Sunday, April 6, 2014

ಗಾಜಿನ ಲೋಟದಲ್ಲಿ ರಸ್ನಾ

ಮಾರ್ಚಿ ತಿಂಗಳ ಶಾಲಾ  ಪರೇಕ್ಷೆಗಳು ಮುಗಿದಾಗ ಶುರುವಾಗ್ತಿತ್ತು ನಮ್ಮಗಳ ಅಟ್ಟಹಾಸ. "ನಾಯಿಗೆ ನೆಲೆಯಿಲ್ಲಾ, ನಿಲ್ಲೋಕ್ಕೆ ಹೊತ್ತಿಲ್ಲ" ಅನ್ನೋ ಹಾಗೆ ನಮ್ಮ ಓಡಾಟ. ಪರೀಕ್ಷೆ ಮುಗಿಯುವವರೆಗೆ ಅಪ್ಪ ಅಮ್ಮನ ದಬ್ಬಾಳಿಕೆ ಸಹಿಸಿಕೊಂಡು ಈ ಎರಡು ತಿಂಗಳ ರಜೆಯಲ್ಲಿ ಸಾಕಷ್ಟು ಸೇಡು ತೀರಿಸಿಕೊಳ್ಳುವ ಇರಾದೆ.

ಬೇಸಿಗೆ ರಜೆ ಎಂದರೆ ರಸ್ನಾ ಕಾಲ. ಮನೆಯಲ್ಲಿ ರಸ್ನಾ ತಯಾರು ಮಾಡಿ ಬಾಟಲಲ್ಲಿ ಅದರ Concentrate ತುಂಬಿಡುವುದೆಂದರೆ ಅದೇನೋ ಸಂಭ್ರಮ ನಮಗೆ.

ತಿಂಗಳ ಶುರುವಿನಲ್ಲಿ ಮನೆಯ ದಿನಸಿಯ ಜೊತೆಗೆ ಒಂದು ಪ್ಯಾಕೆಟ್ ರಸ್ನಾ ಇರಲೇ ಬೇಕು. ಅದರಲ್ಲೂ ಈ ಬಾರಿ ಯಾವ ಫ್ಲೇವರ್ ತರುವುದು ಎಂದು ನನ್ನ ಹಾಗು ನನ್ನ ತಮ್ಮನ ಮಧ್ಯೆ ಮಾರಾಮಾರಿ.

ರಸ್ನಾ ಪ್ಯಾಕೆಟ್ ದಿನಸಿ ಜೊತೆ ಬಂದಾಗ, ತಯಾರು ಮಾಡಿ ಬಾಟಲಲ್ಲಿ ತುಂಬಿಡುವ ಕಾರ್ಯ ಅಪ್ಪನದು. ಪ್ರತೀ ಬಾರಿ ಮಾಡುವಾಗಲೂ ಪ್ಯಾಕೆಟ್ ಹಿಂದೆ ಬರೆದಿರುವ "ತಯಾರಿಸುವ ವಿಧಾನ"ವನ್ನು ಅಪ್ಪ ಓದುವುದು, ನಾವುಗಳು ಅದನ್ನು ಗಣಪತಿ ಹಬ್ಬದ "ಶ್ಯಮಂತೋಪಾಖ್ಯಾನ"ಕ್ಕಿಂತಲೂ ಶ್ರದ್ಧೆಯಿಂದ ಕೇಳುವುದು.
ನೀರಿಗೆ ಸಕ್ಕರೆ ಬೆರೆಸಿ, ಅದನ್ನು ಸೋಸಿ, ಅದರಲ್ಲಿ ರಸ್ನಾ ಪ್ಯಾಕೆಟ್ಟಿನಲ್ಲಿ ಕೊಟ್ಟಿರುವ ಪೌಡರ್ ಹಾಗು ಫ್ಲೇವರ್ ರಸವನ್ನು ಬೆರೆಸಿ ಕಲಕುವುದು. ಈ ಕಲಕುವ ಕೆಲಸ ಮಾಡಲು ಮತ್ತೊಮ್ಮೆ ನನ್ನ ಹಾಗು ನನ್ನ ತಮ್ಮನ ನಡುವೆ ಮಾರಾಮಾರಿ.

