ಸೇಟು...ಮೂರ್ರಲ್ ಆರ್ ಟೀ ೨ ಕಿಂಗು ಒಂದ್ ವಿಲ್ಸು..ಟೀ ಸ್ಟ್ರಾಂಗ್ ಇರ್ಲಮ್ಮಾ, ಬೇಗ ಕಳ್ಸು..
ಹೀಗೆ ಅಪ್ಪಣೆ ಕೊಟ್ಟು, ಟೀ ಅಂಗಡಿಯ ಪಕ್ಕದಲ್ಲಿ ಇರೋ ಕಟ್ಟೆ ಮೇಲೆ 6 ಮಂದಿಯ ಪೀಠಾರೋಹಣ. ಈ ಥರಾ ಆ ಸೇಟು ಅಂಗಡೀಲಿ ಅದೆಷ್ಟು ಮ್ಯಾನ್ ಅವರ್ಸ್ (Man Hours) ಹಾಳು ಮಾಡಿದೀವೋ, ಸೇಟು ಹತ್ರಾ ಅದೆಷ್ಟು ಬಿಸಿ ನೀರನ್ನ ಟೀ ರೂಪದಲ್ಲಿ ಕುಡ್ದಿದೀವೋ, ಆ ದೇವರಿಗೇ ಗೊತ್ತು.
ಮೋಸ್ಟ್ಲಿ, ಅವನಿಗೆ ಕೊಟ್ಟ ವ್ಯಾಪಾರದ ದುಡ್ಡನ್ನ ಲೆಕ್ಕ ಹಾಕುದ್ರೆ, ಆರಾಮಾಗಿ ಒಂದು ಸೆಕೆಂಡ್ ಹ್ಯಾಂಡ್ ಕಾರ್ ತಗೋಬೋದಿತ್ತೋ ಏನೋ ??
ಸಾಯಂಕಾಲ 6:00ಕ್ಕೆ ಸರಿಯಾಗಿ ಮನೆಯಿಂದ ಹೋರಡೋದು...ಕಾಫಿ ಕುಡ್ಕೊಂಡು ಹೋಗೋ ಅಂತ ಅಮ್ಮ ಕೂಗ್ತಾ ಇದ್ರೂ ಹಂಗೆ ಬೈಕಿಗೆ ಒದ್ದು (ಕೊನೆ 2 ವರ್ಷ ಮಾತ್ರ ಬೈಕು,ಅದಕ್ಕೆ ಮುಂಚೆ ಲೂನಾ, ಅದಕ್ಕೂ ಮುಂಚೆ ಸೈಕಲ್) ಬುರ್ರ್ ಅಂತ ಹೊರಟರೆ, ಗಾಡಿ ನಿಲ್ಲುತ್ತಿದ್ದು ನಮ್ಮ ಕಟ್ಟೆಯಲ್ಲೇ.. ನಮ್ಮ ಕಟ್ಟೆ ನಮ್ಮೆಲ್ಲರ ಜೀವನದ ಪ್ರಮುಖ ಘಟ್ಟಗಳಿಗೆ ಸಾಕ್ಷಿಯಾಗಿದೆ, ಹಾಗೆ ಆ ಕಟ್ಟೆಯ ಘಟ್ಟಗಳಿಗೆ ನಾವು ಕೂಡಾ ಸಾಕ್ಷಿಯಾಗಿದೀವಿ.
ಕಟ್ಟೆ ಅಂದ್ರೆ ಸಾಕಾ ?? ಅದಕ್ಕೊಂದು ಹೆಸ್ರು ಬೇಡ್ವಾ ?? ಅದರ ಹೆಸ್ರು "ರಾಂದೇವ್ ಟೀ ಸ್ಟಾಲ್".
ಓರ್ವ ರಾಜಾಸ್ಥಾನಿ ಮಾರ್ವಾಡಿ (ಸೇಟು) ಇಟ್ಟಿರುವ ಟೀ ಅಂಗಡಿ ಅದು.
