Sunday, June 28, 2009

ಉದ್ದಿನ ವಡೆ ಅಥವಾ ಮೆದು ವಡಾ ?

ಶನಿವಾರ (27 ಜೂನ್) ಮಧ್ಯಾಹ್ನ ಎಲ್ಲಾ ಮಿತ್ರರು ಸೌತ್ ಎಂಡ್ ಸರ್ಕಲ್ ಹತ್ರ ಮೀಟ್ ಮಾಡಿ, ಸಂಜೆ ತನಕ ಸುತ್ತಾಡಿ ಒಳ್ಳೆ ಮಜಾ ಇತ್ತು. ಸಂಜೆ ಹೊಟ್ಟೆ ಚುರ್ರ್ ಅಂದಾಗ ಶ್ರೇಯು "ಬನ್ರೋ, ಒಂದು ಹೊಸಾ ಹೋಟ್ಲು ಓಪನ್ ಆಗಿದೆ ಇಲ್ಲೇ, ಅಲ್ಲಿ ಹೋಗೋಣ...ಟೇಸ್ಟು ಚೆನ್ನಾಗಿದೆ" ಅಂದ. ಸರಿ ನಡಿ ಅಂತಾ ಹೊರಟ್ವಿ.
"ಸೌತ್ ತಿಂಡೀಸ್" ಅಂತಾ ಹೋಟ್ಲು. ಇದು ಇರೋದು ಕನಕಪುರ ರಸ್ತೆಯಲ್ಲಿ, ಕೃಷ್ಣರಾವ್ ಪಾರ್ಕಿನ ಬಳಿ (ಸೌತ್ ಎಂಡ್ ಸರ್ಕಲ್ಲಿನಿಂದ ನಾಗಸಂದ್ರ ಕಡೆ ಬಂದರೆ, ಮಧ್ಯದಲ್ಲಿ ಸಿಗೋ ಸರ್ಕಲ್ಲಿನಲ್ಲಿ ಬಲಕ್ಕೆ ತಿರುಗಿದರೆ ಈ ಹೋಟ್ಲು ಕಾಣುತ್ತೆ).
ಈ ಜಾಗದಲ್ಲಿ ಮುಂಚೆ "ವಿಜಯ ದರ್ಶಿನಿ" ಅನ್ನೋ ಒಂದು ದರ್ಶಿನಿ ಇತ್ತು. ತಿಂಡಿ ಅಷ್ಟಕ್ಕಷ್ಟೆ ಇದ್ದದ್ದು, ಆದ್ರೆ ಕಾಫಿ ಚೆನ್ನಾಗಿ ಮಾಡ್ತಾ ಇದ್ರು.

ಸರಿ, ವಿಷಯಕ್ಕೆ ಬರೋಣ. ನಿನ್ನೆ ಎಲ್ರೂ ಸೇರಿದ್ರೆ ಏಳು ಜನ.

ನಾನು, ಹೇಮಂತ, ಶ್ರೇಯು, ಸುಬ್ಬು, ನವೀನ, ಜಗ್ಗ, ಶಶಿ...ಎಲ್ರೂ ಒಳ್ಳೇ ಗ್ರೈಂಡರ್ ನನ್ ಮಕ್ಳು. ಕ್ಯಾಶ್ ಕೌಂಟರಿನಲ್ಲಿ ನಿಂತು ಯಾರಿಗೆ ಏನು ಬೇಕು ಅಂತಾ ಡಿಸೈಡ್ ಮಾಡುವಾಗ ಅಲ್ಲಿ ಇದ್ದ ಮೆನ್ನು ಬೋರ್ಡಿನ ಮೇಲೆ ಕಣ್ಣು ಹೋಯ್ತು. ಮೈ ಎಲ್ಲಾ ಉರೀತು. ಇತ್ತೀಚಿಗೆ ಬೆಂಗಳೂರಿನ ಹೋಟೆಲಿಗರಿಗೆ ಶುರು ಆಗಿರೋ ಮತ್ತೊಂದು ರೋಗ ಅಂತ ಹೇಳ್ತೀನಿ.
"ಮೆದು ವಡಾ" ಅಂತಾ ಹಾಕಿದಾರೆ. ಉದ್ದಿನ ವಡೆಯನ್ನು ತಮಿಳುನಾಡಿನಲ್ಲಿ ಹೀಗೆ ಕರೆಯುತ್ತಾರೆ. ತಕ್ಷಣ ಕೌಂಟರಿನಲ್ಲಿ ಕೇಳಿದೆ,

ನಾನು :"ಯಾಕೆ ಸ್ವಾಮಿ ? ನೀವು ಕರ್ನಾಟಕದಲ್ಲಿ ಇದೀರೋ ಅಥವಾ ತಮಿಳುನಾಡಿನಲ್ಲಿ ಇದೀರೋ.. ಮೆದು ವಡಾ ಅಂತಾ ಯಾಕೆ ಹಾಕಿದೀರ? ಚೇಂಜ್ ಮಾಡ್ರೀ" ಅಂತಾ ದಬಾಯಿಸಿದೆ.