ಸರಿ, ತಯಾರಾಯ್ತು ರಸ್ನಾ. ಅದನ್ನು ಎರಡು ಬಾಟಲಲ್ಲಿ ತುಂಬಿತ್ತು ದಿನಾಲೂ ರೇಷನ್ ವಿಧಾನದ ಥರ ಕುಡಿಯುವುದು.
ಮಾಮೂಲಾಗಿ ಕುಡಿಯುತ್ತಿದ್ದದ್ದು ಸ್ಟೀಲ್ ಲೋಟದಲ್ಲಿ. ಆದರೆ, ಅದೇನೋ ಧನ್ಯತಾ ಭಾವ ಹಾಗು ಜೀವನದ ಸಾರ್ಥಕತೆ ಸಿಗುತ್ತಿದ್ದದ್ದು ಅಪರೂಪಕ್ಕೆ "ಗಾಜಿನ ಲೋಟದಲ್ಲಿ ರಸ್ನಾ" ಕುಡಿದಾಗಲೇ.

ಈಗ ಬೇಸಿಗೆ ರಜೆ ಇದೆ, ಆದರೆ ಈ ಸಂಭ್ರಮ ಇಲ್ಲಾ ಹಾಗು ಹೀಗೆ ಯಾರೂ ರಸ್ನಾ ಎಂಜಾಯ್ ಮಾಡೋದಿಲ್ಲಾ ಅನ್ಸುತ್ತೆ.

"ಐ ಲವ್ ಯೂ ರಸ್ನಾ"

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, September 22, 2013

ಬರೆಯೋ ಧರ್ಮ ನಮ್ಮದು. ಅದರಿಂದ ಮನಸ್ಸಿಗೆ ನೋವಾದ್ರೆ ಅದನ್ನು ಸಹಿಸಿಕೊಳ್ಳಬೇಕು - ಗಿರೀಶ್ ಕಾರ್ನಾಡ್

ಬರೆಯೋ ಧರ್ಮ ನಮ್ಮದು. ಅದರಿಂದ ಮನಸ್ಸಿಗೆ ನೋವಾದ್ರೆ ಅದನ್ನು ಸಹಿಸಿಕೊಳ್ಳಬೇಕು - ಹೀಗೆಂದು ಹೇಳಿದವರು ಜ್ಞಾನಪೀಠ ಪ್ರಶಸ್ತಿ ವಿಜೇತ ಬುದ್ಧಿಜೀವಿ, ಸನ್ಮಾನ್ಯ  ಗಿರೀಶ್ ಕಾರ್ನಾಡ್ ಅವರು. ಲೇಖಕನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಹೇಳುತ್ತಾ, ಹಿಂದೂ ಧರ್ಮದ ಎಲ್ಲಾ ವರ್ಗಗಳ ಜನರ ಪ್ರಿಯನಾದ ಗಣಪತಿಯನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ "ಡುಂಢಿ"ಯ ಲೇಖಕ ಯೋಗೇಶ್ ಮಾಸ್ಟರ್ ವಿರುದ್ಧ ಇರುವ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು, ಹಾಗು ನಾವು ಮನಸ್ಸಿಗೆ ನೋವು ಮಾಡುತ್ತೇವಯೇ ಹೊರತು ದೈಹಿಕ ನೋವನ್ನೇನೂ ನೀಡಿಲ್ಲ ಎಂದೂ ಹೇಳಿದ್ದಾರೆ.

