Monday, September 6, 2010

ಆಟೋ ಅಣಿಮುತ್ತುಗಳು - ೯೧ - ನಗುವಾಗ ನೆಂಟರು

ಈ ಆಟೋ ಅಣಿಮುತ್ತು ಕಂಡಿದ್ದು ಕೂಡ ಇಂದಿರಾನಗರದಲ್ಲೇ, ಅದೂ ಕೂಡ ESI ಆಸ್ಪತ್ರೆ ಸಿಗ್ನಲ್ಲಲ್ಲಿ.

ಈ ಅಣ್ಣ ಹೇಳಿರುವ ಮಾತಿಗೆ ಯಾರೂ ಎದುರು ಹೇಳೋಹಾಗಿಲ್ಲ.
ಈಗಿನ ಕಾಲದಲ್ಲಿ ಸ್ವಂತ ಮಕ್ಕಳು, ಕಟ್ಟಿಕೊಂಡವರು, ಒಡಹುಟ್ಟಿದವರೇ ಆಗೋಲ್ಲ, ಅಂಥದ್ರಲ್ಲಿ ನೆಂಟರು ಯಾವ ಮಹಾ ಬಿಡಿ.
ಇದು ಜೀವನದ ಕಟು ಸತ್ಯ

"ನಗುವಾಗ ಎಲ್ಲರು ನೆಂಟರು
ಅಳುವಾಗ ಯಾರು ಇಲ್ಲ"


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, August 25, 2010

ಆಟೋ ಅಣಿಮುತ್ತುಗಳು - ೯೦ - ಇಷ್ಟ ಪಡೋ ಹುಡುಗಿ

ಇದು ನನ್ನ ಸ್ವಂತ ತಮ್ಮ ಪೃಥ್ವಿ ಕಳಿಸಿದ ಆಟೋ ಚಿತ್ರ. ಇದನ್ನು ಎಲ್ಲಿ ಕಂಡು ಫೋಟೋ ತೆಗೆದನೋ ಗೊತ್ತಿಲ್ಲ.
ಈ ದಿನ ಬೆಳ್ಳಂಬೆಳಿಗ್ಗೆ ಈಮೆಲಿನಲ್ಲಿ ಕಳಿಸಿದ. ಥ್ಯಾಂಕ್ಸ್ ಕಣೋ ತಮ್ಮಣ್ಣ.



ಬಹಳ ನಿಜವಾದ ಮಾತು ಈ ಆಟೋ ಅಣ್ಣ ಹೇಳಿರುವುದು. ಸ್ವಾನುಭವದ ಮಾತು ಅಂತಾ ಕಾಣುತ್ತೆ.
ನಮ್ಮಲ್ಲೂ ಈ ಅನುಭವ ಆಗಿರೋ ಮಂದಿ ಬಹಳಾ ಇದಾರೆ ಅನ್ಕೋತೀನಿ. ಅಲ್ವೇ ?

ಕಣ್ಣು ಇಷ್ಟ ಪಡೋ ಹುಡುಗಿ ಜೊತೆ ನೂರು ವರ್ಷ ಬಾಳೋಕ್ಕಿಂತ
ಮನಸ್ಸು ಇಷ್ಟ ಪಡೋ ಹುಡುಗಿ ಜೊತೆ ಮೂರು ದಿನ ಮೂರು ದಿನ ಬಾಳಿದ್ರೆ ಸಾಕು
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, August 11, 2010

ಸೋಮಾರಿ ಕಟ್ಟೆಗೆ 3 ವರ್ಷ

ಜುಲೈ ತಿಂಗಳ 31ಕ್ಕೆ ಸೋಮಾರಿ ಕಟ್ಟೆಗೆ ಮೂರು ವರ್ಷ ತುಂಬಿತು.
2007ರ ಜುಲೈ ತಿಂಗಳಲ್ಲಿ ಶುರುವಾಗ ಕಟ್ಟೆ ನಿಮ್ಮ ಅಭಿಮಾನ, ಪ್ರೋತ್ಸಾಹ ಹಾಗು ತಾಳ್ಮೆಯಿಂದ ಮೂರು ವಸಂತಗಳನ್ನು ಕಂಡಿದೆ.

