ನಿಮ್ಗೂ ಹಿಂಗೆ ಯಾವಾಗ್ಲಾದ್ರೂ ಆಗಿದ್ಯಾ? ಸಿಕ್ಕಾಪಟ್ಟೆ ನಗು ಬರುವಂಥ ಸೀನು, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ? ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು ನಗ್ತೀನಿ.
ಅದೇನೋ ಹೇಳ್ತಾರಲ್ಲಾ "ನಗು ಮತ್ತು ಉಚ್ಛೆ ತಡೆಯೋದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು" ಅಂತಾ, ಹಾಗೆ.
ನಾನು ಹೇಳಕ್ಕೆ ಹೊರ್ಟಿರೋದು ಬಹಳ ಹಿಂದೆ, ಅಂದ್ರೆ ನಾನು ಪ್ರೈಮರಿ ಸ್ಕೂಲಿನಲ್ಲಿ ಇದ್ದಾಗ ನಡೆದ ಘಟನೆ.
೧. ಸತ್ತೆ ಪೆ ಸತ್ತಾ (ಶಂಕ್ರ ನಗು ತಡೆಯಕ್ಕಾಗ್ದೆ ಸತ್ತ) :
ನಾನು ಆರನೇ ಅಥವಾ ಏಳನೇ ಇಯತ್ತೆಯಲ್ಲಿ ಇದ್ದಾಗ ಅನ್ಸುತ್ತೆ (1991ನೇ ಇಸವಿ), ಒಮ್ಮೆ ದೂರದರ್ಶನದಲ್ಲಿ ಶುಕ್ರವಾರ ರಾತ್ರಿ "ಸತ್ತೆ ಪೆ ಸತ್ತಾ" (ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ) ಚಿತ್ರವನ್ನು ಹಾಕಿದ್ರು.
ಆ ಫಿಲಮ್ಮು "ಸೆವೆನ್ ಬ್ರೈಡ್ಸ್ ಫಾರ್ ಸೆವೆನ್ ಬ್ರದರ್ಸ್" ಎಂಬ ಇಂಗ್ಲಿಷ್ ಚಿತ್ರದ ರಿಮೇಕು. ನಮ್ಮಪ್ಪ ಮತ್ತು ಅಮ್ಮ, ಫಿಲಂ ಚೆನ್ನಾಗಿದೆ ನೋಡು, ಒಳ್ಳೇ ಎಂಟರ್ಟೈನ್ಮೆಂಟು, ಒಳ್ಳೇ ಕಾಮಿಡಿ ಅಂತ ಹೇಳಿದ್ದಕ್ಕೆ ಎಲ್ರೂ ಒಟ್ಟಿಗೆ ನೋಡ್ತಾ ಇದ್ವಿ. ಅಪ್ಪ, ಅಮ್ಮ, ನಾನು ಹಾಗು ಮೂರನೇ ಇಯತ್ತೆಯಲ್ಲಿ ಓದುತ್ತಿದ್ದ ನನ್ನ ತಮ್ಮ.
