Showing posts with label ಇನ್ನೂ 7000 ಹೊಸಾ ಆಟೋ ಪರ್ಮಿಟ್. Show all posts
Showing posts with label ಇನ್ನೂ 7000 ಹೊಸಾ ಆಟೋ ಪರ್ಮಿಟ್. Show all posts

Wednesday, July 16, 2008

ಇವಾಗ ಇರೋದು ಸಾಲ್ದು ಅಂತ

ನಿನ್ನೆ ಪೇಪರ್ ಹಾಗು ಅಂತರ್ಜಾಲದಲ್ಲಿ ಕಂಡ ಹಾಗೆ, ಸರ್ಕಾರವು ಬೆಂಗಳೂರಲ್ಲಿ ಇನ್ನೂ 7000 ಹೊಸಾ ಆಟೋಗಳಿಗೆ ಪರವಾನಗಿ ಕೊಡ್ತಾ ಇದ್ಯಂತೆ. ಯಾಕ್ ಸ್ವಾಮಿ, ಇವಾಗ್ಲೇ ಪಡಬಾರದ ಕಷ್ಟ ಪಟ್ಟು, ಆಟೋಗಳು ಮಿಗಿಸೋ ಅಲ್ಪ ಸ್ವಲ್ಪ ರೋಡಿನಲ್ಲಿ ಓಡಾಡ್ತಾ ಇದೀವಿ, ಇನ್ನೂ 7000 ಹೊಸಾ ಆಟೋಗಳು ರೋಡಿಗಿಳಿದರೆ ನಾವುಗಳು ಫುಟ್ಪಾತ್ ಏರಬೇಕಾಗುತ್ತೆ ಅಷ್ಟೇ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಈಗಾಗಲೇ 76,000 ಪರವಾನಗಿ ಇರುವ ಆಟೋಗಳು ಬೆಂಗಳೂರಿನ ರಸ್ತೆಗಳ ಮೇಲಿವೆ. ಇವುಗಳ ಜೊತೆ ಸುಮಾರು 10,000 ಅನಧಿಕೃತ (ಪರವಾನಗಿ ಇಲ್ಲದೆ ಇರುವ) ಆಟೋಗಳು ಸೇರಿವೆ.

2006 ರಲ್ಲಿ ಆಟೋ ದಟ್ಟಣೆ ಜಾಸ್ತಿಯಾದ ಕಾರಣ, ಪರ್ಮಿಟ್ ನೀಡುವುದನ್ನು ನಿಲ್ಲಿಸಲಾಗಿತ್ತು, ಆದರೆ ಬಿ.ಆರ್.ಅಂಬೇಡ್ಕರ್ ಕಾರ್ಪೊರೇಷನ್ ಹಾಗು ಸಣ್ಣ ಉದ್ಯೋಗ ಅಭಿವೃದ್ಧಿ ನಿಗಮದಿಂದ ಅನುಮತಿ ಪಡೆಯುತ್ತಾರೋ ಅವರಿಗೆ ಮಾತ್ರಾ ಪರ್ಮಿಟ್ ಕೊಡಲಾಗುತ್ತಿತ್ತು. ಸುದ್ಧಿ ಬಂದ ಪ್ರಕಾರ, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಕಾರಣ, ಸಾರಿಗೆ ಸಚಿವ ಆರ್.ಅಶೋಕ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಸರ್ಕಾರವು ಈ ರೀತಿಯ ಅನುಮತಿ ಅಂಗೀಕರಿಸಿ, ಆದೇಶಿಸುವ ಮುನ್ನ ಪಕ್ಷಕ್ಕೆ ಸಿಗುವ ಬೆಂಬಲಕ್ಕಿಂತ, ಜನಪರ ಕಾಳಜಿಯುಕ್ತ ಯೋಚನೆ ಮಾಡಿದರೆ ಕ್ಷೇಮ.