ಅನಂತಾನಂತ ಧನ್ಯವಾದಗಳು

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, August 4, 2010

ಆಟೋ ಅಣಿಮುತ್ತುಗಳು - ೮೯ - ಕಣ್ಣಲ್ಲೇ ಕರೆದರು

ಹಲಸೂರಿನ ಫ್ರಾಂಕ್ ಆಂಟೋನಿ ಶಾಲೆ ಬಳಿ ಕಂಡ ಆಟೋ ಇದು.

ಡಾರಾಜ್ ಅವರ ನಟನೆ ಬಗ್ಗೆ ನಾವೇನು ಹೇಳೋದು???



ಕಣ್ಣಲ್ಲೇ ಕರೆದರು..
ರಾಜಣ್ಣಾವ್ರು

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, July 28, 2010

ಆಟೋ ಅಣಿಮುತ್ತುಗಳು - ೮೮ - ಅಮ್ಮ ಅನ್ನು

ಮಿತ್ರ ಕಿರಣ್ ಹೆಗಡೆ ಕಳಿಸಿದ ಚಿತ್ರ ಇದು, ಬ್ಲಾಗಿಗರಿಗೆ ಹೇಳೋದಾದ್ರೆ
ನಮ್ಮ ವಿಕಾಸ್ ಹೆಗಡೆ ಅವರ ಅಣ್ಣನೇ ಈ ಕಿರಣ್ ಹೆಗಡೆ.
ಬಹಳ ದಿನಗಳ ಹಿಂದೆಯೇ ಇದನ್ನು ಕಳುಹಿಸಿದ್ದ, ಆದ್ರೆ ಈ-ಮೇಲಿನ ಯಾವುದೋ ಮೂಲೆಯಲ್ಲಿ ಕಳೆದುಹೋಗಿತ್ತು.
ಈ ಆಟೋ ಅಣ್ಣ ಕೂಡ ಎಷ್ಟು ಒಳ್ಳೆ ಮಾತನ್ನು ಹೇಳ್ತಾ ಇದಾನೆ.

ಬಸವಣ್ಣನವರು ಹೇಳಿದ "ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ"
ಎನ್ನುವ ಸುಭಾಷಿತದ ಮಾಡ್ರನ್ ರೂಪ ಇದು ಅನ್ಸುತ್ತೆ.


ಅಮ್ಮ ಅನ್ನು,
ನಿನ್ನ ಅಮ್ಮನ್ ಅನ್ನಬೇಡ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, July 21, 2010

ಆಟೋ ಅಣಿಮುತ್ತುಗಳು - ೮೭ - ಸಾಲ ಮಾಡೋದು !!

ಈ ಆಟೋ ಕೂಡಾ ಕಣ್ಣಿಗೆ ಕಂಡಿದ್ದು ಇಂದಿರಾನಗರದ ESI ಆಸ್ಪತ್ರೆ ಬಳಿ. ಅದೇಕೋ ಆ ಸಿಗ್ನಲ್ಲಿನಲ್ಲಿ ಮಸ್ತು ಮಸ್ತು ಆಟೋ ಕಾಣುತ್ತವೆ.
ಈ ಅಣ್ಣ ಬರೆದಿರೋದು ಎಷ್ಟು ನಿಜ ನೋಡಿ.. ಅತಿ ಸಿಂಪಲ್ಲಾಗಿ "ಹಾಸಿಗೆ ಇದ್ದಷ್ಟು ಕಾಲು ಚಾಚು" ಎಂದು ಹೇಳಿದ್ದಾನೆ, ಹಾಗು ಸಾಲ ಮಾಡಿ ತುಪ್ಪ ತಿನ್ನೋರಿಗೆ ಒಂದು ಡೋಸ್ ಕೊಟ್ಟಿದಾನೆ.