ಆ ಚಿತ್ರದಲ್ಲಿ ಒಂದು ಸೀನ್ ಇದೆ. ಅಮಿತಾಬ್ ಬಚ್ಚನ್, ಹೇಮಾ ಮಾಲಿನಿಯನ್ನು ರಿಜಿಸ್ಟ್ರಾರ್ ಆಫೀಸಲ್ಲಿ ಮದ್ವೆ ಆಗ್ತಾನೆ. ಅವಾಗ, ರಿಜಿಸ್ಟ್ರಾರ್ ಇಬ್ಬರಿಗೂ ಕಂಗ್ರಾಟ್ಸ್ ಹೇಳಿ, ಅಮಿತಾಬ್ ಗೆ ಶೇಕ್ ಹ್ಯಾಂಡ್ ಕೊಡ್ತಾನೆ. ಇಬ್ರೂ ರಿಜಿಸ್ಟರ್ ನಲ್ಲಿ ಸೈನ್ ಮಾಡಿ ಹೊರಡ್ತಾರೆ, ಅಮಿತಾಬ್ ಬಾಗಿಲಿಂದ ಇನ್ನೇನು ಹೊರಡ್ಬೇಕು, ಆಫೀಸರ್ ಅವನನ್ನು ಕರೆದು ಮತ್ತೆ ಶೇಕ್ ಹ್ಯಾಂಡ್ ಕೊಟ್ಟು, ಹಾಗೆ ಅವನ ಕೈಯಲ್ಲಿ ಏನೋ ಇಡ್ತಾನೆ. ಏನು ಅಂತ ಅಮಿತಾಬ್ ನೋಡುದ್ರೆ "ನಿರೋಧ್" ಪ್ಯಾಕೆಟ್ಟು (ಫ್ಯಾಮಿಲಿ ಪ್ಲಾನಿಂಗನ್ನು ಉತ್ತೇಜಿಸುವುದಕ್ಕೆ ಹಾಗೆ ಮಾಡುತ್ತಿದ್ದರಂತೆ). ನಂಗೆ ಅವಾಗ "ನಿರೋಧ್" ಅಂದ್ರೆ ಏನು ಅಂತ ಗೊತ್ತಿತ್ತು (7ನೇ ಕ್ಲಾಸ್ನಲ್ಲೇ ಸ್ವಲ್ಪ ಕೆಟ್ಟಿದ್ವಿ !!!). ಪ್ಯಾಕೆಟ್ಟನು ನೋಡಿ ಅಮಿತಾಬ್ ಒಂದು ಹ್ಯಾಪ್ ನಗೆ ಬೀರಿ "ಥ್ಯಾಂಕ್ಸ್" ಹೇಳಿ ಹೊರಡ್ತಾನೆ. ಅವಾಗ ನನ್ನ ಮೂರನೆ ಇಯತ್ತೆಯ ತಮ್ಮ ಇದ್ದಕ್ಕಿದ್ದ ಹಾಗೆ "ಅಪ್ಪಾ, ಅಪ್ಪಾ, ಅಪ್ಪಾ.. ಅವನ್ ಕೈಲಿ ಕೊಟ್ಟಿದ್ದು ಏನಪ್ಪಾ ? ಹೇಳಪ್ಪಾ.." ಅಂತ ವರಾತ ತೆಗೆದ. ನಮ್ಮಪ್ಪಂಗೆ ಏನ್ ಮಾಡ್ಬೇಕು, ಏನ್ ಹೇಳ್ಬೇಕು ಅಂತ ತೋಚ್ತಾ ಇಲ್ಲಾ, ನನ್ ತಮ್ಮಾನೋ ಒಂದೇ ಸಮನೆ ಅಲಾರಂ ಥರ ಕಲ್ಯಾಣಿ ರಾಗದಲ್ಲಿ ಕೇಳ್ತಾ ಇದಾನೆ.. ಕೊನೆಗೆ ನಮ್ಮಪ್ಪ "ಅವ್ನು ಅಮಿತಾಬ್ ಗೆ ಏನೋ ಕೊಟ್ರೆ ನಿಂಗೇನೋ ? ಮುಚ್ಕೊಂಡು ನೋಡು, ಇಲ್ಲಾಂದ್ರೆ ಹೋಗಿ ಬಿದ್ಕೋ" ಅಂತ ಹೇಳಿ ಬಾಯಿಮುಚ್ಚಿಸಿದ್ರು. ಆ ಟೈಂನಲ್ಲಿ, ನಾನು ನಕ್ಕಿದ್ರೆ ಮಾತ್ರ ನನ್ ಪಾಡು ಏನ್ ಆಗ್ತಾ ಇತ್ತೋ ಗೊತ್ತಿಲ್ಲಾ, ಆದ್ರೆ ನನ್ ಲೈಫಲ್ಲಿ ಅತ್ಯಂತ ಕಷ್ಟ ಪಟ್ಟು ನಗು ತಡೆದ ಘಟನೆ ಅಂದ್ರೆ ಇದೇ.