ಅದಕ್ಕೆ ಆತ :"ನಮಗೆ ಗೊತ್ತಿಲ್ಲ ಸಾರ್, ಓನರ್ ನ ಕೇಳಿ"

ಸರಿ, ಓನರ್ ಎಲ್ಲಿ ಅಂತಾ ವಿಚಾರಿಸಿದ್ದಕ್ಕೆ ಅಲ್ಲೇ ದೋಸೆ ಮಾಡೋ ಜಾಗದಲ್ಲಿ ಸಿಕ್ಕಿದ್ರು. ಅಲ್ಲಿ ಈ ನನ್ನ Objection ಹೇಳಿದ್ದಕ್ಕೆ, ಒಳಗೆ ಗಲಾಟೆ ಇದೆ, ಏನೂ ಸರಿಯಾಗಿ ಕೇಳುಸ್ತಾ ಇಲ್ಲಾ ಅಂತ ಹೊರಗೆ ಕರ್ಕೊಂಡು ಬಂದು ಮಾತಾಡೋಕ್ಕೆ ಶುರು ಮಾಡುದ್ರು.

ನಾನು : "ಅಲ್ಲಾ ಸಾರ್, ನೀವು ಇರೋದು, ನಿಮ್ಮ ಹೋಟ್ಲು ಇರೋದು ಎಲ್ಲಿ?"

ಓನರ್ : ಅಶ್ಚರ್ಯ ಪಟ್ಕೊಂಡು "ಬೆಂಗಳೂರಲ್ಲಿ... ಯಾಕೆ ಹಾಗೆ ಕೇಳ್ತೀರ?"

ನಾನು : "ಮತ್ತೆ, ಬೆಂಗಳೂರಲ್ಲಿ ಹೋಟ್ಲು ಮಾಡಿ ಮೆನು ನಲ್ಲಿ ತಮಿಳುನಾಡಿನ ಹಾಗೆ ಮೆದು ವಡಾ ಅಂತಾ ಯಾಕೆ ಹಾಕಿದೀರ? ಕನ್ನಡದಲ್ಲಿ ಇಷ್ಟು ವರ್ಷಗಳಿಂದ ಹಾಕೋ ಹಾಗೆ ಉದ್ದಿನ ವಡೆ ಅಂತಾ ಹಾಕೋಕ್ಕೆ ನಿಮಗೆ ಏನು ಪ್ರಾಬ್ಲಮ್ ?"

ಓನರ್ : "ನಮ್ಮ ಹೋಟ್ಲಿನ ಸ್ಪೆಶಾಲಿಟಿ ಅಂದ್ರೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ರಾಜ್ಯಗಳ ತಿಂಡಿಗಳನ್ನೂ ಮಾಡ್ತೀವಿ, ಅದಕ್ಕೆ ಎಲ್ರಿಗೂ ಅರ್ಥ ಆಗ್ಲಿ ಅಂತಾ ಹೀಗೆ ಹೆಸ್ರು ಇಟ್ಟಿದ್ದು"

ನಾನು : "ರೀ ಸ್ವಾಮಿ, ನೀವು ಹೆಸ್ರು ಚೇಂಜ್ ಯಾಕೆ ಮಾಡ್ಬೇಕು ? ದಕ್ಷಿಣ ಭಾರತದ ಯಾವುದೇ ಮಂದಿ ಇಲ್ಲಿ ಬಂದು ತಿಂದ್ರೆ, ಅವ್ರಿಗೆ ಮೆದು ವಡಾ ಅಂದ್ರೆ ಮಾತ್ರ ಅರ್ಥ ಆಗುತ್ತಾ? ಇಲ್ಲಿಗೆ ಬಂದು ತಿನ್ನೋರು ಇಲ್ಲೇ ಬೆಂಗಳೂರಲ್ಲಿ ವಾಸವಾಗಿರೋ ಜನ. ಅವ್ರಿಗೆ ಉದ್ದಿನ ವಡೆ ಅಂದ್ರೆ ಏನ್ ಅರ್ಥ ಆಗ್ದೇ ಇರೋ ಐಟಮ್ಮಾ?"

ಓನರ್ : "ಇಲ್ಲಾ ಸಾರ್.. ನಾನು ಹೇಳಿದ್ದನ್ನ ನೀವು ಅರ್ಥ ಮಾಡ್ಕೊತಾ ಇಲ್ಲ"

ನಾನು : "ಸಾರ್, ಇವೆಲ್ಲಾ ಸುಮ್ನೆ ಬ್ಯಾಡ್ದೇ ಇರೋ ಆಟಗಳು ಇದು. ಕನ್ನಡನಾ, ಕನ್ನಡಿಗರನ್ನ ಕಡೆಗಾಣಿಸಿ ಬೇರೆ ಜನಕ್ಕೆ ಮಣೆ ಹಾಕ್ತೀರಲ್ಲಾ ನೀವು... ಅದ್ ಬಿಟ್ಟಾಕಿ, ನಾಳೆ ಮೀಲ್ಸ್ ಶುರು ಮಾಡಿದಾಗ ಮಜ್ಜಿಗೆ ಹುಳಿ ಮೆನು ನಲ್ಲಿ ಹಾಕ್ತೀರ. ಅವಾಗ ಅದನ್ನು
ತಮಿಳಿನಲ್ಲಿ ಮೋರ್ ಕೊಳಂಬು ಅಂತಾ ಹಾಕ್ತೀರಾ ಅಥ್ವಾ ತೆಲುಗಲ್ಲಿ ಮಜ್ಜಿಗ ಪುಲ್ಸು ಅಂತಾ ಕರೀತೀರಾ?? ಸುಮ್ನೆ ಈ ಥರ ಆಡೋದನ್ನ ಬಿಟ್ಟೂ ನಮ್ಮ ಭಾಷೆಗೆ Prominance ಕೊಡಿ"