"ಸಾಲ ಮಾಡೋದೇನೋ ಓಕೆ !
ಆದರೆ ತೀರ್ಸೋಕಾಗದೆ ಸಾಯ್ತೀರಲ್ಲ ಯಾಕೆ? "

ಮಸ್ತು ಗುರು... ಮಸ್ತು
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Tuesday, July 13, 2010

ಆಟೋ ಅಣಿಮುತ್ತುಗಳು - ೮೬ - ಹೌಲಾ ಹೌಲಾ

ಆಫೀಸಿನಿಂದ ಮನೆಗೆ ಬರುವ ದಾರಿಯಲ್ಲಿ, ಇಂದಿರಾನಗರ ESI ಆಸ್ಪತ್ರೆ ಬಳಿ ಕಂಡದ್ದು.

ವಿಷ್ಣು ಅಭಿಮಾನಿ...



ಆಟೋ ಚಲಾಚಲಾಕೆ ಪಸೀನಾ ಆಗಯಾ
ಪೀಚೆ ದೇಕ್ಯಾ ತೋ ಮದೀನಾ ಆಗಯಾ


ಸಿಂಹದ ಕೊನೆಯ ಕೂಗು
ಹೌಲಾ ಹೌಲಾ


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, July 9, 2010

ಆಟೋ ಅಣಿಮುತ್ತುಗಳು - ೮೫ - ಕಲಿಯುವಿಕೆ

ಸುಮಾರು ೪ ತಿಂಗಳ ನಂತರ ಮತ್ತೆ ಬ್ಲಾಗಿನಲ್ಲಿ ಕಾಣಿಸಿಕೊಂಡಿರುವೆ.
ಉಗಿದವರೆಷ್ಟೋ, ಉಗಿಸಿಕೊಂಡು ಮುಖ ಒರೆಸಿಕೊಂದಿದ್ದೆಷ್ಟು ಸಲವೋ ಜ್ಞಾಪಕವಿಲ್ಲ.
ಬಿಡಿ, ನಿಮ್ಮ ಬಳಿ ಆ ಸಲುಗೆ ಇರೋದ್ರಿಂದಾನೇ ಈ ಲೆವೆಲ್ಲಿಗೆ ಬೆಳೆದಿರೋದು ನಾನು.
ಕ್ಷಮೆ ಇರಲಿ.

ಈ ಚಿತ್ರವನ್ನು ನಮ್ಮ ಬ್ಲಾಗಿಗ ಗೆಳೆಯರಾರೋ ಕಳಿಸಿದ್ದು. ಬಹಳ ದಿನಗಳಾದ್ದರಿಂದ ಜ್ಞಾಪಕವಿಲ್ಲಾ.
ಕಳಿಸಿದವರಿಗೆ ಧನ್ಯವಾದಗಳು.

ಕಲಿಯುವುದಿಲ್ಲಿ ಸಾಗರದಂತಿದೆ, ಕಲಿತವರಾರಿಲ್ಲ
ಶತಮಾನಗಳೇ ಕಳೆದರೂ ಇಲ್ಲಿ ವಿದ್ಯೆಗೆ ಕೊನೆಯಿಲ್ಲ.


ಬರೆಸಿರುವ ಆಟೋ ಅಣ್ಣನಿಗೆ HATS OFF...

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, March 15, 2010

ಭದ್ರತೆ... ಏನು ನಮ್ಮ ಸಿದ್ಧತೆ?

ಇತ್ತೀಚಿಗೆ ಒಂದೇ ಪ್ರಶ್ನೆಯನ್ನು ನಾನು ನನ್ನಲ್ಲೇ ಪದೇ ಪದೇ ಕೇಳಿಕೊಳ್ಳುತ್ತೇನೆ....."ನಾವು ಸುರಕ್ಷಿತವಾಗಿ ಇದೀವಾ?" ಎಂದು. ಈಗ್ಗೆ ಸುಮಾರು ಒಂದು ದಶಕದ ಈಚೆಗೆ ಭದ್ರತೆ, ಸುರಕ್ಷತೆ ಎನ್ನುವುದು ಜೀವನಕ್ಕೆ ಊಟ, ವಸತಿ, ಬಟ್ಟೆಯಷ್ಟೇ ಮುಖ್ಯವಾಗಿದೆ. ಈ ಮುಂಚೆ ಭಯ ಆತಂಕದ ಕಾರಣ ಇದ್ದದ್ದು ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳಿಂದ. ಆದರೆ ಈಗ ಜಾಗತಿಕ ಹಾಗು ಆಂತರಿಕ ಭಯೋತ್ಪಾದನೆಯಿಂದ ಹೆಚ್ಚುತ್ತಿರುವ ಆತಂಕ, ಸಂಶಯ, ಅಸುರಕ್ಷತೆಯ ಭಾವನೆ, ಅಶಾಂತಿಯ ಕಾರಣದಿಂದಾಗಿ ನಾವು ಮುಂಚಿನಕ್ಕಿಂತಾ ಹೆಚ್ಚು ಜಾಗರೂಕರಾಗಿದ್ದೀವಿ ಹಾಗು ಭದ್ರತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೀವಿ ಹಾಗು ಚಿಂತಿತರಾಗಿದ್ದೀವಿ.

