Showing posts with label ತುರ್ತು ಪರಿಸ್ಥಿತಿ. Show all posts
Showing posts with label ತುರ್ತು ಪರಿಸ್ಥಿತಿ. Show all posts

Monday, March 15, 2010

ಭದ್ರತೆ... ಏನು ನಮ್ಮ ಸಿದ್ಧತೆ?

ಇತ್ತೀಚಿಗೆ ಒಂದೇ ಪ್ರಶ್ನೆಯನ್ನು ನಾನು ನನ್ನಲ್ಲೇ ಪದೇ ಪದೇ ಕೇಳಿಕೊಳ್ಳುತ್ತೇನೆ....."ನಾವು ಸುರಕ್ಷಿತವಾಗಿ ಇದೀವಾ?" ಎಂದು. ಈಗ್ಗೆ ಸುಮಾರು ಒಂದು ದಶಕದ ಈಚೆಗೆ ಭದ್ರತೆ, ಸುರಕ್ಷತೆ ಎನ್ನುವುದು ಜೀವನಕ್ಕೆ ಊಟ, ವಸತಿ, ಬಟ್ಟೆಯಷ್ಟೇ ಮುಖ್ಯವಾಗಿದೆ. ಈ ಮುಂಚೆ ಭಯ ಆತಂಕದ ಕಾರಣ ಇದ್ದದ್ದು ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳಿಂದ. ಆದರೆ ಈಗ ಜಾಗತಿಕ ಹಾಗು ಆಂತರಿಕ ಭಯೋತ್ಪಾದನೆಯಿಂದ ಹೆಚ್ಚುತ್ತಿರುವ ಆತಂಕ, ಸಂಶಯ, ಅಸುರಕ್ಷತೆಯ ಭಾವನೆ, ಅಶಾಂತಿಯ ಕಾರಣದಿಂದಾಗಿ ನಾವು ಮುಂಚಿನಕ್ಕಿಂತಾ ಹೆಚ್ಚು ಜಾಗರೂಕರಾಗಿದ್ದೀವಿ ಹಾಗು ಭದ್ರತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೀವಿ ಹಾಗು ಚಿಂತಿತರಾಗಿದ್ದೀವಿ.

ಪ್ರತೀ ಬಾರಿ ನಾನು ಯಾವುದೇ ನೂರಾರು ಸಾವಿರಾರು ಜನರು ಸೇರುವ ಜಾಗಕ್ಕೆ ಹೋದಾಗ "ಭದ್ರತಾ ತಪಾಸಣೆ" ಎಂಬ ಒಂದು ಹಾಸ್ಯಾಸ್ಪದ ಘಟನೆಗೆ ಒಳಪಡುತ್ತೇನೆ ಹಾಗು ಸಾಕ್ಷಿಯಾಗುತ್ತೇನೆ. ಈ ಭದ್ರತೆ ಎನ್ನುವ ಪದಕ್ಕೆ ನಮ್ಮಲ್ಲಿ ಇನ್ನೂ ಸರಿಯಾದ ವ್ಯಾಖ್ಯಾನ ಹಾಗು ಗಾಂಭೀರ್ಯ ಸಿಕ್ಕಿಲ್ಲ್ಲ.