ಆ ಕಟ್ಟೆಯಲ್ಲಿ ನಾವು ಕೂರಕ್ಕೆ ಶುರು ಮಾಡಿ 12-14 ವರ್ಷಗಳಾಗಿದೆ ಅನ್ಸುತ್ತೆ. ಆ ಟೀ ಅಂಗಡಿ. ಸಾರಿ ಸಾರಿ ನಮ್ಮ ಕಟ್ಟೆ ಇವಾಗ ಇರೋಥರಾ ಇರ್ಲಿಲ್ಲಾ. ಒಂದು ಸಣ್ಣ 4x6 ರೂಮಲ್ಲಿ ಟೀ ಮಾಡಿ ಮಾರುತ್ತಾ ಇದ್ದ ಆ ಮಾರ್ವಾಡಿ. ನಮಗಿಂತಾ ಮುಂಚೆ ಜನ ಅಲ್ಲಿ ಬರ್ತಾ ಇದ್ರು, ಟೀ ಕುಡಿದು ಹೋಗೋರು. ಆದ್ರೆ, ಅಲ್ಲಿ ಕೂತು ಟೈಂಪಾಸ್ ಮಾಡಬಹುದು ಎಂದು ತೋರಿಸಿದ್ದೇ ನಾವು ಅನ್ಸುತ್ತೆ. ಆಮೇಲೆ ಕಟ್ಟೆಯ ಸ್ವರೂಪವೇ ಬದಲಾಯಿತು. ಎದುರುಗಡೆ ಇದ್ದ ಸ್ವಲ್ಪ ದೊಡ್ಡ ಅಂಗಡಿಗೆ ಶಿಫ್ಟ್ ಮಾಡಿದ, ಜನ ಜಾಸ್ತಿ ಬರತೊಡಗಿದ್ರು, ಹಾಗೇ ಕೂಡಾ ಗ"ಟ್ಟೀ" ಇದ್ದ ಟೀ, ನೀರ್"ಟೀ" ಆಗಕ್ಕೆ ಶುರು ಆಯ್ತು.. ಹಂಗೇ ಕೂಡಾ ಸೇಟು ಒಂದು ತಗಡು ಲೂನಾ ಓಡುಸ್ಕೊಂಡು ಬರ್ತಾಇದ್ದಾಗಿಂದ ಹಿಡಿದು, ಇವಾಗ ಬರೋ ಬಜಾಜ್ ಡಿಸ್ಕವರ್ ತನಕ ನೋಡಿದ್ದೀವಿ.
ಹಾಗೇ ಆ ಹಳೇ ಲೂನಾದಲ್ಲಿ ಒಂದ್ಸಲ ಹಂದಿಗೆ ಗುದ್ದಿ, ಅದನ್ನ ಮಾರೋಕ್ಕೆ ಶತಪ್ರಯತ್ನ ಮಾಡಿದ್ದೂ ಕೂಡಾ ನೆನಪಿದೆ.
ನಮ್ಮ ಕಟ್ಟೆ ಬಳಗದ ಎಲ್ರಿಗೂ ಒಂದು (ಒಂದಕ್ಕಿಂತ ಜಾಸ್ತಿ ಕೂಡಾ ಇರುತ್ತೆ) ಅಡ್ಡ ಹೆಸರುಗಳು.....ಆ ಸೇಟು ಕೂಡಾ ಅಡ್ಡ ಹೆಸ್ರನ್ನೇ ಇಟ್ಟು ಕರಿಯೋದು.
"ಬಾಂಡು, ನಿನ್ನ ಅಕೌಂಟು ಜಾಸ್ತಿ ಆಗಿದೆ..ಯಾವಾಗ ಕಾಸು ಕೊಡ್ತ್ಯಾ??" ,
"ಕಾಂತ, ನಿನ್ನ ಕೇಳ್ಕೊಂಡು ಬೋಂಡ ಬಂದಿದ್ದ",
"ಇವಾಗ ಗೆಡ್ಡೆ ಆಕಡೆ ಹೋದ, 5 ಮಿನಿಟ್ ಬರ್ತಾನಂತೆ"...