ಪ್ರತೀ ಬಾರಿ ನಾನು ಯಾವುದೇ ನೂರಾರು ಸಾವಿರಾರು ಜನರು ಸೇರುವ ಜಾಗಕ್ಕೆ ಹೋದಾಗ "ಭದ್ರತಾ ತಪಾಸಣೆ" ಎಂಬ ಒಂದು ಹಾಸ್ಯಾಸ್ಪದ ಘಟನೆಗೆ ಒಳಪಡುತ್ತೇನೆ ಹಾಗು ಸಾಕ್ಷಿಯಾಗುತ್ತೇನೆ. ಈ ಭದ್ರತೆ ಎನ್ನುವ ಪದಕ್ಕೆ ನಮ್ಮಲ್ಲಿ ಇನ್ನೂ ಸರಿಯಾದ ವ್ಯಾಖ್ಯಾನ ಹಾಗು ಗಾಂಭೀರ್ಯ ಸಿಕ್ಕಿಲ್ಲ್ಲ.

ನಿನ್ನೆ ಹದಿನಾಲ್ಕರ ಭಾನುವಾರ ನನ್ನಾಕೆಯ ಜೊತೆ ಜಯನಗರದ ಸ್ವಾಗತ್ ಗರುಡ ಮಾಲ್-ನ ಸಿನೆಮಾ ಮಂದಿರದಲ್ಲಿ "ಆಪ್ತರಕ್ಷಕ" ನೋಡಲು ಹೋಗಿದ್ದೆ. ಅಲ್ಲಿ ಮೂರು ಕಡೆ ತಪಾಸಣೆ. ಮೊದಲು ಲೋಹ ಶೋಧಕ ಬಾಗಿಲಿನ ಮೂಲಕ ಒಳಗೆ ಪ್ರವೇಶ, ನಂತರ ಅಲ್ಲೇ ಮತ್ತೊಬ್ಬ ಭದ್ರತಾ ಸಿಬ್ಬಂದಿಯಿಂದ ತಪಾಸಣೆ. ನಾನು ಎಲ್ಲಿ ಹೋದರೂ ಬೆನ್ನಿಗೊಂದು ಚೀಲ ನೇತುಹಾಕಿಕೊಂಡು ಹೋಗುವ ಅಭ್ಯಾಸ. ಆ ಸಿಬ್ಬಂದಿ ಆ ಬ್ಯಾಗನ್ನು ತೆರೆಸಿ ಚೆಕ್ ಮಾಡಿದ. ನಂತರ ಚಿತ್ರಮಂದಿರದ ಒಳಗೆ ಹೋಗುವುದಕ್ಕೆ ಅಲ್ಲೊಂದು ಬಾರಿ ತಪಾಸಣೆ. ಮೊದಲು ಸಿಬ್ಬಂದಿಯಿಂದ ನಮ್ಮ ದೇಹವನ್ನು ಮುಟ್ಟಿ ತಪಾಸಣೆ, ನಂತರ ಬ್ಯಾಗನ್ನು ತೆರೆಸಿ ಮಗದೊಮ್ಮೆ ತಪಾಸಣೆ. ತಡೆಯಲಾರದೆ ಕೇಳಿದೆ "ಅಲ್ಲಾ ಕಣ್ರೀ, ನೀವೇನೋ ಬ್ಯಾಗ್ ತೆರೆಸಿ ಚೆಕ್ ಮಾಡ್ತೀರಾ; ಒಳಗೆ ಬಾಂಬು, ಗನ್ ಇದ್ರೆ ಏನ್ ಮಾಡ್ತೀರಾ? ನಾನೇ ಈಗ ಜೇಬಿನಿಂದ ಗನ್ ತೆಗೆದರೆ ಹೆಂಗೆ?" ಎಂದು. ಅಒದೈದು ಕ್ಷಣ ತಬ್ಬಿಬ್ಬಾದ ಆತ ಒಂದು ದೇಶಾವರಿ ನಗೆ ನಕ್ಕಿ "ಕಂಪ್ಲೇಂಟ್ ಕೊಡ್ತೀವಿ ಸಾರ್, ಓಡಲೇ ಬೇಕಾಗುತ್ತೆ ಸಾರ್.. ಇನ್ನೇನ್ ಮಾಡೋಕಾಗುತ್ತೆ?" ಎಂದ.