ನಿನ್ನೆ ಹದಿನಾಲ್ಕರ ಭಾನುವಾರ ನನ್ನಾಕೆಯ ಜೊತೆ ಜಯನಗರದ ಸ್ವಾಗತ್ ಗರುಡ ಮಾಲ್-ನ ಸಿನೆಮಾ ಮಂದಿರದಲ್ಲಿ "ಆಪ್ತರಕ್ಷಕ" ನೋಡಲು ಹೋಗಿದ್ದೆ. ಅಲ್ಲಿ ಮೂರು ಕಡೆ ತಪಾಸಣೆ. ಮೊದಲು ಲೋಹ ಶೋಧಕ ಬಾಗಿಲಿನ ಮೂಲಕ ಒಳಗೆ ಪ್ರವೇಶ, ನಂತರ ಅಲ್ಲೇ ಮತ್ತೊಬ್ಬ ಭದ್ರತಾ ಸಿಬ್ಬಂದಿಯಿಂದ ತಪಾಸಣೆ. ನಾನು ಎಲ್ಲಿ ಹೋದರೂ ಬೆನ್ನಿಗೊಂದು ಚೀಲ ನೇತುಹಾಕಿಕೊಂಡು ಹೋಗುವ ಅಭ್ಯಾಸ. ಆ ಸಿಬ್ಬಂದಿ ಆ ಬ್ಯಾಗನ್ನು ತೆರೆಸಿ ಚೆಕ್ ಮಾಡಿದ. ನಂತರ ಚಿತ್ರಮಂದಿರದ ಒಳಗೆ ಹೋಗುವುದಕ್ಕೆ ಅಲ್ಲೊಂದು ಬಾರಿ ತಪಾಸಣೆ. ಮೊದಲು ಸಿಬ್ಬಂದಿಯಿಂದ ನಮ್ಮ ದೇಹವನ್ನು ಮುಟ್ಟಿ ತಪಾಸಣೆ, ನಂತರ ಬ್ಯಾಗನ್ನು ತೆರೆಸಿ ಮಗದೊಮ್ಮೆ ತಪಾಸಣೆ. ತಡೆಯಲಾರದೆ ಕೇಳಿದೆ "ಅಲ್ಲಾ ಕಣ್ರೀ, ನೀವೇನೋ ಬ್ಯಾಗ್ ತೆರೆಸಿ ಚೆಕ್ ಮಾಡ್ತೀರಾ; ಒಳಗೆ ಬಾಂಬು, ಗನ್ ಇದ್ರೆ ಏನ್ ಮಾಡ್ತೀರಾ? ನಾನೇ ಈಗ ಜೇಬಿನಿಂದ ಗನ್ ತೆಗೆದರೆ ಹೆಂಗೆ?" ಎಂದು. ಅಒದೈದು ಕ್ಷಣ ತಬ್ಬಿಬ್ಬಾದ ಆತ ಒಂದು ದೇಶಾವರಿ ನಗೆ ನಕ್ಕಿ "ಕಂಪ್ಲೇಂಟ್ ಕೊಡ್ತೀವಿ ಸಾರ್, ಓಡಲೇ ಬೇಕಾಗುತ್ತೆ ಸಾರ್.. ಇನ್ನೇನ್ ಮಾಡೋಕಾಗುತ್ತೆ?" ಎಂದ.

