Friday, March 6, 2009

ನನ್ನ ಪುನರ್ಜನ್ಮ ಹಾಗು ಪೂರ್ವಜನ್ಮ ಸ್ಮರಣೆ

ಶಂಕ್ರಂಗೆ ಇದೇನಾಯ್ತಪ್ಪಾ ? ಸುಮ್ನೆ ಆಟೋ, ಟಾಯ್ಲೆಟ್ಟು ಫೋಟೋ ತೆಕ್ಕೊಂಡು ಇದ್ದೋನು ಸಡನ್ನಾಗಿ ಮರುಜನ್ಮ, ಪೂರ್ವಜನ್ಮ ಸ್ಮರಣೆ ಅಂತಾ ಏನೇನೋ ಮಾತಾಡ್ತಾ ಇದಾನಲ್ಲ ಅನ್ಕೊತಾ ಇದ್ದೀರಾ?

ಹಂಗಲ್ಲಾ ಕಣ್ರೀ ಕಟ್ಟೆ ಮಿತ್ರರೇ, ಅವತ್ತೊಂದು ಭಾನುವಾರ, (ಸುಮಾರು ಮೂರು ವಾರಗಳ ಹಿಂದೆ) ಹೊರಗೆ ಸಖತ್ ಸ್ನೋಫಾಲ್ ಜೊತೆಗೆ ಮಳೆ. ಹಾಗಾಗಿ ಎಲ್ಲೂ ಹೋಗದೆ ಮನೇಲಿ ಕೂತಿದ್ದೆ. ಅವಾಗ ಬಂದ ಯೋಚನೆ ಇದು.
ಸ್ವಲ್ಪ ದೊಡ್ಡದಿದೆ ಈ ಬರಹ, ದಯವಿಟ್ಟು ಹೊಟ್ಟೆಗಾಕ್ಕೊಬೇಕು ಬಾಂಧವರು

ಇಲ್ಲಿ ಜರ್ಮನಿಯಲ್ಲಿ ಇರುವ ಸವಲತ್ತುಗಳು, ಒಂದು ಜೀವಕ್ಕಿರುವ ಮರ್ಯಾದೆ / ಬೆಲೆ ಕಂಡು, ಮುಂದಿನ ಜನ್ಮ ಅಂತ ಏನಾದರೂ ಇದ್ದಲ್ಲಿ, ಈ ದೇಶದಲ್ಲೇ ಹುಟ್ಟಬಯಸ್ತೀನಿ, ಅಂತ ಹೇಳಿದ್ದು.
ಯಪ್ಪೋ.. ತಡೀರಿ ಸ್ವಲ್ಪ..ಏನು ಈ ನನ್ ಮಗಾ ಈ ಥರ ಹೇಳ್ತಾನಲ್ಲ ಅಂತಾ ಉಗ್ಯೋಕ್ಕೆ ಮುಂಚೆ ಸ್ವಲ್ಪ ಓದಿ.
ನಾನು ಈ ದೇಶದಲ್ಲಿ ಮುಂದಿನ ಜನ್ಮದಲ್ಲಿ ಹುಟ್ಟಬಯಸ್ತೀನಿ ಅಂತ ಹೇಳಿದ್ನಲ್ಲ, ಆ ಫ್ಯಾಂಟಸಿಯನ್ನು ಯಾವ ರೀತಿಯಲ್ಲಿ ಮುಂದಕ್ಕೆ ತಗೊಂಡು ಹೋದೆ ಅನ್ನೋದನ್ನ ಕೇಳಿ. ನನ್ನ ಮುಂದಿನ ಜನ್ಮ ಹೇಗಿರಬೇಕು ಅನ್ನೋದನ್ನ ನಾವೇ ಸೆಲೆಕ್ಟ್ ಮಾಡೋ ಹಾಗಿದ್ರೆ, ಯಾವ ರೀತಿ ಮಾಡ್ತಾ ಇದ್ದೆ ಅಂತ.

ಮೊದಲನೆಯದಾಗಿ ಇಲ್ಲಿ (ಜರ್ಮನಿಯಲ್ಲಿ) ಒಂದು ಒಳ್ಳೆ ವಿದ್ಯಾವಂತ ಫ್ಯಾಮಿಲಿಯಲ್ಲಿ ಹುಟ್ಟಬಯಸ್ತೀನಿ. ತಕ್ಕ ಮಟ್ಟಿಗೆ ಬುದ್ಧಿ ಬಂದ ಮೇಲೆ, ನನಗೆ ಪೂರ್ವಜನ್ಮದ ಸ್ಮರಣೆ ಬರಬೇಕು. ಫಿಲಂ ನಲ್ಲಿ ತೋರಿಸೋ ಹಾಗೆ ನೆಗೆಟಿವ್ ಇಮೇಜ್ ಅಲ್ಲಾ, ಫ್ರೇಂ ಟು ಫ್ರೇಂ ಜ್ಞಾಪಕ ಬರಬೇಕು. ನಾನು ಹಿಂದಿನ ಜನ್ಮದಲ್ಲಿ "ಮಂದಗೆರೆ ಶಂಕರ ಪ್ರಸಾದ" ಆಗಿದ್ದೆ. ಹುಟ್ಟಿದ್ದು ಮೈಸೂರು, ಮಾತೃಭಾಷೆ ಕನ್ನಡ.

ಶಂಕರನ ಬದುಕು ಜ್ಞಾಪಕ ಬರ್ತಾ ಇದ್ದ ಹಾಗೆ ನ್ಯಾಚುರಲಿ ಅವನ ಹಾಗೆ ಕನ್ನಡದ ಬಗ್ಗೆ ಒಲವು ಬಂದೆ ಬರುತ್ತೆ. ಹಾಗಾಗಿ ಎಲ್ಲೂ ಕನ್ನಡ ಕಲಿಯುವುದು ಬೇಕಿಲ್ಲ. ಆಟೋಮ್ಯಾಟಿಕ್ ಆಗಿ ಅದೂ ಕೂಡ ಬಂದಿರುತ್ತೆ. To The Core ಅಂತಾರಲ್ಲ ಹಾಗೆ. ಅದೇ, ಓದಲು, ಬರೆಯಲು ಚೆನ್ನಾಗಿ ಬರುತ್ತೆ. ಹಾಗೆಯೇ ನಮ್ಮ ಮೈಸೂರಿನ ಭಾಷೆ ನಿರರ್ಗಳವಾಗಿ ಬಂದಿರುತ್ತೆ. ಇಷ್ಟೆಲ್ಲಾ ಜ್ಞಾಪಕ ಬಂದ ಮೇಲೆ ನ್ಯಾಚುರಲಿ, ಸೋಮಾರಿ ಕಟ್ಟೆ ಬ್ಲಾಗಿನ Username ಮತ್ತು Password (Last saved) ಕೂಡ ಜ್ಞಾಪಕ ಬಂದೆ ಬರುತ್ತೆ ಅಲ್ವ?

