ಮೊದಲ ಸಲ ಪ್ರವಾಸಕಥನ ಬರೀತಾ ಇದೀನಿ. ಅಡ್ಜಸ್ಟ್ ಮಾಡ್ಕಳಿ.
ಕಳೆದ ಶುಕ್ರವಾರ ಆಫೀಸಿಗೆ ರಜೆ ಇತ್ತು. ಹಾಗಾಗಿ ನಾನು ಮತ್ತು ನಮ್ಮ ಸಹೋದ್ಯೋಗಿಗಳು ದಕ್ಷಿಣ ಜರ್ಮನಿ (Bavaria) ಕಡೆ ಒಂದು ಟೂರ್ ಹಾಕಿದ್ವಿ. ಮೊದಲು ಮ್ಯೂನಿಕ್, ಅಲ್ಲಿಂದ ಸಾಲ್ಸ್ ಬರ್ಗ್ (ಆಸ್ಟ್ರಿಯ), ಹಾಗು Neuschwanstein Castle ಗೆ ಹೋಗಿದ್ವಿ. ಮ್ಯೂನಿಕ್ಕಿನಲ್ಲಿ ನಗರ ಪ್ರದಕ್ಷಿಣೆ, ಒಲಂಪಿಕ್ ಪಾರ್ಕ್, ಟವರ್, BMW ಮ್ಯೂಸಿಯಂ ನೋಡಿ ಬಂದ್ವಿ.ಮಾರನೆಯ ದಿನ (ಮೇ 2), ಮ್ಯೂನಿಕ್ಕಿಂದ ಬೆಳಿಗ್ಗೆ ಬೇಗನೆ ಹೊರಟು ಸಾಲ್ಸ್ ಬರ್ಗ್ (Salzburg, Austria) ನಗರಕ್ಕೆ ಬೆಳಿಗ್ಗೆ 10 ಕ್ಕೆ ಬಂದ್ವಿ.ಅಲ್ಲಿಂದ ಮತ್ತೊಂದು ಟ್ರೈನ್ ಹಿಡಿದು ಸುಮಾರು 11:30 ಅಷ್ಟೊತ್ತಿಗೆ WERFEN ಅನ್ನೋ ಹಳ್ಳಿಗೆ ಬಂದ್ವಿ.
ಇಲ್ಲಿ ಇರೋದು ಪ್ರಪಂಚದ ಅತ್ಯಂತ ಹಳೆಯ ಹಾಗು ದೊಡ್ಡ ಹಿಮ ಗುಹೆಗಳು. ಈ ಗುಹೆಗಳು ಸರಿ ಸುಮಾರು 50 ರಿಂದ 60 ದಶಲಕ್ಷ ವರ್ಷ ಹಳೆಯದು.
WERFEN ಟ್ರೈನ್ ಸ್ಟೇಶನ್ ಇಂದ ಬಸ್ ಹಿಡಿದು EISRIESENWELT (Giant ICE World) ನ Entrance ಗೆ ಹೋದ್ವಿ. ಹೋಗೋ ದಾರಿ ಕೂಡ ಬೆಟ್ಟದಲ್ಲೇ, ಸುಮಾರು ೧೫ ನಿಮಿಷದ ಹಾದಿ. ಪ್ರವೇಶದಲ್ಲಿ ನಮ್ಮ ಎಕ್ಸಟ್ರಾ ಲಗೇಜನ್ನು ಕ್ಲಾಕ್ ರೂಮಿನಲ್ಲಿ ಭದ್ರ ಪಡಿಸಿ, ಗುಹೆಯ ಟೂರಿಗೆ ಟಿಕೇಟನ್ನು ಕೊಂಡು ಮೇಲೆ ಹತ್ತಲು ಶುರು ಮಾಡಿದೆವು.
