಮ ಮನೆಗಳಲ್ಲಿ ಸರಿಪಡಿಸಬೇಕು. ಏಕೆಂದರೆ ಈಗಿನ ಮಕ್ಕಳು ಈ ಮಿಶ್ರಿತ ಕನ್ನಡವನ್ನೇ ಕಲಿತುಕೊಂಡು ಬಿಟ್ರೆ ಕಷ್ಟ. ಏಕೆಂದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ??
೨.ನಿಮ್ಮ ಹೋರಾಟ ಒಳ್ಳೆಯದೆ. ಆ ಹೋಟೆಲ್ ನವನು ಬದಲಾಯಿಸುವವರೆಗೂ ನೀವು ಬಿಡಬಾರದಿತ್ತು.
ಕಮಲಪಿ೦೯ / ಚಿತ್ರ
Post a Comment