ಓನರ್ : "ಹಂಗಲ್ಲಾ ಸಾರ್, ಹೋಟ್ಲು ಅಂದಮೇಲೆ ಎಲ್ಲಾ ರೀತಿ ಜನರನ್ನೂ ಗಮನದಲ್ಲಿ ಇಟ್ಕೋಬೇಕು ಸಾರ್"

ನಾನು : "ರೀ ಸ್ವಾಮಿ, ಇಷ್ಟು ಹೇಳಿದ ಮೇಲೂ ನೀವು ಹೀಗೆ ಮಾತಾಡ್ತೀರಲ್ಲಾ, ನಿಮ್ ಹೋಟ್ಲು ನಿಮ್ಮಿಷ್ಟ.. ಏನಾದ್ರೂ ಮಾಡ್ಕೊಳಿ. ನಾನಂತೂ ಇಲ್ಲಿಗೆ ಬರೊಲ್ಲಾ ಹಾಗು ನನಗೆ ಗೊತ್ತಿರೋ ಜನಕ್ಕೆ ಇಲ್ಲಿಗೆ ಬರಬೇಡಿ ಅಂತಾನೇ ಹೇಳ್ತೀನಿ"

ಓನರ್ : "ಹಂಗೆಲ್ಲಾ ಮಾಡೋಹಾಗಿಲ್ಲಾ ಸಾರ್ ನೀವು"

ಪಕ್ಕದಲ್ಲಿದ್ದ ಜನರು ಸುಮಾರು ಹೊತ್ತಿಂದ ನಮ್ಮ ಮಾತು ಕೇಳುಸ್ಕೋತಾ ಇದ್ರು.. ಓನರ್ ಯಾವಾಗ ಹೀಗೆ ಹೇಳುದ್ರೋ ಅವಾಗ ಸುಮಾರು ಜನ ಒಟ್ಟಿಗೆ "ಅದ್ಯಾಕೆ ಆಗಲ್ಲಾ ?? ಕನ್ನಡದವರಾಗಿ ಹೀಗೆ ಮಾಡಿ ಅಂತ Suggestion ಕೊಟ್ರೆ, ಹೀಗೆ ಆಡ್ತೀರಲ್ಲ ನೀವು.. " ಹಾಗೆ ಹೀಗೆ ಅಂತಾ ತಲೆಗೆ ಒಂದೊಂದು ಆವಾಜ್ ಹಾಕ್ತಾ ಇದಾರೆ.

ಏನಾದ್ರೂ ಮಾಡ್ಕೊಂದು ಹಾಳಾಗಿ ಅಂತ ವಾಪಸ್ ಬಂದೆ.

ನಮ್ಮ ಜನರೇ ಈ ರೀತಿ ಮಾಡುದ್ರೆ, ನಮ್ಮ ಭಾಷೆ ಬಗ್ಗೆ ಯಾರು ಅಭಿಮಾನ ತೋರುಸ್ತಾರೆ ? ನಮ್ಮ ಭಾಷೆ ಬೆಳೆಯೋದು ಹೆಂಗೆ ? ಅನ್ಯಾಭಾಷಿಕರಿಗೆ ಮಣೆ ಹಾಕಿ ಹಾಕಿ ನಮಗೆ ಚಾಪೆ ಕೂಡಾ ಸಿಗದ ಹಾಗೆ ಆಗ್ತಾ ಇದೆ.

ಮಾಸ್ಟರ್ ಹಿರಣ್ಣಯ್ಯ ಭಾಷಾಭಿಮಾನದ ಬಗ್ಗೆ ಹೇಳೋ ಹಾಗೆ "ತಮಿಳರು ಅಭಿಮಾನಿಗಳು, ತೆಲುಗರು ದುರಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು" ಅನ್ನೋ ಮಾತು ಎಷ್ಟು ಸತ್ಯ ಅನ್ಸುತ್ತೆ ಅಲ್ವಾ?

ಈ ಮೆದು ವಡಾ ಹೆಸ್ರು ಬರೀ ಇಲ್ಲಲ್ಲಾ, ಡಿವಿಜಿ ರಸ್ತೆಯಲ್ಲಿ ಇರೋ "ಉಪಹಾರ ದರ್ಶಿನಿ"ಯಲ್ಲೂ ಕೂಡಾ ಹಾಕಿದಾರೆ.

ನಿಮ್ಮೆಲ್ಲರಲ್ಲಿ ಒಂದು ವಿನಂತಿ, ಮುಂದಿನ ಬಾರಿ ನೀವು "ಸೌತ್ ತಿಂಡೀಸ್" ಅಥವಾ "ಉಪಹಾರ ದರ್ಶಿನಿ" ಗೆ ಭೇಟಿ ಕೊಟ್ರೆ, ಈ ವಿಚಾರವಾಗಿ ನಿಮ್ಮ Objection ತಿಳಿಸಿ. Atleast ತುಂಬಾ ಜನ ವಿರೋಧ ವ್ಯಕ್ತಪಡಿಸ್ತಾ ಇದಾರೆ ಅನ್ನೋ ಕಾರಣಕ್ಕಾದ್ರೂ ಬದಲಾಯಿಸಲಿ.

ಕನ್ನಡ ಬಳಸಿ, ಕನ್ನಡ ಉಳಿಸಿ
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 24, 2009

ಆಟೋ ಅಣಿಮುತ್ತುಗಳು - ೬೭ - ನೀವು ಹೆಂಗೆ ಹೋಗ್ತೀರಾ ?