ಹೀಗಾದ ಮೇಲೆ "ಶಂಕರ ಸತ್ತ ನಂತರ ನಿಂತಿದ್ದ ಸೋಮಾರಿ ಕಟ್ಟೆಯನ್ನ ಮತ್ತೆ ಮುಂದುವರಿಸ್ತೀನಿ" ಇಷ್ಟೆಲ್ಲಾ ಹೇಳಿದ ಮೇಲೆ, ವಯಸ್ಸಿನ ಬಗ್ಗೆ ಕೂಡಾ ಸ್ವಲ್ಪ ಹೇಳೋಣಾ. ಈಗಿರುವ ಶಂಕರ ಸುಮಾರು 70 ವರ್ಷ ಬದ್ಕಿರ್ತಾನೆ ಅನ್ಕೊಳೋಣ. ನನಗೀಗ 29 ವರ್ಷ. ಸೊ, 70ನೇ ವಯಸ್ಸಿಗೆ ಗೊಟಕ್ ಅಂದು, ಮತ್ತೆ ಜನ್ಮ ತಾಳಿ, ಆತ 24 ವರ್ಷದವನಗಿದ್ದಾನೆ ಅಂದುಕೊಂಡು ನಾನು ಯೋಚನೆ ಮಾಡಿದ ಕಥೆ / ಫ್ಯಾಂಟಸಿ ಇದು. ಅವಾಗ ಸರಿ ಸುಮಾರು 2083ನೆ ಇಸವಿ. ಜರ್ಮನಿಯಲ್ಲಿ ಹುಟ್ಟಿದ್ದರಿಂದ ನ್ಯಾಚುರಲಿ, ಬಿಳಿಯನಾಗಿ ಇರ್ತೀನಿ, ಜರ್ಮನ್ ಕೂಡ ಬರುತ್ತೆ. ಜೊತೆಗೆ ಪೂರ್ವಜನ್ಮದ ಸ್ಮರಣೆಯಿಂದ ಕನ್ನಡ ಕೂಡ ಸಖತ್ತಾಗಿ ಬರುತ್ತೆ. ಶಂಕರ ಮಾತಾಡ್ತಿದ್ದ ಹಾಗೆ ಅಪ್ಪಟ ಮೈಸೂರಿನ ಕನ್ನಡ (ಬಡ್ಡೆತ್ತದ್ದೆ, ಮುಂಡೇವಾ, ಐಕ್ಳು, ನಿನ್ನಜ್ಜಿ, ಸಿಸ್ಯಾ ಇತ್ಯಾದಿ). ಇಷ್ಟೆಲ್ಲಾ ಇದ್ದ ಮೇಲೆ, ನನ್ನ 24 ನೆ ವಯಸ್ಸಿಗೆ (ಮರುಜನ್ಮದ ಹೊಸ ಶಂಕರ) ಮೈಸೂರಿಗೆ ಒಮ್ಮೆ ಹೋಗುವ ಬಯಕೆ ಹುಟ್ಟುತ್ತೆ. ಹಾಗಾಗಿ, ಜರ್ಮನಿಯಿಂದ ಹೊರಟು ಮೊದಲು ಬೆಂಗಳೂರಿಗೆ ಬಂದಿಳಿಯುತ್ತಾನೆ, ಬಿಳಿ ಶಂಕ್ರ.

ಅಪ್ಪಟ ಬಿಳಿಯ, ಬೆಂಗಳೂರಿಗೆ ಮೊದಲು ಬಂದಿಳಿದು, ಏರ್ಪೋರ್ಟಿನಿಂದ ಹೊರಗೆ ಬರುತ್ತಿದ್ದ ಹಾಗೆ, ಒಬ್ಬನೇ ಬರ್ತಾ ಇದ್ದವನ್ನು ಕಂಡು ಟ್ಯಾಕ್ಸಿಯವರು ಮುತ್ತಿಕೊಳ್ತಾರೆ (ಜ್ಞಾಪಕ ಇರ್ಲಿ, ಬಂದಿಳಿದ ಬಿಳಿಯ ನೋಡಲು ಮಾತ್ರ ಫಾರಿನರ್ ಅಷ್ಟೆ...ಮಾತಡೋದು ಅಪ್ಪಟ ಕನ್ನಡ, ಯಾಕೆಂದ್ರೆ ಅವ್ನು ಶಂಕ್ರನ ಮರುಜನ್ಮ).

ನಾನು ಸ್ವಲ್ಪ ಮಜಾ ತಗೊಳಕ್ಕೆ "I want to go to Mysore..how much will it cost?" ಅಂತಾ ಕೇಳ್ತೀನಿ. ಈಗ ಅಂದ್ರೆ 2009ರಲ್ಲಿ, ದೇವನಹಳ್ಳಿಯಿಂದ ಟ್ಯಾಕ್ಸಿ ಮಾಡಿಕೊಂಡು ಮೈಸೂರಿಗೆ ಹೋದ್ರೆ, ಸುಮಾರು ರೂ 2000 ಆಗುತ್ತೆ. 2083ರಲ್ಲಿ ಸುಮಾರು 20,000ರೂ ಆಗಬಹುದು. 20,000 ಅನ್ಕೊಂಡಿರೋದು ಒಂದು Imaginary amount ಅಷ್ಟೇ. ಯಾರಿಗ್ಗೊತ್ತು, ಆ ಟೈಮಿಗೆ ನಮ್ಮ ರುಪಾಯಿಯ ಬೆಲೆ ಪೌಂಡ್, ಯೂರೋ, ಡಾಲರುಗಳಿಗಿಂತಾ ಜಾಸ್ತಿ ಆಗಿರಬಹುದಲ್ವಾ?