ನಾನು ಮುಂಚೆ ಹೇಳಿದ ಹಾಗೆ ನಮ್ಮಲ್ಲಿ ಭದ್ರತೆಯ ವ್ಯಾಖ್ಯಾನ ತಪ್ಪಾಗಿದೆ. ಸಾವಿರ ಜನ ಇರಲಿ, ಹೊರಗೆ ಹತ್ತು ಜನ ಒಂದು ದೊಣ್ಣೆ ಹಿಡಿದು ನಿಂತಿದ್ದರೆ ಆ ಜಾಗಕ್ಕೆ ಭದ್ರತೆ ಕೊಡಲಾಗಿದೆ ಎಂದರ್ಥ. ಇದರ ಪ್ರತ್ಯಕ್ಷ ದರ್ಶನವಾಗಬೇಕು ಎಂದರೆ ಯಾವುದಾದರೂ ಮಾಲ್-ಗೆ ಹೋಗಿ. ಪ್ರವೇಶದಲ್ಲೇ ಲೋಹಶೋಧಕ ಬಾಗಿಲು; ದಾಟಿದ ಕೂಡಲೇ ಸಿಬ್ಬಂದಿಯ ಕೈಲಿ ಒಂದು ಲೋಹಶೋಧಕ ಯಂತ್ರ; ಚೀಲ ಇದ್ದರೆ ಅದನ್ನು ತೆರೆಸಿ ತಪಾಸಣೆ. ಇವರಿಗೆ ಅಸಲು ಬಾಂಬ್ ಹೇಗಿರುತ್ತದೆ ಎನ್ನುವ ಕಲ್ಪನೆ ಇರುತ್ತದೆಯೇ ? ಸಿನೆಮಾದಲ್ಲಿ ತೋರಿಸಿದ ಹಾಗೆ ಒಂದು ಡಬ್ಬ, ಅದಕ್ಕೆ ಹತ್ತಾರು ವೈರ್-ಗಳು, ಮಿಣುಗುತ್ತಾ ಇರೋ LED ದೀಪಗಳು ಹಾಗು ಒಂದು ಟೈಮರ್.. ಹೀಗಾ? ಅಪಾಯ ಉಂಟುಮಾಡುವ ವಸ್ತು ಹೇಗೆ ಇರುವುದು ಎನ್ನುವ ಕಲ್ಪನೆಯೇ ಇಲ್ಲದೆ ಇವರು ಚೀಲದ ಒಳಗೆ ಏನನ್ನು ಹುಡುಕುತ್ತಾರೆ ? ಬೇರೆ ಪಶ್ಚಾತ್ಯ ದೇಶಗಳ ಹಾಗೆ ನಮ್ಮಲ್ಲಿ ಇನ್ನೂ ಆ ಲೆವೆಲ್ಲಿಗೆ ಗನ್ ಸಂಸ್ಕೃತಿ ಇಲ್ಲ. ಹಾಗೆ ಇದ್ದಿದ್ದಲ್ಲಿ, ಒಬ್ಬಾತ ತನ್ನ ಜೇಬಿನಿಂದ ಬಂದೂಕನ್ನು ತೆಗೆದ ಪಕ್ಷದಲ್ಲಿ, ಈ ಭದ್ರತಾ ಸಿಬ್ಬಂದಿ ಏನು ಮಾಡಬಲ್ಲರು ? ಇನ್ನು ನಮ್ಮ ಇದೇ ಮಾಲ್-ಗಳಲ್ಲಿನ ವಾಹನ ನಿಲುಗಡೆ. ಇವು ಇರುವುದು ನೆಲಮಾಳಿಗೆಯಲ್ಲಿ. ಅಲ್ಲಿ ಒಳಗೆ ಬರುವ ವಾಹನಕ್ಕೆ ಯಾವುದೇ ರೀತಿಯ ತಪಾಸಣೆ ??? ಉಹೂಂ.. ಶೂನ್ಯ. ಅವುಗಳು ಒಳಗೆ ಬಂದ ಕೂಡಲೇ ಚೀಟಿ ಹರಿದು ಕೊಡ್ತಾರೆ ವಿನಃ ಬೇರಾವುದಕ್ಕೂ ಅಲ್ಲ.