೨. ಕ್ಲಾಸ್ ಮೇಟುಗಳ ಕೈಲಿ "ನಿರೋಧ"ನ್ನು ಬಲೂನ್ ಎಂದು ಕೊಟ್ಟು ಊದಿಸಿದ್ದು :
ಇದು ನಾವು ಏಳನೇ ಇಯತ್ತೆಯಲ್ಲಿ ಇದ್ದಾಗ (1992), ನಮ್ಮ ಸ್ಕೂಲಿನ ಒಂದು ಪಕ್ಕದಲ್ಲಿ ಒಂದು ಪಂಪ್ ಹೌಸ್ ಇತ್ತು. ಅದರ ಬೇಲಿಯಿಂದ ನಾವು 2-3 ಮಂದಿ ಹುಡುಗ್ರು, ಆಟದ ಪೀರಿಯಡ್ ಟೈಮಿನಲ್ಲಿ ಹೊರಗೆ ನುಗ್ಗಿ, ಎದುರು ಮನೆಯ ನೆಲ್ಲಿಕಾಯಿ ಮರದಿಂದ ಕಾಯಿ ಕೀಳ್ತಾ ಇದ್ವಿ. ಆ ಮನೆಯಲ್ಲಿ ಒಬ್ಬ ಸರ್ಕಾರಿ ಡಾಕ್ಟರು ಇದ್ರು. ಒಮ್ಮೆ, ಹಿಂಗೇ ಬೇಲಿಯಿಂದ ನುಗ್ಗಿ, ಅವರ ಮನೆ ಕಾಂಪೌಂಡ್ ಹಾರಬೇಕು ಅನ್ನೋಷ್ಟರಲ್ಲಿ, ಅವರ ಮನೆ ಪಕ್ಕದಲ್ಲಿ ಸುಮಾರು 20-30 ಕಿತ್ತಳೆ ಬಣ್ಣದ ಪ್ಯಾಕೆಟುಗಳು ಬಿಸಾಡಿದ್ರು. ಏನು ಅಂತ ನೋಡುದ್ರೆ "ನಿರೋಧ್". ಮೋಸ್ಟ್ಲಿ EXPIRY DATE ಆಗಿರೋದು ಅನ್ಸುತ್ತೆ. ನಮ್ಗೂ ಏನೋ ಕಡಿತ. ಅದ್ರಲ್ಲಿ ಸುಮಾರು 5-6 ಪ್ಯಾಕೆಟನ್ನ ನಾವು ತೆಗೆದುಕೊಂಡು ವಾಪಸ್ ಬೇಲಿಯಿಂದ ನುಗ್ಗಿ ಸ್ಕೂಲಿನ ಒಳಗೆ ಬಂದ್ವಿ.
ಎಲ್ಲಾ ಹುಡುಗ್ರು ಆ ಕಡೆ ಆಡ್ತಾ ಇದ್ರು. ಅವ್ರಲ್ಲಿ 8-10 ಹುಡುಗ್ರನ್ನ ಕರೆದು, "ತಗೊಳ್ರೋ ಇದನ್ನಾ, ಯಾರೋ ಬಲೂನನ್ನ ಬೀಳಿಸಿಕೊಂಡು ಹೋಗಿದಾರೆ, ಊದಿ, ಆಟಾಡ್ಕೊಳ್ಳಿ" ಅಂತ ಕೊಟ್ಟು "ಯಾರ್ ಕೊಟ್ಟಿದ್ದು ಅಂತಾ ಯಾರಾದ್ರೂ ಕೇಳುದ್ರೆ, ನಮ್ ಹೆಸ್ರನ್ನ ಮಾತ್ರಾ ಹೇಳ್ಬಾರ್ದು, ಸರಿ ಇರಲ್ಲ" ಅಂತ ಬೇರೆ ಸ್ಪೆಷಲ್ ವಾರ್ನಿಂಗ್ ಕೊಟ್ವಿ.
ಕೊಟ್ಟಿದ್ದೇ ತಡ, ಮಕ್ಳು ಊದಿದ್ದೇ ಊದಿದ್ದು. ಅದ್ರಲ್ಲಿ ಕೆಲವ್ರು, ಉತ್ಸಾಹ ತಡ್ಯಕ್ಕೆ ಆಗ್ದೆ ಜೋರಾಗಿ ಊದಿ "ಲೋ, ಏನ್ರೋ ಇದು ? ಫಾರಿನ್ ಬಲೂನು ಅನ್ಸುತ್ತೆ... ಎಷ್ಟು ಉದ್ದ ಆಗುತ್ತೆ ನೋಡ್ರೋ. ಮಾಮೂಲ್ ಬಲೂನಾಗಿದ್ರೆ, ಇಷ್ಟೊತ್ತಿಗೆ ಒಡೆದೋಗ್ತಾ ಇತ್ತು" ಅಂತಾ ಬೇರೆ ಸರ್ಟಿಫಿಕೇಟ್ ಕೊಡ್ತಾ ಇದಾನೆ ! ಎಲ್ರ ಕೈಲೂ ಸುಮಾರು 2-3 ಅಡಿ ಉದ್ದದ ಗಾಳಿ ತುಂಬಿದ ಬಲೂನು (???).