ನಾನು ಮುಂಚೆ ಹೇಳಿದ ಹಾಗೆ ನಮ್ಮಲ್ಲಿ ಭದ್ರತೆಯ ವ್ಯಾಖ್ಯಾನ ತಪ್ಪಾಗಿದೆ. ಸಾವಿರ ಜನ ಇರಲಿ, ಹೊರಗೆ ಹತ್ತು ಜನ ಒಂದು ದೊಣ್ಣೆ ಹಿಡಿದು ನಿಂತಿದ್ದರೆ ಆ ಜಾಗಕ್ಕೆ ಭದ್ರತೆ ಕೊಡಲಾಗಿದೆ ಎಂದರ್ಥ. ಇದರ ಪ್ರತ್ಯಕ್ಷ ದರ್ಶನವಾಗಬೇಕು ಎಂದರೆ ಯಾವುದಾದರೂ ಮಾಲ್-ಗೆ ಹೋಗಿ. ಪ್ರವೇಶದಲ್ಲೇ ಲೋಹಶೋಧಕ ಬಾಗಿಲು; ದಾಟಿದ ಕೂಡಲೇ ಸಿಬ್ಬಂದಿಯ ಕೈಲಿ ಒಂದು ಲೋಹಶೋಧಕ ಯಂತ್ರ; ಚೀಲ ಇದ್ದರೆ ಅದನ್ನು ತೆರೆಸಿ ತಪಾಸಣೆ. ಇವರಿಗೆ ಅಸಲು ಬಾಂಬ್ ಹೇಗಿರುತ್ತದೆ ಎನ್ನುವ ಕಲ್ಪನೆ ಇರುತ್ತದೆಯೇ ? ಸಿನೆಮಾದಲ್ಲಿ ತೋರಿಸಿದ ಹಾಗೆ ಒಂದು ಡಬ್ಬ, ಅದಕ್ಕೆ ಹತ್ತಾರು ವೈರ್-ಗಳು, ಮಿಣುಗುತ್ತಾ ಇರೋ LED ದೀಪಗಳು ಹಾಗು ಒಂದು ಟೈಮರ್.. ಹೀಗಾ? ಅಪಾಯ ಉಂಟುಮಾಡುವ ವಸ್ತು ಹೇಗೆ ಇರುವುದು ಎನ್ನುವ ಕಲ್ಪನೆಯೇ ಇಲ್ಲದೆ ಇವರು ಚೀಲದ ಒಳಗೆ ಏನನ್ನು ಹುಡುಕುತ್ತಾರೆ ? ಬೇರೆ ಪಶ್ಚಾತ್ಯ ದೇಶಗಳ ಹಾಗೆ ನಮ್ಮಲ್ಲಿ ಇನ್ನೂ ಆ ಲೆವೆಲ್ಲಿಗೆ ಗನ್ ಸಂಸ್ಕೃತಿ ಇಲ್ಲ. ಹಾಗೆ ಇದ್ದಿದ್ದಲ್ಲಿ, ಒಬ್ಬಾತ ತನ್ನ ಜೇಬಿನಿಂದ ಬಂದೂಕನ್ನು ತೆಗೆದ ಪಕ್ಷದಲ್ಲಿ, ಈ ಭದ್ರತಾ ಸಿಬ್ಬಂದಿ ಏನು ಮಾಡಬಲ್ಲರು ? ಇನ್ನು ನಮ್ಮ ಇದೇ ಮಾಲ್-ಗಳಲ್ಲಿನ ವಾಹನ ನಿಲುಗಡೆ. ಇವು ಇರುವುದು ನೆಲಮಾಳಿಗೆಯಲ್ಲಿ. ಅಲ್ಲಿ ಒಳಗೆ ಬರುವ ವಾಹನಕ್ಕೆ ಯಾವುದೇ ರೀತಿಯ ತಪಾಸಣೆ ??? ಉಹೂಂ.. ಶೂನ್ಯ. ಅವುಗಳು ಒಳಗೆ ಬಂದ ಕೂಡಲೇ ಚೀಟಿ ಹರಿದು ಕೊಡ್ತಾರೆ ವಿನಃ ಬೇರಾವುದಕ್ಕೂ ಅಲ್ಲ.