ನಮ್ಮಲ್ಲಿ ಇರುವ ಭದ್ರತಾ ಸಿಬ್ಬಂದಿ ಎಷ್ಟರ ಮಟ್ಟಿಗೆ ಈ ರೀತಿಯಾದ ಸಂದರ್ಭಗಳನ್ನು ಎದುರಿಸಲು ಯೋಗ್ಯರಾಗಿದ್ದಾರೆ? ಮೇಲೆ ಹೇಳಿದ ಘಟನೆ ನಡೆದ ಪಕ್ಷದಲ್ಲಿ, ಅದಕ್ಕೆ ಕಾರಣರಾದವರನ್ನು ದೈಹಿಕವಾಗಿ ಎದುರಿಸುವ ಬಲ ಹಾಗು ಮಾನಸಿಕ ಸ್ಥೈರ್ಯ ಹೊಂದಿದ್ದಾರೆ ? ತುರ್ತು ಪರಿಸ್ಥಿತಿಗಳಲ್ಲಿ ಅವುಗಳನ್ನು ನಿಭಾಯಿಸುವ ತರಬೇತಿ ಎಷ್ಟು ಮಂದಿ ಉಳ್ಳವರಾಗಿದ್ದಾರೆ? ಅಗ್ನಿಶಾಮಕ ಉಪಕರಣಗಳನ್ನು / ಪದ್ಧತಿ ಹಾಗು ಪ್ರಥಮ ಚಿಕಿತ್ಸೆ ಬಗ್ಗೆ ಎಷ್ಟು ಮಂದಿಗೆ ಅರಿವಿದೆ? ಸಾಕಷ್ಟು ಬಾರಿ ಕಂಡ ಹಾಗೆ ಕಾಟಾಚಾರಕ್ಕೆ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಈ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಂಡಿರುತ್ತಾರೆ. ಇವರುಗಳಿಗೆ ಒಂದು ಸಾಮಾನ್ಯ ಬೌದ್ಧಿಕ ಹಾಗು ವಿದ್ಯಾರ್ಹತೆ ಇರಬೇಕು. ಎಲ್ಲಕ್ಕಿಂತ ಮಿಗಿಲಾಗಿ, ಒಂದು ಕನಿಷ್ಟ ಮಟ್ಟದ ದೈಹಿಕ ಅರ್ಹತೆ ಇರಬೇಕು. ಬೆಂಗಳೂರಲ್ಲಿ ಇರುವ ಈ ಸಿಬ್ಬಂದಿಗಳ ಪೈಕಿ ಸುಮಾರು ಜನಕ್ಕೆ ಇವು ಇರುವುದಿಲ್ಲ. ಇನ್ನು ಬ್ಯಾಂಕುಗಳ ATM ಯಂತ್ರಗಳ ಭದ್ರತಾ ಸಿಬ್ಬಂದಿಗಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ. ಈ ಗುಂಪಿನ ಸಿಬ್ಬಂದಿಗಳಲ್ಲಿ ಸುಮಾರು 60-65% ಐವತ್ತು ವರ್ಷಕ್ಕೆ ಮೇಲ್ಪಟ್ಟವರು. ಇಂಥವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರಾಗಿರುವುದ್ದಿಲ್ಲಾ, ಇನ್ನು ಭದ್ರತೆಯ ಪ್ರಶ್ನೆ ಎಲ್ಲಿದೆ? ಕೆಲ ತಿಂಗಳ ಹಿಂದೆ ಬೆಂಗಳೂರಿನ RT ನಗರದ ಬ್ಯಾಂಕ್ ಒಂದರಲ್ಲಿ ಹೀಗೆ ಹೋಚುವ ಕಾರ್ಯದಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿತ್ತು.