ಗುಹೆ ಇರೋದು ಪರ್ವತದ ಆಲ್ಮೋಸ್ಟ್ ತುದಿಯಲ್ಲಿ. ಸಮುದ್ರ ಮಟ್ಟಕ್ಕಿಂತ ಸುಮಾರು 1775 ಮೀ ಮೇಲಿದೆ. ಮೊದಲು ೨ ಕಿಮೀ ನಡುಗೆ, ನಂತರ ೪ ನಿಮಿಷದಷ್ಟು ಕೇಬಲ್ ಕಾರಿನಲ್ಲಿ, ಮತ್ತೆ ಪುನಃ ಸುಮಾರ್ ೧.೫ ಕಿಮೀ ನಡೆದರೆ ಗುಹೆಯ ಪ್ರವೇಶ ಸಿಗುತ್ತದೆ. ಈ ಗುಹೆಯನ್ನು ಮೇ ೧ ರಿಂದ ಅಕ್ಟೋಬರ್ ತಿಂಗಳ ತನಕ ತೆರೆದಿರುತ್ತಾರೆ. ಅದಾದ ಮೇಲೆ ಪ್ರವಾಸಿಗರಿಗೆ ಬಂದ್ ಆಗಿರುತ್ತದೆ. ನಮ್ಮ ಟೈಮಿಂಗ್ ಸರಿ ಇತ್ತು, ಅಲ್ಲಿಗೆ ನಾವು ಹೋಗಿದ್ದು ಮೇ ೨ ರಂದು.
ಸರಿ, ಇನ್ನು ಈ ಗುಹೆಗಳ ಬಗ್ಗೆ ಸ್ವಲ್ಪ ಇನ್ಫೊ ಕೊಡ್ತೀನಿ.
ಈ ಗುಹೆಗಳು ಸುಮಾರು ೫೦ ರಿಂದ ೬೦ ಮಿಲಿಯನ್ ವರ್ಷ ಹಳೆಯವು. ಜೊತೆಗೆ ಈ ಗುಹೆಗಳು ಸುಮಾರು 42 ಕಿಮೀ ಉದ್ದ ಇದೆ. ಗುಹೆ ಇರುವ ಪರ್ವತವು ಸುಣ್ಣದಕಲ್ಲಿನದು (Limestone). ಹಾಗಾಗಿ ಈ ಕಲ್ಲುಗಳು ಸೂಕ್ಷ್ಮಾತಿಸೂಕ್ಷ್ಮ ರಂಧ್ರಗಳನ್ನು ಹೊಂದಿರುತ್ತದೆ ಹಾಗು ಇದರ ಮೂಲಕ ನೀರು ತೊಟ್ಟಿಕ್ಕುತ್ತದೆ. ಪರ್ವತದ ಮೇಲಿನ ನೀರು, ಹಾಗೆಯೇ ಈ ಬಂಡೆಗಳ ಮೂಲಕ ಇಳಿದು ಈ ಗುಹೆಯಲ್ಲಿ ಶೇಖರವಾಗುತ್ತದೆ. ಈ ಜಾಗ ಇರೋದು ಆಲ್ಪ್ಸ್ (ALPS) ಪರ್ವತ ಶ್ರೇಣಿಯಲ್ಲಿ, ಹಾಗಾಗಿ ಛಳಿಗೆ ಏನೂ ಕೊರತೆಯಿಲ್ಲ. ಛಳಿಗಾಲದಲ್ಲಿ ತಾಪಮಾನ ಸುಮಾರು -೧೦ ರಿಂದ -೨೦ ರ ತನಕ ಬೀಳುತ್ತದೆ. .
ಈ ಗುಹೆಯು ೪೨ ಕಿಮೀ ಅಷ್ಟು ಉದ್ದ ಇದ್ದರೂ ಕೂಡ, ಗಾಳಿಯ ಓಡಾಟ ಎಲ್ಲಾ ಕಡೆ ಚೆನ್ನಾಗಿದೆ. ನೈಸರ್ಗಿಕ ವಾತಾಯನ ಬಹಳ ಚೆನ್ನಾಗಿದೆ. ಚಳಿಗಾಲದಲ್ಲಿ ಇದೆ ವಾತಾಯನದಿಂದ, ಕಟು ಚಳಿಗಾಳಿಯು ಇಡೀ ಗುಹೆಯಲ್ಲಿ ಸಂಚರಿಸುತ್ತದೆ, ಹಾಗೆಯೇ ಶೇಖರಗೊಂಡ ನೀರು ಗಟ್ಟಿಯಾಗಿ ಐಸ್ ಆಗುತ್ತೆ. ಹಾಗು ಬೇಸಿಗೆಯಲ್ಲಿ ಸ್ವಲ್ಪ ಐಸ್ ಕರಗಿ ನೀರಾಗಿ ಕೆಳಗೆ ಹರಿಯುತ್ತದೆ. ಇದೆ ಪ್ರಕ್ರಿಯೆ ಲಕ್ಷಾಂತರ ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೆಲವೊಂದು ಕಡೆ ಸುಮಾರು ೪೦ ರಿಂದ ೫೦ ಮೀಟರ್ ನಷ್ಟು ದಪ್ಪವಾಗಿ ಐಸ್ ಕಟ್ಟಿದೆ.