ಅವಾಗ ಒಬ್ಬ ಟ್ಯಾಕ್ಸಿಯವನು "Hello... you come from America? Mysore taxi is 40,000 Rs" ಅಂತಾನೆ. ಸಡನ್ನಾಗಿ ನಾನು ಮೈಸೂರು ಕನ್ನಡದಲ್ಲಿ "40,000 ನಾ? ಯಾಕೆ...ಜೊತೆಗೆ ನಾನ್ ಕೂಡಾ ಬಂದ್ಬಿಡ್ತೀನಿ" ಅಂದಾಗ, ಇದನ್ನ ಕೇಳಿದ ಟ್ಯಾಕ್ಸಿಯವನ ಮುಖ ಹೆಂಗಾಗಿರತ್ತೆ !!!??? ಆ ಸೀನನ್ನು ಎಂಜಾಯ್ ಮಾಡ್ಕೊಂಡು, ಅವರ ಹ್ಯಾಪ್ ಮೊರೆಯನ್ನು ನೆನೆಸಿಕೊಳ್ಳುತ್ತಾ, ಹೆಂಗೋ ಒಂದು ಟ್ಯಾಕ್ಸಿ ಬುಕ್ ಮಾಡಿಕೊಂಡು ಮೈಸೂರಿಗೆ ಬರ್ತೀನಿ. ಯಾರ ಮನೆಗೆ ಹೋಗೋದು?
2083 ಅಂದ್ರೆ, ಶಂಕರ ಟಿಕೆಟ್ ತಗೊಂಡೇ 24 ವರ್ಷ ಆಗಿದೆ. ಅದಕ್ಕೆ ಅಲ್ಲೇ ಸದರ್ನ್ ಸ್ಟಾರ್ ಹೋಟೆಲಲ್ಲಿ ರೂಮು ಬುಕ್ ಮಾಡಿಕೊಂಡೆ. ಅಲ್ಲಿ ಕೂಡ ರಿಸೆಪ್ಶನ್ ನಲ್ಲಿ "ಏನ್ ಸಾರ್? ಆರಾಮಾಗಿದೀರಾ" ಅಂತ ಕೇಳಿ ತಬ್ಬಿಬ್ಬು ಮಾಡಿದೆ.

ಮಾರನೆಯ ದಿನ ಹೋಟೆಲ್ಲಿನ ಹೊರಗೆ ಒಂದು ಆಟೋ ಹಿಡಿದು "ಕುವೆಂಪುನಗರ" ಅಂತ ಇಂಗ್ಲಿಶ್ ನಲ್ಲಿ ಹೇಳಿದೆ. ಹೊರಟ ಆಟೋ ರಾಜ. ಹಾಗೆ, ಸದರ್ನ್ ಸ್ಟಾರಿನಿಂದ ಮೆಟ್ರೋಪೋಲ್ ಸರ್ಕಲ್ ಕಡೆ ಬಂದು, ಬಲಕ್ಕೆ ತಿರುಗಿ, ಮಹಾರಾಣಿ ಕಾಲೇಜಿನ ಮುಂದೆ ಬಂದಾಗ, ಆಟೋ ರಾಜ "First time in Mysore?" ಅಂತಾ ಕೇಳಿದ.
ಅದಕ್ಕೆ ನಾನು "yes" ಅಂತಾ ಹೇಳಿದ್ದನ್ನು ಕೇಳಿ ಮನಸ್ಸಲ್ಲೇ ಸ್ಕೆಚ್ ಹಾಕ್ಕೊಂಡ ಅನ್ಸುತ್ತೆ.ಸರಿ, ಮಹಾರಾಣಿ ಕಾಲೇಜಿನ ಮುಂದೆ ಪಾಸ್ ಆಗಿ, ಹಾಗೆ ಮುಂದಕ್ಕೆ JLB ರಸ್ತೆಯಲ್ಲಿ ಸಾಗುತ್ತಾ, ರೋಟರಿ ಶಾಲೆಯ ಮುಂದೆ ಎಡಕ್ಕೆ ತಿರುಗಿಸಿ, ನಾರಾಯಣಶಾಸ್ತ್ರಿ ರಸ್ತೆಗೆ ಸೇರಿದ. ಕುವೆಂಪುನಗರಕ್ಕೆ ಹೋಗು ಅಂದ್ರೆ ಈ ರಾಜ ಸುಮ್ನೆ ಸಖತ್ತಾಗಿ ಸುತ್ತಾಡುಸ್ತಾ ಇದಾನೆ ಅಂತಾ ಗೊತ್ತಾದ್ರೂ ಕೂಡ ಸುಮ್ನೆ ಕೂತಿದ್ದೆ. ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಸದ್ವಿದ್ಯಾ ಸ್ಕೂಲಿನ ಮುಂದೆ ಬಂದು, ಹಾಗೆ ಸೀದಾ ಹೊರಟು, ಶಾಂತಲಾ ಟಾಕೀಸಿನ ಮುಂದೆ ಸಿಗ್ನಲ್ ಕ್ಲಿಯರ್ ಮಾಡಿ ಸಿದ್ದಪ್ಪ ಸ್ಕ್ವೇರ್ ಕಡೆ ನಡೆದ.

ಮಜಾ ತಗೊಳಕ್ಕೆ ಇದೆ ಸಕಾಲ ಅಂತಾ ಯೋಚನೆ ಮಾಡಿ "Hey.. hey..you want to take more money from me? Hotel people told, Kuvempunagar is not far" ಅಂತಾ ವರಾತ ತೆಗ್ದೆ.ಅದಕ್ಕೆ ಆತ "No sir, this is correct. kuvempunagar just 5 minutes". ನಾನು "Stop, i will tell to police" ಅದಕ್ಕೆ ಅವನು ಸಿಟ್ಟಾಗಿ, ರಸ್ತೆಯ ಬದಿ ಆಟೋ ನಿಲ್ಸಿ "No Police.. you give money..Ok?" ಅಂದ.