ಹೀಗೆ ಸೇಟು ನಮಗಾಗಿ MESSENGER ಥರಾ ಕೆಲ್ಸ ಮಾಡ್ತಾನೆ..
ಇನ್ನು ಆಡ್ಡ ಹೆಸರುಗಳೋ..ಒಂದೊಂದೂ ವಿಚಿತ್ರ ...
ಶ್ರೀನಿವಾಸ - ಬಾಂಡು, ಕಜ್ಜಿ, ಕ್ವಾಷ್ಟ, ಬಿಟ್ಟಿ
ಹರೀಶ - ಗೆಡ್ಡೆ, ಮುದಿಯ, ಚಪ್ಲಿ ಕಳ್ಲ, ಪಾತ್ರೆ ಪಾಲಿಶ್
ಪ್ರಸಾದ (ನಾನೇ) - ಬೋಂಡ, ಪಿಟೀಲು
ಹೆಗಡೆ - ಕರಡಿ
ಕಿರಣ - ಕುಂಡ (ಕುರುಡ)
ಶ್ರೀಕಾಂತ - ಕಾಂತ, ಕೋತಿ ಟೋಪನ್
ಬಸವರಾಜ್ - ಸ್ಟಾರು
ಚಂದ್ರು - ಕುಳ್ಳ ನಂಜುಂಡ - ಮಾಮ
ನಂಜುಂಡ್ ಸ್ಯಾಮುಯೆಲ್ಸ್, ಒಂಭತ್ತು
ಮಹೇಂದ್ರ - ಸ್ಲೋ RAM (ಸಿಕ್ಕಪಟ್ಟೆ ಸ್ಲೋ ಮನುಷ್ಯ.. 16MB RAM ಥರಾ)
ಅಭಿ - ಡಕ್ಕಿ, ಮೊಟ್ಟೆ
ಮಂಜುನಾಥ - ಪೀಟ್ರು
ಇವೇ, ಖಾಯಂ ಸದಸ್ಯರುಗಳ ಅಡ್ಡ ಹೆಸರುಗಳು.
ಎಲ್ಲರೂ ಸೇರಿರುವಾಗ ನಿಜಕ್ಕೂ ಟೈಂಪಾಸ್ ಆಗೋದು ಗೊತ್ತೇ ಆಗೊಲ್ಲಾ..ಇನ್ನು ಮಾತಾಡೋ ವಿಷಯಗಳೋ, ಅಬ್ಬಬ್ಬಾ, ಸಂನ್ಯಾಸಿಯಿಂದ ಸೂಳೆ ತನಕ ಎಲ್ಲಾ ಕವರ್ ಆಗತ್ತೆ..
ಇನ್ನು ಇದ್ರ ಬಗ್ಗೆ ಬರೀತಾ ಕೂತ್ರೆ, ಮಹಾಭಾರತ ಥರ ಮಹಾ ಗ್ರಂಥನೇ ಆಗುತ್ತೆ ಅನ್ಸತ್ತೆ..
ಆದ್ರೂ ಯಾಕೋ ಇತ್ತೀಚಿಗೆ ಎಲ್ಲರ ಜೊತೆ ಬೆರೆಯೋದು ಕಮ್ಮಿ ಆಗ್ತಾ ಇದೆ. ಹೊಟ್ಟೆಪಾಡಿಗಾಗಿ ಊರು ಬಿಟ್ಟು, ಬೆಂಗಳೂರು ಸೇರಿ, 15ದಿನಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಭೇಟಿ.
ಕಟ್ಟೆ ಹುಡುಗರೂ ಯುವಕರಾಗಿದ್ದಾರೆ, ಒಬ್ಬೊಬ್ಬರಾಗಿ ಮದ್ವೆ ಆಗ್ತಾ ಇದಾರೆ. ಆಗ್ಲೇಬೇಕಲ್ವಾ ? ಬದಲಾವಣೆಯೇ ಜೀವನ..
ಮಿಕ್ಕಿದ್ದು ಇನ್ನೊಮ್ಮೆ..
ನಿಮ್ಮವನು,
ಕಟ್ಟೆ ಶಂಕ್ರ