ಆಟ ಆಡ್ತಿದ್ದ ಹುಡುಗ್ರು ಎಲ್ಲಿ ಅಂತ ನಮ್ಮ ಪಿ.ಟಿ.ಮೇಷ್ಟ್ರು ನೋಡ್ತಾರೆ, ಎಲ್ರೂ ಬಲೂನನ್ನ (???) ಊದುತ್ತಾ ಇದಾರೆ. ಹತ್ರ ಬಂದು ನೋಡುದ್ರು, ಏನು ಅಂತಾ ಗೊತ್ತಾಯ್ತು ಅವ್ರಿಗೆ. ತಕ್ಷಣ "ಏಯ್, ಏನ್ ಮಾಡ್ತಾ ಇದೀರೋ ? ಇದು ಎಲ್ಲಿಂದ ಸಿಗ್ತೋ ನಿಮ್ಗೆ, ಯಾರ್ ತಂದು ಕೊಟ್ಟಿದ್ದು? ಬಿಸಾಕ್ರೊ ಮುಂಡೇವಾ ಇದನ್ನ" ಅಂತ ಬೈದು ಎಲ್ಲರನ್ನು ಕರ್ಕೊಂಡ್ ಹೋದ್ರು. ಅವರು ಬೈಬೇಕಾದ್ರೆ, ಅವರ ಪಕ್ಕ ನಿಂತ್ಕೊಂಡು ಸಖತ್ತಾಗಿ ಮಜಾ ತಗೊಂಡ್ವಿ, ಆದ್ರೆ ನಗೋ ಕಂಡೀಶನ್ನಲ್ಲಿ ಇರ್ಲಿಲ್ಲಾ.
ಇವತ್ತಿಗೂ ಇವೆರಡು ಘಟನೆಗಳನ್ನ ನೆನೆಸ್ಕೊಂಡ್ರೆ, ಯದ್ವಾ ತದ್ವಾ ನಗು ಬರುತ್ತೆ.. ಅಪ್ಪಿ ತಪ್ಪಿ ನಮ್ಮಪ್ಪ ಏನಾದ್ರೂ ನಾನು ಬರ್ದಿರೋದನ್ನ ಇವಾಗ ಓದುದ್ರೆ, ಒಂದ್ಸಲನಾದ್ರೂ ಉಗೀತಾರೆ, "ನಿರೋಧ"ನ್ನು ಕ್ಲಾಸ್ ಮೇಟುಗಳ ಕೈಲಿ ಕೊಟ್ಟು ಊದ್ಸಿದ್ದಕ್ಕೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
Monday, June 15, 2009
Subscribe to:
Post Comments (Atom)
4 comments:
ಶಂಕರ,
ನೀವು ಬರದದ್ದು ಓದಿ ನನಗಂತೂ ನಗು ತಡೆಯೋಕ್ಕಾಗಲಿಲ್ಲ.
ನಕ್ಕು ನಕ್ಕು ನಾನೂ ಆ ‘ಬಲೂನ್’ ತರಹಾ ಉಬ್ಬಿಬಿಟ್ಟೆ!
ಥೂ! ಪೋಲಿ! :D
yeenu ... oorige hooda meele baree nirodh bagge nee bardiddeeyallo magane ... :))
ಸಂಕ್ರಪ್ಪಣ್ಣ.....
ನಗು ತಡಿಲಿಕ್ಕಾಗ್ತಾ ಇಲ್ಲ....
ಕ್ಕೇ...ಕ್ಕೀ..ಕ್ಕೇ...
ಹ್ಹಾ...ಹ್ಹೀ...
ಸಕತ್ತಾಗಿದೆ
"ಅನುಭವ:....!!
Post a Comment