ಸಡನ್ನಾಗಿ ನಾನು "ಆಯ್ತು ಕಂಡಿದೀನಿ ಮುಚ್ಚಲೇ ಮಗನೆ... ಅವಗ್ಲಿಂದಾ ನೋಡ್ತಾ ಇದ್ದೀನಿ, ಇಡೀ ಮೈಸೂರ್ ತೋರುಸ್ತಾ ಇದ್ದೀಯ ನಿನ್ನಜ್ಜಿನಾ ಬಡಿಯ. ಏನು ಯಾಂದಳ್ಳಿ ಥರ ಕಾಣ್ತೀನಾ ನಾನು? ಮುಚ್ಕಂಡ್ ಬಲ್ಲಾಳ್ ಸರ್ಕಲ್ ಗೆ ನಡಿ ಮಗನೆ. ಕಂಪ್ಲೇಂಟ್ ಕೊಡ್ತೀನಿ ಹುಷಾರು"ಅಂತಾ ಬೈದಾಗ ಅವನಿಗೆ ಹಾರ್ಟ್ ಅಟ್ಯಾಕ್ ಆಗೋದೊಂದು ಬಾಕಿ.

ಬಲ್ಲಾಳ್ ಸರ್ಕಲ್ಲಿಗೆ ಬಂದು ಹಂಗೆ ಕಣ್ಣಾಡಿಸಿದೆ. ಈಗ ಇರೋ ಹಾಗೆಯೇ ಪಾರ್ಕಿನ ಮುಂದೆ ಹಾಗು ಲಕ್ಷ್ಮಿಪುರಂ ಸ್ಕೂಲಿನ ಕಾಂಪೋಂಡ್ ಮುಂದೆ ೨ ಚುರುಮುರಿ ಗಾಡಿ. ಹಾಗೆ ಅಲ್ಲಿಗೆ ನಡ್ಕೊಂಡು ಹೋಗಿ, ಚುರುಮುರಿ ಗಾಡಿ ಪಕ್ಕ ನಿಂತೆ. ಗಾಡಿಯವನು ಹಾಗು ಅಲ್ಲಿ ತಿನ್ನುತ್ತಾ ನಿಂತಿದ್ದ ಶಾರದಾ ವಿಲಾಸ್ ಕಾಲೇಜಿನ ಹುಡುಗರಿಗೂ, SDM ಹುಡುಗಿಯರಿಗೂ ಒಬ್ಬ ಬಿಳಿಯ ಫಾರಿನರ್ ಚುರುಮುರಿ ಗಾಡಿಗೆ ಬಂದಿದಾನೆ ಅಂತಾ ಆಶ್ಚರ್ಯ. ಈ ಬಿಳೀ ಜನ ಖಾರ ತಿನ್ನೋಲ್ಲ, ಅಂತದ್ರಲ್ಲಿ ಚುರುಮುರಿ ಹ್ಯಾಗೆ ತಿಂತಾನೆ ಇವನು ಅಂತ ಕುತೂಹಲದಿಂದ ನೋಡ್ತಾ ಇದಾರೆ.

ಅಷ್ಟರಲ್ಲಿ ಗಾಡಿಯವನು ಕೈನಲ್ಲಿ "What?" ಅಂತಾ ಕೇಳಿದ. ನಾನು ಸುಮ್ನೆ ಗಾಡಿಯಲ್ಲಿ ಏನಿದೆ ಅಂತಾ ನೋಡ್ತಾ ಇದ್ದಾಗ, ಪಕ್ಕದಲ್ಲಿ ನಿಂತಿದ್ದ ಶಾರದಾ ವಿಲಾಸಿನ ಪೋರನೊಬ್ಬ
"Hello, excuse me...This is called Churumuri. Very spicy. Do you want to eat this?" ಅಂತಾ ಕೇಳಿದ.

ಅದಕ್ಕೆ ನಾನು ಕನ್ನಡದಲ್ಲಿ "ಹೂ ಕಣ್ರೀ ತಿಂತೀನಿ..ಆದ್ರೆ ಯಾವ್ದು ಮೊದ್ಲು ತಿನ್ನೋದು ಅಂತಾ ಯೋಚನೆ ಮಾಡ್ತಾ ಇದ್ದೀನಿ. ಚುರುಮುರೀನೋ, ಸೌತೆಕಾಯೋ, ಟೊಮ್ಯಾಟೋ ಮಸಾಲೇನೋ, ನಿಪ್ಪಿಟ್ಟು ಮಸಾಲೇನೋ ಏನೂಂತಾ..."
ಈ ಥರ ಅಂದಾಗ ಇದನ್ನು ಕೇಳಿದವನು ತಾನು ಬಾಯಿಗೆ ಹಾಕ್ಕೊಂಡಿದ್ದ ಚುರುಮುರಿನಾ ಪ್ಹುರ್ರ್ರ್ ಅಂತಾ ಹೊರಗೆ ಗಾಬರಿಯಿಂದ ಉಗಿದು, ಅದು ಸ್ವಲ್ಪ ಜಾಸ್ತಿಯಾಗಿ ಮೂಗಿನಿಂದೆಲ್ಲಾ ಹೊರಗೆ ಬಂದು ಸುಮಾರು ಹೊತ್ತು ಖಾರಬ್ ಸ್ಥಿತಿಯಲ್ಲಿ ಇದ್ದ.

ಇದೆ ರೀತಿ ಸುಮಾರು 15-20 ಘಟನೆಗಳನ್ನು ಹೆಣೆದಿದ್ದೀನಿ. ಅದೂ ಬೇರೆ ಬೇರೆ ಊರಲ್ಲಿ.
ಹೋಟ್ಲಿಗೆ ಹೋಗಿ ಊಟ ಮಾಡುವಾಗ, ಬಿಟಿಎಸ್ ಬಸ್ಸಿನಲ್ಲಿ, ಮೆಜೆಸ್ಟಿಕ್ಕಲ್ಲಿ, ತರಕಾರಿ ಮಾರ್ಕೆಟ್ಟಲ್ಲಿ ಇತ್ಯಾದಿ ಇತ್ಯಾದಿ.
ಅದೆಲ್ಲಾ ಬಿಡಿ, ಜರ್ಮನಿಯಲ್ಲಿ ಇರುವ ಕನ್ನಡದವರ ಹತ್ರ ಹೋಗಿ "ಏನ್ ಮಗಾ.. ಹೆಂಗಿದೀಯ?" ಅಂತಾ ಕೇಳುದ್ರೆ ಹೆಂಗೆ?
------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

22 comments:

Lakshmi Shashidhar Chaitanya said...