ಮಿತ್ರ ಬಾಲ ಮುರಳಿ ಮೆಜೆಸ್ಟಿಕ್ ಹತ್ರ ಸಿಗ್ನಲ್ಲಲ್ಲಿ ನಿಂತಾಗ ಕಂಡ ಆಟೋ ಅಂತೆ ಇದು.
ತಕ್ಷಣ ಫೋಟೋ ತೆಗೆದು ಕಳ್ಸಿದಾನೆ ನನಗೆ. ಪ್ರಾಡಕ್ಟ್ ಸೆಲ್ ಮಾಡೋ ಟೆಕ್ನಿಕ್ ಸಖತ್ತಾಗಿ ಇದೆ ಅನ್ಸುತ್ತೆ ಈ ಅಣ್ಣನಿಗೆ.
ಕಂಫರ್ಟ್ ಅನ್ನೋ ಪಾಯಿಂಟ್ ತೋರಿಸಿ, ಆಟೋ ಹತ್ತಿ ಅಂತಾ ಇರೋದು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 22, 2009

ಆಟೋ ಅಣಿಮುತ್ತುಗಳು - ೬೬ - ಹುಡ್ಗೀರೆಲ್ಲ ಹೀಗೇನಾ ?

ಶಿವಪ್ರಕಾಶ್ ಅವರು ಕಳಿಸಿದ ಆಟೋ ಫೋಟೋ ಇದು.
ಯಾಕೋ ಈ ಅಣ್ಣನಿಗೆ ತುಂಬಾ ಡೌಟ್ ಅನ್ಸುತ್ತೆ. ನೀವಾದ್ರೂ ಹೇಳಿ.



--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Thursday, June 18, 2009

ಆಟೋ ಅಣಿಮುತ್ತುಗಳು - ೬೫ - ಆಟೋ ಶಂಕ್ರಣ್ಣ

ಮಂಗಳವಾರ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಆಡುಗೋಡಿ ಬಾಷ್ ಮುಂದೆ ಈ ಆಟೋ ಕಂಡಿತು.
ಸುಮಾರು ಐದಾರು ಗಾಡಿಗಳ ಹಿಂದೆ ಇದ್ದೆ ನಾನು. ಹಂಗೆ ಹಿಂಗೆ ಕಷ್ಟ ಪಟ್ಟು ಈ ಆಟೋ ಪಕ್ಕಕ್ಕೆ ಹೋದೆ.
ಪಕ್ಕಕ್ಕೆ ಹೋಗಿ "ಸಾರ್ ನಿಮ್ಮ ಆಟೋ ಹಿಂದೆ ಬರ್ದಿದೀರಲ್ಲ, ಅದರ ಫೋಟೋ ತೆಕ್ಕೊತೀನಿ, ಒಂದು ನಿಮಿಷ ಆಟೋ ನಿಲ್ಲುಸ್ತೀರ?" ಅಂತ ಕೇಳಿದೆ. ಆಟೋ ಒಳಗಡೆ ಪ್ಯಾಸೆಂಜರ್ ಇದ್ರು... ಅವ್ರು "ಏಯ್, ಆಗಲ್ಲ ಕಣ್ರೀ, ಅರ್ಜೆಂಟ್ ಕೆಲಸ ಇದೆ" ಅಂತ ನಿಲ್ಲಿಸೋದಕ್ಕೆ ಅನುಮತಿ ಕೊಡ್ಲಿಲ್ಲ.

ಆದ್ರೆ ಈ ಆಟೋ ಅಣ್ಣ ಹಾಗೆ ಓಡಿಸುತ್ತಾ, ಆಡುಗೋಡಿ ಕ್ರಿಶ್ಚಿಯನ್ ಸೆಮಿಟರಿ ಸಿಗ್ನಲ್ಲಲ್ಲಿ ಬೇಕೂ ಅಂತ ನಿಲ್ಸಿದ್ರು. ನಾನು ಆರಾಮಾಗಿ ಫೋಟೋ ತೆಕ್ಕೊಂಡೆ. ಅಂದಹಾಗೆ ಆ ಆಟೋ ಅಣ್ಣನ ಹೆಸರು ಕೂಡಾ ಶಂಕರ್.

ಫೋಟೋ ತೆಗೆದು ಹೊರಟಾಗ "ಅಂದಹಾಗೆ, ನನ್ನ ಹೆಸರೂ ಶಂಕರ್ ಅಂತಾ" ಎಂದು ಹೇಳಿದೆ. ಅದಕ್ಕೆ ಆ ಆಟೋ ಶಂಕ್ರಣ್ಣ ಒಂದು ಮಸ್ತ್ ಸ್ಮೈಲ್ ಕೊಟ್ಟು "ಸರಿ ಸಾರ್, ಸಂತೋಷ..ಮತ್ತೆ ಸಿಗೋಣ" ಅಂದ್ರು.
ಆದ್ರೆ ಈ ನನ್ನ ದಡ್ಡ ತಲೆಗೆ ಆ ಆಟೋ ಶಂಕ್ರಣ್ಣನ ಫೋಟೋ ತೆಗೆಯೋಕ್ಕೆ ಹೊಳೀಲಿಲ್ಲ. ಆಮೇಲೆ ಬೇಜಾರ್ ಆಯ್ತು.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Monday, June 15, 2009