ಇನ್ನು ಈ ಆಟೋ ಪರ್ಮಿಟ್ ಅನ್ನೋ ದಂಧೆ ಬಗ್ಗೆ ಕೂಡಾ ಹೇಳಬೇಕು. ಆಟೋ ಪರ್ಮಿಟ್ ತಗೊಂಡಿರೋ ಜನರೇ ಅದನ್ನು ಓಡಿಸ್ತಾರೆ ಅನ್ಕೊಂಡ್ರೆ ತಪ್ಪಾಗುತ್ತೆ. ಸರ್ಕಾರ ನಿಗದಿ ಪಡಿಸಿರುವ ಆಟೋ ಪರ್ಮಿಟ್ ಶುಲ್ಕ ಕಮ್ಮಿ. ಈ ಪರ್ಮಿಟ್ ಹಂಚಿಕೆಯಲ್ಲಿ ಕೂಡಾ ಸಿಕ್ಕಾಪಟ್ಟೆ ಭ್ರಷ್ಟಾಚಾರ ತುಂಬಿದೆ. ಪರ್ಮಿಟ್ ಪಡೆದವರು, ಅದನ್ನು ಒಳ್ಳೇ ರೇಟಿಗೆ ಮಾರಿಕೊಳ್ಳುತ್ತಾರೆ. ಸಿಕ್ಕಾಪಟ್ಟೆ ದುಡ್ಡು ಕೊಟ್ಟು ಪರ್ಮಿಟ್ ಕೊಂಡ ಆಟೋ ಡ್ರೈವರ್, ಕರೆಕ್ಟಾದ ಮೀಟರ್ ಹಾಕಿಸ್ತಾನೆ ಅನ್ನೋ ಗ್ಯಾರಂಟಿ ಇದ್ಯಾ ?? ಒಳ್ಳೇ ಪೆಟ್ರೋಲ್ ಅಥವಾ ಗ್ಯಾಸ್ ಹಾಕಿಸುತ್ತಾನೆ ಅಂತಾ ಗ್ಯಾರಂಟಿ ಇದ್ಯಾ ? ನೀವೇ ನೋಡಿರೋ ಹಾಗೆ, ಇವಾಗಲೇ ಎಷ್ಟು ಗಾಳಿ ಹಾಗು ಶಬ್ದ ಮಾಲಿನ್ಯ ಇದೆ.. ಇನ್ನು ಇದಕ್ಕೆ 7000 ಆಟೋಗಳು ರೋಡಿಗಿಳಿದರೆ ಹೆಂಗಿರುತ್ತೆ?

ಅಥವಾ, ನಮ್ಮಲ್ಲಿ ಕೂಡಾ ಮದ್ರಾಸು, ಹೈದ್ರಾಬಾದಿನ ಹಾಗೆ ಶೇರಿಂಗ್ (Sharing) ವಿಧಾನ ಶುರು ಮಾಡಿದರೆ ತುಂಬಾ ಅನುಕೂಲ. ನೂರು ಜನ ಎಂ.ಜಿ.ರೋಡಿನಿಂದ ಕೋರಮಂಗಲಕ್ಕೆ ಹೋಗಬೇಕು ಅಂದ್ರೆ ನೂರು ಆಟೋ ಹಿಡೀತಾರೆ. ಅದೇ, ಶೇರಿಂಗ್ ಇದ್ರೆ, 33 ಆಟೋ ಸಾಕು ತಾನೆ. ನಮ್ಮ ಬೆಂಗಳೂರಲ್ಲಿ ಆಟೋ ದಟ್ಟಣೆ ನೋಡಬೇಕಂದ್ರೆ, ನೀವು ಗಾಡಿಯಲ್ಲಿ ಹೋಗಬೇಕಾದ್ರೆ ಸುಮ್ನೆ ಸ್ವಲ್ಪ ಎದ್ದು ರೋಡಿನ ಉದ್ದಕ್ಕೂ ಒಮ್ಮೆ ಕಣ್ಣು ಹಾಯಿಸಿ.. ಎಲ್ಲಿ ನೋಡಿದರೂ ಎಲ್ಲೋ ಎಲ್ಲೋ ಟಾಪುಗಳು.

ಇದೇನಪ್ಪಾ, ಕಟ್ಟೆ ಶಂಕ್ರ ಆಟೋಗಳ ಮೇಲೇ ಕಿಡಿ ಕಾರ್ತಾ ಇದಾನೆ ಅನ್ನುಸ್ತಾ ಇದೀಯಾ?? ಹಂಗೆಲ್ಲ ಏನೂ ಇಲ್ಲ ಕಣ್ರೀ, ನಿನ್ನೆ ಓದಿದ ಸುದ್ಧಿ ಬಗ್ಗೆ ಇದು ನನ್ನ ಅಂಬೋಣ.
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