:) :) olle punarjanma ! sakhat nagu bantu !

Anonymous said...

solid............

Susheel Sandeep said...

ಒಳ್ಳೇ ಕತೆಯಾಗೋ ಎಲ್ಲ ಲಕ್ಷಣಗಳೂ ಇದಕ್ಕಿದೆ ಮಾರಾಯ. ಸ್ವಲ್ಪ ಮಾತ್ರ ಇಂಟ್ರಡಕ್ಷನ್ ಕೊಟ್ಟು ಪೂರಾ ಒಂದು ಘಟನೆಯಂತೆ ಮುಂದುವರೆಸಿಬಿಡು ಮಸ್ತ್ ಮಜಾ ಬರತ್ತೆ.(without interrupting to remind that its your punarjalma :P)

ಚುರುಮುರಿ ಗಾಡಿ,ಆಟೋ ಅಂತು ಫುಲ್ ಕೂಳೆ

ಚಿತ್ರಾ ಸಂತೋಷ್ said...

ಶಂಕ್ರಣ್ಣಾ..ಯಪ್ಪಾ ದೇವರೇ..ಹನುಮಂತನ ಬಾಲದಂತೆ ಇಷ್ಟು ಉದ್ಧದ 'ಪುನರ್ಜನ್ಮ-ಪೂರ್ವಜನ್ಮ' ಓದುತ್ತಾ ಹೋದಂತೆ ನಂಗೂ ಏನೇನೂ ನೆನಪಾಗೋಯ್ತು ಮಾರಾಯ್ರೆ..ನಾನೇನೋ ಪೂರ್ವಜನ್ಮದ ನೆನಪು ಅಂತ ಅಂದುಕೊಂಡ್ರೇ ..ಅದು ಬೇರೇನೇ ಬಿಡ್ರೀ. ಅಲ್ಲಣ್ಣ..ಮಸ್ತಾಗಿದೆ..ಎಲ್ಲೂ ಬೋರ್ ಅನಿಸಿಲ್ಲ,,,ಇನ್ನು ಮೈಸೂರಲ್ಲಿ ಚರ್ ಮುರಿ ತಿಂದು ಮುಂದೆ ಎಲ್ಲೋಗ್ತೀರಿ ಅಂತ ಬರೀತಾ ಇದ್ರೂ ಓದೋಕೆ ಬೋರ್ ಆಗ್ತಾ ಇರಲಿಲ್ಲ. ಈ ಬಾರಿ ಒಳ್ಳೆ ಪರಿಕಲ್ಪನೇನ ಹುಡುಕಿದ್ದೀರ. ಶಂಕ್ರಣ್ಣ..ಮತ್ತೆ ಪೂರ್ವಜನ್ಮದ ಜ್ಞಾಪಕವಾಗಿ..ನಿಮ್ಮೂರಿಗೆ ಮಾತ್ರ ಹೋಗೋದು? ನಾವೆಲ್ಲ ಬಂದು ನಿಮಗೆ ಕಮೆಂಟು ಮಾಡ್ತಿದ್ದೀವಿ..ನಿಮ್ಮ ಟಾಯ್ಲೆಟ್ಟು ಸ್ಟೋರಿ ಎಲ್ಲಾ ನೋಡಿ ಮುಸಿಮುಸಿ ನಗ್ತಾ ಇದ್ದೀವಿ..ಪಾಪ ಬೆಂಗಳೂರಲ್ಲೇ ಇವರೆಲ್ಲ ಇದ್ದಾರಾ ಅಂತ ಹುಡುಕುತ್ತಾ ಇರ್ಲಿಲ್ವಾ? ಸೂಪರ್ ಆಗಿದೆ..
ಮುಂದಿನ ಭಾಗ ಇದ್ರೂ ಬರಲಿ..
-ಚಿತ್ರಾ

ಶಿವಪ್ರಕಾಶ್ said...

ಓಹೋ.,
ಏನ್ ಆಸೆ ರೀ ನಿಮಗೆ ?.
ಪ್ರತಿಯೊಂದು ಲೈನ್ ಓದುವಾಗಲು ಬಿದ್ದು ಬಿದ್ದು ನಗುವ ಹಾಗಿತ್ತು....

ಕಥೆ ತುಂಬಾ ಚನ್ನಾಗಿದೆ, ಇದೆ ಕಥೆ ಇಟ್ಕೊಂಡು ನಾನು ಯುಗಪುರುಷ (ಭಾಗ ೨) ತೆಗೆಯೋಣ ಅಂದ್ಕೊಂಡಿದೀನಿ...
ಅಂದಹಾಗೆ ನೀವೇ ಅದರಲ್ಲಿ ಹೀರೋ.
ಆದ್ರೆ ಅದು ಈಗಲ್ಲ,
ನಾನು ಕೂಡ ನಿಮ್ಮ ಹಾಗೆ ಪುನರ್ಜನ್ಮ .........................

ತಮಾಷೆಯ ರಸದೌತಣದ ಕಥೆ ಉಣಬಡಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಶಂಕ್ರಣ್ಣ...


ಮಸ್ತಾಗಿದೆ...

ಸಕತ್ ನಗು ಬಂತಣ್ಣಾ..

ಮುಂದಿನ ಭಾಗವನ್ನೂ ಬರೆಯಣ್ಣಾ...

ಅಭಿನಂದನೆಗಳು...

Santhosh Rao said...

ಸಂಕ್ರ...

ನಾನು ನನ್ ಪ್ರೆಂಡು.. ಓದ್ತಾ ಓದ್ತಾ ಒಳ್ಳೆ ಮಜಾ ತಗಂಡಿದ್ದಿವಿ. ಸಕ್ಕಾತ್ತಗಿದೆ ಕಣ್ಲ :)

Hukunda said...

good imagination..........
olle cinema kathe iddha hage ide :)

Sushrutha Dodderi said...

:D ಸೂಪರ್ ಶಂಕ್ರಣ್ಣಾ! ಒಳ್ಳೇ ಕಲ್ಪನೆ. ಯದ್ವಾತದ್ವಾ ಚನಾಗ್ ಬರ್ದಿದೀಯ.