ನಮ್ಮಲ್ಲಿ ಇರುವ ಭದ್ರತಾ ಸಿಬ್ಬಂದಿ ಎಷ್ಟರ ಮಟ್ಟಿಗೆ ಈ ರೀತಿಯಾದ ಸಂದರ್ಭಗಳನ್ನು ಎದುರಿಸಲು ಯೋಗ್ಯರಾಗಿದ್ದಾರೆ? ಮೇಲೆ ಹೇಳಿದ ಘಟನೆ ನಡೆದ ಪಕ್ಷದಲ್ಲಿ, ಅದಕ್ಕೆ ಕಾರಣರಾದವರನ್ನು ದೈಹಿಕವಾಗಿ ಎದುರಿಸುವ ಬಲ ಹಾಗು ಮಾನಸಿಕ ಸ್ಥೈರ್ಯ ಹೊಂದಿದ್ದಾರೆ ? ತುರ್ತು ಪರಿಸ್ಥಿತಿಗಳಲ್ಲಿ ಅವುಗಳನ್ನು ನಿಭಾಯಿಸುವ ತರಬೇತಿ ಎಷ್ಟು ಮಂದಿ ಉಳ್ಳವರಾಗಿದ್ದಾರೆ? ಅಗ್ನಿಶಾಮಕ ಉಪಕರಣಗಳನ್ನು / ಪದ್ಧತಿ ಹಾಗು ಪ್ರಥಮ ಚಿಕಿತ್ಸೆ ಬಗ್ಗೆ ಎಷ್ಟು ಮಂದಿಗೆ ಅರಿವಿದೆ? ಸಾಕಷ್ಟು ಬಾರಿ ಕಂಡ ಹಾಗೆ ಕಾಟಾಚಾರಕ್ಕೆ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಈ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಂಡಿರುತ್ತಾರೆ. ಇವರುಗಳಿಗೆ ಒಂದು ಸಾಮಾನ್ಯ ಬೌದ್ಧಿಕ ಹಾಗು ವಿದ್ಯಾರ್ಹತೆ ಇರಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಒಂದು ಕನಿಷ್ಟ ಮಟ್ಟದ ದೈಹಿಕ ಅರ್ಹತೆ ಇರಬೇಕು. ಬೆಂಗಳೂರಲ್ಲಿ ಇರುವ ಈ ಸಿಬ್ಬಂದಿಗಳ ಪೈಕಿ ಸುಮಾರು ಜನಕ್ಕೆ ಇವು ಇರುವುದಿಲ್ಲ. ಇನ್ನು ಬ್ಯಾಂಕುಗಳ ATM ಯಂತ್ರಗಳ ಭದ್ರತಾ ಸಿಬ್ಬಂದಿಗಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ. ಈ ಗುಂಪಿನ ಸಿಬ್ಬಂದಿಗಳಲ್ಲಿ ಸುಮಾರು 60-65% ಐವತ್ತು ವರ್ಷಕ್ಕೆ ಮೇಲ್ಪಟ್ಟವರು. ಇಂಥವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರಾಗಿರುವುದ್ದಿಲ್ಲಾ, ಇನ್ನು ಭದ್ರತೆಯ ಪ್ರಶ್ನೆ ಎಲ್ಲಿದೆ? ಕೆಲ ತಿಂಗಳ ಹಿಂದೆ ಬೆಂಗಳೂರಿನ RT ನಗರದ ಬ್ಯಾಂಕ್ ಒಂದರಲ್ಲಿ ಹೀಗೆ ಹೋಚುವ ಕಾರ್ಯದಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು.

ನಾನು ಯೂರೋಪಿನಲ್ಲಿ ಸುಮಾರು ಆರು ದೇಶಗಳಿಗೆ ಸುತ್ತಿರುವೆ. ನಾನು ಪರದೇಶಿಯಾಗಿ ಆ ದೇಶದಲ್ಲಿ ಅನುಭವಿಸಿರುವ ಭದ್ರತೆಯನ್ನು, ನಮ್ಮ ದೇಶದಲ್ಲಿ ನಾನು ಅನುಭವಿಸಿಲ್ಲ. ಅಲ್ಲಿ ಯಾವುದೇ ಜಾಗಕ್ಕೆ ಹೋಗಲಿ, ಅಲ್ಲಿರುವ ಭದ್ರತಾ ಸಿಬ್ಬಂದಿಯನ್ನು, ಅವರ ಪರಿಕರಗಳನ್ನು ಕಂಡರೆ ಅವರು ಕೊಡುವ ಹಾಗು ಕೊಡಬಲ್ಲ ಭದ್ರತೆಯ ಭಾವನೆ ಉಂಟಾಗುತ್ತದೆ ಹಾಗು ತಂಟೆ ತಕರಾರು ಮಾಡುವವರೂ ಕೂಡಾ ನಾಲ್ಕು ಬಾರಿ ಯೋಚಿಸಬೇಕಾಗುತ್ತದೆ. ಆದರೆ ಇಲ್ಲಿ ಭದ್ರತೆ ಅನ್ನುವುದು ಸುಮ್ಮನೆ ಒಂದು ಕಣ್ಣೊರೆಸುವ ಕೆಲಸವಗಿದೆಯೇ ಹೊರತು ಬೇರೇನೂ ಅಲ್ಲ. ಏನಾಗುವುದೋ, ಆ ದೇವರೇ ಬಲ್ಲ. ಪದೇ ಪದೇ ಹೇಳುವ ಹಾಗೆ, ಅರಿವು ಮುಖ್ಯ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