So called ಜಾತ್ಯಾತೀತ ಬುದ್ಧಿಜೀವಿ ಕಾರ್ನಾಡರೇ, ಒಂದು ವೇಳೆ ಯಾರಾದರೂ ನೀವು ಓಲೈಸುವ ಅಲ್ಪಸಂಖ್ಯಾತರ ದೇವರ/ಧರ್ಮದ ವಿರುಧ್ಧ ಬರೆದು, ಅವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದ ಪಕ್ಷದಲ್ಲಿ ಇದೇ ಮಾತು ಆಡುತ್ತಿದ್ದಿರೇನು ?
ಹೂಸಿದರೆ ಕೆಮ್ಮಿದರೆ ತಪ್ಪು, ಅವರಿಗೆ ಶಿಕ್ಷೆ ಕೊಡಿ ಎಂದು ತೀರ್ಮಾನ ಕೊಡುವ ಧಾರ್ಮಿಕ ಮುಖಂಡರಿಗೂ, ನಿಮಗೂ ಏನು ವ್ಯತ್ಯಾಸವಿದೆ ಸ್ವಾಮಿ?

ಇನ್ನು ನಿಮ್ಮ "ನಾವು ಮನಸ್ಸಿಗೆ ನೋವು ಮಾಡುತ್ತೇವಯೇ ಹೊರತು ದೈಹಿಕ ನೋವನ್ನೇನೂ ನೀಡಿಲ್ಲ" ಎನ್ನುವ ಮಾತಿನ ಅರ್ಥ ಏನು ಕಾರ್ನಾಡರೆ ?
ಮಾಸಲಾಗದಂಥ ಗುರುತು ಹಾಗು ಎಲ್ಲಾ ವರ್ಗದ ಜನರನ್ನೂ ಘಾಸಿಗೊಳಿಸುವುದು ಮನಸ್ಸಿಗೆ ನೋವುಂಟುಮಾಡುವ ಮಾತೇ ಹೊರತು ದೈಹಿಕ ಹೊಡೆತವಲ್ಲ. ನಿಮ್ಮಂಥ ಉತ್ತಮ ಬೌಧ್ಧಿಕ ಮಟ್ಟದ ಲೇಖಕರಿಗೆ ನನ್ನಂಥ ಪಾಮರನೊಬ್ಬ ಈ ವಿಚಾರ ಹೇಳಬಾರದು.

ನಮ್ಮ ದೇಶದಲ್ಲಿ ಈಗ ಕಪಟ ಜಾತ್ಯಾತೀತ (Pseudo Secular) ಜನರು ತೋರಿಕೆಗೋಸ್ಕರ, ಮತ್ತೊಂದು ರಾಜಕೀಯ ಪಕ್ಷದ ಓಲೈಕೆಗೋಸ್ಕರ  ಹೀಗೆ ನುಡಿಮುತ್ತುಗಳನ್ನು ಉದುರಿಸುತ್ತಾರೆ. ತಾವು ಹೇಳಿದ ಹಾಗೆ ಬರೀ ಮನಸ್ಸಿಗೆ ನೋವುಂಟು ಮಾಡುವ ಮಾತುಗಳಿಂದಲೇ ವರ್ಷಾನುಗಟ್ಟಲೆ ಮಾಸದ ಹಾಗೆ ಕೋಮು ಸೌಹಾರ್ದತೆ ಮಾಯವಾಗುತ್ತದೆ.

ನಿಮ್ಮಂಥ ಜ್ಞಾನಿಯ ಬಾಯಿಂದ ಈ ತೆರನಾದ ಮಾತುಗಳು ಶೋಭಿಸುವುದಿಲ್ಲಾ !!