ಇದು ನನಸಾಗ್ಲಿ ಅಂತ ಹಾರೈಸ್ತೀನಿ. ಮತ್ತೆ ನನ್ನ ಗುರ್ತ್ ಹಿಡಿತೀಯಲ್ಲಾ ಆವಾಗ? ಆಫ್ಟರ್ 74 ಇಯರ್ಸ್? ನಾನವಾಗ ಅಮೇರಿಕದಲ್ಲಿ ಹುಟ್ಟಿ ನಿನ್ ಹಂಗೇ ಎಲ್ಲಾ ನೆನ್ಪಾಗಿ ವಾಪಸ್ ಬಂದಿರ್ತೀನಿ.. ಏರ್ ಪೋರ್ಟಿಂದ ಒಂದೇ ಟ್ಯಾಕ್ಸಿ ಮಾಡಿಸ್ಕೊಂಡ್ ಹೋಗೋಣಂತೆ.. ನನ್ನನ್ನ ಮಲ್ಲೇಶ್ವರಂ ಹತ್ರ ಡ್ರಾಪ್ ಮಾಡಿ ನೀನು ಮೈಸೂರ್ ಹೋಗು. ಆಯ್ತಾ? ;)

shivu.k said...

ಶಂಕರ್ ಸಾರ್,

ನಿಮ್ಮ ಪುನರ್ಜನ್ಮದ ಪುರಾಣ ಸಿಕ್ಕಾಪಟ್ಟೆ ನಗು ತರಿಸುತ್ತಿದೆ...ನಿಮ್ಮ ಕಲ್ಪನೆಗೆ ಹ್ಯಾಟ್ಸಪ್....ಒಳ್ಳೇ ಅಲೋಚನೆ....ನಾನು ಮೈಸೂರಿಗೆ ಬಂದಾಗ ಅಲ್ಲಿ ನನ್ನ ಫೋಟೊಗ್ರಫಿ ಗೆಳೆಯರ ಜೊತೆ ನೀವು ಹೇಳೀದ ಊರುಗಳನ್ನೆಲ್ಲಾ ಸುತ್ತಿದ್ದೇನೆ....ಅಲ್ಲಿನ ಮೈಲಾರಿ ದೋಸೆ ಹೋಟಲ್, ಗುರುಸ್ವೀಟ್...ಇನ್ನೂ ಅನೇಕವೂ ನೆನಪಿಗೆ ಬಂದವು..
ಇದರಲ್ಲೂ ಟಾಯ್ಲೆಟ್ ಕತೆ ಹೇಗೆ ಬರಬಹುದು...ನನಗೆ ಕುತೂಹಲವಿದೆ....
..ಥ್ಯಾಂಕ್ಸ್...ಮುಂದುವರಿಸಿ....ಕಾಯುತ್ತಿರುತ್ತೇನೆ...

ಕೃಪಾ said...

ಶಂಕ್ರ ಅವರೇ.......

ಸೂರ್ಯ ದೇವರ ಮೋಹನ ರಾಯ..... ರ "ಅನ್ವೇಷಿ" ಕಾದಂಬರಿ ಸಿಕ್ಕಿದರೆ ಓದಿ.....
ಕನ್ನಡಕ್ಕೆ "ಅಜ್ಜಂಪುರ ಸೂರಿ " ಅನುವಾದ ಮಾಡಿದ್ದಾರೆ....
ಅಲ್ಲಿ ನಾಯಕನಿಗೆ......ಹಳೆ ಜನ್ಮದ ನೆನಪು.....
ಪುನರ್ಜನ್ಮದ ಬಗ್ಗೆ ಈ ಜನ್ಮದಲ್ಲೇ ಸ್ಕೆಚ್ ಹಾಕಿ..... ಅದಕ್ಕೆ....ಈ ಜನ್ಮದಲ್ಲಿ ಸಾಕ್ಷಿ ಸೃಷ್ಟಿಸಿ ಇರ್ತಾನೆ...
ಅವನ ಹಿಂದಿನ ಜನ್ಮದ ಆಸ್ತಿಗೆಲ್ಲ ಮುಂದಿನ ಜನ್ಮದಲ್ಲಿ ಅವನೇ ವಾರಸುದಾರ.....
ಅಂದ ಹಾಗೆ...... ನಾಯಕ...... "ನಾಡಿ ಶಾಸ್ತ್ರ" ದಿಂದ ವೃತ್ತಾಂತ ತಿಳಿಯುತ್ತಾನೆ....
ನಿಮಗೂ ಸಹಾಯಕ್ಕೆ.. ಬರಬಹುದೇನೂ.....ಅಂತ....

Anonymous said...

ಶಂಕ್ರಣ್ಣಾ,
ಸೂಪರ್ ಕತೆ! ಯಾವಾಗ ಸಿನಿಮಾ?
ಒಂದೆರಡು ಹಾಡುಗಳನ್ನು ಜರ್ಮನಿಯಲ್ಲಿ ಶೂಟಿಂಗ್ ಮಾಡಿದರೆ ಸೂಪರ್ ಹಿಟ್ ಆಗತ್ತೆ ನೋಡಿ.

Mohan said...

ಪುನರ್ಜನ್ಮದಲ್ಲಿ , ನನ್ನ ನೆನುಸುಕೊ ಸಿವ

ಮಲ್ಲಿಕಾರ್ಜುನ.ಡಿ.ಜಿ. said...

ಶಂಕ್ರಣ್ಣ,
ರೀಲು ಚೆನ್ನಾಗಿ ಸುತ್ತುತ್ತೀರ. ಅಂದರೆ ಇದು ಫಿಲಂ(ರೀಲು) ಮಾಡೋರೀತಿನೇ ಇದೆ. ಸಕತ್ ಮಜಾ ಬಂತು ಈದಿ.
ಫಾರಿನಲ್ಲಿರೋ ಕನ್ನಡಿಗರನ್ನ ಯಾಮಾರಿಸೋದೂ ಬರೀರಿ.

Santhosh Kumar said...

super maga, mysuru mathe kannadadha bagge ninna abhimaana nodi kushiyaathu...

mathe neenu mysoreli iddaga bari mysore beats haakthidha hege?, ella kattegalu(meeting spots), hot spot gala bagge barithiyalaa?

continue :)

ವಿ.ರಾ.ಹೆ. said...