ನಗು ತಡೆಯೋಕ್ಕಾಗದೆ ಪೇಚಾಡಿದ ಸಂದರ್ಭಗಳು

ನಿಮ್ಗೂ ಹಿಂಗೆ ಯಾವಾಗ್ಲಾದ್ರೂ ಆಗಿದ್ಯಾ? ಸಿಕ್ಕಾಪಟ್ಟೆ ನಗು ಬರುವಂಥ ಸೀನು, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ? ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು ನಗ್ತೀನಿ.
ಅದೇನೋ ಹೇಳ್ತಾರಲ್ಲಾ "ನಗು ಮತ್ತು ಉಚ್ಛೆ ತಡೆಯೋದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು" ಅಂತಾ, ಹಾಗೆ.
ನಾನು ಹೇಳಕ್ಕೆ ಹೊರ್ಟಿರೋದು ಬಹಳ ಹಿಂದೆ, ಅಂದ್ರೆ ನಾನು ಪ್ರೈಮರಿ ಸ್ಕೂಲಿನಲ್ಲಿ ಇದ್ದಾಗ ನಡೆದ ಘಟನೆ.

೧. ಸತ್ತೆ ಪೆ ಸತ್ತಾ (ಶಂಕ್ರ ನಗು ತಡೆಯಕ್ಕಾಗ್ದೆ ಸತ್ತ) :

ನಾನು ಆರನೇ ಅಥವಾ ಏಳನೇ ಇಯತ್ತೆಯಲ್ಲಿ ಇದ್ದಾಗ ಅನ್ಸುತ್ತೆ (1991ನೇ ಇಸವಿ), ಒಮ್ಮೆ ದೂರದರ್ಶನದಲ್ಲಿ ಶುಕ್ರವಾರ ರಾತ್ರಿ "ಸತ್ತೆ ಪೆ ಸತ್ತಾ" (ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ) ಚಿತ್ರವನ್ನು ಹಾಕಿದ್ರು.
ಆ ಫಿಲಮ್ಮು "ಸೆವೆನ್ ಬ್ರೈಡ್ಸ್ ಫಾರ್ ಸೆವೆನ್ ಬ್ರದರ್ಸ್" ಎಂಬ ಇಂಗ್ಲಿಷ್ ಚಿತ್ರದ ರಿಮೇಕು. ನಮ್ಮಪ್ಪ ಮತ್ತು ಅಮ್ಮ, ಫಿಲಂ ಚೆನ್ನಾಗಿದೆ ನೋಡು, ಒಳ್ಳೇ ಎಂಟರ್ಟೈನ್ಮೆಂಟು, ಒಳ್ಳೇ ಕಾಮಿಡಿ ಅಂತ ಹೇಳಿದ್ದಕ್ಕೆ ಎಲ್ರೂ ಒಟ್ಟಿಗೆ ನೋಡ್ತಾ ಇದ್ವಿ. ಅಪ್ಪ, ಅಮ್ಮ, ನಾನು ಹಾಗು ಮೂರನೇ ಇಯತ್ತೆಯಲ್ಲಿ ಓದುತ್ತಿದ್ದ ನನ್ನ ತಮ್ಮ.