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, September 19, 2012

ಆಟೋ ಅಣಿಮುತ್ತುಗಳು - ೧೧೪ - ಆಕಾಶವೆಂಬ ಅಂಗಳದಲ್ಲಿ

ಸುಮಾರು ಎರಡು ವಾರಗಳ ಹಿಂದೆ ಆಫೀಸಿನಿಂದ ಮನೆಗೆ ಬರುವ ದಾರಿಯಲ್ಲಿ ಆಡುಗೋಡಿ ಬಳಿ ಕಂಡ ಆಟೋ ಇದು.
ಮನಸ್ಸಿಗೆ ತುಂಬಾ ಮುದ ನೀಡಿದ ಅಣಿಮುತ್ತುಗಳಲ್ಲಿ  ಇದೂ ಒಂದು. ನಿಮಗೂ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ.

ಆಕಾಶವೆಂಬ ಅಂಗಳದಲ್ಲಿ ಹಕ್ಕಿಯಂತೆ ಹಾರಿ,
ಚುಕ್ಕಿಯಂತೆ ಮಿನುಗುವ ಅಕ್ಕರೆಯ
ಪ್ಯಾಸೆಂಜರ್-ಗೆ, ಸಕ್ಕರೆಯ ಶುಭಾಶಯಗಳು...
-------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Sunday, September 16, 2012

ಜನರ ಮೊಬೈಲು ಫೋನು, ರಿಂಗ್ ಟೋನ್ ಹಾಗು ಸಂದರ್ಭಗಳು

ಮೊಬೈಲು ಫೋನುಗಳ ಆಗಮನದಿಂದ ನಮ್ಮ ಜೀವನದಲ್ಲಿ ನಡೆವ ಆಭಾಸಗಳು ಹಲವಾರು. ಇದರಲ್ಲಿ ಕೇವಲ ಒಂದೇ ಒಂದು ಘಟನೆಯ ವ್ಯಾಖ್ಯೆ ಕೊಡ್ತಾ ಇದ್ದೀನಿ. ಕೆಲವು ಜನರು ಅತೀವ ಭಕ್ತಿಯ (???) ಪ್ರದರ್ಶನಕ್ಕಾಗಿ ತಮ್ಮ ಮೊಬೈಲು ಫೋನುಗಳಲ್ಲಿ ದೇವರ ನಾಮ, ಶ್ಲೋಕ, ಕೀರ್ತನೆಗಳನ್ನು ರಿಂಗ್-ಟೋನಾಗಿ ಅಳವಡಿಸಿಕೊಳ್ತಾರೆ. ಹಲವಾರು ಸಂದರ್ಭಗಳಲ್ಲಿ ಯಾವ ರೀತಿ ಆಭಾಸ ಉಂಟುಮಾಡುತ್ತದೆ ಎಂದರೆ, ಯಪ್ಪಾ!!!