ಈ ಗುಹೆಗಳನ್ನು 1879 ನೆ ಇಸವಿಯಲ್ಲಿ Salzburg ಗಿನ ಓರ್ವ ನೈಸರ್ಗಿಕ ವಿಜ್ಞಾನಿ ಆಂಟನ್ ಪೊಸ್ಸೆಲ್ಟ (Anton Posselt) ಪತ್ತೆ ಹಚ್ಚಿದ್ದು. ಕಣ್ಣು ಕುಕ್ಕುವ ಕತ್ತಲೆಯಲ್ಲಿ ಸುಮಾರು ೨೦೦ ಮೀ ಒಳಗೆ ಹೋಗಿ ಅಫಿಶಿಯಲ್ ಆಗಿ ಪತ್ತೆ ಹಚ್ಚಿದ್ದು. ಇದರ ಬಗ್ಗೆ ಆಸ್ಟ್ರಿಯ ದಲ್ಲಿ ರಿಪೋರ್ಟನ್ನು ತಯಾರಿಸಿದ. ಇದಾದ ನಂತರ ಈ ರಿಪೋರ್ಟ್ ಅಷ್ಟೊಂದು ನೋಡಲ್ಪಡಲಿಲ್ಲ.
ನಂತರ 1920 ಆಸುಪಾಸಿನಲ್ಲಿ, ಮತ್ತೋರ್ವ Salzburg ಗಿನ ಅತ್ಯಂತ ಸಾಹಸಿ ಹಾಗು ನಿಸ್ಸೀಮ ಗುಹಾನ್ವೇಷಕ ನಾದ ಅಲೆಕ್ಸಾಂಡರ್ ಫೊನ್ ಮ್ಯೋರ್ಕ್ (Alexander von Mörk) ಆಂಟನ್ ಬರೆದ ರಿಪೋರ್ಟಿನ ಮಹತ್ವ ತಿಳಿದು, ಈ ಗುಹೆಗೆ ಭೇಟಿ ಕೊಟ್ಟ, ಹಾಗು ಇದರ ಬಗ್ಗೆ ಅಧ್ಯಯನ ನಡೆಸಿ, ಇದರ ಬಗ್ಗೆ ವ್ಯಾಪಕವಾದ ರಿಪೋರ್ಟನ್ನು ಬರೆದು ಜನರಿಗೆ ತಿಳಿಸಿದ.
ಈತನ ಭೇಟಿಯ ನಂತರ, ಸುಮಾರು ಮಂದಿ ಇಲ್ಲಿಗೆ ಅವನ ಜೊತೆ ಹಾಗು ನಂತರ ಬಂದು ಅನ್ವೇಷಿಸಿ ಹೋದರು. ಇವರುಗಳು ಈ ಗುಹೆಯ ಒಳಗೆ ಓಡಾಡಲು, ಹತ್ತಲು ಅನುಕೂಲವಾಗುವ ರೀತಿ Route ಗಳನ್ನು ಕಟ್ಟಿದರು.
ಮೊದಲನೆ ಜಾಗತಿಕ ಮಹಾಯುಧ್ಧದಲ್ಲಿ ಅಲೆಕ್ಸಾಂಡರ್ ಫೊನ್ ಮ್ಯೋರ್ಕ್ (Alexander von Mörk) ನಿಧನನಾದ. ಸತ್ತಾಗ ಈತನಿಗೆ ಕೇವಲ 27 ವರ್ಷ. ಈತನ ಆಸೆ ಏನಾಗಿತ್ತೆಂದರೆ, ಈ ಗುಹೆಯಲ್ಲೇ ತನ್ನ ಸಂಸ್ಕಾರ ನೆರವೆರಬೇಕೆಂದು. ಆಸೆಯ ಪ್ರಕಾರವಾಗಿ ಈತನ ಚಿತಾಭಸ್ಮವನ್ನು ಅಲ್ಲೇ ಒಂದು ದೊಡ್ಡ ಕುಂಡದಲ್ಲಿ ಇಡಲಾಗಿದೆ.