ನಾನು ಯೂರೋಪಿನಲ್ಲಿ ಸುಮಾರು ಆರು ದೇಶಗಳಿಗೆ ಸುತ್ತಿರುವೆ. ನಾನು ಪರದೇಶಿಯಾಗಿ ಆ ದೇಶದಲ್ಲಿ ಅನುಭವಿಸಿರುವ ಭದ್ರತೆಯನ್ನು, ನಮ್ಮ ದೇಶದಲ್ಲಿ ನಾನು ಅನುಭವಿಸಿಲ್ಲ. ಅಲ್ಲಿ ಯಾವುದೇ ಜಾಗಕ್ಕೆ ಹೋಗಲಿ, ಅಲ್ಲಿರುವ ಭದ್ರತಾ ಸಿಬ್ಬಂದಿಯನ್ನು, ಅವರ ಪರಿಕರಗಳನ್ನು ಕಂಡರೆ ಅವರು ಕೊಡುವ ಹಾಗು ಕೊಡಬಲ್ಲ ಭದ್ರತೆಯ ಭಾವನೆ ಉಂಟಾಗುತ್ತದೆ ಹಾಗು ತಂಟೆ ತಕರಾರು ಮಾಡುವವರೂ ಕೂಡಾ ನಾಲ್ಕು ಬಾರಿ ಯೋಚಿಸಬೇಕಾಗುತ್ತದೆ. ಆದರೆ ಇಲ್ಲಿ ಭದ್ರತೆ ಅನ್ನುವುದು ಸುಮ್ಮನೆ ಒಂದು ಕಣ್ಣೊರೆಸುವ ಕೆಲಸವಗಿದೆಯೇ ಹೊರತು ಬೇರೇನೂ ಅಲ್ಲ. ಏನಾಗುವುದೋ, ಆ ದೇವರೇ ಬಲ್ಲ. ಪದೇ ಪದೇ ಹೇಳುವ ಹಾಗೆ, ಅರಿವು ಮುಖ್ಯ.

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, March 3, 2010

ಸೋಮಾರಿ ಕಟ್ಟೆಗೆ 50,000 ಒದೆಗಳು

ಸುಮಾರು ಆರೇಳು ದಿನಗಳ ಹಿಂದೆ ಸೋಮಾರಿ ಕಟ್ಟೆಗೆ ಮಧ್ಯಾಹ್ನದ 3 ರ ಹೊತ್ತಿಗೆ ಐವತ್ತು ಸಾವಿರನೆಯ ಒದೆ (Hits) ಬಿತ್ತು.
ನಿಮ್ಮ ಅಭಿಮಾನ, ಪ್ರೋತ್ಸಾಹ ಹಾಗು ನಿರಂತರ ಆಗಮನದಿಂದ ಹೀಗೆ ಆಗಿದ್ದು.
ಇದೆ ರೀತಿ ಇನ್ಮುಂದೆ ಕೂಡಾ ಒದೀತಾ ಇದ್ದು, ಕಟ್ಟೆಯನ್ನು ಇನ್ನೂ ಗಟ್ಟಿ ಮಾಡಿ.
ಏನೋ, ಈ ರೀತಿಯಾದ ಸಣ್ಣ ಪುಟ್ಟ ವಿಷಯಗಳಲ್ಲೇ ಜಾಸ್ತಿ ಸಂತೋಷ ಅನುಭವಿಸ್ತೀನಿ.
ಈ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸ್ತು, ಹಾಗಾಗಿ ಹಂಚಿಕೊಂಡೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