ಆ ಚಿತ್ರದಲ್ಲಿ ಒಂದು ಸೀನ್ ಇದೆ. ಅಮಿತಾಬ್ ಬಚ್ಚನ್, ಹೇಮಾ ಮಾಲಿನಿಯನ್ನು ರಿಜಿಸ್ಟ್ರಾರ್ ಆಫೀಸಲ್ಲಿ ಮದ್ವೆ ಆಗ್ತಾನೆ. ಅವಾಗ, ರಿಜಿಸ್ಟ್ರಾರ್ ಇಬ್ಬರಿಗೂ ಕಂಗ್ರಾಟ್ಸ್ ಹೇಳಿ, ಅಮಿತಾಬ್ ಗೆ ಶೇಕ್ ಹ್ಯಾಂಡ್ ಕೊಡ್ತಾನೆ. ಇಬ್ರೂ ರಿಜಿಸ್ಟರ್ ನಲ್ಲಿ ಸೈನ್ ಮಾಡಿ ಹೊರಡ್ತಾರೆ, ಅಮಿತಾಬ್ ಬಾಗಿಲಿಂದ ಇನ್ನೇನು ಹೊರಡ್ಬೇಕು, ಆಫೀಸರ್ ಅವನನ್ನು ಕರೆದು ಮತ್ತೆ ಶೇಕ್ ಹ್ಯಾಂಡ್ ಕೊಟ್ಟು, ಹಾಗೆ ಅವನ ಕೈಯಲ್ಲಿ ಏನೋ ಇಡ್ತಾನೆ. ಏನು ಅಂತ ಅಮಿತಾಬ್ ನೋಡುದ್ರೆ "ನಿರೋಧ್" ಪ್ಯಾಕೆಟ್ಟು (ಫ್ಯಾಮಿಲಿ ಪ್ಲಾನಿಂಗನ್ನು ಉತ್ತೇಜಿಸುವುದಕ್ಕೆ ಹಾಗೆ ಮಾಡುತ್ತಿದ್ದರಂತೆ). ನಂಗೆ ಅವಾಗ "ನಿರೋಧ್" ಅಂದ್ರೆ ಏನು ಅಂತ ಗೊತ್ತಿತ್ತು (7ನೇ ಕ್ಲಾಸ್ನಲ್ಲೇ ಸ್ವಲ್ಪ ಕೆಟ್ಟಿದ್ವಿ !!!). ಪ್ಯಾಕೆಟ್ಟನು ನೋಡಿ ಅಮಿತಾಬ್ ಒಂದು ಹ್ಯಾಪ್ ನಗೆ ಬೀರಿ "ಥ್ಯಾಂಕ್ಸ್" ಹೇಳಿ ಹೊರಡ್ತಾನೆ. ಅವಾಗ ನನ್ನ ಮೂರನೆ ಇಯತ್ತೆಯ ತಮ್ಮ ಇದ್ದಕ್ಕಿದ್ದ ಹಾಗೆ "ಅಪ್ಪಾ, ಅಪ್ಪಾ, ಅಪ್ಪಾ.. ಅವನ್ ಕೈಲಿ ಕೊಟ್ಟಿದ್ದು ಏನಪ್ಪಾ ? ಹೇಳಪ್ಪಾ.." ಅಂತ ವರಾತ ತೆಗೆದ. ನಮ್ಮಪ್ಪಂಗೆ ಏನ್ ಮಾಡ್ಬೇಕು, ಏನ್ ಹೇಳ್ಬೇಕು ಅಂತ ತೋಚ್ತಾ ಇಲ್ಲಾ, ನನ್ ತಮ್ಮಾನೋ ಒಂದೇ ಸಮನೆ ಅಲಾರಂ ಥರ ಕಲ್ಯಾಣಿ ರಾಗದಲ್ಲಿ ಕೇಳ್ತಾ ಇದಾನೆ.. ಕೊನೆಗೆ ನಮ್ಮಪ್ಪ "ಅವ್ನು ಅಮಿತಾಬ್ ಗೆ ಏನೋ ಕೊಟ್ರೆ ನಿಂಗೇನೋ ? ಮುಚ್ಕೊಂಡು ನೋಡು, ಇಲ್ಲಾಂದ್ರೆ ಹೋಗಿ ಬಿದ್ಕೋ" ಅಂತ ಹೇಳಿ ಬಾಯಿಮುಚ್ಚಿಸಿದ್ರು. ಆ ಟೈಂನಲ್ಲಿ, ನಾನು ನಕ್ಕಿದ್ರೆ ಮಾತ್ರ ನನ್ ಪಾಡು ಏನ್ ಆಗ್ತಾ ಇತ್ತೋ ಗೊತ್ತಿಲ್ಲಾ, ಆದ್ರೆ ನನ್ ಲೈಫಲ್ಲಿ ಅತ್ಯಂತ ಕಷ್ಟ ಪಟ್ಟು ನಗು ತಡೆದ ಘಟನೆ ಅಂದ್ರೆ ಇದೇ.

೨. ಕ್ಲಾಸ್ ಮೇಟುಗಳ ಕೈಲಿ "ನಿರೋಧ"ನ್ನು ಬಲೂನ್ ಎಂದು ಕೊಟ್ಟು ಊದಿಸಿದ್ದು :

ಇದು ನಾವು ಏಳನೇ ಇಯತ್ತೆಯಲ್ಲಿ ಇದ್ದಾಗ (1992), ನಮ್ಮ ಸ್ಕೂಲಿನ ಒಂದು ಪಕ್ಕದಲ್ಲಿ ಒಂದು ಪಂಪ್ ಹೌಸ್ ಇತ್ತು. ಅದರ ಬೇಲಿಯಿಂದ ನಾವು 2-3 ಮಂದಿ ಹುಡುಗ್ರು, ಆಟದ ಪೀರಿಯಡ್ ಟೈಮಿನಲ್ಲಿ ಹೊರಗೆ ನುಗ್ಗಿ, ಎದುರು ಮನೆಯ ನೆಲ್ಲಿಕಾಯಿ ಮರದಿಂದ ಕಾಯಿ ಕೀಳ್ತಾ ಇದ್ವಿ. ಆ ಮನೆಯಲ್ಲಿ ಒಬ್ಬ ಸರ್ಕಾರಿ ಡಾಕ್ಟರು ಇದ್ರು. ಒಮ್ಮೆ, ಹಿಂಗೇ ಬೇಲಿಯಿಂದ ನುಗ್ಗಿ, ಅವರ ಮನೆ ಕಾಂಪೌಂಡ್ ಹಾರಬೇಕು ಅನ್ನೋಷ್ಟರಲ್ಲಿ, ಅವರ ಮನೆ ಪಕ್ಕದಲ್ಲಿ ಸುಮಾರು 20-30 ಕಿತ್ತಳೆ ಬಣ್ಣದ ಪ್ಯಾಕೆಟುಗಳು ಬಿಸಾಡಿದ್ರು. ಏನು ಅಂತ ನೋಡುದ್ರೆ "ನಿರೋಧ್". ಮೋಸ್ಟ್ಲಿ EXPIRY DATE ಆಗಿರೋದು ಅನ್ಸುತ್ತೆ. ನಮ್ಗೂ ಏನೋ ಕಡಿತ. ಅದ್ರಲ್ಲಿ ಸುಮಾರು 5-6 ಪ್ಯಾಕೆಟನ್ನ ನಾವು ತೆಗೆದುಕೊಂಡು ವಾಪಸ್ ಬೇಲಿಯಿಂದ ನುಗ್ಗಿ ಸ್ಕೂಲಿನ ಒಳಗೆ ಬಂದ್ವಿ.