೧. ಶೌಚಾಲಯದಲ್ಲಿ ದೇಹಬಾಧೆ ತೀರಿಸಿಕೊಳ್ಳಬೇಕಾದರೆ "ನಮಃ ಶಿವಾಯ ಓಂ ನಮಃ ಶಿವಾಯ, ಹರಹರ ಬೋಲೋ ನಮಃ ಶಿವಾಯ"
೨. ಬಾರಿನಲ್ಲಿ ಕಂಠಪೂರ್ತಿ ಕುಡಿಯುವಾಗ "ಓಂ ಸಾಯಿ ನಮೋ ನಮಃ, ಜೈ ಜೈ ಸಾಯಿ ನಮೋ ನಮಃ, ಸದ್ಗುರು ಸಾಯಿ ನಮೋ ನಮಃ..."
೩. ಹುಡುಗಿ ಜೊತೆ ಚೆಲ್ಲು ಚೆಲ್ಲಾಗಿ ಸಲ್ಲಾಪ ನಡೆಸುವಾಗ "ಗಣನಾಯಕಾಯ ಗಣದೆವತಾಯ ಗಣಾಧ್ಯಕ್ಷಾಯ ಧೀಮಹಿ..."
ಕೇವಲ ಈ ಮೂರು ಸಂದರ್ಭಗಳನ್ನು ಹೇಳಿದ್ದಕ್ಕೆ ಓದುವವರಿಗೆ ಯಾವ ರೀತಿಯಾಗಿ ಮುಜುಗರವಾಗಬಹುದು ಎಂದು ನನಗೆ ಗೊತ್ತು. ಆದರೂ ಕೂಡಾ ಇದನ್ನು ಬರೆಯುತ್ತಿರುವೆ. ನನ್ನ ವಿನಂತಿ ಇಷ್ಟೇ, ದೇವರ ಭಕ್ತಿ ಇರಲಿ. ಭಕ್ತಿ ಮನಸ್ಸಿನಲ್ಲಿ ಇರಬೇಕೆ ಹೊರತು ಇನ್ನೊಬ್ಬರ ಮುಂದೆ ಪ್ರದರ್ಶನಕ್ಕಾಗಿ ಅಲ್ಲ. ದಯವಿಟ್ಟು ದೇವರ ನಾಮ, ಶ್ಲೋಕ ಹಾಡುವ ಕೇಳುವ ಆಸೆ ಇದ್ದಾರೆ ನಿಯಮಬಧ್ಧ ವಾಗಿ ಹಾಡಿ/ಕೇಳಿ. ಊಟದ ತಿಂಡಿ ವಿಚಾರವಾಗಿ ಒಂದು ನಿಯಮ ಅನುಸರಿಸುವ ಜನರು ದೇವರ ನಾಮ/ಹಾಡಿನ ವಿಚಾರದಲ್ಲಿ ಯಾಕೆ ಇಷ್ಟು ಉದಾಸೀನ, ಉಡಾಫೆ ತೋರುತ್ತಾರೋ ಗೊತ್ತಿಲ್ಲ. ಇನ್ನು ಮುಂದಕ್ಕೆ ನಾನು ಬೇರೇನೂ ಹೇಳೋದಿಲ್ಲ.
---------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, September 14, 2012