ಶಂಕ್ರಣ್ಣ, ಡೆಫಿನೆಟ್ಲಿ ಮೈಸೂರು ಕಟ್ಟೆಲ್ಲಿ ಮೀಟ್ ಆಗಣ. ಸೇಟು ಮೊಮ್ಮಗನ ಅಂಗಡಿ ಇರ್ಬೋದು ಅಲ್ಲಿ ಆಗ :)

ಒಳ್ಳೇ ಮಜಾ ಬಂತು ಮಾತ್ರ ಓದಿ ನಿಮ್ಮ ಪುನರ್ಜನ್ಮ ಸ್ಮರಣೆ ಕತೆ! :)

Shankar Prasad ಶಂಕರ ಪ್ರಸಾದ said...

ಈ ಬರಹವನ್ನು ಮೆಚ್ಚಿಕೊಂಡು ಬಹಳಷ್ಟು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಪ್ರಾಯಗಳು ಬಂದಿವೆ. ನಿಮಗೆ ಎಲ್ಲರಿಗೂ ಧನ್ಯವಾದಗಳು. ಇನ್ನೂ ಇದರ ಮುಂದಿನ ಭಾಗ ಬರಿ ಶಂಕ್ರ ಅಂತಾ ಹೇಳಿದಾರೆ. ಆದ್ರೆ, ಸಧ್ಯಕ್ಕೆ ಬರೆಯೋಲ್ಲ.. ಈ ಲೇಖನಗಳೆಲ್ಲಾ ಉಪ್ಪಿನಕಾಯಿ ಥರ, ಎಲೆ ತುದಿಗೆ ಮಾತ್ರ ಚೆಂದ. ಚೆನ್ನಾಗಿದೆ ಅಂತ ಹೊಟ್ಟೆ ತುಂಬಾ ತಿನ್ನೋಕ್ಕೆ ಆಗಲ್ಲ. ಮುಂದೆ, ಮೊಸರನ್ನ ತಿನ್ನಬೇಕಾದ್ರೆ, ಇನ್ನೊಂದ್ಸ್ವಲ್ಪ ಉಪ್ಪಿನಕಾಯಿ ಬಡಿಸ್ತೀನಿ. ಆದ್ರೆ ಸ್ವಲ್ಪ ದಿನಗಳ ನಂತರ.