ಎಲ್ಲಾ ಹುಡುಗ್ರು ಆ ಕಡೆ ಆಡ್ತಾ ಇದ್ರು. ಅವ್ರಲ್ಲಿ 8-10 ಹುಡುಗ್ರನ್ನ ಕರೆದು, "ತಗೊಳ್ರೋ ಇದನ್ನಾ, ಯಾರೋ ಬಲೂನನ್ನ ಬೀಳಿಸಿಕೊಂಡು ಹೋಗಿದಾರೆ, ಊದಿ, ಆಟಾಡ್ಕೊಳ್ಳಿ" ಅಂತ ಕೊಟ್ಟು "ಯಾರ್ ಕೊಟ್ಟಿದ್ದು ಅಂತಾ ಯಾರಾದ್ರೂ ಕೇಳುದ್ರೆ, ನಮ್ ಹೆಸ್ರನ್ನ ಮಾತ್ರಾ ಹೇಳ್ಬಾರ್ದು, ಸರಿ ಇರಲ್ಲ" ಅಂತ ಬೇರೆ ಸ್ಪೆಷಲ್ ವಾರ್ನಿಂಗ್ ಕೊಟ್ವಿ.

ಕೊಟ್ಟಿದ್ದೇ ತಡ, ಮಕ್ಳು ಊದಿದ್ದೇ ಊದಿದ್ದು. ಅದ್ರಲ್ಲಿ ಕೆಲವ್ರು, ಉತ್ಸಾಹ ತಡ್ಯಕ್ಕೆ ಆಗ್ದೆ ಜೋರಾಗಿ ಊದಿ "ಲೋ, ಏನ್ರೋ ಇದು ? ಫಾರಿನ್ ಬಲೂನು ಅನ್ಸುತ್ತೆ... ಎಷ್ಟು ಉದ್ದ ಆಗುತ್ತೆ ನೋಡ್ರೋ. ಮಾಮೂಲ್ ಬಲೂನಾಗಿದ್ರೆ, ಇಷ್ಟೊತ್ತಿಗೆ ಒಡೆದೋಗ್ತಾ ಇತ್ತು" ಅಂತಾ ಬೇರೆ ಸರ್ಟಿಫಿಕೇಟ್ ಕೊಡ್ತಾ ಇದಾನೆ ! ಎಲ್ರ ಕೈಲೂ ಸುಮಾರು 2-3 ಅಡಿ ಉದ್ದದ ಗಾಳಿ ತುಂಬಿದ ಬಲೂನು (???).
ಆಟ ಆಡ್ತಿದ್ದ ಹುಡುಗ್ರು ಎಲ್ಲಿ ಅಂತ ನಮ್ಮ ಪಿ.ಟಿ.ಮೇಷ್ಟ್ರು ನೋಡ್ತಾರೆ, ಎಲ್ರೂ ಬಲೂನನ್ನ (???) ಊದುತ್ತಾ ಇದಾರೆ. ಹತ್ರ ಬಂದು ನೋಡುದ್ರು, ಏನು ಅಂತಾ ಗೊತ್ತಾಯ್ತು ಅವ್ರಿಗೆ. ತಕ್ಷಣ "ಏಯ್, ಏನ್ ಮಾಡ್ತಾ ಇದೀರೋ ? ಇದು ಎಲ್ಲಿಂದ ಸಿಗ್ತೋ ನಿಮ್ಗೆ, ಯಾರ್ ತಂದು ಕೊಟ್ಟಿದ್ದು? ಬಿಸಾಕ್ರೊ ಮುಂಡೇವಾ ಇದನ್ನ" ಅಂತ ಬೈದು ಎಲ್ಲರನ್ನು ಕರ್ಕೊಂಡ್ ಹೋದ್ರು. ಅವರು ಬೈಬೇಕಾದ್ರೆ, ಅವರ ಪಕ್ಕ ನಿಂತ್ಕೊಂಡು ಸಖತ್ತಾಗಿ ಮಜಾ ತಗೊಂಡ್ವಿ, ಆದ್ರೆ ನಗೋ ಕಂಡೀಶನ್ನಲ್ಲಿ ಇರ್ಲಿಲ್ಲಾ.

ಇವತ್ತಿಗೂ ಇವೆರಡು ಘಟನೆಗಳನ್ನ ನೆನೆಸ್ಕೊಂಡ್ರೆ, ಯದ್ವಾ ತದ್ವಾ ನಗು ಬರುತ್ತೆ.. ಅಪ್ಪಿ ತಪ್ಪಿ ನಮ್ಮಪ್ಪ ಏನಾದ್ರೂ ನಾನು ಬರ್ದಿರೋದನ್ನ ಇವಾಗ ಓದುದ್ರೆ, ಒಂದ್ಸಲನಾದ್ರೂ ಉಗೀತಾರೆ, "ನಿರೋಧ"ನ್ನು ಕ್ಲಾಸ್ ಮೇಟುಗಳ ಕೈಲಿ ಕೊಟ್ಟು ಊದ್ಸಿದ್ದಕ್ಕೆ.
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Friday, June 12, 2009

ಆಟೋ ಅಣಿಮುತ್ತುಗಳು - ೬೪ - ಎಲ್ಲಿ ನಿಂತು ಕೂಗಲಿ ?