ಒಂದೇ ಒಂದು ಬೇಜಾರಿನ ವಿಷಯವೆಂದರೆ ಈ ಗುಹೆಯ ಒಳಗೆ ಫೋಟೋ ಹಾಗು ವಿಡಿಯೋ ತೆಗೆಯಲು ಅನುಮತಿ ಇಲ್ಲ. ಇಲ್ಲಿ ಗುಹೆಯ ಒಳಗೆ ಹೋಗುವುದು ಒಂದು ಸಣ್ಣ ಲೈನಿನಲ್ಲಿ. ಹಾಗಾಗಿ ಕ್ಯಾಮೆರಾ ಹಿಡಿದು ಅಡ್ಜಸ್ಟ್ ಮಾಡಿ, ಫ್ಲಾಶ್ ಹೊಡೆದು, ಬೇಕಾದವರನ್ನು ನಿಲ್ಲಿಸಿ ಫೋಟೋ ತೆಗೆದರೆ ಮಿಕ್ಕಿದ ಗುಂಪಿಗೆ ಕಷ್ಟ ಅನ್ನೋ ಕಾರಣಕ್ಕೆ, ಹಾಗು ಈ ಜಾಗ ಬಹಳ ಇಳಿಜಾರಿನಿಂದ ಕೂಡಿದೆ. ಮೆಟ್ಟಿಲಿನ ಅಕ್ಕ ಪಕ್ಕದಲ್ಲಿ ಹಿಮ ಕಟ್ಟಿರುತ್ತದೆ ಹಾಗು ತುಂಬಾ ಜಾರುತ್ತದೆ. ಫೋಟೋ ತೆಗೆಯುವ ಉತ್ಸಾಹದಲ್ಲಿ ಅದರ ಮೇಲೆ ಕಾಲಿಟ್ಟು, ಜಾರಿ ಬಿದ್ದು ಪ್ರಾಣ ಹೋಗುವ ಸಂಭವ ಕೂಡ ಇದೆ. ಹಾಗಾಗಿ ಫೋಟೋ ಹಾಗು ವಿಡಿಯೋ ತೆಗೆಯೋದು ನಿರ್ಬಂಧಿಸಲಾಗಿದೆ.
ಸಧ್ಯಕ್ಕೆ ಇಷ್ಟು ಸಾಕು ಅನ್ಕೋತೀನಿ. ಕೆಲವು ಫೋಟೋಗಳನ್ನು ಹಾಕ್ತ ಇದೀನಿ. ಮಿಕ್ಕಿದ ಫೋಟೋಗಳಿಗೆ PICASA ಆಲ್ಬಮ್ಮಿನ ಲಿಂಕ್ ಕೊಡ್ತೀನಿ. ಜೊತೆಗೆ ಗುಹೆಯ ಒಳಗೆ ಹೇಗಿದೆ ಅಂತ ನೋಡೋದಕ್ಕೆ ಈ ಜಗದ ಅಫಿಶಿಯಲ್ Website ಲಿಂಕನ್ನು ಕೊಡ್ತೀನಿ.
ಚಾರಣದ ಕೆಲವು ಫೋಟೋಗಳು ನೋಡಿ :
ಪ್ರವೇಶ -

ALPS ಪರ್ವತಶ್ರೇಣಿ -

ಪ್ರಪಾತ -

Cable Car -

ಹೆಂಗಿದಾನೆ ಕಟ್ಟೆ ಶಂಕ್ರ -

ಗುಹೆಯ ಪ್ರವೇಶದ್ವಾರ -

WERFEN ಇಂದ ಹೊರಟು ಗುಹೆಯ ಒಳಗೆ ಹೋಗುವ ತನಕದ ಚಿತ್ರಗಳಿಗೆ ನನ್ನ PICASA ಅಲ್ಬಂ ಲಿಂಕ್ :
http://picasaweb.google.com/mandagere.shankar/SalzburgIceCaves2009?authkey=Gv1sRgCJbUlc6O_bXhKw&feat=directlinkಗುಹೆಯ ಒಳಗಿರುವ ರಮಣೀಯ ದೃಶ್ಯಕ್ಕಾಗಿ EISRIESEN WELT ನ ಅಧಿಕೃತ Website ನ ಚಿತ್ರಗಳಿರುವ ಲಿಂಕ್ :
http://www.eisriesenwelt.at/site/content/CB_ContentShow.php?coType=photosಹಿಮ ಗುಹೆಗಳ ಬಗ್ಗೆ ಇನ್ನೂ ಮಾಹಿತಿ ಬೇಕಾದ್ದಲ್ಲಿ, ಈ ತಾಣಕ್ಕೆ ಭೇಟಿ ನೀಡಬಹುದು :
http://www.eisriesenwelt.at/site/content/CB_ContentShow.php?coType=home&lang=EN--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