ಆಟೋ ಅಣಿಮುತ್ತುಗಳು - ೧೧೩ - ಆಟೋನೇ ದೇವರು

ನನ್ನ ಚಡ್ಡಿ ದೋಸ್ತ್ ಅರುಣ್ ಎಲ್ಲೋ ಸೆರೆಹಿಡಿದ ಆಟೋ ಅಣಿಮುತ್ತು. ತೆಗೆದ ತಕ್ಷಣ ನಂಗೆ ಮಿಂಚಂಚೆ ಕಳಿಸಿದ.
ಒಂಥರಾ ಚೆನ್ನಾಗಿದೆ ಈ ಅಣಿಮುತ್ತು.
ಆಟೋನೇ ದೇವರು....
"ಶಂಕ್ರಣ್ಣ" ನಮ್ಮ ಗುರು....
ನಿಯತ್ತೇ ನಮ್ಮ ಉಸಿರು...
ಜಾತಿ ಭೇದಾನೇ ಇಲ್ಲಾ ಗುರು...
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, September 13, 2012

ಆಟೋ ಅಣಿಮುತ್ತುಗಳು - ೧೧೨ - ಅಖಿರಥ್ ಬ್ಯಾಂಕ್ ???

ಹೊಸದೊಂದು ಆಟೋ ಅಣಿಮುತ್ತು ಸುಮಾರು ದಿನಗಳಾಗಿದ್ದವು. ಕೇವಲ ಎರಡು ವರ್ಷಗಳ ಹಿಂದೆ ಹೊಚ್ಚ ಹೊಸ ಅಣಿಮುತ್ತುಗಳು ಕಾಣಸಿಗುತ್ತಿದ್ದವು. ನಾನು ಶೇಖರಿಸಿರುವ ಅಣಿಮುತ್ತುಗಳು ನೂರು ದಾಟಿದ್ದು, ದಾರಿಯಲ್ಲಿ ಆಟೋ ಹಿಂದೆ ಅಣಿಮುತ್ತು ಕಂಡರೆ ಇದು ನನ್ನ ಬಳಿ ಇದೆಯೋ ಇಲ್ವೋ ಅನ್ನೋ ಯೋಚನೆ ಶುರು ಆಗುತ್ತೆ. ಜೊತೆಗೆ ಎಲ್ಲಾ ಆಟೋ ಅಣ್ಣಂದಿರು ಅಣಿಮುತ್ತನ್ನು ಬರೆಸಲು ಶುರು ಮಾಡಿದ್ದಾರೆ. ಹೀಗಾಗಿ ಯಾವುದರ ಫೋಟೋ ತೆಗೆಯೋದು ಬಿಡೋದು ಅನ್ನೋ ದ್ವಂದ್ವ ಕಾಡುತ್ತಿದೆ.
ಇದು ಸುಮಾರು ಮೂರು ತಿಂಗಳ ಹಿಂದೆ ತೆಗೆದ ಚಿತ್ರ. ಇದರ ಅರ್ಥ ಇವತ್ತಿನ ವರೆರ್ಗೆ ನಂಗೆ ಗೊತ್ತಾಗಿಲ್ಲ. ನಿಮಗೆ ಗೊತ್ತಾದಲ್ಲಿ ದಯವಿಟ್ಟು ತಿಳಿಸಿ.
----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 27, 2012

ಆಟೋ ಅಣಿಮುತ್ತುಗಳು - ೧೧೧ - ಮರೆಯಾಗಿ ಹೋದ ಪಾರಿವಾಳ

ಬಹಳ ದಿನವಾದ ಮೇಲೆ ಮತ್ತೊಂದು ಅಣಿಮುತ್ತು ಹಾಕ್ತಾ ಇದ್ದೀನಿ. ಈ ಅಣಿಮುತ್ತಿನ ಸಂಖ್ಯೆಗೂ ಈ ಆಟೋ ಅಣ್ಣನ ಹೇಳಿಕೆಗೂ ಎಂಥಾ ಸ್ವಾಮ್ಯ ಇದೆ ಅಲ್ವೇ? ಈ ಫೋಟೋ ತೆಗೆದದ್ದು ಎಲ್ಲಿ ಅಂತಾ ಮರೆತುಹೋಗಿದೆ. ಅದೇನೋ ಬಿಡಿ ಪಾಪ, ಈ ಅಣ್ಣನ ಪಾರಿವಾಳ ಮರೆಯಾಗಿ ಹೋಯ್ತು ಅನ್ನೋ ದುಃಖದಲ್ಲಿ ಈತ ಇದ್ದಾನೆ. ಸುಮ್ನೆ ಕೇಳಿ ಮತ್ತೂ ಬೇಜಾರ್ ಮಾಡೋದು ಬೇಡ

ಕೋಟಿ ಕಣ್ಣುಗಳಿಗೆ ಮರೆಯಾಗಿ ಹೋದ ಪಾರಿವಾಳ
----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, April 30, 2012

ಆಟೋ ಅಣಿಮುತ್ತುಗಳು - ೧೧೦ - I Feel Perfect

ಮೊನ್ನೆ ಮೈಸೂರಿನಲ್ಲಿ ಕಂಡ ಆಟೋ ಇದು. ಈ ಅಣ್ಣನ್ನ ಟ್ರಾಫಿಕ್ ಪೋಲೀಸಿನವ್ರು ರಾತ್ರಿ ಹೊತ್ತು ಸರಿಯಾಗಿ ಕಾಡ್ತಾರೆ ಅನ್ಸುತ್ತೆ. ಅದೆಷ್ಟು ರಾಜಾರೋಷವಾಗಿ ಹಾಕಿದಾನೆ ನೋಡಿ.
Saw this autorickshaw in Mysore last week. This guy would be pestered by the traffic police a lot for D&D.
-------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Saturday, March 17, 2012