ಬೆಂಗಳೂರಿಗೆ ಬಂದ ಮೇಲೆ ನನ್ನ ಕೈಯ್ಯಾರೆ ತೆಗೆದ ಆಟೋ ಫೋಟೋ.
ಸೆಕೆಂಡ್ ಇನಿಂಗ್ಸ್ ಶುರುವಾಗಿದ್ದು ಇಂಥ ಮಸ್ತ್ ಡೈಲಾಗಿನಿಂದ. ಸಂಜೆ ಆಫೀಸಿನ ಹೊರಗೆ ಸುಮ್ನೆ ಒಂದು ಸಣ್ಣ Walk ಗೆ ಬಂದಾಗ, ಗೇಟಿನ ಹೊರಗೆ ನನಗಾಗಿಯೇ ಅನ್ನೋ ಥರ ಕಾದು ನಿಂತಿತ್ತು..ಎಂಥಾ ಲಕ್ಕು ಅಲ್ವ?
ಎಂಥಾ ಫೀಲಿಂಗ್ ಕೊಡ್ತು ಅಂದ್ರೆ..ಅಬ್ಬಬ್ಬಾ... ಅದೂ ಎಂಥ ಡೈಲಾಗ್ ಬರೆದಿದ್ದಾನೆ ನೋಡಿ ಈ ಅಣ್ಣ.
"ಆಕಾಶ ಬಿದ್ದರೆ ಭೂಮಿ ಬಿರಿದರೆ, ಎಲ್ಲಿ ನಿಂತು ಕೂಗಲಿ"
ಯಪ್ಪಾ.. ಇದಕ್ಕೆ ನಾನೇನು ಹೇಳಲಿ ?
--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 10, 2009

ಆಟೋ ಅಣಿಮುತ್ತುಗಳು - ೬೩ - ಪ್ರೀತಿ ಕೊಂದ ಕೊಲೆಗಾತಿ

ಸುಮಾರು ದಿನಗಳ ಹಿಂದೆ ಫಲಕೋತ್ಸವದ ಲಕ್ಷ್ಮಕ್ಕ ಕಳಿಸಿದ್ದ ಫೋಟೋ ಇದು.
ಈ ಅಣ್ಣ ಮತ್ತೊಬ್ಬ ಭಗ್ನ ಪ್ರೇಮಿಯಾಗಿ, ಸಿಕ್ಕಾಪಟ್ಟೆ ಫೀಲ್ ಮಾಡಿಕೊಂಡಿದಾನೆ ಅನ್ಸುತ್ತೆ.
ಥ್ಯಾಂಕ್ಸ್ ಲಕ್ಷ್ಮಕ್ಕ :)


--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ

Wednesday, June 3, 2009

ಮರಳಿ ತಾಯ್ನಾಡಿಗೆ

ನಮಸ್ಕಾರ ಮಿತ್ರರೆ,

ಮೇ 30 ರಂದು ಹ್ಯಾಂಬರ್ಗ್ ನಿಂದ ಹೊರಟು ಮಾರನೆಯ ದಿನ ಬೆಂಗಳೂರು ತಲುಪಿದೆ.
ಏರ್ಪೋರ್ಟಿಗೆ ನನ್ನಾಕೆ ಬಂದಿದ್ದಳು. ಏಳೂವರೆ ತಿಂಗಳು ಕುಟುಂಬದ ಎಲ್ಲರಿಂದ ದೂರವಿದ್ದೆ. ಇಷ್ಟು ದಿನ ಯೂರೋಪಿನಲ್ಲಿ ಇದ್ದು, ಅಲ್ಲಿನ ಜನರ ಅಭ್ಯಾಸಗಳು, ರೀತಿಯನ್ನು ನೋಡಿ ಅಡ್ಜಸ್ಟ್ ಆಗಿದೆ ನನಗೆ, ಇಲ್ಲಿ ಏರ್ಪೋರ್ಟಿನಿಂದ ಹೊರಗೆ ಬಂದ ನನ್ನನ್ನು ಕರೆದೊಯ್ಯಲು ನನ್ನಾಕೆ ಬಂದಿದ್ದಳು. ಕಂಡ ಕೂಡಲೇ ಬಂದು, ಯೂರೋಪಿನಲ್ಲಿ ಎಲ್ಲರೂ ಮಾಡೋ ಹಾಗಿ ತಬ್ಬಿ ಹಾಗೆ ಮುತ್ತಿಡಲು ಹೋಗಿದ್ದೆ. ಸಡನ್ನಾಗಿ ನಾನು ಎಲ್ಲಿದೀನಿ ಅಂತ ಜ್ಞಾನೋದಯ ಆಯ್ತು. ಆದ್ರೆ ನಾನು ಈಗ ಬಂದಿರೋದು ಭಾರತಕ್ಕೆ, ಇಲ್ಲಿ ಅದೆಲ್ಲ ಸರಿ ಇಲ್ಲ ಅಂದುಕೊಂಡು ಬರೀ ಒಮ್ಮೆ ಅಪ್ಪಿಕೊಂಡೆ ಅಷ್ಟೇ.

ಸಧ್ಯಕ್ಕೆ ಒಂದು ವಾರ ಆಫೀಸಿಗೆ ರಜೆ ಹಾಕಿರುವೆ. ಮೈಸೂರಲ್ಲಿ ಕಾಲ ಕಳೀತಾ ಇದ್ದೀನಿ. ಹಾಗಾಗಿ ಬ್ಲಾಗು ಅಪ್ಡೇಟ್ ಆಗಿಲ್ಲ..ಇನ್ನು ಕೆಲವು ದಿನಗಳಲ್ಲಿ ಮತ್ತೆ ಶುರು ಮಾಡ್ತೀನಿ. ಪುನಃ ಆಟೋ ಫೋಟೋಗಳು ಬರಲು ಶುರು ಆಗುತ್ತವೆ.
ಅಲ್ಲಿ ತನಕ...

--------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