@ ಲಕ್ಷ್ಮಕ್ಕ, ನಗು ಬಂತಾ? ಥ್ಯಾಂಕ್ಸ್
@ ಕಿಸ್ನಣ್ಣ, ಸಾಲಿಡ್..
@ ಸುಶೀಲ್, ಇನ್ನೂ ಬರೆಯೋಣ ಅನ್ಕೊಂಡೆ, ಆದ್ರೆ ಯಾಕೋ ಸುಮ್ನಾದೆ.
@ ಚಿತ್ರಕ್ಕ, ನಿಮಗೆ ಪುನರ್ಜನ್ಮ ಅಂದ್ರೆ ಸ್ವಲ್ಪ ವಿವರವಾಗೆ ಹೇಳಬೇಕಲ್ವಾ? ಅದಕ್ಕೆ ಸ್ವಲ್ಪ ಉದ್ದ ಆಗಿರೋದು ಲೇಖನ. ಅದ್ಸರಿ, ನಿಮಗೆ ಅದೇನು ನೆನಪಾಯ್ತು ? ಟೈಟಲ್ ನೋಡಿ ಏನಂದುಕೊಂಡಿದ್ರಿ ?
@ ಶಿವಪ್ರಕಾಶ್, ಲೇಖನ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್...ನಂದೆಲ್ಲ ಹೀರೋ ಆಗೋ ಮೂತಿ ಅಲ್ಲ ಕಣ್ರೀ. ಬೇಕಾದ್ರೆ ಸ್ಕ್ರೀನ್ ಪ್ಲೇ ಬರೆದು ಕೊಡಬಹುದು, ಅಥವ ಕಥೆ ಕರೆದು ಕೊಡಬಹುದು. ಎನಿವೇ ಆಫರ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
@ ಸಿಮೆಂಟ್ ಪ್ರಕಾಶಪ್ಪ, ಮುಂದಿನದ್ದು ಹೇಗೆ ತಗೊಂಡು ಹೋಗಬಹುದು ಅಂತಾ ಯೋಚನೆ ಮಾಡ್ತಾ ಇದ್ದೀನಿ.
@ ಸಂತೋಷ, ನೀವು ಮಜಾ ತಗೊಂಡಿದ್ದಕ್ಕೆ ಬಹಳಾ ಸಂತೋಷ
@ ಹುಕುಂದ, ಸಿನೆಮಾ ಕಥೆ ಅಲ್ಲಾ ಗುರೂ, ಇದು ನನ್ನ ಸ್ವಕಲ್ಪಿತ ಕಥೆ..
@ ಸುಶ್ರುತ, ಲೇ ಮಾರಾಯ, ನೀನು ಇದ್ದೆ ಅಂತಾ ಜ್ಞಾಪಕ ಇರತ್ತೆ, ಆದ್ರೆ, ನೀನು ಅಮೆರಿಕಾದಲ್ಲಿ ಹುಟ್ಟಿರೋದು ಹೆಂಗೆ ಗೊತ್ತಾಗಬೇಕು ನಂಗೆ ? ಇಬ್ರೂ ಏರ್ಪೋರ್ಟಿನಿಂದ ಹೊರಗೆ ಬಂದ್ವಿ ಅಂತಾ ನೆ ಇಟ್ಕೋ, ನಿನ್ನ ಗುರುತು ಹೆಂಗೆ ಹಿಡೀಲಿ ? ಇದರ ಬಗ್ಗೆ ಸ್ವಲ್ಪ ಗಹನವಾಗಿ ಕೂತು ಚರ್ಚೆ ಮಾಡೋಣ. ಏನಂತ್ಯಾ?
@ ಶಿವೂ, ನೀವೂ ನಮ್ಮೂರನ್ನ ಸರಿಯಾಗಿ ಸುತ್ತಿದೀರ ಅನ್ಸುತ್ತೆ. ಗುಡ್.ಮೈಲಾರಿ ಹೋಟ್ಲು ಚೆನ್ನಾಗಿದೆ. ಗುರು ಸ್ವೀಟ್ಸ್ ಓಕೆ ಅನ್ಬೋದು ಅಷ್ಟೇ. ನೀವು ನಕ್ಕುದ್ರಲ್ಲ, ಅದೇ ಸಾಕು. ನಿಮ್ಮಾಕೆಯ ಅಭಿಪ್ರಾಯ ಏನು ಈ ಲೇಖನದ ಬಗ್ಗೆ ?
@ ಕೃಪಾಕ್ಕ, ಇಷ್ಟೆಲ್ಲಾ ಸೀನ್ ಇಲ್ಲಾಕ್ಕ. ಅದರೂ ತಲೆಗೆ ಒಳ್ಳೆ ಹುಳ ಬಿಟ್ಟಿದೀರಾ. ಈ ಸಲ ಇಂಡಿಯ ಗೆ ಬಂದಾಗ ಈ ಪುಸ್ತಕ ತಗೊಂಡು ಓದಬೇಕು. ಥ್ಯಾಂಕ್ಸ್
@ ಜ್ಯೋತಿ, ಹುಡುಕ್ತಾ ಇದ್ದೀನಿ ಕಣಮ್ಮ..ಏನೋ ಶಿವಪ್ರಕಾಶ್ ಯುಗಪುರುಷ ಭಾಗ ೨ ತೆಗೀತಾ ಇದಾರಂತೆ, ಹಾಡನ್ನೂ ಸೇರಿಸೋಣ ಬಿಡಿ.
@ ಮೋಹನ, ನೆನೆಸ್ಕೊತೀನಿ ಸಾ...ಆದ್ರೆ ನಿಮಗೆ ಹೆಂಗೆ ಗೊತ್ತಾಗತ್ತೆ? ನಿಮ್ಮನ್ನ ನಾನು ಗುರುತು ಇತ್ಕೊಲೋ ರೀತಿ ಅಂದ್ರೆ - ಮಜ್ಜಿಗೆಹುಳಿ + ನೂಡಲ್ಸ್ ಅಂತಾ..
@ ಗದಗಿನ ಶಿವಣ್ಣ, ನಂಗೂ ಅದೇ ಥರ ಆಗ್ಲಿ ಅಂತಾ ಆಸೆ. ಆದ್ರೆ ಮೈಸೂರಿಗೆ ಬಂದಾಗ ನಮ್ಮವರು ಯಾರೂ ಇಲ್ದೆ ಇರೋ ಕಾರಣ, ಬೇಡ ಅನ್ಸುತ್ತೆ..ಅದ್ಸರಿ, ನಾಯಿ ನೆರಳು ಯಾಕೆ ಹೋಲಿಕೆ ಕೊಟ್ಟಿದ್ದು ?
@ ಮಲ್ಲಿಕಾರ್ಜುನ, ಬರೀಬೇಕು...ಕರೆಕ್ಟ್ ಸರಕಿಗಾಗಿ ಹುಡುಕ್ತಾ ಇದ್ದೀನಿ..
@ ಸಂತೋಷ ಕುಮಾರ, ಅದೇ ಪ್ರಯತ್ನದಲ್ಲಿ ಇದ್ದೀನಿ ಕಣಪ್ಪ
@ ವಿಕಾಸ, ನಿನ್ನ ಕಮೆಂಟು ಯಾಕೆ ಇನ್ನೂ ಬಂದಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ. ಕೊನೆಗೂ ಬಂತು. ನೋಡುವಾ, ಸೇತು ಮೊಮ್ಮಗ ಅಂಗಡಿ ಇತ್ತಿದ್ರೂ ಇಟ್ಟಿರ್ತಾನೆ, ಅಥವಾ ಯಾರಿಗ್ಗೊತ್ತು, ದೊಡ್ಡ ಹೋಟಲ್ಲೇ ಇಟ್ಟಿರ್ಬೋದು. ನೀನೂ ಬರ್ತ್ಯಾ? ಎಷ್ಟು ಜನ ಆದರು ಮಾರಾಯ? ಸುಶ್ರುತ ಒಬ್ಬ, ನೀನೊಬ್ಬ.. ಇನ್ಯಾರರನ್ನ ಮೀಟ್ ಮಾಡಬೇಕೋ. ಮುಂದಿನ ಜನ್ಮದಲ್ಲಾದರೂ ಆರಾಮಾಗಿ ಇರೋಕ್ಕೆ ಬಿಡ್ರಪ್ಪ..ಅಲ್ಲೂ ತಗ್ಲಾಕ್ಕೊತೀನಿ ಅಂತಾ ಇದೀರಲ್ಲ.

ಕಟ್ಟೆ ಶಂಕ್ರ

ಯಜ್ಞೇಶ್ (yajnesh) said...

ಹ್ಹಹ್ಹಹ್ಹ..ಸೂಪರ್.. ಬರಹ

ಶ್ರೀನಿಧಿ.ಡಿ.ಎಸ್ said...

ಹಾ ಹಾ, ಶಂಕ್ರಣ್ಣಾ, ನಿನ್ ಲೇಖನವೂ,ಕಮೆಂಟುಗಳೂ ಭಲೇ ಮಜವಾಗಿದೆ!

Anonymous said...

ಶಂಕ್ರಪ್ನೋರೆ,
ತುಂಬ ಚೆನ್ನಾಗ್ ಬರ್ದಿದ್ದೀರ. ಓದಿ ತುಂಬಾ ಖುಷಿಯಾಯ್ತು. ನಾನು ಸಂಪದದ ಸದಸ್ಯನಲ್ಲ ಆದ್ರಿಂದ ಇಲ್ಲಿ ಅಭಿಪ್ರಾಯ ಹಾಕ್ತಿದ್ದೀನಿ.
ರಾಮ್

ಹರೀಶ ಮಾಂಬಾಡಿ said...

ಸೂಪರ್

ವಿ.ರಾ.ಹೆ. said...

ಹೇಳದು ಮರ್ತಿದ್ದೆ,
ನಾವಂತೂ ಏಳೇಳು ಜನ್ಮಕ್ಕೂ ಈ ಭಾರತದ ಪುಣ್ಯಭೂಮಿಯಲ್ಲೇ ಹುಟ್ಟೋಕೆ ಬಯಸ್ತೀವಿ :)