ಆಟೋ ಅಣಿಮುತ್ತುಗಳು - ೧೦೯ - ಮದ್ವೆ ಆಯ್ತದೆ

ಹೊರದೇಶಗಳಿಂದ ಕನ್ನಡ ಬರದೆ ಇರುವ ಜನರು ನನ್ನ ಬ್ಲಾಗನ್ನು ನೋಡ್ತಾ ಇದಾರೆ. ಅವರ ಅನುಕೂಲಕ್ಕಾಗಿ ಈ ಬಾರಿಯಿಂದ ಇಂಗ್ಲಿಶ್ ಅವತರಣಿಕೆಯನ್ನು ಹಾಕ್ತಾ ಇದ್ದೀನಿ.
ಎರಡು ವಾರದ ಹಿಂದೆ ಮೈಸೂರಿಗೆ ಹೋಗಿದ್ದಾಗ, ಚಿಕ್ಕ ಮಾರ್ಕೆಟ್ ಸರ್ಕಲ್ಲಿನ ಜಟಕಾ ಸ್ಟಾಂಡ್ ಬಳಿ ರಾತ್ರಿ ಕಂಡ ಆಟೋ ಇದು. ಯಥಾ ಪ್ರಕಾರ, ನನ್ನಾಕೆಗೆ ಕಾರನ್ನು ಅದರ ಕಡೆ ತಿರುಗಿಸಲು ಹೇಳಿ, ಇಳಿದು ಆಟೋ ಅಣ್ಣನ ಅನುಮತಿ ಪಡೆದು ಫೋಟೋ ತೆಗೆದುಕೊಂಡೆ.

ತುಂಬಾ ನೋಡ್ಬೇಡಿ ಲೌ ಆಯ್ತದೆ
ಹೂವ ಕೊಡ್ಬೇಡಿ ಮದ್ವೆ ಆಯ್ತದೆ.

Saw this auto rickshaw in Mysore during my visit two weeks ago. Spotted near the Small Market circle. As usual, I asked my wife to take the car there, stopped, got out and took the photo after getting a nod from the auto driver. Can be better translated as,
Do not look at me so much, there would be love,
Do not give me flower, we might get married.

-----------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ (Shankar)

Friday, January 13, 2012

ಆಟೋ ಅಣಿಮುತ್ತುಗಳು - ೧೦೮ - ಬದುಕುವುದರಲ್ಲಿ ಮಜಾ ಇಲ್ಲದವರು

ಸುಮಾರು ದಿನಗಳ ಹಿಂದೆ, ಸೆಂಟ್ ಜಾನ್ಸ್ ಸಿಗ್ನಲ್ ಬಳಿ ಕಂಡ ಆಟೋ ಇದು.
ಈ ಅಣ್ಣ ಹೀಗೇಕೆ ಹೇಳಿದ ಅಂತಾ ಅರ್ಥ ಅಗ್ತಾ ಇಲ್ಲ. ಜೀವನದ ಮೇಲೆ ಆಸೆ ಇಲ್ಲದಿರುವರನ್ನು ಅಂತಾ ಹೇಳಬಹುದಿತ್ತು.
ಈ ಅಣ್ಣ ಕೂಡಾ ಸಿಕ್ಕಾಪಟ್ಟೆ ವೇಗವಾಗಿ ಗಾಡಿ ಓಡಿಸುವರಲ್ಲಿ ಒಬ್ಬನಿರಬೇಕು. ಅದಕ್ಕೆ ಇಲ್ದೆ ಇರೋ ಬಿಲ್ದಪ್ ಕೊಡ್ತಾ ಇದಾನೆ.


ಬದುಕುವುದರಲ್ಲಿ ಯಾವುದೇ ಮಜಾ ಇಲ್ಲಾ ಎಂದು
ಭಾವಿಸುವವರಿಗೆ ವೇಗವಾಗಿ ವಾಹನ ಓಡಿಸುವ ಚಾಲಕರು ಎನ್ನಬಹುದು

---------------------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